ಅಮೃತಾ ಸಿಂಗ್ರನ್ನು ಗುಟ್ಟಾಗಿ ಮದ್ವೆಯಾಗಿದ್ರಾ ಕರೀನಾ ಕಪೂರ್ ಪತಿ ಸೈಫ್?
ಅಮೃತಾ ಸಿಂಗ್ರನ್ನು ಗುಟ್ಟಾಗಿ ಮದ್ವೆಯಾಗಿದ್ರಾ ಕರೀನಾ ಪತಿ ಸೈಫ್ ಅಲಿ? ನಟಿಯ ಹಳೆಯ ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಅವರು ಹೇಳಿದ್ದೇನು?
ಬಾಲಿವುಡ್‌ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಜೋಡಿ. ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್ ಸುದ್ದಿ ಮಾಡಿದವರು. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು. ಈ ಸುದ್ದಿ, ಸದ್ದುಗಳ ನಡುವೆಯೇ ಸೈಫ್ ಅವರ ಮೊದಲ ಪತ್ನಿ ಅಮೃತಾ ಸಿಂಗ್ (ಇವರು ಸಾರಾ ಅಲಿ ಖಾನ್ ಅವರ ಅಮ್ಮ) ಅವರ ಸಂದರ್ಶನವೊಂದು ಸಕತ್ ವೈರಲ್ ಆಗುತ್ತಿದೆ.
ಅಷ್ಟಕ್ಕೂ ನಟ ಸೈಫ್ ಅಲಿ ಇದೀಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ನಟಿ ಕರೀನಾರನ್ನು (Kareena Kapoor) ಮದುವೆಯಾಗಿದ್ದರೆ, ಅಮೃತಾ ಸಿಂಗ್ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್ ಅವರಿಗೆ 32 ವರ್ಷ ವಯಸ್ಸಾಗಿತ್ತು! ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು ಎಂದೇ ಸುದ್ದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಹಲ್ಚಲ್ ಸೃಷ್ಟಿಸಿತ್ತು. ನಂತರ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪಡೆದರು. 2004ರಲ್ಲಿ ಸೈಫ್ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ನಟಿ ಅಮೃತಾ ಸಿಂಗ್ ಅಮೆರಿಕದ ಕಾರ್ಯಕ್ರಮವೊಂದಕ್ಕೆ ಹೋದಾಗ ಅಲ್ಲಿ ಅವರಿಗೆ ಸಂದರ್ಶನ ಮಾಡಲಾಗಿತ್ತು. ಆಗಿನ್ನೂ ವಧುವಾಗಿದ್ದ ನಟಿ ತಮ್ಮ ಮದುವೆ ಹಾಗೂ ವದಂತಿ ಕುರಿತು ಕೆಲವೊಂದು ಪ್ರಶ್ನೆಗಳಿಗೆ ಮಾಹಿತಿ ನೀಡಿದ್ದಾರೆ.
ಮಗಳೇ ಎಂದು ಬಾಯ್ತುಂಬ ಕರೆದವಳನ್ನೇ ಮದ್ವೆಯಾದ ಈ ಬಾಲಿವುಡ್ ಸ್ಟಾರ್!
ಮದುವೆಯಾಗಿ ಕೆಲವೇ ದಿನಗಳಲ್ಲಿ ಅಮೃತಾ ಸಿಂಗ್ ಪತಿಯನ್ನು (Saif Ali Khan) ಬಿಟ್ಟು ಒಬ್ಬರೇ ಅಮೆರಿಕಕ್ಕೆ ಹೋಗಿದ್ದರು. ಆಗ ಅಲ್ಲಿಯ ಹಿಂದಿ ಚಾನೆಲ್ ಒಂದರ ಆ್ಯಂಕರ್ ಅಮೃತಾರ ಸಂದರ್ಶನ ಮಾಡುತ್ತಾ, ಹನಿಮೂನ್ಗೆ ಇಬ್ಬರೂ ಹೋಗುವ ಬದಲು ಒಬ್ಬರೇ ಬಂದಿದ್ದೀರಲ್ಲ ಕಾರ್ಯಕ್ರಮಕ್ಕೆ ಎಂದರು. ಅದಕ್ಕೆ ಅಮೃತಾ ಸಿಂಗ್, ಅನಿವಾರ್ಯವಾಗಿ ಬರಬೇಕಾಯಿತು. ಸೈಫ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು. ಹೀಗೆ ಕೆಲವು ವಿಷಯಗಳ ಬಗ್ಗೆ ಮಾತನಾಡುತ್ತಾ ಆ್ಯಂಕರ್, ನಿಮ್ಮ ಮದುವೆ ಗುಟ್ಟಾಗಿ ನಡೆದಿತ್ತು ಎಂದು ಇಲ್ಲಿಯ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಸೈಫ್ ಅಲಿ ಅವರ ಪಾಲಕರಿಗೆ ಈ ವಿಷಯ ತಿಳಿದಿರಲಿಲ್ಲ. ಅವರು ನಂತರ ತುಂಬಾ ಕೋಪಗೊಂಡಿದ್ದರು ಎಂದೆಲ್ಲಾ ಸುದ್ದಿಯಾಗಿತ್ತು. ಇದು ನಿಜವೇ ಎಂದು ಪ್ರಶ್ನಿಸಿದರು.
ಅದಕ್ಕೆ ಅಮೃತಾ ಸಿಂಗ್, ಹಾಗೇನೂ ಇಲ್ಲ. ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಬಂದಿದೆ ಎಂದರು. ಆದರೆ ತಾವು ಗುಟ್ಟಾಗಿ ಮದುವೆಯಾಗಿದ್ದು ಹೌದು ಎಂದು ಒಪ್ಪಿಕೊಂಡರು. ಇದಕ್ಕೆ ಕಾರಣ ನೀಡಲಿಲ್ಲ. ಬದಲಿಗೆ ಮೊದಲೇ ವಿಷಯವನ್ನು ತಿಳಿಸಿದ್ದರೆ ಗ್ರ್ಯಾಂಡ್ ಆಗಿ ಮದುವೆ ಮಾಡಿಕೊಳ್ಳಬಹುದಿತ್ತು.ಆದರೆ ಮದುವೆಯ ಬಗ್ಗೆ ತಿಳಿಸಿರಲಿಲ್ಲ. ಸ್ವಲ್ಪ ದಿನದಲ್ಲಿಯೇ ಅತ್ತೆಯ ಕಡೆವರು ರಿಸೆಪ್ಷನ್ ಏರ್ಪಡಿಸಿದ್ದಾರೆ ಎಂದರು. ಈ ಬಗ್ಗೆ ಹೆಚ್ಚಿಗೆ ಕೆದಕಲು ಇಷ್ಟಪಡದ ನಿರೂಪಕಿ ಅಲ್ಲಿಗೇ ಆ ವಿಷಯವನ್ನು ಬಿಟ್ಟರು. ಆದರೆ ಗುಟ್ಟಾಗಿ ಮದುವೆಯಾಗಿದ್ದು ಏಕೆ, ಇವರಿಬ್ಬರ ಮದುವೆಗೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ಆಗುತ್ತಿದ್ದ ಚರ್ಚೆಗೆ ಕಾರಣವೇನು ಇತ್ಯಾದಿಯ ಕುರಿತು ನಟಿ ಯಾವುದೇ ರೀತಿಯ ಉಲ್ಲೇಖ ಕೊಟ್ಟಿಲ್ಲ. ಇನ್ನು ಅಮೃತಾ ಸಿಂಗ್ ಅವರ ಕುರಿತು ಹೇಳುವುದಾದರೆ, ಬಾಲಿವುಡ್‌ನ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅಮೃತಾ ಸಿಂಗ್ (Amrita Singh) ಅವರಿಗೆ ಈಗ 65 ವರ್ಷ. 1983 ರಲ್ಲಿ ಬೇತಾಬ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅವರ ಮೊದಲ ಸಿನಿಮಾವು ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು ಮತ್ತು ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ಇದಾದ ನಂತರ ಅವರಿಗೆ ಸಾಲು ಸಾಲು ಚಿತ್ರಗಳು ಬಂದವು. ಸದ್ಯ ಚಿತ್ರರಂಗದಿಂದ ಅಮೃತಾ ದೂರ ಸರಿದಿದ್ದಾರೆ.
ಮೊದಲ ಡೇಟ್‌ನಲ್ಲೇ ಚುಂಬನ.. ಸೈಫ್ ಮೇಲೆ ಸಿಟ್ಟಿಗೆದ್ದಿದ್ದರು ಅಮೃತಾ ಸಿಂಗ್!