ಬಾಲಿವುಡ್‌ ನಟಿ, ದೇಸಿ ಗರ್ಲ್‌ ಎಂದೇ ಪ್ರಸಿದ್ಧಿ ಪಡೆದಿರುವ ಪ್ರಿಯಾಂಕಾ ಚೋಪ್ರಾ, ಅಮೆರಿಕಾದಲ್ಲಿ ಕರವಾಚೌತ್‌ ಆಚರಿಸಿಕೊಂಡಿದ್ದಾರೆ. ಈ ವೇಳೆ ಪತಿ ನಿಕ್‌ ನೀಡಿದ ಸರ್ಪ್ರೈಸ್‌ ನಟಿಗೆ ಪ್ರಿಯವಾಗಿದೆ.

ವಿದೇಶದಲ್ಲಿದ್ರೂ ದೇಶದ ಸಂಪ್ರದಾಯವನ್ನು ನಟಿ ಪ್ರಿಯಾಂಕಾ ಚೋಪ್ರಾ ಬಿಟ್ಟಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಅವರು ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಕರವಾಚೌತ್ ಆಚರಿಸಿದ್ದಾರೆ. ಈ ಬಾರಿ ಅವರ ಕರವಾ ಚೌತ್‌ ಸ್ವಲ್ಪ ವಿಶೇಷವಾಗಿತ್ತು. ಕರವಾಚೌತ್ ದಿನ ಪತಿ ನಿಕ್‌ ಪತ್ನಿ ಪ್ರಿಯಾಂಕಾ ಚೋಪ್ರಾ ಅವರಿಗೆ ಸರ್ಪ್ರೈಸ್‌ ನೀಡಿದ್ದರು. ಇದನ್ನು ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾಗೆ ನಿಕ್‌ ಸರ್ಪ್ರೈಸ್

ಪ್ರಿಯಾಂಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರು ಸುಂದರವಾದ ದೇಸಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪತಿ ನಿಕ್ ಜೋನಸ್ ಮತ್ತು ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್ ಅವರ ಝಲಕ್ ಕೂಡ ಫೋಟೋಗಳಲ್ಲಿ ಸೆರೆಯಾಗಿದೆ. ಒಂದು ಫೋಟೋದಲ್ಲಿ ಮಾಲ್ತಿಯ ಪುಟ್ಟ ಶೂಗಳು ಕಾಣಿಸಿಕೊಂಡರೆ, ಮತ್ತೊಂದು ಫೋಟೋದಲ್ಲಿ ನಿಕ್ ತಮ್ಮ ಮುಖವನ್ನು ಮರೆಮಾಡಿಕೊಂಡಿರುವುದು ಗಮನ ಸೆಳೆದಿದೆ. ಇದರ ಜೊತೆಗೆ ಪ್ರಿಯಾಂಕಾ ತಮ್ಮ ಮಂಗಳಸೂತ್ರ, ಹಾರ ಸೇರಿದಂತೆ ಸುಂದರವಾದ ಆಭರಣಗಳ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಇದೇ ವೇಳೆ ನಿಕ್‌ ಅವರು ಪತ್ನಿಗೆ ಸರ್ಪ್ರೈಸ್‌ ನೀಡಿದ್ದಾರೆ. ಅವರ ಟ್ರಿಪ್‌ ಅರ್ಧಕ್ಕೆ ನಿಲ್ಲಿಸಿ ಅವರು ಮನೆಗೆ ವಾಪಸ್‌ ಬಂದು ಪತ್ನಿ ಜೊತೆ ಕರವಾ ಚೌತ್‌ ಆಚರಿಸಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಪೋಸ್ಟ್ನಲ್ಲಿ ಬರೆದಿದ್ದೇನು?

ಇನ್ಸ್ಟಾಗ್ರಾಮ್ ಪೋಸ್ಟ್ಗೆ ಪ್ರಿಯಾಂಕಾ ವಿಶೇಷವಾದ ಕ್ಯಾಪ್ಷನ್ ಬರೆದಿದ್ದಾರೆ. ನಾನು ಹೇಳದೆಯೇ ಅವರು ಮನೆಗೆ ಬಂದರು. ಈ ದಿನ ನನಗೆ ಎಷ್ಟು ಮುಖ್ಯ ಎಂಬುದು ಅವರಿಗೆ ತಿಳಿದಿತ್ತು. ಕರವಾಚೌತ್ ದಿನ ಮನೆಯಲ್ಲಿರಲು ಸಾಧ್ಯವಾಗುವಂತೆ ತಮ್ಮ ಟೂರ್ನ ವೇಳಾಪಟ್ಟಿಯನ್ನು ಯೋಜಿಸಿದ್ದರು. ನನ್ನ ಸಂಗಾತಿಯಂತಹ ವ್ಯಕ್ತಿ ಬೇರಾರೂ ಇಲ್ಲ. ನಿಮ್ಮೆಲ್ಲರಿಗೂ ಇಂತಹ ಪ್ರೀತಿ ಸಿಗಲಿ. ಹ್ಯಾಪಿ ಕರವಾಚೌತ್ ಎಂದು ಬರೆದುಕೊಂಡಿದ್ದಾರೆ.

ಪ್ರಿಯಾಂಕಾ ಅವರ ಈ ಪೋಸ್ಟ್ಗೆ ಅಭಿಮಾನಿಗಳು ಹಾರ್ಟ್ ಎಮೋಜಿಗಳ ಸುರಿಮಳೆಗೈದಿದ್ದಾರೆ. ಸುಮಾರು 38 ಲಕ್ಷಕ್ಕೂ ಹೆಚ್ಚು ಮಂದಿ ಈ ಪೋಸ್ಟ್ಗೆ ಲೈಕ್ ಮಾಡಿದ್ದಾರೆ. ನಿಕ್ ಈ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ರೀತಿ, ಅದಕ್ಕೆ ನೀಡುವ ಗೌರವ ಮತ್ತು ಅದರಲ್ಲಿ ಸಂಪೂರ್ಣವಾಗಿ ಬೆರೆತುಹೋಗಿರುವುದು ನಿಜಕ್ಕೂ ಸುಂದರವಾಗಿದೆ. ನಿಮ್ಮ ಜೀವನದಲ್ಲಿ ಇಂತಹ ವ್ಯಕ್ತಿ ಇರುವುದಕ್ಕೆ ಖುಷಿಯಾಗುತ್ತದೆ ಕಮೆಂಟ್‌ ಬಂದಿದೆ. ಇನ್ನೊಬ್ಬರು, ನಮ್ಮ ದೇಸಿ ಗರ್ಲ್ಗೆ ಅತ್ಯುತ್ತಮ ಜೋನಸ್ ಸಹೋದರ ಸಿಕ್ಕಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬೇರೆ ದೇಶಕ್ಕೆ ಹೋದರೂ ಪ್ರಿಯಾಂಕಾ ತಮ್ಮ ಬೇರುಗಳನ್ನು ಮರೆತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಾವ ಟೂರ್ನಲ್ಲಿದ್ದಾರೆ ನಿಕ್ ಜೋನಸ್?

ನಿಕ್ ಜೋನಸ್ ತಮ್ಮ ಸಹೋದರರಾದ ಜೋ ಮತ್ತು ಕೆವಿನ್ ಜೋನಸ್ ಜೊತೆ ಜೋನಸ್ ಬ್ರದರ್ಸ್ ತಂಡದ ಬರ್ನಿಂಗ್ ಅಪ್ ಟೂರ್ ಆಲ್ ಓವರ್ ಅಗೇನ್ ಮ್ಯೂಜಿಕ್‌ ಟೂರ್‌ನಲ್ಲಿದ್ದಾರೆ. 2008ರ ಅವರ ಬರ್ನಿಂಗ್ ಅಪ್ ಟೂರ್ ನಿಂದ ಪ್ರೇರಿತವಾಗಿರುವ ಈ ಉತ್ತರ ಅಮೆರಿಕದ ಸಂಗೀತ ಪ್ರವಾಸ 2026ರ ಆಗಸ್ಟ್ 20ರಂದು ನ್ಯೂಯಾರ್ಕ್ನಲ್ಲಿ ಆರಂಭವಾಗಿದೆ. ಡಿಸೆಂಬರ್ವರೆಗೆ ನಡೆಯಲಿರುವ ಈ ಟೂರ್ನಲ್ಲಿ ಅಮೆರಿಕ ಮತ್ತು ಕೆನಡಾದ ಹಲವು ನಗರಗಳಲ್ಲಿ ಅವರು ಸಂಗೀತ ಕಾರ್ಯಕ್ರಮಗಳನ್ನು ನೀಡಲಿದ್ದಾರೆ.

ಇನ್ನು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ 2018ರ ಡಿಸೆಂಬರ್ನಲ್ಲಿ ಭಾರತದ ಜೋಧ್ಪುರದಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂಬ ಮಗಳಿದ್ದಾಳೆ.