'ಸಮಾಧಿ ಅಗೆಯುವ' ಸ್ಲೋಗನ್ ಮೂಲಕ ವಿನೇಶ್ ಫೋಗಟ್ಗೆ ಕಂಗನಾ ಕೊಟ್ಟ ಪ್ರತಿಕ್ರಿಯೆ ಹೀಗಿದೆ...
ಕಳೆದ ವರ್ಷದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ವಿರುದ್ಧ ವಿನೇಶ್ ಫೋಗಟ್ ನುಡಿದ ಘೋಷಣೆಯನ್ನು ಉಲ್ಲೇಖಿಸುತ್ತಲೇ ಕಂಗನಾ ರಣಾವತ್ ಹೇಳಿದ್ದೇನು?
ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಹುಡುಗಿ ಎನಿಸಿಕೊಳ್ಳಲು ವಿನೇಶ್ ಫೋಗಟ್ ಅವರಿಗೆ ಕೆಲವೇ ಕ್ಷಣಗಳು ಬಾಕಿ ಇದ್ದವು. ಆದರೆ ಭಾರತೀಯರಿಗೆ ಮರ್ಮಾಘಾತವಾಗುವ ರೀತಿಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯು ವಿನೇಶ್ ಫೋಗಟ್ ಅವರನ್ನು ಅನರ್ಹ ಮಾಡಿದೆ. ವಿನೇಶ್ ಮಾತ್ರವಲ್ಲದೇ ಅವರು ಚಿನ್ನ ಗೆಲ್ಲಲಿ ಎಂದು ಹಾರೈಸುತ್ತಿದ್ದ ಕೋಟ್ಯಂತರ ಭಾರತೀಯರ ಕನಸು ನುಚ್ಚು ನೂರಾಗಿದೆ. 50 ಕೆ ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದರು. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ, ವಿನೇಶ್ ಫೋಗಟ್ ಅವರು ನಿಗದಿತ 50 ಕೆಜಿ ತೂಕಕ್ಕಿಂತ 100 ಗ್ರಾಮ ಹೆಚ್ಚಿದ್ದಾರೆ ಎನ್ನುವ ಕಾರಣದಿಂದ ವಿನೇಶ್ ಅವರನ್ನು ಅನರ್ಹಗೊಳಿಸಿದೆ ಎಂದು ವರದಿಯಾಗಿದೆ.
ಇದರ ನಡುವೆಯೇ ಸಂಸದೆ ಕಂಗನಾ ರಣಾವತ್ ಮಾಡಿರುವ ಟ್ವೀಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ವಿನೇಶ್ ಅವರು ಈ ಪರಿಯಲ್ಲಿ ಸದ್ದು ಮಾಡಲು ಕಾರಣವೂ ಇದೆ. ಅದೇ ಅಂದಹಾಗೆ ಕಳೆದ ವರ್ಷ ಭಾರತೀಯ ಕುಸ್ತಿ ಫೆಡರೇಷನ್‌ನಲ್ಲಿ ಮಹಿಳಾ ಆಥ್ಲೀಟ್‌ಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ನಡೆದ ಭಾರಿ ಪ್ರತಿಭಟನೆಯಲ್ಲಿ ವಿನೇಶ್ ನೇತೃತ್ವ ವಹಿಸಿದ್ದರು. ಕುಸ್ತಿ ಫೆಡರೇಷನ್ ಅಧ್ಯಕ್ಷ, ಆಗಿನ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಸಿದ್ದ ಹೋರಾಟ ಭಾರಿ ಕೋಲಾಹಲ ಸೃಷ್ಟಿಸಿತ್ತು. ಆದರೆ ಇದು ದುಡ್ಡು ಕೊಟ್ಟು ಮಾಡಿಸಿದ್ದ ಪ್ರತಿಭಟನೆ ಎಂಬೆಲ್ಲಾ ಆರೋಪಗಳು ಕೇಳಿ ಬಂದು ಹೋರಾಟ ತಾರಕಕ್ಕೆ ಏರಿತ್ತು. ಆ ಸಂದರ್ಭದಲ್ಲಿ ವಿನೇಶ್ ಅವರು ‘ ನಾನು ನನ್ನ ಮುಂದಿನ ಪೀಳಿಗೆಯ ಕುಸ್ತಿಪಟುಗಳಿಗಾಗಿ ಹೋರಾಡುತ್ತಿದ್ದೇನೆ, ನನಗಾಗಿ ಅಲ್ಲ’ ಎಂದು ಹೇಳಿದ್ದರು.
ಆದರೆ ಇದೇ ಸಮಯದಲ್ಲಿ ವಿನೇಶ್ ಅವರು ನೀಡಿದ್ದ ಹೇಳಿಕೆಯನ್ನು ತಿಳಿಸುವ ಮೂಲಕ ಕಂಗನಾ ರಣಾವತ್ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ವಿನೇಶ್ ಅವರು ಚಿನ್ನದ ಹಾದಿಯಲ್ಲಿ ಇರುವಾಗ ಮಾಡಿದ ಟ್ವೀಟ್ ಆಗಿದೆ. ಅಂದರೆ ಅವರನ್ನು ಅನರ್ಹಗೊಳಿಸುವ ಪೂರ್ವದಲ್ಲಿ ಮಾಡಿರುವ ಟ್ವೀಟ್. ‘ಭಾರತಕ್ಕೆ ಮೊದಲ ಚಿನ್ನ ಸಿಗಲಿ ಎಂದು ನಾನು ಪ್ರಾರ್ಥಿಸುತ್ತಿದ್ದೇನೆ ಎನ್ನುವ ಮೂಲಕವೇ ಪ್ರತಿಭಟನೆ ಸಂದರ್ಭದಲ್ಲಿ ನಿವೇಶ್ ಅವರು ಪ್ರಧಾನಿ ಮೋದಿ ವಿರುದ್ಧ ಕೂಗಿದ್ದ ಘೋಷಣೆಯನ್ನು ಉಲ್ಲೇಖಿಸಿದ್ದಾರೆ. ವಿನೇಶ್ ಫೋಗಟ್ ಒಮ್ಮೆ ಚಳವಳಿಯಲ್ಲಿ ಭಾಗವಹಿಸಿದ್ದರು, ಅದರಲ್ಲಿ ಅವರು ‘ಮೋದಿ ನಿಮ್ಮ ಸಮಾಧಿಯನ್ನು ಅಗೆಯುತ್ತಾರೆ’ ಎಂದು ಹೇಳಿದ್ದರು. ಆದರೆ ಮೋದಿ ಸಮಾಧಿ ಅಗೆಯಲಿಲ್ಲ, ಬದಲಿಗೆ ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ಕೊಟ್ಟರು. ನಿಮಗೆ ಅತ್ಯುತ್ತಮ ತರಬೇತಿ, ತರಬೇತುದಾರರು ಮತ್ತು ಸೌಲಭ್ಯಗಳನ್ನು ನೀಡಿದ್ದಾರೆ. ಇದನ್ನು ಮರೆಯಬೇಡಿ. ಇದೇ ಪ್ರಜಾಪ್ರಭುತ್ವದ ಸೌಂದರ್ಯ ಮತ್ತು ಉತ್ತಮ ನಾಯಕನ ಗುಣ ಎಂದು ಕಂಗನಾ ಹೇಳಿದ್ದಾರೆ. ಇದೇ ಹೇಳಿಕೆಯನ್ನು ಯಾರಾದರೂ ಕಾಂಗ್ರೆಸ್ ಸರ್ಕಾರದ ವಿರುದ್ಧ ನೀಡಿದ್ದರೆ, ಆಗ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂದು ಕೆಲವರು ಈ ಪ್ರತಿಕ್ರಿಯೆಗೆ ಕಮೆಂಟ್ ಮಾಡುವ ಮೂಲಕ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಆದರೆ ಸದ್ಯ ಭಾರತೀಯರ ನಿರೀಕ್ಷೆ ಹುಸಿಯಾಗಿದೆ. ಅದೂ ಆಟವಾಡದೇ ಹೀಗೆ ವಿನೇಶ್ ಅವರನ್ನು ಅನರ್ಹಗೊಳಿಸಿರುವುದಕ್ಕೆ ಭಾರಿ ಅಸಮಾಧಾನ, ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ.1 ಕುಸ್ತಿಪಟುವಾಗಿದ್ದ ಜಪಾನಿನ ಯ್ಯೂ ಸುಸುಕಿ ವಿರುದ್ದ 3-2 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದ್ದ ಫೋಗಟ್, ಕ್ವಾರ್ಟರ್ ಫೈನಲ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದರು. ಉಕ್ರೇನ್‌ನ ಮೂರು ಬಾರಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಒಕ್ಸಾನಾ ಲಿವೀಚ್ ಎದುರು 7-5 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮೀಸ್‌ಗೆ ಲಗ್ಗೆಯಿಟ್ಟಿದ್ದರು. ಕ್ಯೂಬಾದ ಯುಸ್‌ನೈಲೆಸ್ ಗುಜ್ಮನ್ ಎದುರು ದಿಟ್ಟ ಹೋರಾಟ ತೋರಿದ ವಿನೇಶ್ ಇದೀಗ ಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಸೆಮೀಸ್‌ನಲ್ಲಿ ವಿನೇಶ್ 5-0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು.
ಸಂಸತ್ತಿಗೆ ಬರುವ ಮೊದಲು ರಾಹುಲ್ ಗಾಂಧಿ ಪರೀಕ್ಷೆ ನಡೆಸಿ ಎಂದ ಕಂಗನಾ! ಏನಿದು ಹೊಸ ವರಸೆ?