4 ವರ್ಷದ ಹಿಂದೆಯೇ ಹೇಳಬೇಕಿತ್ತು, ಪರಿಸ್ಥಿತಿ ಈಗ ಕೈ ಮೀರಿದೆ; ಮೋದಿ ಸೂಚನೆಗೆ ಅನುರಾಗ್ ಕಶ್ಯಪ್ ಪ್ರತಿಕ್ರಿಯೆ
4 ವರ್ಷದ ಹಿಂದೆಯೇ ಹೇಳಬೇಕಿತ್ತು, ಪರಿಸ್ಥಿತಿ ಈಗ ಕೈ ಮೀರಿದೆ ಎಂದು ಮೋದಿ ಸೂಚನೆಗೆ ನಿರ್ದೇಶಕ ಅನುರಾಗ್ ಕಶ್ಯಪ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿನಿಮಾಗಳ ಬಗ್ಗೆ ಅನಾವಶ್ಯಕ ಕಾಮೆಂಟ್ ಮಾಡುವುದನ್ನು ನಿಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿರುವ ಬೆನ್ನಲ್ಲೇ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಪ್ರತಿಕ್ರಿಯೆ ನೀಡಿದ್ದಾರೆ. 'ಪರಿಸ್ಥಿತಿ ಈಗ ಕೈ ಮೀರಿದೆ, ಸಮೂಹ ಈಗ ನಿಯಂತ್ರಣದಲ್ಲಿ ಇಲ್ಲ' ಎಂದು ಹೇಳಿದ್ದಾರೆ.
ಆಲ್ಮೋಸ್ಟ್ ಪ್ಯಾರ್ ಮಿತ್ ಡಿಜೆ ಮೊಹಬ್ಬತ್ ಸಿನಿಮಾದ ಟ್ರೈಲರ್ ರಿಲೀಸ್ ಈವೆಂಟ್‌ನಲ್ಲಿ ಮಾತನಾಡಿದ ಅನುರಾಗ್ ಕಶ್ಯಪ್, 'ನಾಲ್ಕು ವರ್ಷಗಳ ಹಿಂದೆಯೇ ಅವರು (ಪ್ರಧಾನಿ ಮೋದಿ) ಇದನ್ನು ಹೇಳಿದ್ದರೆ ಬದಲಾಗುತ್ತಿತ್ತು. ಈಗ ಏನು ವ್ಯತ್ಯಾಸ ಆಗಲ್ಲ ಎಂದು ನಾನು ಭಾವಿಸುತ್ತೇನೆ. ಪರಿಸ್ಥಿತಿ ಈಗ ಕೈ ಮೀರಿದೆ. ಯಾರೂ ಯಾರ ಮಾತನ್ನು ಕೇಳುವುದಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು. 'ನೀವು ಮೌನವಾಗಿರುವಾಗ, ಪೂರ್ವಾಗ್ರಹಕ್ಕೆ ಅಧಿಕಾರ ನೀಡುತ್ತೀರಿ ಮತ್ತು ನೀವು ದ್ವೇಷವನ್ನು ಬಲಪಡಿಸುತ್ತೀರಿ. ಅದು ಈಗ ತುಂಬಾ ಅಧಿಕಾರವನ್ನು ಪಡೆದುಕೊಂಡಿದೆ. ಅದು ಸ್ವತಃ ಒಂದು ಶಕ್ತಿಯಾಗಿದೆ. ಗುಂಪು ಈಗ ನಿಯಂತ್ರಣದಲ್ಲಿಲ್ಲ' ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬೈಕಾಟ್ ಟ್ರೆಂಡ್ ಜೋರಾಗಿದೆ. ಅದರಲ್ಲೂ ಬಾಲಿವುಡ್ಗೆ ಇದು ಶಾಪವಾಗಿದೆ. ಅನೇಕ ಸಿನಿಮಾಗಳು ಬೈಕಾಟ್ ಸಮಸ್ಯೆಗೆ ಸಿಲುಕಿವೆ. ನಷ್ಟ ಅನುಭವಿಸಿವೆ. ಸಂಕಷ್ಟದಲ್ಲಿರುವ ಬಾಲಿವುಡ್‌ಅನ್ನು ಕಾಪಾಡುವಂತೆ, ಅನಗತ್ಯ ಬೈಕಾಟ್ ಟ್ರೆಂಡ್ ತಡುಯುವಂತೆಬಾಲಿವುಡ್ ನ ಅನೇಕ ಮಂದು ಪ್ರತಿಕ್ರಿಯೆ ನೀಡಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಜೊತೆ ಮಾತನಾಡಿ ಪ್ರಧಾನಿ ಮೋದಿ ಅವರಿಗೆ ಈ ವಿಚಾರ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದರು.
'ಪಠಾಣ್' ವಿವಾದ: ಅನಗತ್ಯ ಟೀಕೆ ಮಾಡ್ಬೇಡಿ.. ಬಿಜೆಪಿ ಮುಖಂಡರಿಗೆ ಮೋದಿ ಸಲಹೆ!
ಮೋದಿ ಸೂಚನೆ
ಪ್ರಧಾನಿ ನರೇಂದ್ರ ಮೋದಿ ಈ ವಾರದ ಆರಂಭದಲ್ಲಿ ನಡೆದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಚಲನಚಿತ್ರಗಳಂತಹ ಅಪ್ರಸ್ತುತ ವಿಷಯಗಳ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡದಂತೆ ಕೇಳಿಕೊಂಡಿದ್ದಾರೆ. ಚಲನಚಿತ್ರಗಳಂತಹ ಅಪ್ರಸ್ತುತ ವಿಷಯಗಳ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡಬೇಡಿ. ಹಾಗೇನಾದರೂ ಮಾಡಿದರೆ, ಪಕ್ಷದ ಅಭಿವೃದ್ಧಿ ಅಜೆಂಡಾಗಳು ಹಿಂದೆ ಸರಿಯುತ್ತವೆ. ಹಾಗಾಗಿ ಇಂಥ ಟೀಕೆಗಳಿಂದ ಹಿಂದೆ ಸರಿದರೆ ಒಳ್ಳೆಯದು ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಸೈರಾಟ್' ಮರಾಠಿ ಸಿನಿರಂಗವನ್ನೇ ನಾಶಪಡಿಸಿತು, ಆ ತಪ್ಪು ಮಾಡಬೇಡಿ; ರಿಷಬ್ ಶೆಟ್ಟಿಗೆ ಅನುರಾಗ್ ಕಶ್ಯಪ್ ಎಚ್ಚರಿಕೆ
ಪಠಾಣ್ ವಿವಾದ
ಸದ್ಯ ಪಠಾಣ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಶಾರುಖ್ ಖಾನ್ ನಟನೆಯ ಈ ಸಿನಿಮಾಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಪಠಾಣ್ ಹಾಡು ರಿಲೀಸ್ ಆದಾಗಿನಿಂದ ವಿವಾದ ಎದುರಿಸುತ್ತಲೇ ಇದೆ. ಕೇಸರಿ ಬಣ್ಣದ ಬಿಕಿನಿ ವಿವಾದ, ಅಶ್ಲೀಲವಾಗಿ ಚಿತ್ರಿಸಲಾಗಿದೆ ಎಂದು ಪಠಾಣ್ ವಿರುದ್ಧ ಕಿಡಿ ಕಾರಿದ್ದರು. ಇದೀಗ ಪ್ರಧಾನಿ ಮೋದಿ ಸೂಚನೆ ಬಳಿಕ ಈ ಎಲ್ಲಾ ವಿಚಾರಗಳಿಗೆ ಬ್ರೇಕ್ ಬೀಳುತ್ತಾ ಕಾದು ನೋಡಬೇಕಿದೆ.