ಮದ್ವೆ ನನ್ ಜೊತೆ, ಸಂಬಂಧ ಅವ್ನ ಜೊತೆ: ರಾಖಿ ಕುರಿತು ಆದಿಲ್ ಖಾನ್ ಶಾಕಿಂಗ್ ಹೇಳಿಕೆ!
ಜೈಲಿನಿಂದ ಹೊರಬಂದಿರುವ ರಾಖಿ ಸಾವಂತ್ ಮಾಜಿ ಪತಿ ಆದಿಲ್ ಖಾನ್, ಪತ್ರಿಕಾಗೋಷ್ಠಿ ಕರೆದು ರಾಖಿ ಸಾವಂತ್ ಗಂಭೀರ ಆರೋಪ ಮಾಡಿದ್ದಾರೆ. ಅವರು ಹೇಳಿದ್ದೇನು?
ರಾಖಿ ಸಾವಂತ್ Rakhi Sawant ಸದ್ಯ ಭಾರಿ ಚರ್ಚೆಯಲ್ಲಿರುವ ನಟಿ. ಈಕೆಯ ಇತ್ತೀಚಿನ ಕೆಲವು ಘಟನೆಗಳನ್ನು ಮೆಲುಕು ಹಾಕಿದ ಬಳಿಕ ಇವರನ್ನು ಡ್ರಾಮಾ ಕ್ವೀನ್ ಎಂದು ಕರೆಯುವವರೇ ಹೆಚ್ಚಾಗಿದ್ದಾರೆ. ಆದಿಲ್ ಖಾನ್ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್ ಖಾನ್ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್ (Adil Khan Durrani) ವಿರುದ್ಧ ಎಫ್ಐಆರ್ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ಅವರು ಬಿಡುಗಡೆಗೊಂಡಿದ್ದಾರೆ.
ನಿನ್ನೆಯಷ್ಟೇ ಆದಿಲ್ ಖಾನ್ ಪತ್ರಕರ್ತರ ಕಣ್ಣಿಗೆ ಕಾಣಿಸಿಕೊಂಡಿದ್ದರು. ರಾಖಿ ಸಾವಂತ್ ಕುರಿತು ಕೇಳಿದ ಪ್ರಶ್ನೆಗೆ ಅವರು, ನನ್ನನ್ನು ರಾಖಿ ಮತ್ತು ಆಕೆಯ ಸ್ನೇಹಿತರು ಸೇರಿ ಟ್ರ್ಯಾಪ್ ಮಾಡಿದ್ದಾರೆ. ನನ್ನನ್ನು ಹೇಗೆ ಸಿಲುಕಿಸಿದರು ಎನ್ನುವುದನ್ನು ಶೀಘ್ರದಲ್ಲಿಯೇ ಪತ್ರಿಕಾಗೋಷ್ಠಿ ಕರೆದು ವಿವರಿಸುತ್ತೇನೆ. ನಿಜವಾಗಿಯೂ ಏನು ನಡೆದಿತ್ತು ಎಂದು ಸವಿಸ್ತಾರವಾಗಿ ಹೇಳುತ್ತೇನೆ ಎಂದಿದ್ದರು. ಅದೇ ರೀತಿ ಇಂದೇ ಅವರು ಪತ್ರಿಕಾಗೋಷ್ಠಿ ಮಾಡಿದ್ದು, ರಾಖಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮುಸ್ಲಿಂ ಧರ್ಮ ಸ್ವೀಕರಿಸಿ ಗಂಡನನ್ನೇ ಟ್ರ್ಯಾಪ್ ಮಾಡಿದ್ರಾ ರಾಖಿ? ಮಾಜಿ ಪತಿ ಹೇಳಿದ್ದೇನು?
ಆದಿಲ್ ಹೇಳಿದ್ದೇನೆಂದರೆ; ನನ್ನ ಮತ್ತು ರಾಖಿ ಪರಿಚಯ ಕಾಮನ್ ಫ್ರೆಂಡ್ ಮೂಲಕ ಆಗಿತ್ತು. ಆ ಬಳಿಕ ಆಕೆ ಮೈಸೂರಿಗೆ ರಾಖಿ ಪದೇ ಪದೇ ಬರುತ್ತಿದ್ದಳು. ನಾನು ಬಿಜಿನೆಸ್ನಲ್ಲಿ ಒಳ್ಳೆಯ ಹಂತಕ್ಕೆ ತಲುಪಿದ್ದೇನೆ ಎಂದು ನೋಡಿಕೊಂಡಿದ್ದಳು. ನಂತರ ನನ್ನನ್ನು ಮದುವೆಯಾಗುವಂತೆ ಕಾಡುತ್ತಿದ್ದಳು. ನಮ್ಮದು ಮುಸ್ಲಿಂ ಫ್ಯಾಮಿಲಿ ಆಗಿದ್ದರಿಂದ ಕೂಡಲೇ ಮದುವೆ ಕಷ್ಟ ಎಂದೆ. ಆದರೆ ತಾನು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವುದಾಗಿ ಹೇಳಿದ ರಾಖಿ ಮುಸ್ಲಿಂ ಧರ್ಮದ ಕುರಿತು ಒಂದೊಂದೇ ವಿಷಯಗಳನ್ನು ತಿಳಿದುಕೊಳ್ಳಲು ಶುರು ಮಾಡಿದಳು. ಇದರ ಆಚರಣೆ ಕಲಿತುಕೊಂಡಳು. ಇದಾದ ಮೇಲೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಇಷ್ಟೆಲ್ಲಾ ಒತ್ತಾಯ ಮಾಡಿದ ಮೇಲೆ ಮದುವೆಯಾದೆವು ಎಂದು ಆದಿಲ್ ಖಾನ್ ಹೇಳಿದ್ದಾರೆ.
ಆದರೆ ಈ ನಡುವೆಯೇ ರಾಖಿಗೆ ರಿತೇಶ್ (Ritesh) ಜೊತೆ ಸಂಬಂಧ ಇರುವುದು ತಿಳಿಯಿತು. ಪದೇ ಪದೇ ಆಕೆಯ ವಿದೇಶದಿಂದ ಕರೆ ಬರುತ್ತಿತ್ತು. ಒಂದು ದಿನ ಲಂಡನ್ಗೆ ರಾಖಿ ಹೋಗಿ ವಾಪಸಾದಳು. ಅದೊಂದು ದಿನ ಅವಳ ಮೊಬೈಲ್ಗೆ ಬಂದ ಮೆಸೇಜ್ ಅನ್ನು ನಾನು ಓದಿದೆ. ಅದರಲ್ಲಿ ಲಂಡನ್ನಲ್ಲಿ ಕಳೆದ ದಿನಗಳು ತುಂಬಾ ರೊಮ್ಯಾಂಟಿಕ್ ಆಗಿದ್ದವು. ನಾನು ಅದನ್ನು ಮರೆಯುವುದಿಲ್ಲ ಎಂಬೆಲ್ಲಾ ಮಾತುಗಳು ಇದ್ದವು. ಅಲ್ಲಿಗೆ ರಾಖಿ ಆತನ ಜೊತೆ ಸಂಬಂಧ ಹೊಂದಿರುವುದು ತಿಳಿಯಿತು. ಅದಾಗಲೇ ರಿತೇಶ್ ಜೊತೆ ಅವಳು ಮದುವೆಯೂ ಆಗಿದ್ದು ತಿಳಿಯಿತು. ಆದರೆ ನನ್ನಿಂದ ಈ ವಿಷಯ ಮುಚ್ಚಿಟ್ಟಿದ್ದಳು. ರಿತೇಶ್ನನ್ನು ಮದುವೆಯಾಗಬೇಕಿತ್ತು, ಆದರೆ ಆತ ಮೋಸ ಮಾಡಿದ ಎನ್ನುತ್ತಿದ್ದಳೇ ವಿನಾ ಮದುವೆಯಾದ ವಿಷಯವನ್ನೇ ಹೇಳಿರಲಿಲ್ಲ. ಅದರೆ ಮಾಧ್ಯಮಗಳ ಮುಂದೆ ಬಂದು ನಾನೇ ಆಕೆಗೆ ತೊಂದರೆ ಕೊಡುತ್ತಿದ್ದೇನೆ ಎಂದು ಡ್ರಾಮಾ ಮಾಡಲು ಶುರು ಮಾಡಿದ್ದಳು ಎಂದು ಆದಿಲ್ ಖಾನ್ ಹೇಳಿದ್ದಾರೆ. ನನ್ನ ಜೀವನದ ಅತಿ ದೊಡ್ಡ ಮೂರ್ಖತನ ಎಂದರೆ ನಾನು ಆಕೆಯನ್ನು ನಂಬಿದ್ದು ಎಂದಿದ್ದಾರೆ ಆದಿಲ್. ಆಕೆ ಗರ್ಭಕೋಶವನ್ನೂ ತೆಗೆಸಿಕೊಂಡಿದ್ದು, ಆಕೆಗೆ ಮಕ್ಕಳಾಗುವುದಿಲ್ಲ ಎಂದೂ ಆರೋಪಿಸಿದ್ದಾರೆ.