'RRR' ಮೂಲಕ ಆಸ್ಕರ್ ವೇದಿಕೆಯ ಮೇಲೆ ಭಾರತದ ಬಾವುಟ ಹಾರಿಸಿದವರು ಎಸ್‌ಎಸ್ ರಾಜಮೌಳಿ. ರಾಜಮೌಳಿ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಬಾಲಿವುಡ್‌ನ ಖಾನ್‌ಗಳು ಕೂಡ ತಮ್ಮ ಸಿನಿಮಾವನ್ನು ತಿಂಗಳುಗಟ್ಟಲೆ ಮುಂದೂಡುತ್ತಾರೆ. ಅಂತಹ ಈ ಅಜೇಯ ನಿರ್ದೇಶಕನ ಕೆರಿಯರ್‌ನಲ್ಲಿ ಒಂದೂ ಫ್ಲಾಪ್ ಇದೆಯಾ?

ಸೋಲೇ ಇಲ್ಲದ ಸರದಾರ ರಾಜಮೌಳಿ ಕೆರಿಯರ್‌ನಲ್ಲೂ ಇತ್ತಾ ಒಂದು 'ಬಿಗ್ ಫ್ಲಾಪ್'? ಇಷ್ಟು ದಿನ ಮುಚ್ಚಿಟ್ಟಿದ್ದ ಆ ರಹಸ್ಯ ಈಗ ಬಯಲು!

ಭಾರತೀಯ ಚಿತ್ರರಂಗದಲ್ಲಿ ಎಸ್‌ಎಸ್ ರಾಜಮೌಳಿ (SS Rajamouli) ಎಂದರೆ ಅದೊಂದು ಬ್ರ್ಯಾಂಡ್. ಪೋಸ್ಟರ್ ಮೇಲೆ 'ಎ ಫಿಲ್ಮ್ ಬೈ ರಾಜಮೌಳಿ' ಎಂದು ಬಿದ್ದರೆ ಸಾಕು, ಅಲ್ಲಿ ಹೀರೋ ಯಾರೇ ಇರಲಿ ಪ್ರೇಕ್ಷಕರು ಕಣ್ಣು ಮುಚ್ಚಿ ಚಿತ್ರಮಂದಿರಕ್ಕೆ ನುಗ್ಗುತ್ತಾರೆ. 'ಬಾಹುಬಲಿ' ಮೂಲಕ ತೆಲುಗು ಸಿನಿಮಾವನ್ನು ಗಲ್ಲಿಯಿಂದ ದಿಲ್ಲಿಗೆ ತಲುಪಿಸಿದವರು, 'RRR' ಮೂಲಕ ಆಸ್ಕರ್ ವೇದಿಕೆಯ ಮೇಲೆ ಭಾರತದ ಬಾವುಟ ಹಾರಿಸಿದವರು ಈ ಜಕ್ಕಣ್ಣ. ರಾಜಮೌಳಿ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಬಾಲಿವುಡ್‌ನ ಖಾನ್‌ಗಳು ಕೂಡ ತಮ್ಮ ಸಿನಿಮಾವನ್ನು ತಿಂಗಳುಗಟ್ಟಲೆ ಮುಂದೂಡುತ್ತಾರೆ. ಅಂತಹ ಈ ಅಜೇಯ ನಿರ್ದೇಶಕನ ಕೆರಿಯರ್‌ನಲ್ಲಿ ಒಂದೂ ಫ್ಲಾಪ್ ಇಲ್ಲ ಎಂಬುದು ಇಡೀ ಜಗತ್ತಿನ ನಂಬಿಕೆ. ಆದರೆ, ಅಸಲಿ ವಿಷಯ ಏನೆಂದರೆ ರಾಜಮೌಳಿ ಅವರ ಡೈರೆಕ್ಷನ್ ಲಿಸ್ಟ್‌ನಲ್ಲಿ ಒಂದು ದೊಡ್ಡ ಸೋಲಿದೆ!

ಆದರೆ, ಈ ಸಿನಿಮಾ ನಿರ್ದೇಶಕರ ಹೆಸರಿನಲ್ಲಿ ರಾಜಮೌಳಿ ಹೆಸರು ಇಲ್ಲವೇ ಇಲ್ಲ. ಹೀಗಾಗಿ ಆ ಸಿನಿಮಾ ಸೋಲು ತಂದೆ ವಿಜಯೇಂದ್ರ ಪ್ರಸಾದ್ ಅವರಿಗೆ ಹೋಯ್ತು. ಸ್ವತಂತ್ರವಾಗಿ ರಾಜಮೌಳಿ ನಿರ್ದೇಶನ ಮಾಡಿದ ಯಾವುದೇ ಸಿನಿಮಾ ಇಲ್ಲಿಯವರೆಗೂ ಸೋತೇ ಇಲ್ಲ. ಹೀಗಾಗಿಯೇ ಅವರನ್ನು 'ಸೋಲಿಲ್ಲದ ಸರದಾರ' ಎಂದೇ ಎಲ್ಲರೂ ಕರೆಯುತ್ತಾರೆ. ಅದು ಸರಿ ಕೂಡ!

ಯಾವುದು ಅದು 'ಸೀಕ್ರೆಟ್' ಫ್ಲಾಪ್ ಸಿನಿಮಾ?

ರಾಜಮೌಳಿ ಅವರ ವೃತ್ತಿಜೀವನ ಅಧಿಕೃತವಾಗಿ ಶುರುವಾಗಿದ್ದು ಜೂನಿಯರ್ ಎನ್‌ಟಿಆರ್ ನಟನೆಯ 'ಸ್ಟೂಡೆಂಟ್ ನಂ. 1' ಚಿತ್ರದ ಮೂಲಕ ಎಂದು ನಾವೆಲ್ಲಾ ಅಂದುಕೊಂಡಿದ್ದೇವೆ. ಆದರೆ ಇದಕ್ಕಿಂತ ಮುಂಚೆಯೇ ರಾಜಮೌಳಿ ಆಕ್ಷನ್ ಕಟ್ ಹೇಳಿದ್ದ ಒಂದು ಸಿನಿಮಾವಿದೆ. ಅದೇ 1996ರಲ್ಲಿ ತೆರೆಕಂಡ 'ಅರ್ಧಾಂಗಿ'. ಈ ಚಿತ್ರದ ಪೋಸ್ಟರ್ ಮೇಲೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರ ಹೆಸರು ನಿರ್ದೇಶಕರೆಂದು ಇದ್ದರೂ, ಅರ್ಧಾಂಗಿ (Ardhangi) ಚಿತ್ರದ ಬಹುತೇಕ ಪ್ರಮುಖ ದೃಶ್ಯಗಳನ್ನು ನಿರ್ದೇಶಿಸಿದ್ದು ಮಾತ್ರ ಸ್ವತಃ ರಾಜಮೌಳಿ!

ಕುಟುಂಬವನ್ನೇ ಬೀದಿಗೆ ತಂದಿದ್ದ ಆ ಸೋಲು!

ಈ 'ಅರ್ಧಾಂಗಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಂತಹ ದಯನೀಯ ಸೋಲು ಕಂಡಿತು ಎಂದರೆ, ಅದನ್ನು ನೆನಪಿಸಿಕೊಂಡರೆ ಇಂದಿಗೂ ಆ ಕುಟುಂಬ ಬೆಚ್ಚಿಬೀಳುತ್ತದೆ. ವಿಜಯೇಂದ್ರ ಪ್ರಸಾದ್ ಅವರೇ ಈ ಚಿತ್ರದ ನಿರ್ಮಾಪಕರೂ ಆಗಿದ್ದರಿಂದ, ಸಿನಿಮಾ ಫ್ಲಾಪ್ ಆದಾಗ ಇಡೀ ಕುಟುಂಬ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿತು. ಒಂದು ಕಾಲದಲ್ಲಿ ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತಂತೆ. ಅಂದು ಅನುಭವಿಸಿದ ಆ ಸೋಲೇ ಇಂದು ರಾಜಮೌಳಿ ಅವರನ್ನು ಪ್ರತಿಯೊಂದು ದೃಶ್ಯದಲ್ಲೂ ಪರ್ಫೆಕ್ಷನ್ ಹುಡುಕುವಂತೆ ಮಾಡಿದೆ.

ಸೋಲಿನ ಸುಳಿಯಿಂದ ಸಾಹಸಸಿಂಹನತ್ತ..

ಅಂದು ಅನಾಮಧೇಯನಾಗಿ ಸೋಲನ್ನುಂಡ ರಾಜಮೌಳಿ, ಇಂದು ಜಾಗತಿಕ ಮಟ್ಟದ ಐಕಾನ್. ಜೇಮ್ಸ್ ಕ್ಯಾಮರೂನ್ ಮತ್ತು ಸ್ಟೀವನ್ ಸ್ಪೀಲ್ಬರ್ಗ್ ಅಂತಹ ದಿಗ್ಗಜರೇ ರಾಜಮೌಳಿ ಬೆನ್ನು ತಟ್ಟುವ ಮಟ್ಟಕ್ಕೆ ಅವರು ಬೆಳೆದಿದ್ದಾರೆ. ಈಗ ರಾಜಮೌಳಿ ಕಣ್ಣು ಮುಂದಿನ 'ವಾರಣಾಸಿ' (SSMB29) ಚಿತ್ರದ ಮೇಲಿದೆ. ಸೂಪರ್ ಸ್ಟಾರ್ ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿರುವ ಈ ಚಿತ್ರ ಬರೋಬ್ಬರಿ 1200 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ತಯಾರಾಗುತ್ತಿದೆ.

ಹೊಸ ಸಿನಿಮಾದಲ್ಲಿ ಯಾರಿದ್ದಾರೆ?

ಈ ಆಕ್ಷನ್ ಅಡ್ವೆಂಚರ್ ಸಿನಿಮಾದಲ್ಲಿ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಖಳನಾಯಕನಾಗಿ ಅಬ್ಬರಿಸಲಿದ್ದಾರೆ. 2027ಕ್ಕೆ ತೆರೆಗೆ ಬರಲಿರುವ ಈ ಸಿನಿಮಾ ಇಂಡಿಯನ್ ಸಿನಿಮಾದ ಹಣೆಬರಹವನ್ನೇ ಬದಲಿಸಲಿದೆ ಎಂಬ ಟಾಕ್ ಈಗಿನಿಂದಲೇ ಶುರುವಾಗಿದೆ. ಅಂದು 'ಅರ್ಧಾಂಗಿ'ಯಿಂದ ಕಣ್ಣೀರು ಹಾಕಿದ್ದ ರಾಜಮೌಳಿ, ಇಂದು ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಲು ಸಜ್ಜಾಗಿದ್ದಾರೆ. ಇದನ್ನೇ ಅಲ್ವಾ 'ಟೈಮ್ ಅಂದ್ರೆ ಟೈಮ್' ಅನ್ನೋದು!