ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿರುವ ವಿಡಿಯೋವನ್ನು ತಿರುಚಿ ತೆಗಳಿರುವಂತೆ ಮಾಡಿ ವೈರಲ್​ ​ ಮಾಡಿರುವ ವಿರುದ್ಧ ಆಮೀರ್​ ಬಳಿಕ ರಣವೀರ್​ ಸಿಂಗ್​ ಸಿಡಿದೆದ್ದಿದ್ದು, ಎಫ್​ಐಆರ್​ ದಾಖಲಿಸಿದ್ದಾರೆ. ಏನಿದು ವಿಷಯ? 

ಲೋಕಸಭಾ ಚುನಾವಣೆ ಇದಾಗಲೇ ಶುರುವಾಗಿರುವ ಬೆನ್ನಲ್ಲೇ ವಿವಿಧ ರಾಜಕೀಯ ಪಕ್ಷಗಳಿಂದ ವಿಭಿನ್ನ ರೀತಿಯಲ್ಲಿ ಮತಯಾ​ಚನೆ ಭರದಿಂದ ಸಾಗಿದೆ. ಈ ನಡುವೆ, ನಟ-ನಟಿಯರೂ ತಮ್ಮ ಬೆಂಬಲಿತ ಪಕ್ಷಗಳ ಪರವಾಗಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಆದರೆ ಕೆಲವು ನಟ-ನಟಿಯರ ಹೆಸರು ದುರ್ಬಳಕೆ ಮಾಡಿಕೊಂಡಿರುವ ಘಟನೆಗಳೂ ಅಲ್ಲಲ್ಲಿ ನಡೆಯುತ್ತಿವೆ. ಇದೀಗ ನಟರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಡೀಪ್​ಫೇಕ್​ ಬಳಸಿ ಕಾಂಗ್ರೆಸ್​ ಮತಯಾಚನೆ ಮಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೆಲ ದಿನಗಳ ಹಿಂದಷ್ಟೇ ಬಾಲಿವುಡ್​ ನಟ ಆಮೀರ್​ ಖಾನ್​ ಕಾಂಗ್ರೆಸ್​ ವಿರುದ್ಧ ದೂರು ದಾಖಲು ಮಾಡಿದ್ದರು. ಇದೀಗ ಇನ್ನೋರ್ವ ನಟ ರಣವೀರ್​ ಸಿಂಗ್​ ಸರದಿ. 

 ತಮ್ಮ ಪ್ರಸಿದ್ಧ ಷೋ ಒಂದನ್ನು ಬಳಸಿಕೊಂಡು ಕಾಂಗ್ರೆಸ್‌ ಡೀಪ್‌ಫೇಕ್‌ ಮಾಡಿದೆ ಎಂದು ಕೆಲ ದಿನಗಳ ಹಿಂದೆ ಆಮೀರ್‌ ಖಾನ್‌ ಅವರ ಆರೋಪಿಸಿದ್ದರು. ಆಮಿರ್ ಖಾನ್ ಅವರು ಈ ಹಿಂದೆ 'ಸತ್ಯಮೇವ ಜಯತೇ' ಎಂಬ ಕಾರ್ಯಕ್ರಮವೊಂದನ್ನು ಮಾಡುತ್ತಿದ್ದರು. ಆ ಕಾರ್ಯಕ್ರಮದ ದೃಶ್ಯವನ್ನು ಇಟ್ಟುಕೊಂಡು ಕಾಂಗ್ರೆಸ್​​ ಪಕ್ಷವು ಬಿಜೆಪಿ ವಿರುದ್ಧ ಜಾಹೀರಾತು ಮಾಡಿದೆ. ಬಿಜೆಪಿಯನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್‌, ಡೀಪ್‌ ಫೇಕ್​​ ತಂತ್ರಜ್ಞಾನದ ಮೂಲಕ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾನದಲ್ಲಿ ಹರಿಬಿಟ್ಟಿದೆ ಎಂದು ಆಮೀರ್‌ ಖಾನ್‌ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ವಿರುದ್ಧ ಆಮೀರ್ ಖಾನ್​ ವಕ್ತಾರ ಮುಂಬೈ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. 

ಕಾಂಗ್ರೆಸ್‌ನಿಂದ ಆಮೀರ್‌ ಖಾನ್ ಹೆಸರು ದುರ್ಬಳಕೆ: ಡೀಪ್‌ಫೇಕ್‌ ವಿರುದ್ಧ ನಟನಿಂದ ದೂರು- ಎಫ್‌ಐಆರ್‌

ಇತ್ತೀಚೆಗೆ ರಣವೀರ್ ಸಿಂಗ್ ಅವರು ವಾರಣಾಸಿಗೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿ ಸಂಸ್ಥೆಗೆ ಅವರು ಸಂದರ್ಶನ ನೀಡಿದ್ದರು. ಈ ಸಂದರ್ಶನದ ವಿಡಿಯೋವನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ತಿರುಚಲಾಗಿದೆ ಎನ್ನುವುದು ಅವರ ಆರೋಪ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಅಭಿವೃದ್ಧಿ ಕಾರ್ಯಗಳನ್ನು ರಣವೀರ್ ಸಿಂಗ್ ಹೊಗಳಿದ್ದರು. ಆದರೆ ಆ ಅಸಲಿ ವಿಡಿಯೋವನ್ನು ತಿರುಚಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ರಣವೀರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ ರೀತಿ ಬದಲಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ವಿಡಿಯೋ ತಿರುಚಿದವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಡೀಪ್ ಫೇಕ್ ವಿಡಿಯೋದಲ್ಲಿ ರಣವೀರ್ ಸಿಂಗ್ ಅವರ ಧ್ವನಿಯನ್ನು ನಕಲು ಮಾಡಿ ಆಡಿಯೋ ಮರುಸೃಷ್ಟಿ ಮಾಡಲಾಗಿದೆ. ಅದರಲ್ಲಿ ನಟ, ಪ್ರಧಾನಿಯವರನ್ನು ಟೀಕಿಸುವಂತೆ ಮಾಡಲಾಗಿದೆ. ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೀತಿ ಆಡಿಯೋ ತಿರುಚಿ ವೈರಲ್​ ಮಾಡಲಾಗುತ್ತಿದ್ದು, ಇದರ ವಿರುದ್ಧ ದೂರು ದಾಖಲಾಗಿದೆ. 

ಇದಕ್ಕೂ ಮುನ್ನ ನಟ ಆಮೀರ್​ ಖಾನ್​, ತಮ್ಮ ಸತ್ಯಮೇವ ಜಯತೆ ಕಾರ್ಯಕ್ರಮವನ್ನು ತಿರುಚಿ ನಕಲಿ ರಾಜಕೀಯ ಜಾಹೀರಾತಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ದೂರು ದಾಖಲಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಕೂಡ ದಾಖಲಾಗಿದೆ. ಈ ಕುರಿತು ಮಾಹಿತಿ ನೀಡಿದ್ದ ಆಮೀರ್‌ ಖಾನ್ ಅವರ ವಕ್ತಾರ, ಆಮೀರ್‌ ಅವರು ತಮ್ಮ 35 ವರ್ಷಗಳ ವೃತ್ತಿಜೀವನದುದ್ದಕ್ಕೂ ಯಾವುದೇ ರಾಜಕೀಯ ಪಕ್ಷವನ್ನು ಟೀಕೆ ಮಾಡಿದ್ದಿಲ್ಲ. ಈ ಮೊದಲು ಹಲವು ಚುನಾವಣೆಗಳಲ್ಲಿ ಜಾಗೃತಿ ಅಭಿಯಾನಗಳ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ಕಾಂಗ್ರೆಸ್‌ ಈ ರೀತಿಯಾಗಿ ತಮ್ಮ ಇಮೇಜನ್ನು ಹಾಳು ಮಾಡುತ್ತಿದೆ ಎಂದಿದ್ದಾರೆ. ಇದೊಂದು ನಕಲಿ ವಿಡಿಯೋ ಮತ್ತು ಸುಳ್ಳು ಮಾಹಿತಿಯಾಗಿದೆ. ಈ ಹಿನ್ನೆಲೆ ಸೈಬರ್ ಕ್ರೈಂ ಸೆಲ್‌ನಲ್ಲಿ ಎಫ್‌ಐಆರ್ ದಾಖಲಿಸಿರುವುದಾಗಿ ವಕ್ತಾರ ಹೇಳಿದ್ದಾರೆ.

ಬಾಲಿವುಡ್​ ಖಳನಾಯಕ್​-2 ಚಿತ್ರದಲ್ಲಿ ನಟ ಯಶ್​? ನಿರ್ದೇಶಕ ಸುಭಾಷ್​ ಘಾಯ್​ ಹೇಳಿದ್ದೇನು?