ನಟ ವಿಜಯ್ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ತ್ರಿಷಾ ಜೊತೆ ಕಾಣಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ನಟಿ ಖುಷ್ಬೂ ಪ್ರತಿಕ್ರಿಯಿಸಿದ್ದು, ಅವರ ವೈಯಕ್ತಿಕ ವಿಚಾರ ಎಂದಿದ್ದಾರೆ.

ದಕ್ಷಿಣ ಭಾರತದ ಸೂಪರ್‌ಸ್ಟಾರ್ ಹಾಗೂ ಟಿವಿಕೆ ಪಕ್ಷದ ನಾಯಕ ವಿಜಯ್, ಪತ್ನಿ ಸಂಗೀತ ಅವರಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದರ ಬೆನ್ನಲ್ಲೇ ನಟಿ ತ್ರಿಷಾ ಜೊತೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಸಂಗೀತ ತಮ್ಮ ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖಿಸಿರುವ ಪ್ರಮುಖ ನಟಿ ತ್ರಿಷಾ ಅವರೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದ್ದವು. ಇದೀಗ ಈ ಬಗ್ಗೆ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಮಾತನಾಡಿದ್ದಾರೆ.

ಈ ರೀತಿಯ ವಿವಾದಗಳು ಅನಗತ್ಯ. ಇದೆಲ್ಲಾ ವಿಜಯ್ ಮತ್ತು ತ್ರಿಷಾ ಅವರ ವೈಯಕ್ತಿಕ ಜೀವನ. ಒಂದು ವೇಳೆ ಅದು ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದರೆ ಮಾತ್ರ ನಾವು ಚರ್ಚಿಸಬಹುದು ಎಂದು ಖುಷ್ಬೂ ಹೇಳಿದ್ದಾರೆ. ಇಂತಹ ವಿಚಾರಗಳಿಂದ ವಿಜಯ್ ಅವರ ಜನಪ್ರಿಯತೆಗೆ ಯಾವುದೇ ರೀತಿಯಲ್ಲೂ ಧಕ್ಕೆ ಆಗುವುದಿಲ್ಲ. ನಮ್ಮೆಲ್ಲರಂತೆ ವಿಜಯ್ ಕೂಡ ಒಬ್ಬ ಸಾಮಾನ್ಯ ಮನುಷ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಈ ಘಟನೆಯಲ್ಲಿ ಜನರಿಗೆ ಮಾಡಲು ಏನಿದೆ ಅಂತ ನನಗೆ ಅರ್ಥವಾಗುತ್ತಿಲ್ಲ. ಅದು ಅವರವರ ವೈಯಕ್ತಿಕ ಜೀವನ. ಅವರ ಪರ್ಸನಲ್ ಲೈಫ್ ಜನರಿಗೆ ತೊಂದರೆ ಕೊಡುತ್ತಿದ್ದರೆ, ಆಗ ನಾವು ಚರ್ಚೆ ಮಾಡಬಹುದು. ಆದರೆ, ಅವರ ವೈಯಕ್ತಿಕ ಬದುಕಿಗೂ ಜನರಿಗೂ ಯಾವುದೇ ಸಂಬಂಧವಿಲ್ಲ. ಜನರು ಯಾಕೆ ಇದನ್ನು ದೊಡ್ಡ ವಿಷಯ ಮಾಡುತ್ತಿದ್ದಾರೆ? ಅವರಿಗೂ ಒಂದು ಸ್ವಂತ ಜೀವನ ಇರುತ್ತದೆ. ಇದರಿಂದ ಜನರಿಗೆ ಯಾವುದೇ ತೊಂದರೆಯಿಲ್ಲ," ಎಂದು ಖುಷ್ಬೂ ಹೇಳಿದ್ದಾರೆ.

'ಜನಪ್ರಿಯತೆಗೆ ಧಕ್ಕೆ ಆಗಲ್ಲ'

"ಈ ರೀತಿಯ ವಿವಾದಗಳು ವಿಜಯ್ ಅವರ ಜನಪ್ರಿಯತೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ನಾನು ನಂಬುವುದಿಲ್ಲ. ಈ ವಿಷಯ ಯಾರೊಬ್ಬರ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ ಅಂತಾನೂ ನನಗನಿಸುವುದಿಲ್ಲ. ಅವರೊಬ್ಬ ಮನುಷ್ಯ. ಅವರು ನಾಯಕ ಹೌದೋ ಅಲ್ಲವೋ ಎಂಬುದು ಮುಖ್ಯವಲ್ಲ. ನಮ್ಮ ಹಾಗೆಯೇ ಒಬ್ಬ ಸಾಮಾನ್ಯ ವ್ಯಕ್ತಿ. ಜನರ ವೈಯಕ್ತಿಕ ಬದುಕಿಗೂ ಅವರಿಗೂ ಸಂಬಂಧವಿಲ್ಲ. ಇನ್ನು ಚುನಾವಣೆ ವಿಚಾರಕ್ಕೆ ಬಂದರೆ, ಎಲ್ಲಿ, ಯಾವಾಗ ವೋಟ್ ಹಾಕಬೇಕು ಎಂಬುದು ಜನರಿಗೆ ಚೆನ್ನಾಗಿ ಗೊತ್ತು," ಎಂದು ಖುಷ್ಬೂ ಸೇರಿಸಿದರು. ಸುದ್ದಿ ಸಂಸ್ಥೆ ಐಎಎನ್‌ಎಸ್‌ ಜೊತೆ ಅವರು ಮಾತನಾಡುತ್ತಿದ್ದರು.