'ಜೇಮ್ಸ್' ಸಂಭ್ರಮಕ್ಕೆ ಬ್ರೇಕ್; ಪುನೀತ್ ಅಭಿಮಾನಿಗಳಿಗೆ ಭಾರಿ ನಿರಾಸೆ
ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅಪ್ಪು ಹುಟ್ಟುಹಬ್ಬದ ದಿನ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಮಾಡಲು ತಯಾರಿ ನಡೆಸಿದ್ದರು. ಆದರೆ ಸೆಕ್ಷನ್ 144 ಜಾರಿ ಇರುವ ಕಾರಣ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ಬಿಡುಗಡೆಗೆ ಸಜ್ಜಾಗಿದೆ. ಪವರ್ ಸ್ಟಾರ್ ಹುಟ್ಟುಹಬ್ಬದ ದಿನ ಜೇಮ್ಸ್ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಮಾರ್ಚ್ 17 ಅಪ್ಪು ಅಭಿಮಾನಿಗಳ ಪಾಲಿಗೆ ವಿಶೇಷವಾದ ದಿನ. ಈ ದಿನವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಈ ಬಾರಿ ಪವರ್ ಸ್ಟಾರ್ ಇಲ್ಲದೇ ಅವರ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಅಪ್ಪು ಇಲ್ಲದ ಮೊದಲ ಹುಟ್ಟುಹಬ್ಬ ಇದಾಗಿದೆ. ಹಾಗಾಗಿ ಅಪ್ಪು ನಾಯಕನಾಗಿ ನಟಿಸಿರುವ ಕೊನೆಯ ಸಿನಿಮಾ ಜೇಮ್ಸ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ.
ನೆಚ್ಚಿನ ನಟನ ಸಿನಿಮಾವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಜೇಮ್ಸ್ ಆಗಮನಕ್ಕೆ ಚಿತ್ರಮಂದಿರಗಳು ಸಜ್ಜಾಗಿವೆ. ಪುನೀತ್ ಕಟೌಟ್ ಗಳು ರಾರಾಜಿಸುತ್ತಿವೆ. ಈ ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಜೇಮ್ಸ್ ಚಿತ್ರವನ್ನು ಸ್ವಾಗತ ಮಾಡಲು ಪ್ಲಾನ್ ಮಾಡಿದ್ದರು. ಆದರೆ ಅಭಿಮಾನಿಗಳ ಈ ಎಲ್ಲಾ ಸಂಭ್ರಮಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಇದಕ್ಕೆ ಕಾರಣ 144 ಸೆಕ್ಷನ್.
ಹಿಜಬ್ ತೀರ್ಪಿನ ಕಾರಣ ಮುನ್ನೆಚ್ಚರಿಕೆ ದೃಷ್ಟಿಯಿಂದ 144 ಸೆಕ್ಷನ್ ಜಾರಿ ಮಾಡಿದೆ. ಶಾಲಾ- ಕಾಲೇಜಿನಲ್ಲಿ ಸಮವಸ್ತ್ರ ಪಾಲಿಸಬೇಕು, ಹಿಜಾಬ್ ಧರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಸುರಕ್ಷತಾ ದೃಷ್ಟಿಯಿಂದ ಒಂದು ವಾರಗಳ ಕಾಲ ಬೆಂಗಳೂರಿನಲ್ಲಿ ಸೆಕ್ಷನ್ 144 ನಿಯಮ ಜಾರಿಯಲ್ಲಿರಲಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದರು. ಈ ಮಧ್ಯೆ, ಕೋರ್ಟ್ ತೀರ್ಪು ಮುಸ್ಲಿಂ ಸಮುದಾಯದವರಿಗೆ ಬೇಸರ ಮೂಡಿಸಿದೆ. ಹೀಗಾಗಿ, ಮುಸ್ಲಿಂ ಮುಖಂಡರು ಸ್ವಯಂಪ್ರೇರಿತ ಬಂದ್ಗೆ ಕರೆ ನೀಡಿದ್ದಾರೆ. ಮಾರ್ಚ್ 17 ಇಡೀ ರಾಜ್ಯಾದ್ಯಂತ ವ್ಯಾಪಾರ ವಹಿವಾಟು ಬಂದ್ ಮಾಡಲು ಕರೆ ನೀಡಿದ್ದಾರೆ. ಇದು ಅಪ್ಪು ಕೊನೆಯ ಚಿತ್ರದ ಸಂಭ್ರಮಾಚರಣೆಗೆ ಅಡ್ಡಿಯಾಗಿದೆ.
James 2022: ಬಾಕ್ಸಾಫೀಸ್‌ನಲ್ಲಿ ನೂರು ಕೋಟಿ ಕ್ಲಬ್‌ಗೆ ಸೇರಲಿದೆಯಂತೆ ಪುನೀತ್ ಸಿನಿಮಾ!
ಒಂದೂವರೆ ತಿಂಗಳ ಹಿಂದೆಯೇ ಅಪ್ಪು ಅಭಿಮಾನಿಗಳು ಜೇಮ್ಸ್ ಸಿನಿಮಾದ ಸಂಭ್ರಮಾಚರಣೆ ಅನುಮತಿ ಪಡೆದಿದ್ದರು. ಅಭಿಮಾನಿಗಳು ಚಾಮರಾಜಪೇಟೆ 2ನೇ ಮೈನ್ ನಲ್ಲರುವ ಮಹದೇಶ್ವರ ದೇವಸ್ಥಾನದಿಂದ ಟಿ ಆರ್ ಮಿಲ್ ಮಾರ್ಗವಾಗಿ ವಿರೇಶ್ ಚಿತ್ರಮಂದಿರದ ವರೆಗೆ ಮೆರವಣಿಗೆ, ಆಟೊ, ಬೈಕ್ ರ್ಯಾಲಿ ನಡೆಸಲು ಪ್ಲಾನ್ ಮಾಡಿದ್ದರು. ಇದಕ್ಕೆ ಸೂಕ್ತ ಬಂದೋಬಸ್ತ್ ನೀಡುವಂತೆ ಅಭಿಮಾನಿಗಳು ಪೊಲೀಸ್ ರಲ್ಲಿ ಮನವಿ ಮಾಡಿದ್ದರು. ಆದರೀಗ ಸೆಕ್ಷನ್ 144 ಇರುವ ಕಾರಣ ನಗರದಲ್ಲಿ ಯಾವುದೇ ಮುಷ್ಕರ ಮತ್ತು ರ್ಯಾಲಿ ನಡೆಸಲು ಅನುಮತಿ ಇಲ್ಲದ ಕಾರಣ ಅಭಿಮಾನಿಗಳ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಆದರೆ ಅಭಿಮಾನಿಗಳು ನಿಯಮದಲ್ಲಿ ಕೊಂಚ ಸಡಿಲಿಕೆ ಮಾಡಿ ಅನುಮತಿ ನೀಡಿ ಎಂದು ಕೇಳಿಬರುತ್ತಿದ್ದಾರೆ. ಒಂದು ತಿಂಗಳಿಂದ ತಯಾರಿ ನಡೆಸಿದ್ದೇವೆ ತುಂಬಾ ಬೇಸರವಾಗುತ್ತೆ ಎಂದು ಹೇಳುತ್ತಿದ್ದಾರೆ.
ಜಗಣ್ಣ ಈ ವರ್ಷ ಹುಟ್ಟುಹಬ್ಬ ಆಚರಿಸುವುದಿಲ್ಲ, ಅಪ್ಪುಗಾಗಿ ಮಹತ್ವದ ನಿರ್ಧಾರ!
ಪವರ್ ಸ್ಟಾರ್ ಪುನೀತ್ ಕಟೌಟ್ ಗೆ ಹೆಲಿಕಾಪ್ಟರ್ ನಿಂದ ಪುಷ್ಪಾರ್ಚನೆ ಮಾಡುವ ಪ್ಲಾನ್ ಹಾಕಿಕೊಂಡಿದ್ದರು. ಆದರೆ ಅನುಮತಿ ಸಿಗದ ಕಾರಣ ಅಭಿಮಾನಿಗಳ ಈ ಸಂಭ್ರಮಕ್ಕೂ ಬ್ರೇಕ್ ಬಿದ್ದಿದೆ.
ಅಂದಹಾಗೆ ಪವರ್ ಸ್ಟಾರ್ ನಟನೆಯ ಯುವರತ್ನ ಸಿನಿಮಾ ರಿಲೀಸ್ ವೇಳೆಗೂ ಇಂಥದ್ದೆ ಸಮಸ್ಯೆ ಎದುರಾಗಿತ್ತು. ಕೊರೊನಾ ಕಾರಣದಿಂದ ಯುವರತ್ನ ಪ್ರದರ್ಶನಕ್ಕೆ ತೊಡಕು ಉಂಟಾಗಿತ್ತು. ಸಿನಿಮಾ ಬಿಡುಗಡೆ ಬಳಿಕ ಚಿತ್ರಮಂದಿರಗಳು ಬಂದ್ ಆಗಿತ್ತು. ಬಳಿಕ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಯಿತು. ಇದೀಗ ಜೇಮ್ಸ್ ಸಿನಿಮಾದ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಅಪ್ಪು ಕೊನೆಯ ಸಿನಿಮಾ ಬಿಡುಗಡೆಯನ್ನು ಅದ್ದೂರಿಯಾಗಿ ಮಾಡಬೇಕೆಂದುಕೊಂಡಿದ್ದ ಅಭಿಮಾನಿಗಳೀಗ ಆಕ್ರೋಶ ಹೊರಹಾಕುತ್ತಿದ್ದಾರೆ.