ಬಾಲಿವುಡ್‌ಗೆ ಮೊನಾಲಿಸಾ: ನಿರ್ದೇಶಕ ಸನೋಜ್ ಮಿಶ್ರಾ ಆಫರ್- ರಾಣು ಸ್ಥಿತಿ ಆಗದಿರಲಿ ಅಂತಿರೋ ಫ್ಯಾನ್ಸ್
ಕುಂಭಮೇಳದ ಕ್ರಷ್, ನೀಲಿ ಕಂಗಳ ಚೆಲುವೆ ಮೊನಾಲಿಸಾ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ನಿರ್ದೇಶಕ ಸನೋಜ್ ಮಿಶ್ರಾ ಆಫರ್ ನೀಡಿದ್ದು, ಅವರು ಹೇಳಿದ್ದೇನು?

ಮೊನಾಲಿಸಾ ಎಂದರೆ ಸಾಕು, ಇಲ್ಲಿಯವರೆಗೆ ಲಿಯೊನಾರ್ಡೊ ಡಾ ವಿನ್ಸಿ ಅವರ ಚಿತ್ರಕಲೆಯ ಹೆಣ್ಣಿನ ಚಿತ್ರ ಕಣ್ಮುಂದೆ ಬರುತ್ತಿತ್ತು. ಗೂಗಲ್ನಲ್ಲಿಯೂ ಇದೇ ಪೇಂಟಿಂಗ್ ಕಾಣಿಸುತ್ತಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಎಲ್ಲವೂ ಬದಲಾಗಿ ಹೋಗಿದೆ. ಗೂಗಲ್ನಲ್ಲಿ ಕುಂಭಮೇಳ ಎಂದು ಟೈಪಿಸಿದರೂ ನೀಲಿ ಕಣ್ಗಳ ಚೆಲುವೆ, ರುದ್ರಾಕ್ಷಿ ಮಾರುವ ಯುವತಿ ಮೊನಾಲಿಸಾ ಕಾಣಿಸುತ್ತಾಳೆ. ಸೋಷಿಯಲ್ ಮೀಡಿಯಾಗಳಲ್ಲಂತೂ ಈಕೆಯದ್ದೇ ಕಾರುಬಾರು. ಈಕೆಯ ಹೆಸರು, ವಿಡಿಯೋ ಹೇಳಿಕೊಂಡು ಯೂಟ್ಯೂಬರ್ಗಳು ಮಾಡಿರುವ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ಅದು ಎಷ್ಟರಮಟ್ಟಿಗೆ ಹಿಂಸೆಯಾಯಿತು ಎಂದರೆ ಮೊನಾಲಿಸಾ ಕಣ್ಣೀರು ಇಡಬೇಕಾಯಿತು. ಮಾಸ್ಕ್ ಹಾಕಿಕೊಂಡು, ಮುಖ ಮುಚ್ಚಿಕೊಂಡು ಓಡಾಡಿದರೂ ಯೂಟ್ಯೂಬರ್‌ಗಳ ಕಾಟ ತಪ್ಪಲಿಲ್ಲ. ರುದ್ರಾಕ್ಷಿ ಖರೀದಿ ಮಾಡಿ ಎಂದರೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದರು.
ಇದರಿಂದಾಗಿ ಕುಟುಂಬಸ್ಥರೂ ಬೇಸತ್ತು, ಆಕೆಯನ್ನು ಮನೆಗೆ ವಾಪಸ್ ಕಳಿಸುವ ಯೋಜನೆಯನ್ನೂ ಮಾಡಿದ್ದರು. ಕುಟುಂಬಸ್ಥರು ದಯವಿಟ್ಟು ಹಿಂಸೆ ನೀಡಬೇಡಿ ಎಂದೂ ಕಣ್ಣೀರು ಹಾಕುವಷ್ಟರ ಮಟ್ಟಿಗೆ ಈಕೆಗೆ ಚಿತ್ರಹಿಂಸೆ ನೀಡಲಾಯಿತು. ಇದು ಒಂದೆಡೆಯಾದರೆ, ಕೆಲವು ಯೂಟ್ಯೂಬರ್ಗಳು ಕಪೋಕಲ್ಪಿತ ಘಟನೆಗಳನ್ನು ಸೃಷ್ಟಿಮಾಡಿಕೊಂಡು, ಒಂದಿಷ್ಟು ಎಐ ವಿಡಿಯೋ ಹಾಕಿ, ಮೊನಾಲಿಸಾಗೆ ಏನೇನೋ ಆಗಿಹೋಗಿದೆ ಎನ್ನುವ ರೀತಿಯಲ್ಲಿ ಅಸಭ್ಯ, ಅಶ್ಲೀಲತೆಯ ಸುದ್ದಿಗಳನ್ನು ಬಿತ್ತರಿಸಿ ವ್ಯೂಸ್ ತಂದುಕೊಂಡರು.
ಮಹಾಕುಂಭ ಸೆನ್ಸೇಶನ್ ಮೊನಾಲಿಸಾ ಈಗ ಮಾಡೆಲ್, ಬದಲಾಗಿ ಹೋಯ್ತು ಬದುಕು!
ಆದರೆ ಇವೆಲ್ಲಾ ನೋವುಗಳ ನಡುವೆಯೂ, ಕುಂಭಮೇಳದ ಕ್ರಷ್ ಆಗಿರೋ ಈ ಬೆಡಗಿಗೆ ಈಗ ಬಾಲಿವುಡ್ ಆಫರ್ ಸಿಕ್ಕಿದೆ. ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಶೀಘ್ರದಲ್ಲೇ ಮೊನಾಲಿಸಾಳನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಆದ್ದರಿಂದ ಆಕೆಯ ಪಾಲಿಗೆ ಅದೃಷ್ಟ ಶೀಘ್ರದಲ್ಲೇ ಬರಲಿದೆ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳ ಜೊತೆ ಈ ಕುರಿತು ಮಾತನಾಡಿರುವ ನಿರ್ದೇಶಕ ಸನೋಜ್ ಮಿಶ್ರಾ, ಮೊನಾಲಿಸಾಳ ನೋಟ ಮತ್ತು ಅವಳ ಮುಗ್ಧತೆ ತನಗೆ ತುಂಬಾ ಇಷ್ಟವಾಗಿದ್ದು, ಬಹುನಿರೀಕ್ಷಿತ ಚಿತ್ರ 'ಡೈರಿ ಆಫ್ ಮಣಿಪುರ'ದಲ್ಲಿ ಅವಳಿಗೆ ಒಂದು ಪಾತ್ರವನ್ನು ನೀಡಲು ಬಯಸುತ್ತೇನೆ ಎಂದಿದ್ದಾರೆ. ವಾಸ್ತವವಾಗಿ, ನಾನು ಅಂತಹ ಹುಡುಗಿಯನ್ನು ಹುಡುಕುತ್ತಿದ್ದೆ. ಈ ಚಿತ್ರದಲ್ಲಿ ಮೊನಾಲಿಸಾಗೆ ರೈತನ ಮಗಳ ಪಾತ್ರವನ್ನು ನೀಡುವ ಬಯಕೆ ಇದೆ ಎಂದಿದ್ದಾರೆ ಸನೋಜ್.
ಇದಕ್ಕಾಗಿ ತಾವು ಶೀಘ್ರದಲ್ಲೇ ಪ್ರಯಾಗ್‌ರಾಜ್‌ಗೆ ಹೋಗಿ ಆಕೆಯನ್ನು ಭೇಟಿಯಾಗಲಿರುವುದಾತಿ ತಿಳಿಸಿದ್ದಾರೆ. ಮೊದಲು ಮೊನಾಲಿಸಾಳನ್ನು ನಟನಾ ತರಗತಿಗಳಿಗೆ ಸೇರಿಸಬೇಕಿದೆ. ನಟನೆಯ ತಂತ್ರಗಳನ್ನು ಕಲಿಸಲಾಗುವುದು ಮತ್ತು ಇದಕ್ಕಾಗಿ ಆಕೆ ಸ್ವತಃ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಎಂದಿದ್ದಾರೆ. ಸನೋಜ್ ಮಿಶ್ರಾ ಇತ್ತೀಚಿನ ದಿನಗಳಲ್ಲಿ 'ಡೈರಿ ಆಫ್ ಮಣಿಪುರ' ಚಿತ್ರದ ತಯಾರಿಯಲ್ಲಿ ನಿರತರಾಗಿದ್ದಾರೆ. ಅವರ ಚಿತ್ರ ಮಣಿಪುರದ ಜ್ವಲಂತ ಸಮಸ್ಯೆಯನ್ನು ಆಧರಿಸಿದೆ. ಈ ಚಿತ್ರದ ಮೂಲಕ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅವರ ಹಿರಿಯ ಸಹೋದರ ಅಮಿತ್ ರಾವ್ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಸನೋಜ್ ಮಿಶ್ರಾ ಸಮಾಜದ ಜ್ವಲಂತ ಸಮಸ್ಯೆಗಳ ಕುರಿತು ಚಲನಚಿತ್ರಗಳನ್ನು ನಿರ್ಮಿಸುವ ನಿರ್ದೇಶಕರು. ಅವರ 'ಕಾಶಿ ಟು ಕಾಶ್ಮೀರ್' ಅಥವಾ 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ನಂತಹ ಚಲನಚಿತ್ರಗಳು ಚರ್ಚೆಯಲ್ಲಿವೆ. ಇಂಥ ಚಿತ್ರ ಮಾಡಿರುವ ಕಾರಣದಿಂದ ಇವರಿಗೆ ಕೊಲೆ ಬೆದರಿಕೆಗಳು ಸಹ ಬಂದದ್ದಿದೆ. ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಸನೋಜ್ ಮಿಶ್ರಾ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
ಕುಂಭಮೇಳದ ವೈರಲ್ ಸುಂದರಿ ಮೊನಾಲಿಸಾಗೆ ಉಂಟು ಮೈಸೂರಿನ ನಂಟು!
ಆದರೆ, ರಾತ್ರೋರಾತ್ರಿ ಸ್ಟಾರ್ ಆಗುವ, ಯಾವುದೇ ಹಿನ್ನೆಲೆಯಲ್ಲದವರನ್ನು ವೇದಿಕೆಯ ಮೇಲೆ ಕರೆತಂದು ನಂತರ ಅವರನ್ನು ನಡುನೀರಿನಲ್ಲಿ ಕೈಬಿಡುವುದು ಬಣ್ಣದ ಲೋಕದಲ್ಲಿ ಹೊಸ ವಿಷಯವೇನಲ್ಲ. ಟಿಆರ್ಪಿಗಾಗಿ ಈ ಹಿಂದೆ ಕೆಲವರನ್ನು ಈ ರೀತಿಯಾಗಿ ಮಾಡಿರುವುದು ನಮ್ಮಕಣ್ಣ ಮುಂದೆಯೇ ಇದೆ. ಅದರಲ್ಲಿಯೂ ಮುಖ್ಯವಾಗಿ ರಸ್ತೆ ಬದಿ ಭಿಕ್ಷೆ ಬೇಡುತ್ತ ಹಾಡುತ್ತಿದ್ದ ರಾಣು ಮಂಡೇಲಾ ಅವರನ್ನು ತಂದು ಸ್ಟಾರ್ ಮಾಡಿ ಆಮೇಲೆ ಅವರನ್ನು ಪುನಃ ಬೀದಿಗೆ ಬಿಟ್ಟಿರುವುದನ್ನು ನೆನಪಿಸಿಕೊಳ್ಳುತ್ತಿರುವ ಮೊನಾಲಿಸಾ ಫ್ಯಾನ್ಸ್, ಈಕೆಯ ಸ್ಥಿತಿ ಮಾತ್ರ ಹಾಗಾಗದಿರಲಿ ಎಂದು ಹಾರೈಸುತ್ತಿದ್ದಾರೆ. ಬಾಲಿವುಡ್ ಆಮಿಷ ಒಡ್ಡಿ ಆಕೆಯ ಸುಂದರ ಬದುಕನ್ನು ಹಾಳು ಮಾಡಬೇಡಿ ಎನ್ನುವುದು ಅಭಿಮಾನಿಗಳ ಕೋರಿಕೆ.