'ಸಲಾರ್' ಟೀಸರ್ ಯಾವಾಗ ರಿಲೀಸ್? ನಿರ್ಮಾಪಕ ವಿಜಯ್ ಕಿರಗಂದೂರು ಕಡೆಯಿಂದ ಸಿಕ್ತು ಉತ್ತರ
ಸಲಾರ್ ಸಿನಿಮಾದ ಟೀಸರ್ ಮೇ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ ಎಂದು ಅಬಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಇದುವರೆಗೂ ಟೀಸರ್ ಬಿಡುಗಡೆ ಬಗ್ಗೆಯಾವುದೇ ಸುಳಿವು ಸಿಕ್ಕಿಲ್ಲ. ಇದೀಗ ನಿರ್ಮಾಪಕ ವಿಜಯ್ ಕಿರಗಂದೂರು ಪ್ರತಿಕ್ರಿಯೆ ನೀಡುವ ಮೂಲಕ ಟೀಸರ್ ರಿಲೀಸ್ ಬಗ್ಗೆ ಮಾಹಿತಿ ಹಂಚಿಕಂಡಿದ್ದಾರೆ.
ಕೆಜಿಎಫ್-2 (KGF 2) ದೊಡ್ಡ ಮಟ್ಟದ ಸಕ್ಸಸ್ ಬಳಿಕ ಇದೀಗ ಅಭಿಮಾನಿಗಳಲ್ಲಿ ಸಲಾರ್(Salaar) ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಪ್ರಶಾಂತ್ ನೀಲ್(Prashant Neel) ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಲಾರ್ ಸಿನಿಮಾದ ಅಪ್ ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರೆ. ಕೆಜಿಎಫ್-2 ರಿಲೀಸ್ ಬಳಿಕ ಸಲಾರ್ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಅದರಲ್ಲೂ ಮೇ ತಿಂಗಳ ಕೊನೆಯಲ್ಲಿ ಸಲಾರ್ ಟೀಸರ್ ಬರಲಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಸದ್ಯ ಮೇ ತಿಂಗಳು ಮುಗಿಯುತ್ತಾ ಬಂದರೂ ಸಲಾರ್ ಟೀಸರ್ ಬಿಡುಗಡೆ ಬಗ್ಗೆ ಯಾವುದೇ ಸುಳಿವು ಇಲ್ಲ. ಹಾಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಲಾರ್ ಅಪ್ ಡೇಟ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.
ಇದೀಗ ಈ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು(Vijay Kiragandur) ಪ್ರತಿಕ್ರಿಯೆ ನೀಡಿದ್ದಾರೆ. ಟೀಸರ್ ರಿಲೀಸ್ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಹೌದು, ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ನ ಮಾಲಿಕ ವಿಜಯ್ ಕಿರಗಂದೂರು ಬಾಲಿವುಡ್ ಹಂಗಾಮಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಲಾರ್ ಸಿನಿಮಾದ ಟೀಸರ್ ಮೇ ತಿಂಗಳಲ್ಲಿ ರಿಲೀಸ್ ಆಗುತ್ತಾ? ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ವಿಜಯ್ ಕಿರಗಂದೂರು, 'ಮೇ ತಿಂಗಳಲ್ಲಿ ಟೀಸರ್ ರಿಲೀಸ್ ಆಗಲ್ಲ. ಆದರೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇನ್ನೂ ನಾವು ದಿನಾಂಕ ನಿಗದಿ ಪಡಿಸಿಲ್ಲ' ಎಂದು ಹೇಳಿದ್ದಾರೆ. ಸಲಾರ್ ಟೀಸರ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಈಗ ನಿರಾಸೆಯಾಗಿದೆ.
ಸಲಾರ್ ಸಿನಿಮಾ 2023ರಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂದು ಕೇಳಿದ ಪ್ರಶ್ನೆಗೆ, ಎರಡು ಅಥವಾ ಮೂರನೇ ತ್ರೈಮಾಸಿಕ ಸಮಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
KGF2 ಯಶ್ ಅಭಿನಯದ ಕೆಜಿಎಪ್ 2 ಬಿಡುಗಡೆ ತಡೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್!
ಇನ್ನು ಕೆಜಿಎಫ್-3 ಬಗ್ಗೆ ಮಾತನಾಡಿದ ವಿಜಯ್ ಕಿರಗಂದೂರು, ಇದು ಪ್ರಶಾಂತ್ ನೀಲ್ ಮತ್ತು ಯಶ್ ಯಾವಾಗ ಫ್ರಿ ಆಗ್ತಾರೆ ಎನ್ನುವುದರ ಮೇಲೆ ನಿಂತಿದೆ. ಪ್ರಶಾಂತ್ ಸದ್ಯ ಸಲಾರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಯಶ್ ಹೊಸ ಪ್ರಾಜೆಕ್ಟ್ ಆರಂಭಿಸಬಹುದು. ಇಬ್ಬರೂ ಒಂದೇ ಸಮಯದಲ್ಲಿ ಸಿಗಬೇಕು. ಹಾಗಾಗಿ ಯಾವುದೇ ನಿಗದಿತ ಕಾಲಾವಧಿ ಇಲ್ಲ ಎಂದು ಹೇಳಿದ್ದಾರೆ.
ಪ್ರಶಾಂತ್ ನೀಲ್‌ಗೆ ಬೆದರಿಕೆ ಹಾಕಿದ ಫ್ಯಾನ್: ಹುಚ್ಚು ಅಭಿಮಾನಿಯ ಬೆದರಿಕೆಗೆ ಏನಂದ್ರು ಪ್ರಭಾಸ್?
ಹೊಂಬಾಳೆ ಫಿಲ್ಮ್ಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದೆ. ಕೆಜಿಎಫ್-2 ಸಿನಿಮಾದ ದೊಡ್ಡ ಮಟ್ಟದ ಸಕ್ಸಸ್ ಸಲಾರ್ ಸಿನಿಮಾದ ಮೇಲು ಪರಿಣಾಮ ಬೀರಿದೆ. ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಮೇಲೆ ಈಗ ನಿರೀಕ್ಷೆ ದುಪ್ಪಟ್ಟಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ 40ರಷ್ಟು ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಇನ್ನು ಸಾಕಷ್ಟು ಚಿತ್ರಣ ಬಾಕಿಯುಳಿಸಿಕೊಂಡಿದೆ. ಚಿತ್ರದ ದೊಡ್ಡ ಅಪ್ ಡೇಟ್ ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಯಾವಾಗ ಸಂತಸದ ಸುದ್ದಿ ಸಿಗಲಿದೆ ಎಂದು ಕಾದುನೋಡಬೇಕು.