ಪ್ರಕಾಶ್‌ ರಾಜ್‌ ಮಾನಸಿಕ ಆರೋಗ್ಯಕ್ಕಾಗಿ ಕಂಗನಾ ಫ್ಯಾನ್ಸ್‌ ಕ್ಲಬ್‌ ಸೇರಬೇಕಂತೆ! ನಟಿ ಕೊಟ್ಟ ಟಾಂಗ್‌ ಏನು? 

ನಟಿ ಕಂಗನಾ ರಣಾವತ್‌ ಅವರನ್ನು ಅಪಹಾಸ್ಯ ಮಾಡಿದ್ದ ನಟ ಪ್ರಕಾಶ್‌ ರಾಜ್‌ ಅವರಿಗೆ ನಟಿ ತಿರುಗೇಟು ನೀಡಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಎಲ್ಲರಿಗೂ ತಿಳಿದಿರುವಂತೆ, ಇತ್ತೀಚೆಗೆ ಕಾಂಟ್ರವರ್ಸಿ ವಿಷಯಗಳಿಂದಲೇ ಬಹಳ ಚರ್ಚೆಯಲ್ಲಿರುವ ನಟರ ಪೈಕಿ ಬಾಲಿವುಡ್​ನ ಕಂಗನಾ ರಣಾವತ್​ ಒಬ್ಬರಾದರೆ, ಸ್ಯಾಂಡಲ್​ವುಡ್​ ನಟ ಪ್ರಕಾಶ್​ ರಾಜ್​ ಇನ್ನೊಬ್ಬರು. ಇವರಿಬ್ಬರು ಸದ್ಯ ಏನೇ ಮಾತನಾಡಿದರೂ ಅದು ಸುದ್ದಿಯಾಗುತ್ತಿದೆ. ಬಿಜೆಪಿ, ಪ್ರಧಾನಿ ಪರವಾಗಿ ಏನೇ ಮಾತನಾಡಿದರೂ ಪ್ರಕಾಶ್​ ರಾಜ್​ ಕಾಲು ಕೆರೆದು ಜಗಳಕ್ಕೆ ಬಂದರೆ, ಕಂಗನಾ ಬಿಜೆಪಿ ಜೊತೆಗೆ ಗುರುತಿಸಿಕೊಂಡವರು. ಇದೀಗ ನಟಿ ಮಾಡಿಕೊಂಡ ಮನವಿಯೊಂದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯದ ರೂಪದಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದರು ಪ್ರಕಾಶ್​ ರಾಜ್​. ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿಯೇ ಹೋಗಿ ನೋಡುವಂತೆ ನಟಿ ಕಂಗನಾ ಪ್ರೇಕ್ಷಕರಿಗೆ ಮನವಿ ಮಾಡಿಕೊಂಡಿದ್ದರು. ಅದರಲ್ಲಿಯೂ ರಾಜಕೀಯ ಎಳೆದು ತಂದು ನಟಿಗೆ ಅಪಹಾಸ್ಯ ಮಾಡಿದ್ದರು​ ಪ್ರಕಾಶ್​ ರಾಜ್​. 

 ಕಂಗನಾ ಅವರ ತೇಜಸ್​ ಚಿತ್ರ ಮೊನ್ನೆ ಶುಕ್ರವಾರ ರಿಲೀಸ್​ ಆಗಿದೆ. ಈ ಚಿತ್ರ ಬಿಡುಗಡೆಯಾಗುತ್ತಿದ್ದಂತೆಯೇ ನಟಿ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಮಾಡಿದ್ದು, ಕೋವಿಡ್​ ನಂತರ ಚಿತ್ರರಂಗದ ಸ್ಥಿತಿ ಕೂಡ ಚೆನ್ನಾಗಿಲ್ಲ. ಆದ್ದರಿಂದ ಎಲ್ಲರೂ ಥಿಯೇಟರ್​ಗೇ ಹೋಗಿ ಚಿತ್ರಗಳನ್ನು ನೋಡುವಂತೆ ಮನವಿ ಮಾಡಿದ್ದರು. ಆದರೆ ನಟಿಯ ಈ ಮನವಿಗೆ ರಾಜಕೀಯ ಎಳೆದು ತಂದಿರುವ ನಟ ಪ್ರಕಾಶ್​ ರಾಜ್​, ಭಾರತಕ್ಕೆ ಸ್ವಾತಂತ್ರ್ಯ ಬಂದಿರುವುದು 2014ರಲ್ಲಿ, ಸ್ವಲ್ಪ ತಾಳ್ಮೆಯಿರಲಿ. ಚಿತ್ರರಂಗ ಪಿಕಪ್​ ಆಗುತ್ತದೆ ಎಂದು ಟಾಂಗ್​ ನೀಡಿದ್ದರು. ಅಷ್ಟಕ್ಕೂ ಅವರು ಹೀಗೆ ಹೇಳಲು ಕಾರಣವೇನೆಂದರೆ, ಕಾಂಗ್ರೆಸ್​ ಸೋತು ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿಯವರು ಪ್ರಧಾನಿಯಾದ ವರ್ಷ 2014 ಅನ್ನು ಗಮನದಲ್ಲಿ ಇಟ್ಟುಕೊಂಡು ನಟಿ ಕಂಗನಾ ಹಿಂದೊಮ್ಮೆ, ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು 2014ರಲ್ಲಿ. 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದು ಭಿಕ್ಷೆ ಎಂದು ಹೇಳಿದ್ದರು. 

ಸ್ವಾತಂತ್ರ್ಯ ಸಿಕ್ಕಿದ್ದೇ 2014ರಲ್ಲಿ, ತಾಳ್ಮೆಯಿರಲಿ ಎಂದ ಪ್ರಕಾಶ್​ ರಾಜ್​: ಇಷ್ಟೆಲ್ಲಾ ಹತಾಶೆ ಒಳ್ಳೆದಲ್ಲ ಎಂದ ಕಂಗನಾ ಫ್ಯಾನ್ಸ್

ಪ್ರಕಾಶ್‌ ರಾಜ್‌ ಜೊತೆ, ಭಾರತೀಯ ಮೂಲದ ಕೆನಡಾದ ಚಲನಚಿತ್ರ ನಿರ್ದೇಶಕಿ ಮತ್ತು ಚಿತ್ರಕಥೆಗಾರ್ತಿಯಾಗಿರುವ ದೀಪಾ ಮೆಹ್ತಾ ಕೂಡ ಕಂಗನಾ ಕಾಲೆಳೆದಿದ್ದರು. ಇವರಿಬ್ಬರ ವಿರುದ್ಧ ಗರಂ ಆಗಿರುವ ನಟಿ ಈಗ, ನನಗೆ ಕೆಡುಕು ಬಯಸುವವರೆಲ್ಲರ ಜೀವನವು ಶಾಶ್ವತವಾಗಿ ಶೋಚನೀಯವಾಗಿರುತ್ತದೆ. ಏಕೆಂದರೆ ಅವರು ತಮ್ಮ ಜೀವನದುದ್ದಕ್ಕೂ ಪ್ರತಿದಿನ ನನ್ನ ವೈಭವವನ್ನು ನೋಡಬೇಕಾಗುತ್ತದೆ. ನಾನು 15 ನೇ ವಯಸ್ಸಿನಲ್ಲಿಯೇ ಮನೆಯನ್ನು ತೊರೆದವಳು. ನಾನು ನಿರಂತರವಾಗಿ ನನ್ನ ಭವಿಷ್ಯವನ್ನು ಆರಿಸಿಕೊಳ್ಳುತ್ತಿದ್ದೇನೆ. ಮಹಿಳಾ ಸಬಲೀಕರಣಕ್ಕಾಗಿ ಮತ್ತು ನನ್ನ ರಾಷ್ಟ್ರ ಭಾರತಕ್ಕಾಗಿ ಮಹತ್ವದ ಕೆಲಸಗಳನ್ನು ಮಾಡಲು ನಾನು ಉದ್ದೇಶಿಸಿದ್ದೇನೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದರೆ ಅದ್ಯಾವುದೂ ನನ್ನ ವಿರುದ್ಧ ಕಿಡಿ ಕಾರುವವರಿಗೆ ಬೇಡವಾಗಿದೆ. ಆದ್ದರಿಂದ ಅವರು ಸ್ವಂತ ಮಾನಸಿಕ ಆರೋಗ್ಯಕ್ಕಾಗಿ ನನ್ನ ಅಭಿಮಾನಿಗಳ ಸಂಘಗಳಿಗೆ ಸೇರಲು ನಾನು ಅವರನ್ನು ವಿನಂತಿಸುತ್ತೇನೆ, ಆ ರೀತಿಯಲ್ಲಿ ಅವರು ದೊಡ್ಡ ಸಾರ್ವತ್ರಿಕ ಯೋಜನೆಯೊಂದಿಗೆ ಹೊಂದಿಕೆಯಾಗುತ್ತಾರೆ, ನನ್ನ ಹಿತೈಷಿಗಳು ಅವರಿಗೆ ದಾರಿ ತೋರಿಸಬೇಕೆಂದು ನಾನು ಬಯಸುತ್ತೇನೆ ಎಂದು ಕಂಗನಾ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಪ್ರಕಾಶ್‌ ರಾಜ್‌ ಅವರು ಕಂಗನಾಗೆ ಅಪಹಾಸ್ಯ ಮಾಡಿದ್ದಾಗ, ಕಂಗನಾ ಫ್ಯಾನ್ಸ್‌ ಗರಂ ಆಗಿದ್ದರು. ನಿಮಗೆ ಸಂಬಂಧ ಇಲ್ದೇ ಇರೋ ವಿಷ್ಯಗಳಿಗೂ ಮೂಗು ತೂರಿಸೋದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ನಿಮ್ಮ ಹತಾಶಾ ಮನೋಭಾವ ಎಷ್ಟಿದೆ ಎನ್ನುವುದು ಇದರಿಂದಲೇ ತಿಳಿಯುತ್ತದೆ. 2024ರಲ್ಲಿ ಉತ್ತರ ಸಿಗಲಿದೆ ಎಂದಿದ್ದರು. 
ಶ್ರೀಕೃಷ್ಣ ದಯೆ ತೋರಿದರೆ.... ರಾಜಕೀಯ ಎಂಟ್ರಿಗೆ ನಟಿ ಕಂಗನಾ ರಣಾವತ್‌ ಕೊಟ್ರು ದೊಡ್ಡ ಸುಳಿವು!