ಹಿರಿಯ ನಟ ಬಾಲಯ್ಯ ದಬಿಡಿ ದಿಬಿಡಿ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಹಿಗ್ಗಾಮಗ್ಗಾ ಟ್ರೋಲ್‌ ಆಗ್ತಿದೆ. ಇದರ ಸ್ಟೆಪ್ಸ್‌ ನೋಡಿ ಜನ ಕೊರಿಯೋಗ್ರಾಫರ್‌ಗೂ, ನಟ ನಂದಮೂರಿ ಬಾಲಕೃಷ್ಣಗೂ ಬಾಯಿಗೆ ಬಂದಂತೆ ಉಗೀತಿದ್ದಾರೆ. 

ಹಿಂದೂಪುರ ವಿಧಾನಸಭಾ ಕ್ಷೇತ್ರದ ಶಾಸಕ ನಂದಮೂರಿ ಬಾಲಕೃಷ್ಣ ೭೦ರ ದಶಕದಿಂದಲೇ ತೆಲುಗು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಅವರ ನಟನೆ ಮೆಚ್ಚುಗೆಗಿಂತಲೂ ಟೀಕೆಗೆ, ನಗೆ ಪಾಟಲಿಗೆ ಈಡಾದದ್ದೇ ಹೆಚ್ಚು. ಅವರ ಕೆಲವೊಂದು ಡ್ಯಾನ್ಸ್‌ ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುವವರಿಗೆ ಏನೂ ಕಡಿಮೆ ಇಲ್ಲ. ಹಾಗೆಂದು ಅವರಿಗೆ ಬೇಕಾದಷ್ಟು ಫ್ಯಾನ್‌ ಫಾಲೋವಿಂಗ್‌ ಕೂಡ ಇದೆ. ಲಕ್ಷಾಂತರ ಜನ ಇವರ ಸಿನಿಮಾಗಳನ್ನು ಹುಚ್ಚುಗಟ್ಟಿ ನೋಡುತ್ತಿರುತ್ತಾರೆ. ಅಷ್ಟು ಮಾತ್ರ ಅಲ್ಲ ಅವರ ಬಗ್ಗೆ ಅಭಿಮಾನದ ಮಾತುಗಳನ್ನೂ ಆಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಈ ನಟ ಕಂ ಎಲ್‌ಎಲ್‌ಎ ಆಗಾಗ ಏನೋ ಯಡವಟ್ಟು ಮಾಡಿಕೊಂಡು ಟ್ರೋಲಿಗರ ಬಾಯಿಗೆ ಆಹಾರ ಆಗೋದೂ ಇದೆ. ಸದ್ಯ ಅವರು 'ಡಾಕು ಮಹಾರಾಜ್‌' ಸಿನಿಮಾ ಇದೇ ಸಂಕ್ರಾಂತಿಗೆ ರಿಲೀಸ್‌ ಆಗುತ್ತಿದೆ. ಅದರ ಹಾಡೊಂದು ರಿಲೀಸ್‌ ಆಗಿ ನಿನ್ನೆಯಿಂದ ಆ ಹಾಡಿನ ಕೆಲವು ಕ್ಲಿಪ್‌ಗಳು ಸೋಷಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ. ಈ ವಯಸ್ಸಲ್ಲಿ ಇದೆಲ್ಲ ಬೇಕಿತ್ತಾ ನಿಮಗೆ ಅಂತ ಬಹಳ ಮಂದಿ ಬಾಲಯ್ಯ ಅವರ ಬಗ್ಗೆ ಕಿಡಿಕಿಡಿಯಾಗಿದ್ದಾರೆ. 

 ಹಾಗೆ ನೋಡಿದ್ರೆ ಈ ಬಾಲಯ್ಯ ಹೆಣ್ಮಕ್ಕಳ ಕಾರಣಕ್ಕೆ ಮತ್ತು ಡ್ಯಾನ್ಸ್‌ ಕಾರಣಕ್ಕೆ ಟ್ರೋಲ್‌ಗೆ ಒಳಗಾಗೋದು ಹೆಚ್ಚು. ಕೆಲ ಸಮಯದ ಹಿಂದೆ ಹೈದರಾಬಾದ್‌ನಲ್ಲಿ ನಡೆದ ವಿಶ್ವಕ್ ಸೇನ್ ನಟನೆಯ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾದ ಇವೆಂಟ್‌ನಲ್ಲೂ ಇದೇ ಬಾಲಯ್ಯ ಅಲಿಯಾಸ್‌ ನಟಿ ಅಂಜಲಿ ಅವರನ್ನು ಹಠಾತ್ತನೆ ತಳ್ಳಿ ದುರ್ವರ್ತನೆ ತೋರಿದ್ದರು. ಅವರ ಈ ಸಡನ್‌ ಆಕ್ಷನ್‌ಗೆ ಒಂದು ಕ್ಷಣ ಅಂಜಲಿ ದಿಗ್ಬ್ರಾಂತಿಗೆ ಒಳಗಾಗಿದ್ದರು. ಈ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಇದೀಗ ಇಂಥಾ ಯಡವಟ್ಟು ಮಾಡದಿದ್ದರೂ ತಮ್ಮ ವಯಸ್ಸಿಗೆ ಮೀರಿದ ಕೆಲವು ನಡವಳಿಕೆಗಳಿಂದ ಟ್ರೋಲಿಗರಿಂದ ಟೀಕೆಗೆ ಒಳಗಾಗಿದ್ದಾರೆ. ಸಾವಿರಾರು ಮಂದಿ ಈ ಹಿರಿಯ ನಟನ ಈ ಅವತಾರಕ್ಕೆ ಉಗಿದು ಉಪ್ಪಿನ ಕಾಯಿ ಹಾಕಿದ್ದಾರೆ.

ನಿನ್ನೆ ತಾನೇ ಬಾಲಯ್ಯ ನಟನೆಯ 'ಡಾಕು ಮಹಾರಾಜ್' ಚಿತ್ರದ 'ದಬಿಡಿ ದಿಬಿಡಿ' ಎಂಬ ಐಟಂ ನಂಬರ್‌ ರಿಲೀಸ್ ಆಗಿತ್ತು. ಎಸ್ ಥಮನ್ ಸಂಗೀತ ನೀಡಿರುವ ಈ ಹಾಡನ್ನು ಕಾಸರ್ಲಾ ಶ್ಯಾಮ್ ಬರೆದಿದ್ದಾರೆ. ಈ ಹಾಡಿನಲ್ಲಿ ಬಾಲಯ್ಯ ಜೊತೆಗೆ ಊರ್ವಶಿ ರೌಟೇಲಾ ಕಾಣಿಸಿಕೊಂಡಿದ್ದಾರೆ. ಸದ್ಯ ವಿವಾದಕ್ಕೆ ಕಾರಣವಾಗಿರುವುದು ಈ ಹಾಡಿನ ಡ್ಯಾನ್ಸ್‌ ಸ್ಟೆಪ್ಸ್‌.. ತೀರಾ ಅಶ್ಲೀಲ, ಅಸಭ್ಯ ಎನ್ನುವಷ್ಟರ ಮಟ್ಟಿಗೆ ಈ ಹಾಡನ್ನು ಕೋರಿಯೋಗ್ರಫಿ ಮಾಡಲಾಗಿದೆ. ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿರುವುದು ಶೇಖರ್ ಮಾಸ್ಟರ್. ಅವರೂ ಈ ಕಾರಣಕ್ಕೆ ನೆಟ್ಟಿಗರ ಸಿಟ್ಟಿಗೆ ಕಾರಣವಾಗಿದ್ದಾರೆ. 

ಐಶ್ವರ್ಯಾ ರೈ ಅನಾರೋಗ್ಯದ ವದಂತಿಗೆ ಕೆಂಡಾಮಂಡಲವಾದ ಬಿಗ್‌ಬಿ, ಸೊಸೆಯ ಹೆರಿಗೆಯನ್ನು ಶ್ಲಾಘಿಸಿದ್ದ ಅಮಿತಾಭ್‌

ಕೊಂಚ ಅತಿ ಅನಿಸುವ ರೀತಿಯಲ್ಲಿ ಡ್ಯಾನ್ಸ್‌ ಮಾಡುತ್ತ ನಟಿಯ ಹಿಂಭಾಗಕ್ಕೆ ಹೊಡೆಯುವ ರೀತಿ ಈ ಸ್ಟೆಪ್‌ ಇದೆ. ಬಾಲಯ್ಯಗೆ ಈಗ 64 ವರ್ಷ ವಯಸ್ಸು. ಹಾಡಿನಲ್ಲಿ ಡ್ಯಾನ್ಸ್ ಮಾಡಿರುವ ಊರ್ವಶಿಗೆ ಈಗ 30 ವರ್ಷ ವಯಸ್ಸು. ತಮ್ಮ ಮಗಳ ವಯಸ್ಸಿನ ನಟಿಯ ಜೊತೆಗೆ ಈ ರೀತಿ ಡ್ಯಾನ್ಸ್ ಮಾಡಬೇಕಿತ್ತೇ ಎಂದು ಜನ ಕೇಳ್ತಿದ್ದಾರೆ. ಬಾಲಯ್ಯ ಕೇವಲ ನಟನಲ್ಲ, ಅವರು ಹಿಂದೂಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಹೌದು. ಆ ಸ್ಥಾನಕ್ಕಾದರೂ ಗೌರವ ಕೊಡಬಹುದಿತ್ತು ಎಂಬ ಮಾತನ್ನು ಜನ ಆಡುತ್ತಿದ್ದಾರೆ. 

ಏನಿದು ಶ್ರೀಲೀಲಾ ಮದುವೆ ಮ್ಯಾಟರ್? ಟಾಲಿವುಡ್ ಸೀನಿಯರ್ ಸ್ಟಾರ್ ನಟ ಹಾಗಂದ್ರಾ?

ಒಂದು ವಿಧಾನಸಭಾ ಕ್ರೇತ್ರದ ಜವಾಬ್ದಾರಿಯುತ ಶಾಸಕರಾಗಿ ಈ ರೀತಿ ಡ್ಯಾನ್ಸ್‌ ಬೇಕಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಲಾಗುತ್ತಿದೆ. 'ಹುಡುಗಿ ಮತ್ತು ತಾತನ ಡ್ಯಾನ್ಸ್‌ ಇದು', 'ಈ ಹಾಡು ಕೆಟ್ಟದಾಗಿದೆ, ಬಾಲಯ್ಯ ಅಭಿಮಾನಿಗಳಿಗೆ ಬೇಸರ ತರುವಂತಿದೆ. ದಯವಿಟ್ಟು ಇದನ್ನು ಕಿತ್ತು ಹಾಕಿ ಇಲ್ಲವೇ ರೀ ಶೂಟ್‌ ಮಾಡಿ' ಅಂತೆಲ್ಲ ಜನ ಕಾಮೆಂಟ್‌ ಮಾಡುತ್ತಿದ್ದಾರೆ. ಈ ಸಿನಿಮಾ ಜ.12ಕ್ಕೆ ತೆರೆಗೆ ಬರುತ್ತಿದ್ದು, ನಮ್ಮ ಕನ್ನಡದ ಹುಡುಗಿ ಶ್ರದ್ಧಾ ಶ್ರೀನಾಥ್‌ ನಾಯಕಿಯಾಗಿದ್ದಾರೆ.

View post on Instagram