ಸಮಾಜಕ್ಕೆ ಒಳಿತು ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಗುಣ ನಟ ರಜನಿಕಾಂತ್ ಅವರಿಗೆ ಸಹಜವಾಗಿಯೇ ಇದೆ. ಇತ್ತೀಚೆಗೆ ನಟ ರಜನಿಕಾಂತ್ ಅವರು ರಸ್ತೆ ಬದಿ ಸಣ್ಣ ಹೋಟೆಲ್ ನಡೆಸುತ್ತಿರುವ ಶೇಖರ್ ಎಂಬ ವ್ಯಕ್ತಿಯನ್ನು ಕುಟುಂಬ ಸಮೇತ ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ.
ರಜನಿಕಾಂತ್ ಹೊಸ ಸುದ್ದಿ
ಭಾರತದ ಸೂಪರ್‌ಸ್ಟಾರ್ ರಜನೀಕಾಂತ್ (Rajinikanth) ಕೇವಲ ಸಿನಿಮಾ ತಾರೆ ಮಾತ್ರವಲ್ಲ, ಮಾನವೀಯತೆಯ ಪ್ರತೀಕ ಕೂಡ ಎಂಬುದು ಹಲವು ಬಾರಿ ಸಾಕ್ಷಿ ಸಮೇತ ಪ್ರೂವ್ ಆಗಿದೆ. ಸಮಾಜಕ್ಕೆ ಒಳಿತು ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಗುಣ ನಟ ರಜನಿಕಾಂತ್ ಅವರಿಗೆ ಸಹಜವಾಗಿಯೇ ಇದೆ. ಇತ್ತೀಚೆಗೆ ನಟ ರಜನಿಕಾಂತ್ ಅವರು ರಸ್ತೆ ಬದಿ ಸಣ್ಣ ಹೋಟೆಲ್ ನಡೆಸುತ್ತಿರುವ ಶೇಖರ್ ಎಂಬ ವ್ಯಕ್ತಿಯನ್ನು ಕುಟುಂಬ ಸಮೇತ ತಮ್ಮ ಮನೆಗೆ ಕರೆಸಿ, ಭಾವುಕವಾಗಿ ಮಾತನ್ನಾಡಿ ಸನ್ಮಾನಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮಧುರೈನಲ್ಲಿ ರಸ್ತೆ ಬದಿ ಹೋಟೆಲ್
ಮಧುರೈನಲ್ಲಿ ರಸ್ತೆ ಬದಿ ಹೋಟೆಲ್ ನಡೆಸುತ್ತಿರುವ ಶೇಖರ್, ಕಳೆದ 15 ವರ್ಷಗಳಿಂದ ಕೇವಲ 5 ರೂಪಾಯಿಗೆ ಪರೋಟ ಮಾರಾಟ ಮಾಡುತ್ತಿದ್ದಾರೆ. ಇಂದಿನ ದಿನಗಳಲ್ಲಿ ಒಂದು ಪರೋಟ ಬೆಲೆ 30ರಿಂದ 50 ರೂಪಾಯಿ ಇದ್ದರೂ, ಶೇಖರ್ ಮಾತ್ರ ತಮ್ಮ ಬೆಲೆಯನ್ನು ಏರಿಸಿಲ್ಲ. ಈ ಅಪರೂಪದ ಸೇವೆಯೇ ರಜನೀಕಾಂತ್ ಅವರ ಗಮನ ಸೆಳೆದಿದೆ. ಅದೂ ಕೂಡ, 15 ವರ್ಷಗಳ ಹಿಂದೆ ಶೇಖರ್ ಅವರು ನಟ ರಜನಿಕಾಂತ್ ಜನ್ಮದಿನದಂದೇ ಈ ಕೆಲಸ ಶುರುಮಾಡಿದ್ದಾರೆ.
ಇತ್ತೀಚೆಗೆ ರಜನೀಕಾಂತ್ ಅವರು ಶೇಖರ್ ಮತ್ತು ಅವರ ಕುಟುಂಬದವರನ್ನೆಲ್ಲ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. ಮನೆಯಲ್ಲೇ ಆತಿಥ್ಯ ನೀಡಿ, ಶೇಖರ್ ಅವರ ಕೊರಳಿಗೆ ಚಿನ್ನದ ಸರ ಹಾಕಿದ್ದಾರೆ. ಅಷ್ಟೇ ಅಲ್ಲ, ತಮ್ಮಿಷ್ಟದ ಗುರುವಿನ ಫೋಟೋ ಕೂಡ ಅವರಿಗೆ ನೀಡಿ ಗೌರವಿಸಿದ್ದಾರೆ. ಜೊತೆಗೆ ಶೇಖರ್ ಕುಟುಂಬಕ್ಕೆ ಆರ್ಥಿಕ ಸಹಾಯ ಕೂಡ ನೀಡಲಾಗಿದೆ ಎಂಬ ಮಾಹಿತಿ ಸಹ ಇದೆ.
ರಜನೀಕಾಂತ್ ಅವರ ಅಪ್ಪಟ ಅಭಿಮಾನಿ
ಇನ್ನು ಶೇಖರ್ ಬಗ್ಗೆ ಹೇಳುವುದಾದರೆ, ಅವರು ನಟ ರಜನೀಕಾಂತ್ ಅವರ ಅಪ್ಪಟ ಅಭಿಮಾನಿ. 15 ವರ್ಷಗಳ ಹಿಂದೆ ರಜನೀಕಾಂತ್ ಹುಟ್ಟುಹಬ್ಬದ ಪ್ರಯುಕ್ತ 5 ರೂಪಾಯಿಗೆ ಪರೋಟ ಮಾರಾಟ ಆರಂಭಿಸಿದ್ದರು. ಅದನ್ನು ಇಂದಿಗೂ ಮುಂದುವರೆಸುತ್ತಿದ್ದಾರೆ. ತಮ್ಮ ಹೋಟೆಲಿನಲ್ಲಿ ರಜನೀಕಾಂತ್ ಅವರ ಫೋಟೋಗಳು, ಪೋಸ್ಟರ್‌ಗಳು ಹಾಗೂ ಕೈ ಮೇಲೆ ರಜನೀಕಾಂತ್ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ.
ಶೇಖರ್ ಹಾಗೂ ರಜನಿಕಾಂತ್ ಅವರಿಬ್ಬರ ಭೇಟಿ ಹಾಗೂ ಸನ್ಮಾನ ಹಾಗೂ ಮಾನವೀಯ ಕ್ಷಣಗಳ ಫೋಟೋಗಳು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಮೊದಲೇ ಸಮಾಜಸೇವೆಗೆ ಹೆಸರುವಾಸಿ ಆಗಿರುವ ನಟ ರಜನಿಕಾಂತ್ ಅವರು ಈಗ ಮತ್ತಷ್ಟು ಗೌರವ ಹೆಚ್ಚಿಸಿಕೊಂಡಿದ್ದಾರೆ.


