ರಜನಿಕಾಂತ್​ ಅಭಿನಯದ ಜೈಲರ್​ ಚಿತ್ರವು ಭರ್ಜರಿ ಓಡುತ್ತಿರುವ ಬೆನ್ನಲ್ಲೇ ಇದರ ವಿರುದ್ಧ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ವಾದವೇನು? 

ಟಾಲಿವುಡ್​​ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಜೈಲರ್’ (Jailer) ಚಿತ್ರ ಬಹುತೇಕ ಎಲ್ಲಾ ಚಿತ್ರಗಳ ದಾಖಲೆಗಳನ್ನು ಹಿಂದಿಕ್ಕಿ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುತ್ತಿದೆ. ಸಿನಿಮಾ ರಿಲೀಸ್ ಆದ ದಿನದಿಂದ ಇಲ್ಲಿಯವರೆಗೆ ಚಿತ್ರ ಭಾರತದಲ್ಲಿ ₹18 ಕೋಟಿ, ವಿಶ್ವಾದ್ಯಂತ ₹500 ಕೋಟಿ ಗಳಿಸಿದೆ. ಸಿನಿಮಾದ ತಮಿಳು ವರ್ಷನ್ ಸುಮಾರು 190 ಕೋಟಿ ಗಳಿಸಿದ್ದು ತೆಲುಗಿನಲ್ಲಿ 48 ಕೋಟಿ ದಾಟಿದೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿಯೂ ಸಕತ್​ ಸದ್ದು ಮಾಡುತ್ತಿದೆ. ಎರಡು ವರ್ಷಗಳ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಚೆನ್ನೈ ಹಾಗೂ ಬೆಂಗಳೂರಿನ ಕೆಲ ಕಚೇರಿಗಳಲ್ಲಿ ಜೈಲರ್ ಸಿನಿಮಾ ವೀಕ್ಷಣೆಗೆ ಮೊದಲ ದಿನವೇ ರಜೆಯನ್ನು ಕೂಡ ಘೋಷಣೆ ಮಾಡಲಾಗಿತ್ತು! ಆರಂಭದಲ್ಲಿಯೇ ದೇಶಾದ್ಯಂತ 8.2 ಕೋಟಿ ರು. ಬೆಲೆಯ ಮುಂಗಡ ಟಿಕೆಟ್‌ ಬುಕಿಂಗ್‌ ಮಾಡಲಾಗಿತ್ತು. ನೆಲ್ಸನ್‌ ದಿಲೀಪ್‌ಕುಮಾರ್‌ ಚಿತ್ರವನ್ನು ನಿರ್ದೇಶಿಸಿದ್ದು, ಸಿನಿಮಾದಲ್ಲಿ ರಜನೀಕಾಂತ್‌ ನಿವೃತ್ತ ಪೊಲೀಸ್‌ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಜೈಲರ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಸಣ್ಣ ಪಾತ್ರದಲ್ಲಿ ಶಿವರಾಜ್ ಕುಮಾರ್ ಕೂಡ ರಜನಿಕಾಂತ್ ಜೊತೆ ಕಾಣಿಸಿಕೊಂಡಿದ್ದಾರೆ.

ಈ ಜೈಲರ್​ ಕುರಿತು ವಿವಿಧ ಕ್ಷೇತ್ರಗಳ ಗಣ್ಯರು ಶಹಬ್ಬಾಸ್​ಗಿರಿ ಕೊಡುತ್ತಿದ್ದಾರೆ. ನಿನ್ನೆಯಷ್ಟೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanatha) ಅವರು, ರಜನೀಕಾಂತ್​ ಅವರನ್ನು ಭೇಟಿಯಾಗಿದ್ದರು. ಯೋಗಿ ಆದಿತ್ಯನಾಥ್ ರಜನಿಕಾಂತ್‌ಗೆ ಹೂಗುಚ್ಚ ನೀಡಿ ಸ್ವಾಗತ ನೀಡಿದರು. ಯೋಗಿ ಆದಿತ್ಯನಾಥ ಪಾದ ಮುಟ್ಟಿ ನಮಸ್ಕರಿಸಿದ ರಜನಿಕಾಂತ್‌ ಅವರನ್ನು ಯೋಗಿ ಆದಿತ್ಯನಾಥ ಆತ್ಮೀಯವಾಗಿ ಸ್ವಾಗತಿಸಿದರಿ. ಕೆಲ ಹೊತ್ತು ಮಾತುಕತೆ ನಡೆಸಿದರು. ರಜನಿಕಾಂತ್‌ಗೆ 2 ಉಡುಗೊರೆಯನ್ನು ಯೋಗಿ ನೀಡಿದ್ದಾರೆ. ಈ ಉಡುಗೊರೆಗಳ ಮಹತ್ವನ್ನು ಯೋಗಿ ಆದಿತ್ಯನಾಥ್ ಖುದ್ದು ರಜನಿಕಾಂತ್‌ಗೆ ವಿವರಿಸಿದ್ದಾರೆ. ಯೋಗಿ ಆದಿತ್ಯನಾಥ್ ಜೊತೆ ರಜನಿಕಾಂತ್ ಹಾಗೂ ರಜನಿ ಪತ್ನಿ ಫೋಟೋ ತೆಗೆಸಿಕೊಂಡಿದ್ದಾರೆ. 

'ಜೈಲರ್'​ ಕಾವಾಲಾ ಹಾಡಿಗೆ ಜಪಾನಿನ ರಾಯಭಾರಿಯಿಂದ ಭರ್ಜರಿ ಡ್ಯಾನ್ಸ್​

ಇವೆಲ್ಲಾ ಯಶಸ್ಸಿನ ಬೆನ್ನಲ್ಲೇ ಇದೀಗ ಜೈಲರ್​ ಚಿತ್ರ ಹೈಕೋರ್ಟ್​ ಮೆಟ್ಟಿಲೇರಿದೆ. ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಕೋರಿ ಮದ್ರಾಸ್ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಸಲ್ಲಿಕೆಯಾಗಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ ಮುಖಂಡ ರವಿ ಅವರು ಜೈಲರ್ ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಇವರ ವಾದ ಏನೆಂದರೆ, ಜೈಲರ್​ ಚಿತ್ರದಲ್ಲಿ ಘರ್ಷಣೆ ಹೆಚ್ಚಾಗಿದೆ. ಆದ್ದರಿಂದ ಈ ಸಿನಿಮಾಗೆ ಸೆನ್ಸಾರ್​ ಬೋರ್ಡ್​ U/A ಸರ್ಟಿಫಿಕೆಟ್​ ಕೊಟ್ಟಿರುವುದು ಸರಿಯಲ್ಲ. ಜೈಲರ್​ ಚಿತ್ರದಲ್ಲಿ ಬಹಳಷ್ಟು ಹಿಂಸಾತ್ಮಕ ದೃಶ್ಯಗಳಿವೆ. ಆದ್ದರಿಂದ ಯಾವ ಆಧಾರದ ಮೇಲೆ ಸೆನ್ಸಾರ್​ ಬೋರ್ಡ್​ U/A ಸರ್ಟಿಫಿಕೇಟ್​ ನೀಡಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದಿರುವ ಅರ್ಜಿದಾರರು, ಕೂಡಲೇ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. 

ಅಷ್ಟಕ್ಕೂ U/A ಸರ್ಟಿಫಿಕೇಟ್ ನೀಡಿರುವುದಕ್ಕೆ ಅರ್ಜಿದಾರರ ವಾದ ಏನೆಂದರೆ, ಹೀಗೆ ಸರ್ಟಿಫಿಕೇಟ್​ ನೀಡಿರುವ ಕಾರಣದಿಂದಾಗಿ, 12 ವರ್ಷ ಹಾಗೂ ಅದರ ಕೆಳಗಿನ ವಯಸ್ಸಿನ ಮಕ್ಕಳು ಈ ಚಿತ್ರವನ್ನು ವೀಕ್ಷಿಸಲು ಅನುವು ಮಾಡಿಕೊಟ್ಟಿದೆ. ಚಿತ್ರದಲ್ಲಿ ಘರ್ಷಣೆ ಹಾಗೂ ರಕ್ತಪಾತದ ದೃಶ್ಯಗಳಿರುವ ಕಾರಣ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇದನ್ನು ನೋಡುವುದು ಸರಿಯಲ್ಲ. ಆದ್ದರಿಂದ U/A ಸರ್ಟಿಫಿಕೇಟ್ ನೀಡಿರುವುದು ಸರಿಯಲ್ಲ ಎಂದಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ಪಾದಮುಟ್ಟಿ ನಮಸ್ಕರಿಸಿದ ರಜನಿಕಾಂತ್, ವಿಡಿಯೋ ವೈರಲ್!