ಅವರು ಬೆಂಕಿ ಹಚ್ತಿದ್ದಾರೆ, ನಾವು ಸುಡ್ತಿದ್ದೇವೆ, ತುಂಬಾ ನೋವಾಗ್ತಿದೆ... ಕಂಗನಾ ರಣಾವತ್ ವಿಡಿಯೋ ವೈರಲ್
ಕಂಗನಾ ರಣಾವತ್ ಅವರ ಎಮರ್ಜೆನ್ಸಿ ಚಿತ್ರ ಚಿತ್ರಮಂದಿರಗಳಲ್ಲಿ ಚೆನ್ನಾಗಿ ಓಡುತ್ತಿರುವ ನಡುವೆಯೇ ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದಾರೆ ನಟಿ. ಅವರು ಹೇಳಿದ್ದೇನು?

ನಟಿ, ಹಾಲಿ ಸಂಸದೆ ಕಂಗನಾ ರಣಾವತ್ ಅವರ ವಿವಾದಿತ ಚಿತ್ರ ಎಮರ್ಜೆನ್ಸಿ ಕೊನೆಗೂ ತೆರೆ ಕಂಡಿದೆ. ಇದೇ 17ರಂದು ತೆರೆ ಕಂಡಿರುವ ಚಿತ್ರ ನಾಲ್ಕು ದಿನಗಳಲ್ಲಿ ಚಿತ್ರವು 12.26 ಕೋಟಿ ರೂಪಾಯಿಗಳನ್ನು ಗಳಿಸಿದೆ. ಮೊದಲ ವಾರದಲ್ಲಿಯೇ, ಚಿತ್ರದ ಒಟ್ಟೂ ಬಜೆಟ್ನ ಶೇಕಡಾ 20ರಷ್ಟು ಗಳಿಕೆ ಆಗಿದೆ ಎಂದು ವರದಿಯಾಗಿದೆ. ಫತೆ, ಪುಷ್ಪಾ-2 ಚಿತ್ರಗಳ ಹೊರತಾಗಿಯೂ ಎಮರ್ಜೆನ್ಸಿ ಮುನ್ನುಗ್ಗುತ್ತಾ ಸಾಗಿದೆ. ನಾಲ್ಕೈದು ಬಾರಿ ಚಿತ್ರ ಬಿಡುಗಡೆಯ ಸಮೀಪಕ್ಕೆ ಬಂದು ನಂತರ ಬಿಡುಗಡೆ ಸ್ಟಾಪ್ ಆಗಿತ್ತು. ಕಳೆದ ಬಾರಿ ಇನ್ನೇನು ಬಿಡುಗಡೆಗೆ ಸೆನ್ಸಾರ್ ಮಂಡಳಿ ಅನುಮತಿ ಸಿಕ್ಕಿದ್ದರೂ ಕುತೂಹಲದ ಘಟ್ಟದಲ್ಲಿ, ಅಚ್ಚರಿಯ ಬೆಳವಣಿಗೆಯ ನಡುವೆ, ಸೆನ್ಸಾರ್ ಮಂಡಳಿ ಯೂಟರ್ನ್ ಹೊಡೆದಿತ್ತು. ಝೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ 'ಎಮರ್ಜೆನ್ಸಿ' ಚಿತ್ರವು ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿಯನ್ನು ಆಧರಿಸಿದ ಮೆಗಾ-ಬಜೆಟ್ ಚಲನಚಿತ್ರವಾಗಿದೆ. ಇದಾಗಲೇ ಹಲವು ಬಾರಿ ಮುಂದೂಡಲ್ಪಟ್ಟಿದ್ದ ಈ ಚಿತ್ರಕ್ಕೆ ಮುಕ್ತಿ ಸಿಕ್ಕಿದ್ದರೂ ಕೆಲವು ಕಡೆಗಳಲ್ಲಿ ನಿಷೇಧದ ಬಿಸಿಯೂ ಮುಟ್ಟಿದೆ.
ಬಾಂಗ್ಲಾದೇಶದಲ್ಲಿ ಇದಾಗಲೇ ಚಿತ್ರಕ್ಕೆ ಬ್ಯಾನ್ ಹಾಕಿರುವ ನಡುವೆಯೇ, ಪಂಜಾಬ್ನಲ್ಲಿಯೂ ಚಿತ್ರ ಬಿಡುಗಡೆಗೆ ಅಡೆತಡೆ ಎದುರಾಗುತ್ತಿದೆ. ಈ ಕುರಿತು ವಿಡಿಯೋ ಮಾಡುವ ಮೂಲಕ ನಟಿ ಕಂಗನಾ, 'ಎಮರ್ಜೆನ್ಸಿ'ಗೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ಮತ್ತು ಬೆಂಬಲಕ್ಕಾಗಿ ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ ಪಂಜಾಬ್‌ನಲ್ಲಿ ಚಿತ್ರದ ಬಿಡುಗಡೆಗೆ ಅಡೆತಡೆಗಳು ಎದುರಾಗುತ್ತಿರುವುದರಿಂದ ಮತ್ತು ವಿದೇಶದಲ್ಲಿರುವ ಭಾರತೀಯ ವಲಸೆಗಾರರ ಮೇಲೆ ಪರಿಣಾಮ ಬೀರುತ್ತಿರುವ ಉದ್ವಿಗ್ನತೆಯಿಂದಾಗಿ ಅವರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಕಂಗನಾ, "ಜೀ ಸ್ಟುಡಿಯೋ, ಮಣಿಕರ್ಣಿಕಾ ಫಿಲ್ಮ್ಸ್ ಮತ್ತು ಈಸ್ ಮೈ ಟ್ರಿಪ್‌ನ ಎಲ್ಲಾ ಸದಸ್ಯರ ಪರವಾಗಿ, ನಾನು ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ. ನೀವೆಲ್ಲರೂ ನಮ್ಮ ಚಿತ್ರಕ್ಕೆ ತುಂಬಾ ಪ್ರೀತಿ ಮತ್ತು ಗೌರವವನ್ನು ನೀಡಿದ್ದೀರಿ. ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಮಗೆ ಪದಗಳಿಲ್ಲ" ಎಂದಿದ್ದಾರೆ.
'ಎಮರ್ಜೆನ್ಸಿ' ಸಿನಿಮಾಕ್ಕೆ ಪ್ರಿಯಾಂಕಾ ಗಾಂಧಿಗೆ ಕಂಗನಾ ಆಹ್ವಾನ: ಇಂದಿರಾ ಮೊಮ್ಮಗಳು ಹೇಳಿದ್ದೇನು ಕೇಳಿ...
ಈ ಮೆಚ್ಚುಗೆಯ ಹೊರತಾಗಿಯೂ, ಪಂಜಾಬ್ ಚಿತ್ರಮಂದಿರಗಳಿಂದ ಚಿತ್ರ ಇಲ್ಲದಿರುವ ಬಗ್ಗೆ ನಟಿ ಕಳವಳ ವ್ಯಕ್ತಪಡಿಸಿದರು. " ನನ್ನ ಹೃದಯದಲ್ಲಿ ಇನ್ನೂ ಸ್ವಲ್ಪ ನೋವು ಇದೆ. ನನ್ನ ಸಿನಿಮಾ ಪಂಜಾಬ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿವೆ ಎಂದು ಚಿತ್ರೋದ್ಯಮದಲ್ಲಿ ಹೇಳಲಾಗಿತ್ತು. ಆದರೆ, ಅದರ ಬಿಡುಗಡೆಗೆ ಅನುಮತಿ ಸಿಗಲಿಲ್ಲ. ಅದೇ ರೀತಿ, ಕೆನಡಾ ಮತ್ತು ಬ್ರಿಟನ್‌ನಲ್ಲಿ ಜನರ ಮೇಲೆ ಕೆಲವು ದಾಳಿಗಳು ನಡೆಯುತ್ತಿವೆ. ಕೆಲವು ಸಣ್ಣ ಮನಸ್ಸಿನ ಜನರು, ಈ ದೇಶಕ್ಕೆ ಬೆಂಕಿ ಹಚ್ಚಿದ್ದಾರೆ ನೀವು ಮತ್ತು ನಾನು ಈ ಬೆಂಕಿಯಲ್ಲಿ ಸುಡುತ್ತಿದ್ದೇವೆ" ಎಂದು ನಟಿ ವಿಡಿಯೋದಲ್ಲಿ ಹೇಳಿದ್ದಾರೆ. ತುರ್ತು ಪರಿಸ್ಥಿತಿಯು ತನ್ನ ವೈಯಕ್ತಿಕ ನಂಬಿಕೆಗಳು ಮತ್ತು ರಾಷ್ಟ್ರೀಯ ಏಕತೆಯ ಬಗ್ಗೆ ನಿಲುವನ್ನು ಪ್ರತಿಬಿಂಬಿಸುತ್ತದೆ ಎಂದಿರುವ ನಟಿ, "ಸ್ನೇಹಿತರೇ, ನನ್ನ ಸಿನಿಮಾ, ನನ್ನ ಆಲೋಚನೆಗಳು ಮತ್ತು ದೇಶದ ಬಗೆಗಿನ ನನ್ನ ಮನೋಭಾವವು ಈ ಸಿನಿಮಾದಲ್ಲಿ ಪ್ರತಿಫಲಿಸುತ್ತದೆ. ಈ ಸಿನಿಮಾ ನೋಡಿದ ನಂತರ ನೀವೇ ನಿರ್ಧರಿಸಿ. ಈ ಸಿನಿಮಾ ನಮ್ಮನ್ನು ಸಂಪರ್ಕಿಸುತ್ತದೆಯೇ ಅಥವಾ ಅದು ನಮ್ಮನ್ನು ಮುರಿಯುತ್ತದೆಯೊ ಎಂದು, ನಾನು ಹೆಚ್ಚು ಹೇಳುವುದಿಲ್ಲ. ಜೈ ಹಿಂದ್. ಧನ್ಯವಾದಗಳು" ಎಂದಿದ್ದಾರೆ ಕಂಗನಾ.
ಜೂನ್ 25, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ್ದ ರಾಷ್ಟ್ರೀಯ ತುರ್ತು ಪರಿಸ್ಥಿತಿ ( National Emergency) ಕರಾಳ ಮುಖವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ನಟಿ ಹೇಳಿದ್ದಾರೆ. 21 ತಿಂಗಳು ಕಾಲ ತುರ್ತು ಪರಿಸ್ಥಿತಿ ಅಸ್ತಿತ್ವದಲ್ಲಿ ಇತ್ತು. 1975, ಜೂನ್ 25ರಂದು ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಿತ್ತು. ಸಂವಿಧಾನವನ್ನು ತಿರಸ್ಕರಿಸಿ ತುರ್ತು ಪರಿಸ್ಥಿತಿ ಹೇರಲಾಯ್ತು. ಭಾರತದ ಯುವ ಪೀಳಿಗೆ ಇದನ್ನ ಎಂದು ಮರೆಯೋದಿಲ್ಲ ಎಂದಿರುವ ನಟಿ, ತಮ್ಮ ಈ ಚಿತ್ರವನ್ನು ವೀಕ್ಷಿಸಿ, ನಮ್ಮ ಇತಿಹಾಸವನ್ನು ತಿಳಿದುಕೊಳ್ಳಿ ಎಂದಿದ್ದಾರೆ. ಈ ಕುರಿತು ಈ ಹಿಂದೆ ಹೇಳಿಕೆ ನೀಡಿದ್ದ ಅವರು, ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದ ಕರಾಳ ಘಟ್ಟವನ್ನು ನೋಡಿ ಮತ್ತು ಅಧಿಕಾರದ ಲಾಲಸೆಯನ್ನು ನೋಡಿ ಎಂದಿದ್ದಾರೆ. ಚಿತ್ರದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ ಮತ್ತು ದಿವಂಗತ ಸತೀಶ್ ಕೌಶಿಕ್ ಅವರ ಸಂಗೀತವನ್ನು ಸಂಚಿತ್ ಬಲ್ಹಾರಾ ಅವರು ಸಂಯೋಜಿಸಿದ್ದಾರೆ. ಕಥೆ ಮತ್ತು ಸಂಭಾಷಣೆಗಳನ್ನು ರಿತೇಶ್ ಷಾ ಬರೆದಿದ್ದಾರೆ.
ಕಂಗನಾ ಮದ್ವೆ ಯಾವಾಗ? ಸಂಸದ ಚಿರಾಗ್ ಪಾಸ್ವಾನ್ ಜೊತೆ ಏನು ನಡೀತಿದೆ? ಬಾಯ್ಬಿಟ್ಟ ನಟಿ