ಹಲ ದಾಖಲೆ ಹಿಂದಿಕ್ಕಿ ನಾಗಾಲೋಟದಿಂದ ಓಡುತ್ತಿರುವ ಜೈಲರ್ ಚಿತ್ರ ಇದೀಗ ಓಟಿಟಿಯಲ್ಲಿ ಕಾಣಿಸಿಕೊಳ್ಳಲಿದ್ದು, ಇದಕ್ಕೆ ದಿನಾಂಕ ಫಿಕ್ಸ್ ಮಾಡಲಾಗಿದೆ.
ಕಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಜೈಲರ್’ (Jailer) ಚಿತ್ರ ಬಹುತೇಕ ಎಲ್ಲಾ ಚಿತ್ರಗಳ ದಾಖಲೆಗಳನ್ನು ಹಿಂದಿಕ್ಕಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. 11ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಬಿಡುಗಡೆಯಾಗಿ ನಾಲ್ಕು ವಾರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಜೈಲರ್ ಮೊದಲ ವಾರದಲ್ಲಿ 450.80 ಕೋಟಿ ರೂ., ಎರಡನೇ ವಾರದಲ್ಲಿ 124.18 ಕೋಟಿ ಮತ್ತು ಮೂರನೇ ವಾರದಲ್ಲಿ 47.05 ಕೋಟಿ ರೂ. ಕಲೆಕ್ಟ್ ಮಾಡಿದ್ದರೆ, ನಾಲ್ಕನೇ ವಾರದ 1 ನೇ ದಿನದಂದು 3.92 ಕೋಟಿ ರೂ ಗಳಿಸಿತು, ಅದರ ಒಟ್ಟು ಕಲೆಕ್ಷನ್ 625.95 ಕೋಟಿ ರೂಪಾಯಿಗಳಾಗಿವೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿಯೂ ಸಕತ್ ಸದ್ದು ಮಾಡುತ್ತಿದೆ. ಎರಡು ವರ್ಷಗಳ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿಯೇ ದೇಶಾದ್ಯಂತ 8.2 ಕೋಟಿ ರು. ಬೆಲೆಯ ಮುಂಗಡ ಟಿಕೆಟ್ ಬುಕಿಂಗ್ ಮಾಡಲಾಗಿತ್ತು. ನೆಲ್ಸನ್ ದಿಲೀಪ್‌ಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದು, ಸಿನಿಮಾದಲ್ಲಿ ರಜನೀಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಜೈಲರ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಸಣ್ಣ ಪಾತ್ರದಲ್ಲಿ ಶಿವರಾಜ್ ಕುಮಾರ್ ಕೂಡ ರಜನಿಕಾಂತ್ ಜೊತೆ ಕಾಣಿಸಿಕೊಂಡಿದ್ದಾರೆ.
ಹೀಗೆ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಬೆನ್ನಲ್ಲೇ ಇದೀಗ ಓಟಿಟಿಯಲ್ಲಿ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಈ ಹಿಂದೆ ನೆಟ್‌ಫ್ಲಿಕ್ಸ್ ಮತ್ತು ಸನ್ ನೆಕ್ಸ್ಟ್ ಒಟಿಟಿಯಲ್ಲಿ ಜೈಲರ್ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಬಹುದು ಎಂಬ ಸುದ್ದಿ ಹರಿದಾಡಿತ್ತು. ಇದೀಗ ಜೈಲರ್ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ ಎಂದು ಸ್ವತಃ ಪ್ರೈಂ ಅಧಿಕೃತ ಘೋಷಣೆ ಮಾಡಿದೆ. ಸೆಪ್ಟೆಂಬರ್ 7ರಂದು ಅಮೆಜಾನ್ ಪ್ರೈಂನಲ್ಲಿ ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ. ಇದೇ ದಿನ ಶಾರುಖ್ ಖಾನ್ ಅವರ ಅಭಿನಯದ ಜವಾನ್ ಚಿತ್ರ ತೆರೆ ಕಾಣಲಿರುವುದು ವಿಶೇಷ.
ಸಿಎಂ ಯೋಗಿ ಜೊತೆ ರಜನೀಕಾಂತ್ ಜೈಲರ್ ವೀಕ್ಷಣೆ: ತಲೈವಾ ಹೇಳಿದ್ದೇನು?
ಅದೇ ಇನ್ನೊಂದೆಡೆ, ಇವೆಲ್ಲಾ ಯಶಸ್ಸಿನ ಬೆನ್ನಲ್ಲೇ ಇದೀಗ ಜೈಲರ್ ಚಿತ್ರ ಹೈಕೋರ್ಟ್ ಮೆಟ್ಟಿಲೇರಿದೆ. ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಕೋರಿ ಮದ್ರಾಸ್ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಸಲ್ಲಿಕೆಯಾಗಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ ಮುಖಂಡ ರವಿ ಅವರು ಜೈಲರ್ ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಇವರ ವಾದ ಏನೆಂದರೆ, ಜೈಲರ್ ಚಿತ್ರದಲ್ಲಿ ಘರ್ಷಣೆ ಹೆಚ್ಚಾಗಿದೆ. ಆದ್ದರಿಂದ ಈ ಸಿನಿಮಾಗೆ ಸೆನ್ಸಾರ್ ಬೋರ್ಡ್ U/A ಸರ್ಟಿಫಿಕೆಟ್ ಕೊಟ್ಟಿರುವುದು ಸರಿಯಲ್ಲ. ಜೈಲರ್ ಚಿತ್ರದಲ್ಲಿ ಬಹಳಷ್ಟು ಹಿಂಸಾತ್ಮಕ ದೃಶ್ಯಗಳಿವೆ. ಆದ್ದರಿಂದ ಯಾವ ಆಧಾರದ ಮೇಲೆ ಸೆನ್ಸಾರ್ ಬೋರ್ಡ್ U/A ಸರ್ಟಿಫಿಕೇಟ್ ನೀಡಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದಿರುವ ಅರ್ಜಿದಾರರು, ಕೂಡಲೇ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. ಅದಿನ್ನೂ ವಿಚಾರಣೆಗೆ ಬರಬೇಕಿದೆ. ಇದಕ್ಕೂ ಮುನ್ನ ಚಿತ್ರದಲ್ಲಿ ಆರ್‌ಸಿಬಿ ತಂಡದ ಜೆರ್ಸಿ ಧರಿಸಿರುವ ಅಭಿಮಾನಿಯೊಬ್ಬ ಅವಹೇಳನಕಾರಿಯಾಗಿ ಮಾತನಾಡಿದ್ದ ವಿಚಾರದಲ್ಲಿ ಆರ್‌ಸಿಬಿ ತಂಡ ಜೈಲರ್ ಸಿನಿಮಾದ ನಿರ್ಮಾಪಕರ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಜೈಲರ್ ಸಿನಿಮಾದ ನಿರ್ಮಾಪಕದು ವಿವಾದಕ್ಕೆ ಕಾರಣವಾಗಿರುವ ದೃಶ್ಯವನ್ನು ಸೆಪ್ಟೆಂಬರ್ 1 ರ ಒಳಗಾಗಿ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ ಬೆನ್ನಲ್ಲಿಯೇ ಪ್ರಕರಣ ಮುಕ್ತಾಯ ಕಂಡಿದೆ. ಪಿಐಎಲ್ ಇನ್ನೂ ವಿಚಾರಣೆಗೆ ಬರಬೇಕಿದೆ.
ಹಾಡಿನಿಂದ ಹಿಡಿದು ಚಿತ್ರದ ಪ್ರತಿಯೊಂದು ದೃಶ್ಯಕ್ಕೂ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದೆ ಜೈಲರ್. ಹಾಡುಗಳು, ಸೀನ್ಗಳು ವೈರಲ್ ಆಗಿವೆ. ಸಿನಿಮಾ ನೋಡಿದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಜೈಲರ್ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಅವರು ಡ್ಯಾನ್ಸ್ ಮಾಡಿದ್ದು, ಇದರಲ್ಲಿ ಶಿವರಾಜ್ಕುಮಾರ್ ಹಾಗೂ ಮೋಹನ್ಲಾಲ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿ ಪತ್ನಿಯಾಗಿ ರಮ್ಯಾ ಕೃಷ್ಣ ಕಾಣಿಸಿಕೊಂಡಿದ್ದಾರೆ. ಪ್ರತಿಯೊಂದು ಪಾತ್ರವನ್ನೂ ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಜೈಲರ್ ಸೀಕ್ವೆಲ್ ಬರುತ್ತಿದೆ ಎಂಬ ಮಾತೂ ಕೇಳಿಬರುತ್ತಿದೆ.
ರಜನೀಕಾಂತ್ ಜೈಲರ್ಗೆ ಸಂಕಟ: ಚಿತ್ರದ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ
