ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ್ ಸ್ಥಿತಿ ಗಂಭೀರ; ವದಂತಿ ಹಬ್ಬಿಸಬೇಡಿ ಎಂದು ಪತ್ನಿ ಮನವಿ
ತೀವ್ರ ಹೃದಯಾಘಾತದಿಂದ ದೆಹಲಿಯ ಕೀಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಕಿಚಿತ್ಸೆ ಪಡೆಯುತ್ತಿರುವ ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ್ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ತೀವ್ರ ಹೃದಯಾಘಾತದಿಂದ ದೆಹಲಿಯ ಕೀಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಕಿಚಿತ್ಸೆ ಪಡೆಯುತ್ತಿರುವ ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ್ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಬುಧವಾರ ರಾತ್ರಿ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಗುರುವಾರ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ರಾಜು ಅವರು ಬೇಗ ಗುಣಮುಖರಾಗಲಿ, ಮೊದಲಿನ ಸ್ಥಿತಿಗೆ ಮರಳಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಈ ಬಗ್ಗೆ ರಾಜು ಪತ್ನಿ ಶಿಖಾ ಶ್ರೀವಾತ್ಸವ್ ತಮ್ಮ ಪತಿಯ ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಶಿಖಾ ಪತಿ ರಾಜು ಆರೋಗ್ಯ ಸ್ಥಿರವಾಗಿದೆ ಮತ್ತು ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
'ರಾಜು ಶ್ರೀವಾಸ್ತವ್ ಅವರು ಸ್ಥಿರವಾಗಿದ್ದಾರೆ. ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ರಾಜು ಒಬ್ಬ ಹೋರಾಟಗಾರ ಮತ್ತು ಅವರು ನಮ್ಮೆಲ್ಲರ ನಡುವೆ ಇರಲು ಹಿಂತಿರುಗುತ್ತಾರೆ. ನಮಗೆ ನಿಮ್ಮ ಪ್ರಾರ್ಥನೆ ಮತ್ತು ಹಾರೈಕೆಗಳು ಬೇಕು'ಎಂದು ಶಿಖಾ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು. ಜೊತೆಗೆ ರಾಜು ಅವರ ಆರೋಗ್ಯದ ಬಗ್ಗೆ ವದಂತಿಗಳನ್ನು ಹರಡಬೇಡಿ ಎಂದು ಅವರು ಮಾಧ್ಯಮಗಳು ಮತ್ತು ಅಭಿಮಾನಿಗಳಿಗೆ ವಿನಂತಿಸಿದರು. ಇದು ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಇಂತಹ ಸಂದಿಗ್ಧ ಸಮಯದಲ್ಲಿ ತಮ್ಮ ಕುಟುಂಬಕ್ಕೆ ನೆಗೆಟಿವ್ ಎನರ್ಜಿ ಬೇಡ ಎಂದಿದ್ದಾರೆ. ರಾಜು ಅವರು ಶೀಘ್ರವಾಗಿ ಗುಣಮುಖರಾಗಲೆಂದು ಅಭಿಮಾನಿಗಳು ಪ್ರಾರ್ಥಿಸುವಂತೆ ವಿನಂತಿಸಿರುವ ಶಿಖಾ, ಶೀಘ್ರದಲ್ಲೇ ಹಿಂತಿರುಗಲಿದ್ದಾರೆ ಎಂದು ಹೇಳಿದರು. ವೈದ್ಯರು ತಮ್ಮ ಕೈಲಾದಷ್ಟು ಪ್ರಯತ್ನ ಪಡುತ್ತಿದ್ದಾರೆ. ರಾಜು ಕಿಚಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದರು. ರಾಜು ಬದುಕಿಗಾಗಿ ಹೋರಾಡುತ್ತಿದ್ದಾರೆ. ನಕಾರಾತ್ಮಕತೆ ಹರಡಬೇಡಿ' ಎಂದು ಮನವಿ ಮಾಡಿದರು.
ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ್‌ಗೆ ಹೃದಯಾಘಾತ, ದೆಹಲಿ ಏಮ್ಸ್‌ಗೆ ದಾಖಲು!
ಆಗಸ್ಟ್ 10ರಂದು ರಾಜು ಶ್ರೀವಾಸ್ತವ್ ಹೋಟೆಲ್ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೃದಾಯಘಾತವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟ್ರೆಡ್‌ಮಿಲ್ ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡು ಕೆಳಗೆ ಬಿದ್ದಿದ್ದರು. ನಂತರ ರಾಜು ಶ್ರೀವಾಸ್ತವ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪಕ್ಷದ ಕೆಲವು ದೊಡ್ಡ ನಾಯಕರನ್ನು ಭೇಟಿ ಮಾಡಲು ಹಾಸ್ಯನಟ ದೆಹಲಿಯಲ್ಲಿ ತಂಗಿದ್ದರು ಎಂದು ರಾಜು ಅವರ ಪಿಆರ್‌ಒ ಅಜಿತ್ ಮಾಹಿತಿ ನೀಡಿದ್ದರು.
ರಾಜು ಶ್ರೀವಾಸ್ತವ್ ಅವರ ಜರ್ನಿ
ರಾಜು ಶ್ರೀವಾಸ್ತವ್ ಅವರನ್ನು ಹಾಸ್ಯದ ರಾಜ ಎಂದೇ ಉತ್ತರ ಭಾರತದಲ್ಲಿ ಗುರುತಿಸಕೊಂಡಿದ್ದಾರೆ. ಅವರು ಅನೇಕ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ತಮ್ಮ ಪ್ರದರ್ಶನ ನೀಡಿದ್ದಾರೆ. ಹಲವು ವರ್ಷಗಳಿಂದ ರಾಜು ಶ್ರೀವಾಸ್ತವ್ ತಮ್ಮ ಹಾಸ್ಯದ ಮೂಲಕ ಜನರಿಗೆ ಕಚಗುಳಿ ಇಡುತ್ತಿದ್ದಾರೆ. ರಾಜುವಿಗೆ ಬಾಲ್ಯದಿಂದಲೂ ಕಮಿಡಿಯನ್ ಆಗಬೇಕೆಂಬ ಆಸೆ ಇತ್ತು. ರಾಜು ಅವರು ತಮ್ಮ ವೃತ್ತಿಜೀವನವನ್ನು ಸ್ಟೇಜ್ ಶೋಗಳೊಂದಿಗೆ ಪ್ರಾರಂಭಿಸಿದರು. ಆರಂಭದಲ್ಲಿ, ರಾಜು ಬಾಲಿವುಡ್ ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಿದರು. ಸ್ಟ್ಯಾಂಡ್ ಅಪ್ ಶೋ 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್' ಮೂಲಕ ಅವರು ಖ್ಯಾತಿ ಪಡೆದರು. ಈ ಶೋನಲ್ಲಿ ರಾಜು ಎರಡನೇ ರನ್ನರ್ ಅಪ್ ಆಗಿದ್ದರು. ಅದರ ಸ್ಪಿನ್-ಆಫ್ ಶೋ 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ - ಚಾಂಪಿಯನ್ಸ್' ಅನ್ನು ರಾಜು ಗೆಲ್ಲುವ ಮೂಲಕ ಕಾಮಿಡಿ ಕಿಂಗ್ ಎನಿಸಿಕೊಂಡರು. ಬಿಗ್ ಬಾಸ್ 3, ನಚ್ ಬಲಿಯೇ 6 ರಂತಹ ರಿಯಾಲಿಟಿ ಶೋಗಳಲ್ಲೂ ರಾಜು ಅವರು ಪಾಲ್ಗೊಂಡಿದ್ದರು. ಕಪಿಲ್ ಶರ್ಮ ಅವರ ಕಾಮಿಡಿ ನೈಟ್ಸ್ ವಿತ್ ಕಪಿಲ್ ಶೋನಲ್ಲಿಯೂ ಕಾಣಿಸಿಕೊಂಡಿದ್ದ ರಾಜು ಶ್ರೀವಾಸ್ತವ್ ಅವರು ಹಾಸ್ಯನಟರಾಗಿರುವುದರೊಂದಿಗೆ ರಾಜಕಾರಣಿಯೂ ಆಗಿದ್ದಾರೆ. 2014ರಲ್ಲಿ ಅವರು ಬಿಜೆಪಿ ಸೇರಿದ್ದರು.