Pathaan: ಪಾಕಿಗಳಿಗೂ ಇಷ್ಟವಾಯ್ತು ಪಠಾಣ್! ಕಂಗನಾ ಮಾತು ನಿಜವಾಯ್ತು ಅಂತಿದ್ದಾರೆ ನೆಟ್ಟಿಗರು
ಪಾಕಿಸ್ತಾನದಲ್ಲಿ ಭಾರತದ ಚಿತ್ರ ಪ್ರದರ್ಶನಕ್ಕೆ ಅವಕಾಶವಿಲ್ಲದಿದ್ದರೂ ಪಠಾಣ್ ಚಿತ್ರವನ್ನು ಅಕ್ರಮವಾಗಿ ನೋಡುತ್ತಿದ್ದು, ನಟಿ ಕಂಗನಾ ರಣಾವತ್ ಅವರ ಟ್ವೀಟ್ ಮತ್ತೆ ಮುನ್ನೆಲೆಗೆ ಬಂದಿದೆ, ಏನು? ಯಾಕೆ?
ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ (Kangana Ranaut) ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟಿ ಟ್ವೀಟ್ ಒಂದನ್ನು ಮಾಡಿ ಪಠಾಣ್ ಯಶಸ್ಸಿನ ಬಗ್ಗೆ ಕಿಡಿ ಕಾರಿದ್ದರು. ಅದೇನೆಂದರೆ ಪಠಾಣ್ ಯಶಸ್ವಿಯಾಯಿತು ಎಂದರೆ ಇದು ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ತಾನ (Pakistan) ಹಾಗೂ ಐಎಸ್ಐ (ISI) ಯಶಸ್ವಿಯಾಗಿ ಚಾಲನೆಯಲ್ಲಿದೆ ಎಂದರ್ಥ ಎಂದಿದ್ದರು. ಇದಕ್ಕೆ ಕಾರಣ ಪಠಾಣ್ ಚಿತ್ರದಲ್ಲಿನ ನಾಯಕಿ ಐಎಸ್ಐನ ಏಜೆಂಟ್. ಇದೇ ಕಾರಣಕ್ಕೆ ಕಿಡಿ ಕಾರಿದ್ದ ನಟಿ ಕಂಗನಾ ಈ ಮಾತುಗಳನ್ನಾಡಿದ್ದರು. ಅದು ಹಲವರ ಕಣ್ಣನ್ನು ಕೆಂಪಾಗಿರಿಸಿತ್ತು. ತಮ್ಮ ಚಿತ್ರ ತೋಪೆದ್ದು ಹೋಗುತ್ತಿರುವ ಹಿನ್ನೆಲೆಯಲ್ಲಿ ಪಠಾಣ್ ಯಶಸ್ಸನ್ನು ಕಂಡು ಕಂಗನಾ ಕುಹಕವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಆದರೆ ಇದೀಗ ಮತ್ತೆ ಕಂಗನಾ ಅವರ ಈ ಮಾತು ಆಕೆಯ ಅಭಿಮಾನಿಗಳು ಮುನ್ನೆಲೆಗೆ ತರುತ್ತಿದ್ದಾರೆ. ಇದಕ್ಕೆ ಕಾರಣ ಎಂದರೆ, ಪಾಕಿಸ್ತಾನದಲ್ಲಿ (Pakistan) ಈ ಚಿತ್ರವನ್ನು ಅಕ್ರಮವಾಗಿ ನೋಡಲಾಗುತ್ತಿದೆ! ಪಠಾಣ್ ಚಿತ್ರವನ್ನು ನೋಡಲು ಪಾಕಿಸ್ತಾನಿಗಳು ಹಾತೊರೆಯುತ್ತಿದ್ದಾರೆ. ಅದೇ ಇನ್ನೊಂದೆಡೆ ಬಾಂಗ್ಲಾದೇಶಿಗಳು ಭಾರತಕ್ಕೆ ಬಂದು ಪಠಾಣ್ ವೀಕ್ಷಿಸುತ್ತಿದ್ದಾರೆ!
ಅಷ್ಟಕ್ಕೂ ಹೀಗೇಕೆ ಕಳ್ಳತನದಿಂದ ಇವರು ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ ಎಂದರೆ ಭಾರತದ ಚಿತ್ರಗಳನ್ನು ಪಾಕಿಸ್ತಾನ ಪ್ರದರ್ಶನ ಮಾಡುವಂತಿಲ್ಲ ಎಂಬ ನಿಯಮವಿದೆ. ಬಾಂಗ್ಲಾದೇಶದಲ್ಲಿಯೂ ಇಲ್ಲಿಯ ಚಿತ್ರ ಪ್ರದರ್ಶನವಾಗುವುದಿಲ್ಲ. 2019ರಲ್ಲಿ ಅಂದಿನ ಪಾಕ್ ಸರ್ಕಾರ ಬಾಲಿವುಡ್ (Bollywood) ಚಿತ್ರಕ್ಕೆ ನಿಷೇಧ ವಿಧಿಸಿದೆ. ಸೆನ್ಸಾರ್ ಮಂಡಳಿಯಿಂದ ಸೂಕ್ತ ಪ್ರಮಾಣಪತ್ರ (Certificate) ಸಿಗದ ಹೊರತು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಯಾವುದೇ ಸಿನಿಮಾವನ್ನು ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಪ್ರದರ್ಶನ ಮಾಡುವಂತಿಲ್ಲ. ಅಲ್ಲಿ ಏನಿದ್ದರೂ ಸ್ಥಳೀಯ ಚಿತ್ರ ಮತ್ತು ಹಾಲಿವುಡ್ (Hollywood) ಚಿತ್ರಗಳ ಪ್ರದರ್ಶನವಾಗುತ್ತದೆಯಷ್ಟೇ. ಆದರೆ ಬೇರೆಲ್ಲಾ ಚಿತ್ರಗಳ ಬಗ್ಗೆ ತಲೆ ಕೆಡಿಸಿಕೊಳ್ಳದಿದ್ದ ಪಾಕಿಗಳು, ಪಠಾಣ್ ಚಿತ್ರ ನೋಡಲು ಹಾತೊರೆಯುತ್ತಿರುವುದರಿಂದ ಕಂಗನಾ ಮಾತು ಮತ್ತೆ ಟ್ವಿಟರ್ನಲ್ಲಿ (Twitter) ಮುನ್ನೆಲೆಗೆ ತರಲಾಗುತ್ತಿದೆ.
ಪತಿಗೆ ನಮ್ಮ ವಿಷ್ಯ ಹೇಳಿದ್ದೀರಾ ಎಂದು ಮೊದಲ ನಾಯಕಿಗೆ ಪ್ರಶ್ನಿಸಿದ ಶಾರುಖ್ ಖಾನ್!
ಅದೇ ಇನ್ನೊಂದೆಡೆ ಬಾಂಗ್ಲಾದೇಶದ ನಿವಾಸಿಗಳು 'ಪಠಾಣ್' (Pathaan) ವೀಕ್ಷಿಸಲು ನೇರವಾಗಿ ಭಾರತಕ್ಕೇ ಬರುತ್ತಿದ್ದಾರೆ. ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ತ್ರಿಪುರದ ಅಗರ್ತಲಾಗೆ ಆಗಮಿಸಿ ಅಲ್ಲಿ ಸಿನಿಮಾವನ್ನು ನೋಡಿ ಮರಳಿ ತಮ್ಮ ದೇಶಕ್ಕೆ ತೆರಳಿರುವುದು ವರದಿಯಾಗಿದೆ. ಪಾಕಿಸ್ತಾನದಲ್ಲಿ ಸಿನಿಮಾ ಟಿಕೆಟ್ ಬೆಲೆ 500 ರಿಂದ 1000 ನಿಗದಿಪಡಿಸಲಾಗಿದ್ದು, ಆನ್ಲೈನ್ನಲ್ಲಿ ಟಿಕೆಟ್ ಮಾರಾಟವನ್ನೂ ಮಾಡಲಾಗುತ್ತಿದೆ. ಅತ್ತ ಪಾಕಿಸ್ತಾನಿಗಳಿಗೂ ನೋವಾಗದಂತೆ ಇತ್ತ ಭಾರತೀಯರ ವಿರೋಧವೂ ಇಲ್ಲದಂತೆ ಪಠಾಣ್ ಚಿತ್ರವನ್ನು ಚಿತ್ರೀಕರಿಸುವ ಹಿನ್ನೆಲೆಯಲ್ಲಿ ಪಾಕಿಸ್ತಾನಿಗಳಿಗೆ ಪಠಾಣ್ ಅಚ್ಚುಮೆಚ್ಚು ಆಗಿರುವುದಾಗಿ ನೆಟ್ಟಿಗರು ಮನಸೋ ಇಚ್ಛೆ ಕಮೆಂಟ್ಗಳನ್ನು (Comments) ಮಾಡುತ್ತಿದ್ದಾರೆ. ಪಠಾಣ್ ಚಿತ್ರ ಪಾಕಿಸ್ತಾನಿಗಳ ಕೈಗೆ ಸಿಕ್ಕಿದ್ದು ಹೇಗೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರು ಶಾರುಖ್ ಖಾನ್ ಅಭಿಮಾನಿಗಳು ವಿಶ್ವಾದ್ಯಂತ ಇರುವುದು ಹೆಮ್ಮೆಯ ಸಂಗತಿ ಎನ್ನುತ್ತಿದ್ದಾರೆ.
ಸದ್ಯ ಪಾಕಿಸ್ತಾನದಲ್ಲಿ ಪಠಾಣ್ ಚಿತ್ರ ಅಕ್ರಮವಾಗಿ ಪ್ರದರ್ಶನವಾಗುತ್ತಿರುವುದಕ್ಕೆ ಪಾಕಿಸ್ತಾನದ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಅಕ್ರಮವಾಗಿ ಸಿನಿಮಾ ಪ್ರದರ್ಶನ ಮಾಡುವವರಿಗೆ ಖಡಕ್ ವಾರ್ನಿಂಗ್ (Warning) ನೀಡಿದೆ. ಒಂದೊಮ್ಮೆ ಸಿಕ್ಕಿಹಾಕಿಕೊಂಡರೆ ಮೂರು ವರ್ಷ ಜೈಲು ಶಿಕ್ಷೆ (Jail) ಹಾಗೂ ಒಂದು ಲಕ್ಷ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ ಎಂದು ಪಾಕಿಸ್ತಾನದ ಸೆನ್ಸಾರ್ ಬೋರ್ಡ್ (Sensor Board) ಎಚ್ಚರಿಕೆ ನೀಡಿದೆ. ಪಾಕಿಸ್ತಾನದಲ್ಲಿನ ಶಾರುಖ್ ಖಾನ್ ಅಭಿಮಾನಿಗಳಿಗೆ ಈಗ ನುಂಗಲಾರದ ತುತ್ತಾಗಿದೆ. ತಮ್ಮ ನೆಚ್ಚಿನ ನಟನ ಚಿತ್ರವನ್ನು ವೀಕ್ಷಣೆ ಮಾಡುವುದು ಹೇಗೆ ಎಂದು ಇದುವರೆಗೆ ಪಠಾಣ್ ವೀಕ್ಷಿಸದ ಅಭಿಮಾನಿಗಳು ಚಿಂತೆಯಲ್ಲಿದ್ದಾರೆ.
Besharam Rang ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದೇನು?