ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಪವಿತ್ರಾ ಗೌಡರು ಸಾಮಾಜಿಕ ಮಾಧ್ಯಮದಲ್ಲಿ ಭಗವದ್ಗೀತೆಯ ಒಂದು ಸಾಲನ್ನು ಹಂಚಿಕೊಂಡಿದ್ದಾರೆ, ಇದು ಅವರ ಅನುಯಾಯಿಗಳಲ್ಲಿ ಕುತೂಹಲ ಮೂಡಿಸಿದೆ.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ಪವಿತ್ರಾ ಗೌಡ ಸದ್ಯ ಜಾಮೀನಿನಲ್ಲಿ ಹೊರ ಬಂದಿದ್ದಾರೆ. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳು ರಾಜ್ಯದ ವಿವಿಧ ಜೈಲುಗಳಲ್ಲಿದ್ದರು. ಜೈಲಿನಿಂದ ಹೊರ ಬಂದಿರುವ ಪವಿತ್ರಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈಗ ಭಗವದ್ಗೀತೆಯಲ್ಲಿನ ಕೆಲವು ಸಾಲುಗಳನ್ನು ಪೋಸ್ಟ್‌ನಲ್ಲಿ ಪವಿತ್ರಾ ಗೌಡ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಭಗವಾನ್ ಕೃಷ್ಣನು ಅರ್ಜುನನಿಗೆ ಉಪದೇಶ ಮಾಡುತ್ತಿರುವ ಫೋಟೋ ಇರೋದನ್ನು ಗಮನಿಸಬಹುದು.
ಪವಿತ್ರಾ ಗೌಡ ಪೋಸ್ಟ್‌ನಲ್ಲಿ ಏನಿದೆ?
ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ ಮೇಲೊಬ್ಬ ಎಲ್ಲವನ್ನು ವೀಕ್ಷಿಸುತ್ತಿರುವನು ನಿಮ್ಮ ಕಣ್ಣೀರಿನ ಎಲ್ಲಾ ಹನಿಗಳಿಗೆ ನ್ಯಾಯ ನೀಡುವವನು ಎಂಬ ಬರಹವುಳ್ಳ ಕೃಷ್ಣಾರ್ಜುನನ ಫೋಟೋ ಹಂಚಿಕೊಂಡಿದ್ದಾರೆ. ಸದ್ಯ ಪವಿತ್ರಾ ಗೌಡ ಫೋಟೋ ಅಭಿಮಾನಿಗಳಲ್ಲಿ ತೀವ್ರ ಕುತೂಹಲವನ್ನುಂಟು ಮಾಡಿದೆ.
ಏನಿದು ರೇಣುಕಾಸ್ವಾಮಿ ಕೇಸ್?
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು 2024 ಜೂನ್ 8ರ ರಾತ್ರಿ ಪಟ್ಟಣಗೆರೆಯ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಜೂನ್.9ರಂದು ಸುಮ್ಮನಹಳ್ಳಿಯ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಟ ದರ್ಶನ್, ಪವಿತ್ರಾಗೌಡ ಸೇರಿ 17 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಸುದೀರ್ಘ ವಿಚಾರಣೆ ನಡೆಸಿ ಜೈಲಿಗಟ್ಟಿದ್ದರು. ಬಳಿಕ ತನಿಖೆ ಪೂರ್ಣಗೊಳಿಸಿ ಸಾಕ್ಷ್ಯಗಳು, ಆರೋಪಿಗಳ ಹೇಳಿಕೆಗಳು ಒಳಗೊಂಡಂತೆ ಮೂರು ಸಾವಿರಕ್ಕೂ ಅಧಿಕ ಪುಟಗಳ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಇದನ್ನೂ ಓದಿ: ಪವಿತ್ರಾ ಗೌಡ ಹೊಸ ಫೋಟೋಗಳು ವೈರಲ್; ಅಮ್ಮ-ಮಗಳ ವಯ್ಯಾರ ನೋಡಿ ಎಂದ ನೆಟ್ಟಿಗರು
ಇದರ ಬೆನ್ನಲ್ಲೇ ಎಲ್ಲಾ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ಬಳಿಕ ಕೆಳಹಂತದ ನ್ಯಾಯಾಲಯವು 10 ಮಂದಿ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಉಳಿದ 7 ಆರೋಪಿಗಳಿಗೆ ಡಿ.13ರಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಇದನ್ನೂ ಓದಿ: ಶಿರಡಿ ಸಾಯಿ ಬಾಬಾ ದರ್ಶನ ಪಡೆದು ಹೊಸ ಜೀವನ ಆರಂಭಿಸ್ತಾರ ಪವಿತ್ರಾ ಗೌಡ?!
