ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ತಮ್ಮ ಹಳ್ಳಿಕಾರ್ ಹಸುವಿಗೆ ಸೀಮಂತ ಶಾಸ್ತ್ರ ಮಾಡಿ ಪ್ರಾಣಿಪ್ರೀತಿ ಮೆರೆದಿದ್ದಾರೆ. ಹಳ್ಳಿಕಾರ್ ತಳಿ ಸಂರಕ್ಷಣೆಗಾಗಿ ಬಿಗ್ ಬಾಸ್ ವೇದಿಕೆಯನ್ನು ಬಳಸಿಕೊಳ್ಳಲು ಯತ್ನಿಸಿದ್ದ ಅವರು, ರನ್ನರ್ ಅಪ್‌ಗೆ ಹಣ ನೀಡುವ ಮೂಲಕ ಕೊಟ್ಟ ಮಾತನ್ನೂ ಉಳಿಸಿಕೊಂಡಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಅವರ ಹಳ್ಳಿಕಾರ್ ಹಸುವಿನ ಮೇಲಿನ ಪ್ರೀತಿ ಇದೀಗ ಮತ್ತೊಮ್ಮೆ ಸಾಬೀತಾಗುವಂತಹ ಕೆಲಸ ಮಾಡಿದ್ದಾರೆ. ನಮ್ಮ ರಾಜ್ಯದ ದಕ್ಷಿಣ ಕರ್ನಾಟಕ ಮೂಲದ ನಾಟಿ ಹಸುವಿನ ತಳಿಯಾದ ಹಳ್ಳಿಕಾರ್ ಹಸುವಿನ ತಳಿ ಸಂರಕ್ಷಣೆ ಹಾಗೂ ಹಳ್ಳಿಕಾರ್ ಹಸುಗಳ ಸಾಕಣೆ ಕುರಿತ ಜಾಗೃತಿಗಾಗಿ ವರ್ತೂರು ಸಂತೋಷ್ ಅವರು ಖ್ಯಾತಿಯಾಗಿದ್ದರು. ತಮ್ಮ ಹಳ್ಳಿಕಾರ್ ಹಸುಗಳ ತಳಿ ಸಂರಕ್ಷಣೆ ಮೂಲ ಉದ್ದೇಶದಿಂದ ರೈತರ ಕೋಟಾದಲ್ಲಿ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಮನೆಗೂ ಕಾಲಿಟ್ಟು ಉತ್ತಮವಾಗಿ ಆಟವಾಡಿದ್ದರು. ಈ ಮೂಲಕ ಬೆಂಗಳೂರು ಹೊರವಲಯದ ವರ್ತೂರು ಹಾಗೂ ಸುತ್ತಲಿನ ಜನತೆಗೆ ಮಾತ್ರ ಪರಿಚಿತವಾಗಿದ್ದ ವರ್ತೂರು ಸಂತೋಷ್ ರಾಜ್ಯದ ಜನತೆಗೆ ಚಿರಪರಿಚಿತರಾದರು.
ಇದಾದ ನಂತರ ವರ್ತೂರು ಸಂತೋಷ್ ಅವರು ತಮ್ಮ ಹಳ್ಳಿ ಶೈಲಿಯ ಮಾತುಗಳಿಂದಲೇ ರೀಲ್ಸ್‌ಗಳ ಮೂಲಕ ವೈರಲ್ ಆಗುತ್ತಿದ್ದರು. ಆದರೆ, ಜೊತೆಗೆ ತಮ್ಮ ಹಳ್ಳಿಕಾರ್ ಹಸುಗಳ ಕುರಿತ ಕಾರ್ಯಕ್ರಮಗಳ ಆಯೋಜನೆ ಹಾಗೂ ಅವುಗಳ ಕುರಿತ ಜಾಗೃತಿ ಕಾರ್ಯಕ್ರಗಳು ಎಲ್ಲೇ ನಡೆದರೂ ಹಾಜರಾಗುತ್ತಿದ್ದರು. ಇನ್ನು ಪ್ರತಿ ವರ್ಷ ನಡೆಯುವ ಸಂಕ್ರಾಂತಿ ಹಬ್ಬದಲ್ಲಿ ಹೋರಿಗಳನ್ನು ಕಿಚ್ಚು ಹಾಯಿಸುವಾಗ ತಮ್ಮ ಬಳಿ ಇರುವ ಹಳ್ಳಿಕಾರ್ ಎತ್ತುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸುವ ದೃಶ್ಯಗಳನ್ನು ನೋಡುವುದಕ್ಕೆ ಲಕ್ಷಾಂತರ ಜನರು ಕಾಯುತ್ತಾರೆ. ಏಕೆಂದರೆ ಲಕ್ಷಾಂತರ ಬೆಲೆಬಾಳುವ ಹೋರಿಗಳು ಸಂತೋಷ್ ಬಳಿ ಇವೆ ಎನ್ನುವುದೇ ಸುತ್ತಲಿನ ರೈತರಿಗೆ ಕುತೂಹಲದ ವಿಚಾರವಾಗಿದೆ.
ಹಳ್ಳಿಕಾರ್ ಹಸುಗಳಿಗೆ ಸೀಮಂತ ಶಾಸ್ತ್ರ
ಇದೀಗ ವರ್ತೂರು ಸಂತೋಷ್ ಅವರು ಹಳ್ಳಿಕಾರ್ ಹಸುವಿಗೆ ಸೀಮಂತ ಶಾಸ್ತ್ರ ಮಾಡಿ ತಮ್ಮ ಪ್ರಾಣಿಪ್ರೀತಿಯನ್ನು ಮೆರೆದಿದ್ದಾರೆ. ಮೊದಲೇ ಹಳ್ಳಿಕಾರ್ ತಳಿಯ ಸಂರಕ್ಷಕ ಎಂದು ಹೇಳಿಕೊಳ್ಳುವ ವರ್ತೂರು ಸಂತೋಷ್ ಅವರು ಹಸುವಿನ ಕೊಂಬುಗಳಿಗೆ ಹೂವಿನ ದಂಡಿ ಕಟ್ಟಿ ಪೂಜೆ ಸಲ್ಲಿಸಿ ತರಹೇವಾರಿ ತಿನಿಸುಗಳನ್ನು ತಿನ್ನಿಸುವ ಮೂಲಕ ಹಸುಗಳ ಸೀಮಂತ ಕಾರ್ಯವನ್ನು ನೆರವೇರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ರೈತರು, ವರ್ತೂರು ಸಂತೋಷ್ ಅಭಿಮಾನಿಗಳು ಹಾಜರಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರನ್ನರ್ ಅಪ್‌ಗೆ 10 ಲಕ್ಷ ರೂ. ಕೊಡುವುದಾಗಿ ಘೋಷಣೆ
ಬಿಗ್ ಬಾಸ್ ಸೀಸನ್ 12ರ ರನ್ನರ್ ಅಪ್ ಯಾರಾಗುತ್ತಾರೋ ಅವರಿಗೆ ವರ್ತೂರು ಸಂತೋಷ್ ಅವರು ತಮ್ಮ ವೈಯಕ್ತಿಕವಾಗಿ 10 ಲಕ್ಷ ರೂ. ಹಣವನ್ನು ಕೊಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಇದಕ್ಕೆ ಬಿಗ್ ಬಾಸ್ ಮನೆಗೆ ಸಣ್ಣದೊಂದು ಷರತ್ತು ಕೂಡ ಹಾಕಿದ್ದರು. ಬಿಗ್ ಬಾಸ್ ಮನೆಯೊಳಗೆ ಅಥವಾ ವೇದಿಕೆಗೆ ಹಳ್ಳಿಕಾರ್ ತಳಿಯ ಹಸುಗಳನ್ನು ತಂದು ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ರನ್ನರ್‌ಅಪ್‌ಗೆ 10ಲಕ್ಷ ರೂ. ಹಣ ಕೊಡುವುದಾಗಿ ತಿಳಿಸಿದ್ದರು. ಆದರೆ, ಬಿಗ್ ಬಾಸ್ ವೇದಿಕೆಗೆ ಹಸುಗಳನ್ನು ತರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಹಣ ಕೊಡುವುದಕ್ಕೆ ಹಿಂದೇಟು ಹಾಕಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.
ರಕ್ಷಿತಾ ಶೆಟ್ಟಿಗೆ 2 ಲಕ್ಷ ರೂ.
ಬಿಗ್ ಬಾಸ್ ಸೀಸನ್ 12ರಲ್ಲಿ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದರು. ಹಸುಗಳಿವೆ ಬಿಗ್ ಬಾಸ್ ವೇದಿಕೆಯಲ್ಲಿ ಪ್ರದರ್ಶನ ಅವಕಾಶ ಸಿಗದ ಕಾರಣ ವರ್ತೂರು ಸಂತೋಷ್ ಕುಪಿತಗೊಂಡರೂ, ತಾನು ಕೊಟ್ಟ ಮಾತು ಉಳಿಸಿಕೊಳ್ಳಬೇಕೆಂದು 2 ಲಕ್ಷ ರೂ. ಖುಷಿಯಿಂದ ಕೊಡುವುದಾಗಿ ತಿಳಿಸಿದ್ದರು. ಆದರೆ, ಬಿಗ್ ಬಾಸ್ ರನ್ನರ್ ಆಪ್ ಆಗಿದ್ದ ಸಂಭ್ರಮದಲ್ಲಿ ರಕ್ಷಿತಾ ಶೆಟ್ಟಿಯ ಕಾಲು ಹಾಗೂ ನಾಲಿಗೆ ಹಿಡಿತದಲ್ಲೇ ಇರಲಿಲ್ಲ. ವರ್ತೂರು ಸಂತೋಷ್ ಬಗ್ಗೆ ಅಸಮಾಧಾನದ ಮಾತುಗಳನ್ನು ಹೇಳಿದ್ದರು. ಆದರೂ ತಲೆ ಕೆಡಿಸಿಕೊಳ್ಳದೆ ರಕ್ಷಿತಾ ಶೆಟ್ಟಿ ಇರುವಲ್ಲಿಗೆ ಹೋಗಿ ವರ್ತೂರು ಸಂತೋಷ್ ಅವರು 2 ಲಕ್ಷ ರೂ. ಹಣವನ್ನು ಕೊಟ್ಟು ಬಂದಿದ್ದರು.


