ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಹಂಸಲೇಖ ಅವರ ಬಗ್ಗೆ ಮಾತನಾಡಿದ್ದಾರೆ. ಹಂಸಲೇಖ ಅವರ ಮೇಲಿನ ಬ್ರಾಹ್ಮಣ ವಿರೋಧಿ ಆರೋಪದ ಬಗ್ಗೆ ಮನೋಹರ್ ಸ್ಪಷ್ಟನೆ ನೀಡಿದ್ದಾರೆ
ಬೆಂಗಳೂರು: ಚಂದನವನದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Music Director Hamsalekha) ತಮ್ಮ ಹೇಳಿಕೆಗಳಿಂದ ಸದಾ ಚರ್ಚೆಯಲ್ಲಿರುತ್ತಾರೆ. ಕನ್ನಡ ಸಿನಿಮಾಗಳ ಸಾವಿರಾರು ಹಾಡುಗಳ ರಚನೆಕಾರ ಮತ್ತು ಸಂಗೀತ ನಿರ್ದೇಶಕರಾಗಿ ಹಂಸಲೇಖ ಕೆಲಸ ಮಾಡಿದ್ದಾರೆ. ಕನ್ನಡದ ಮತ್ತೋರ್ವ ಜನಪ್ರಿಯ ಸಂಗೀತ ನಿರ್ದೇಶಕರಾಗಿರುವ ವಿ. ಮನೋಹರ್ ಸಂದರ್ಶನವೊಂದರಲ್ಲಿ ಹಂಸಲೇಖ ಅವರ ಬಗ್ಗೆ ಮಾತನಾಡಿದ್ದಾರೆ. ಹಂಸಲೇಖ ಬ್ರಾಹ್ಮಣ ವಿರೋಧಿನಾ ಎಂಬ ಪ್ರಶ್ನೆಗೆ ಮನೋಹರ್ ಉತ್ತರಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ತಾವು ಕಂಡ ಹಂಸಲೇಖ ಅವರ ಬಗ್ಗೆ ಮುಕ್ತವಾಗಿ ಮನೋಹರ್ ಮಾತನಾಡಿದ್ದಾರೆ.
ಸಂಗೀತ ನಿರ್ದೇಶಕ ವಿ.ಮನೋಹರ್ ಹೇಳಿದ್ದೇನು?
ಹಂಸಲೇಖ ಗುರುಗಳ ಮೇಲೆ ಬ್ರಾಹ್ಮಣ ದ್ವೇಷಿ ಎಂಬ ಅಪವಾದವಿದೆ. ಅದು ಕೇವಲ ಒಂದು ಆಪಾದನೆ ಅಷ್ಟೆ. ಹಂಸಲೇಖ ಗುರುಗಳು ಬ್ರಾಹ್ಮಣ ದ್ವೇಷಿಗಳಾಗಿದ್ರೆ ಅವರು ಬೆಳೆಸಿದ್ದು ಯಾರನ್ನು ಅಂತ ನೋಡಬೇಕಾಗುತ್ತದೆ. ಎಲ್.ಎನ್.ಶಾಸ್ತ್ರಿ, ಹೇಮಂತ್, ನಂದಿತಾ, ಚಂದ್ರಿಕಾ ಗುರುರಾಜ್, ಮಂಜುಳಾ ಗುರುರಾಜ್, ರಾಜೇಶ್ ಕೃಷ್ಣನ್ ಸೇರಿದಂತೆ ಹಲವರನ್ನು ಹಂಸಲೇಖ ಬೆಳೆಸಿದ್ದಾರೆ. ಇವರೆಲ್ಲರೂ ಬ್ರಾಹ್ಮಣರು ಅಲ್ಲವಾ? ಬ್ರಾಹ್ಮಣ ದ್ವೇಷಿಯಾಗಿದ್ರೆ ಶೂದ್ರರನ್ನು ಹುಡುಕಿ ಬೆಳಸುತ್ತಿದ್ದರು. ಹಂಸಲೇಖ ಅವರು ಯಾವತ್ತೂ ಜಾತಿ-ಭೇದ ಮಾಡಿದವರಲ್ಲ ಎಂದು ಹಂಸಲೇಖ ಹೇಳಿದರು.
ಬ್ರಾಹ್ಮಣ ದ್ವೇಷಿ ಅಪಾದನೆ ಬಂದಿದ್ದು ಹೇಗೆ?
ಒಳ್ಳೆಯವರು ಮತ್ತು ಕೆಟ್ಟವರು ಎಂಬ ಗುಂಪು ಎಲ್ಲಾ ಜಾತಿಯಲ್ಲಿರುತ್ತಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ನೋಡುತ್ತಾ ಹೋದ್ರೆ ಎಲ್ಲ ಸಮುದಾಯಗಳಲ್ಲಿಯೂ ಒಳ್ಳೆಯವರು ಮತ್ತು ಕೆಟ್ಟವರಿರುತ್ತಾರೆ. ಆ ಕಾಲದಲ್ಲಿ ಚಿ.ಉದಯಶಂಕರ್, ಆರ್.ಎನ್.ಜಯಗೋಪಾಲ್, ವಿಜಯ ನರಸಿಂಹ, ಎಂಎನ್ ವ್ಯಾಸರಾವ್, ಹುಣಸೂರು ಕೃಷ್ಣಮೂರ್ತಿಗಳು ಸಾಹಿತ್ಯ ಬರೆಯುತ್ತಿದ್ದಾರೆ. ಎಲ್ಲವರೂ ನಮ್ಮವರೇ ಎಂಬ ಭಾವನೆವಿತ್ತು. ಈ ಸಮಯದಲ್ಲಿ ಬಂದವರು ಹಂಸಲೇಖ. ಪ್ರೇಮಲೋಕ ಮತ್ತು ರಣಧೀರ ಹಿಟ್ ಆದ ಬಳಿಕ ನೋಡಿರಿ ಇವನು ಬಂದು ಎಲ್ಲಾ ಹಾಳು ಮಾಡಿದ ಅಂತ ಮಾತನಾಡಿಕೊಳ್ಳಲು ಆರಂಭಿಸಿದರು. ಹಂಸಲೇಖ ಅವರನ್ನು ವಿರೋಧಿಸಿದವರು ಸಂಪ್ರದಾಯವಾದಿಗಳು ಎಂದು ಮನೋಹರ್ ಹೇಳುತ್ತಾರೆ.
ಟ್ಟರ್ ಸಂಪ್ರದಾಯವಾದಿಗಳಿಂದ ವಿರೋಧ
ಹಂಸಲೇಖ ಬ್ರಾಹ್ಮಣರನ್ನು, ಬ್ರಾಹ್ಮಣರು ಹಂಸಲೇಖ ಅವರನ್ನು ಎಂದಿಗೂ ವಿರೋಧಿಸಿದವರಲ್ಲ. ಹಂಸಲೇಖ ಅವರು ಸಂಪ್ರದಾಯವಾದಿಗಳ ವಿರೋಧಿಗಳು. ಇವತ್ತಿನವರೆಗೂ ಹಂಸಲೇಖ ಸ್ಟುಡಿಯೋಗೆ ಬಂದು ಧರ್ಮಗುರುಗಳು ಪ್ರಸಾದ ನೀಡಿ ಆಶೀರ್ವಾದ ಮಾಡಿ ಹೋಗುತ್ತಾರೆ. ನಂಜನಗೂಡಿನ ಅರ್ಚಕರು ಹಂಸಲೇಖ ಅವರನ್ನು ವಿಶೇಷ ಗೌರವದಿಂದ ನೋಡುತ್ತಾರೆ. ಕೆಲ ಖಟ್ಟರ್ ಸಂಪ್ರದಾಯವಾದಿಗಳು ಹಂಸಲೇಖ ಅವರನ್ನು ವಿರೋಧಿಸಿದರು. ಹೀಗಿರುವಾಗ ಒಮ್ಮೆ ಉಡುಪಿ ಕೃಷ್ಣ ಮಠದ (Udupi Krishna Mutt) ಕುರಿತು ಹಂಸಲೇಖ ಅವರ ಹೇಳಿಕೆ ವಿರೋಧಕ್ಕೆ ಕಾರಣವಾಯ್ತು. ಈ ಸಮಯಕ್ಕಾಗಿಯೇ ಕೆಲವರು ಕಾಯುತ್ತಿದ್ದರು. ಪ್ರಗತಿಪರರ ಸಭೆಯಲ್ಲಿ ಹಂಸಲೇಖ ಹೇಳಿದ ಮಾತುಗಳನ್ನು ಖಂಡಿಸಲಾಯ್ತು. ಬಹುತೇಕರು ಗೌರವಪೂರ್ವಕವಾಗಿಯೇ ಹಂಸಲೇಖ ಹೇಳಿಕೆಯನ್ನು ಖಂಡಿಸಿದರು.
ಅವಕಾಶವಾದಿಗಳಿಂದ ಕೆಟ್ಟದಾಗಿ, ಏಕವಚನದಲ್ಲಿ ಟೀಕೆ
ಅಂದಿನ ಪೇಜಾವರ ಶ್ರೀಗಳು, ಎಲ್ಲವನ್ನೂ ಭಗವಂತನಿಗೆ ಬಿಟ್ಟಿದ್ದು, ಅವನೇ ನೋಡಿಕೊಳ್ಳುತ್ತಾನೆ ಎಂದರು. ಆದ್ರೆ ಅಂತಹ ದೊಡ್ಡ ವ್ಯಕ್ತಿಗಳು ಆ ರೀತಿ ಹೇಳಬಾರದಿತ್ತು ಅನ್ನೋದು ನನ್ನ ಅಭಿಪ್ರಾಯ. ಅಂದಿನ ಸಂಸದ ಪ್ರತಾಪ್ ಸಿಂಹ ತಮ್ಮದೇ ಶೈಲಿಯಲ್ಲಿ ಹಂಸಲೇಖ ಅವರ ಹೇಳಿಕೆಯನ್ನು ಖಂಡಿಸಿದರು. ಆದರೆ ಈ ಸಮಯಕ್ಕೆ ಕಾಯುತ್ತಿದ್ದ ಅವಕಾಶವಾದಿಗಳು ಕೆಟ್ಟದಾಗಿ, ಏಕವಚನದಲ್ಲಿ ಟೀಕೆ ಮಾಡಲು ಶುರು ಮಾಡಿದರು. ಹೇಳಿಕೆಯನ್ನು ಖಂಡಿಸುವ ಬದಲು ಹಂಸಲೇಖ ನಾದಬ್ರಹ್ಮ ಅಲ್ಲ ಎಂದು ಹೇಳತೊಡಗಿದರು. ಯಾರೋ ಒಬ್ಬ ಕಿಡಿಗೇಡಿ ಹೇಳಿಕೆಯ ಒಂದು ಭಾಗವನ್ನು ತುಂಡರಿಸಿ ವೈರಲ್ ಮಾಡಿದ ಎಂದು ಮನೋಹರ್ ಹೇಳುತ್ತಾರೆ.
