ಕಮಲ್ ಹಾಸನ್ ಕ್ಷಮೆ ಕೇಳಿದ್ದಾರಾ? ಅವರೇನು ಇತಿಹಾಸಕಾರರೇ? ನ್ಯಾಯಾಲಯ ತರಾಟೆ
ಕಮಲ್ ಹಾಸನ್ ಅವರ ಹೊಸ ಸಿನಿಮಾ ಬಿಡುಗಡೆಗೆ ಭದ್ರತೆ ಕೋರಿದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿಗಳು ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕನ್ನಡ ಭಾಷೆಯ ಕುರಿತು ನೀಡಿದ ಹೇಳಿಕೆಗೆ ಕ್ಷಮೆ ಯಾಚಿಸುವಂತೆ ಸೂಚಿಸಿದ್ದಾರೆ.

ತಮಿಳು ನಟ ಮತ್ತು ನಿರ್ಮಾಪಕ ಕಮಲ್ ಹಾಸನ್ ಅವರು ತಮ್ಮ ಹೊಸ ಸಿನಿಮಾ ಥಗ್ ಲೈಫ್ ಸಿನೆಮಾ ಬಿಡುಗಡೆಗೆ ಭದ್ರತೆ ನೀಡುವಂತೆ ಕೋರಿ ಡಿಜಿಐಜಿಪಿ, ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡುವಂತೆ ಸಲ್ಲಿಸಿರುವ ಅರ್ಜಿ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆಗೆ ಒಳಪಟ್ಟಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿ ಕಮಲ್ ಹಾಸನ್ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ವಿಚಾರಣೆ ನಾಳೆಗೆ ಮುಂದೂಡುವಂತೆ ಸರ್ಕಾರದ ಪರ ವಕೀಲ ಭಾನುಪ್ರಕಾಶ್ ಮನವಿ ಮಾಡಿದರು.
ಕಮಲ್ ಹಾಸನ್ ಅವರು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಗೆ ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಇದೇ ಕಾರಣದಿಂದಾಗಿ ಸಿನಿಮಾಕ್ಕೆ ವಿರೋಧ ಉಂಟಾಗಿದೆ. ವಿಚಾರಣೆ ವೇಳೆ ಕಮಲ್ ಹಾಸನ್ ರನ್ನು ನ್ಯಾಯಾಧೀಶರು ತೀವ್ರ ತರಾಟೆಗೆ ತೆಗೆದುಕೊಂಡರು. ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದದ್ದೆಂದು ಕಮಲ್ ಹಾಸನ್ ಹೇಳಿಕೆ ನೀಡಿದ್ದಾರೆ. ಅವರು ಇತಿಹಾಸಕಾರರೇ? ಇಂತಹ ಹೇಳಿಕೆಗಳಿಂದ ಕನ್ನಡಿಗರ ಭಾವನೆಗೆ ಧಕ್ಕೆ ಉಂಟಾಗುತ್ತದೆ. ಕಮಲ್ ಹಾಸನ್ ಅವರು ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಕ್ಷಮೆ ಕೇಳಬೇಕು ಎಂದು ನ್ಯಾಯಾಧೀಶರು ಹೇಳಿದರು. ಕ್ಷಮೆ ಕೇಳಿದ್ರೆ ಅವರ ಮನವಿ ಪರಿಗಣಿಸಲಾಗುವುದು. ಜಲ, ನೆಲ, ಭಾಷೆ ಬಗ್ಗೆ ಭಾವನೆ ಹೊಂದಿದ್ದಾರೆ. ರಾಜ್ಯದಲ್ಲಿ ಭಾಷೆ ಪ್ರಮುಖವಾದುದು. ಯಾವುದೇ ಭಾಷೆ ಆಗಲಿ. ಒಂದು ಭಾಷೆ ಹುಟ್ಟಿದೆ ಎಂದರೆ ಹೇಗೆ? ಕ್ಷಮೆ ಕೇಳಲಿ, ಆ ನಂತರ ಅವರ ಮನವಿ ಪರಿಗಣಿಸಲಾಗುವುದು ಎಂದರು.
ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಅನ್ನೋದಕ್ಕೆ ಅವರೇನು ಇತಿಹಾಸಕರರೇ? ಈ ಹಿಂದೆ ರಾಜಗೋಪಾಲಾಚಾರ್ಯ ಕೂಡ ಕ್ಷಮೆ ಕೇಳಿದ್ರು, ಇವತ್ತಿನ ಪರಿಸ್ಥಿತಿ ನಿರ್ಮಾಣಕ್ಕೆ ನೀವೇ ಕಾರಣ. ಆದರೆ ಕ್ಷಮೆ ಕೇಳದೇ ಆ್ಯಟಿಡ್ಯೂಡ್ ತೋರಿಸ್ತಾ ಇದ್ದೀರಿ. ಈ ರೀತಿಯ ಹೇಳಿಕೆ ನೀಡಬಾರದು. ನೀವೇ ಈ ಪರಿಸ್ಥಿತಿ ನಿರ್ಮಾಣ ಮಾಡಿ ಭದ್ರತೆ ಕೋರುತ್ತಿದ್ದೀರಿ. ಕಮಲ್ ಹಾಸನ್ ಸಾಮಾನ್ಯ ವ್ಯಕ್ತಿ ಅಲ್ಲ, ಪಬ್ಲಿಕ್ ಫಿಗರ್. ಕಮಲ್‌ಹಾಸನ್ ತಮ್ಮ ಹೇಳಿಕೆ ತಿರಸ್ಕರಿಸುತ್ತಿಲ್ಲ, ಜೊತೆಗೆ ಹೇಳಿದ್ದು ಸರಿ ಅಂತ ಹೇಳ್ತಾ ಇದ್ದೀರಿ. ಈಗ ನಿಮ್ಮ ಸಿನಿಮಾ ರನ್ ಆಗಬೇಕು ಅಂತ ಈ ರೀತಿ ಕೇಳ್ತಾ ಇದ್ದೀರಿ.ನೀವು ಹಲವು ಕೋಟಿ ಹೂಡಿಕೆ ಮಾಡಿರಬಹುದು, ಆದ್ರೆ, ಕನ್ನಡಿಗರ ಭಾವನೆಗೆ ಧಕ್ಕೆ ಆಗಿದೆ ಎಂದು ಖಾರವಾಗಿ ನ್ಯಾಯಾಧೀಶರು ಪ್ರತಿಕ್ರಿಯೆ ನೀಡಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಮಹತ್ವದ್ದಾಗಿದ್ದರೂ, ಅದು ಇನ್ನೊಬ್ಬರ ಭಾವನೆಗೆ ಧಕ್ಕೆ ತರುವಂತಿರಬಾರದು. ಈ ಪರಿಸ್ಥಿತಿಗೆ ಕಾರಣನಾಗಿರುವ ನೀವು ಈಗ ಭದ್ರತೆ ಕೋರುತ್ತಿದ್ದೀರಿ. ನೀವು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರಬಹುದು, ಆದರೆ ಕನ್ನಡಿಗರ ಭಾವನೆ ಅವುಗಳಿಗಿಂತ ಉನ್ನತವಾದದ್ದು, ಕಮಲ್ ಹಾಸನ್ ಅವರು ಸಾಮಾನ್ಯ ವ್ಯಕ್ತಿಯಲ್ಲ, ಅವರು ಸಾರ್ವಜನಿಕ ವ್ಯಕ್ತಿ. ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳುತ್ತಿಲ್ಲ, ಬದಲಿಗೆ ಹೇಳಿದ್ದು ಸರಿಯೆಂದು ಮತ್ತೊಮ್ಮೆ ಹೇಳುತ್ತಿದ್ದಾರೆ. ಈ ರೀತಿಯ ಹೇಳಿಕೆಗಳಿಂದ ಕನ್ನಡದ ಭಾವನೆಗೆ ಧಕ್ಕೆ ತರೋದನ್ನ ಒಪ್ಪುವುದಿಲ್ಲ. ಹೀಗಿದ್ದರೆ, ಕರ್ನಾಟಕ ಯಾಕೆ ನಿಮಗೆ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ಇಂದು ನಿರ್ಮಾಪಕರು ಕೋರ್ಟ್ ಮುಂದೆ ಇದ್ದಾರೆ ಎಂದು ಕಮಲ್ ಪರ ವಕೀಲರು ಹೇಳಿದ್ದಕ್ಕೆ, ಯಾರು ನಿರ್ಮಾಪಕರು ಕಮಲ್‌ಹಾಸನ್ ನಿರ್ಮಾಪಕರು ಎಂದ ಜಡ್ಜ್ ಕಮಲ್‌ಹಾಸನ್ ಹೇಳಿಕೆ ಆಡಿಯೋ ಕೇಳಿ ಇದು ತಪ್ಪು ಎಂದರು. ಕಮಲ್ ಹಾಸನ್ ಪರ ವಕೀಲರಾದ ಧ್ಯಾನ್ ಚಿನ್ನಪ್ಪ ಅವರು, ಸಿನಿಮಾ ನೋಡುವುದು ಪ್ರತಿ ವ್ಯಕ್ತಿಯ ಮೂಲಭೂತ ಹಕ್ಕು. ಈ ಕಾರಣಕ್ಕಾಗಿ ಚಿತ್ರಕ್ಕೆ ಭದ್ರತೆ ನೀಡಬೇಕು" ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಭದ್ರತೆ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ಕೋರ್ಟ್ ನಿರ್ಧರಿಸುತ್ತದೆ. ಆದರೆ ಅದಕ್ಕೂ ಮೊದಲು, ಕಮಲ್ ಹಾಸನ್ ಅವರು ಕ್ಷಮೆ ಕೇಳಬೇಕಾಗಿದೆ. ಒಬ್ಬ ಇತಿಹಾಸಕಾರ ಪ್ರಾಮಾಣಿಕ ದಾಖಲೆಗಳೊಂದಿಗೆ ಹೇಳಿದ್ದರೆ, ಈ ವಿಷಯ ಚರ್ಚೆಗೆ ಒಳಪಟ್ಟಿರುತ್ತಿತ್ತು. ಆದರೆ ಈಗ ಕಮಲ್ ಹಾಸನ್ ಮಾತನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಕ್ಷಮೆ ಕೇಳದ ಹೊರತು ಹೇಳಿಕೆ ಹಿಂಪಡೆಯಲು ಸಾಧ್ಯವಿಲ್ಲ.
ಕೆಲವು ವಿಚಾರ ಔಟ್ ಆಫ್ ಸಿಲೆಬಸ್ ಹೋಗ್ತಾ ಇದೆ. ಇಂತಹದ್ದೇ ಅನುಭವ 'ಕಾಲ' ಸಿನಿಮಾ ಬಂದಾಗಲೂ ನಡೆದಿತ್ತು. ಆಗಲೂ ಹೈಕೋರ್ಟ್ ಭದ್ರತೆ ನೀಡುವಂತೆ ಆದೇಶಿಸಿತ್ತು ಎಂದು ವಾದಿಸಿದ ಧ್ಯಾನ್ ಚಿನ್ನಪ್ಪ ಅವರ ಮಾತಿಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ಹೌದು ಇರಬಹುದು, ಕೆಲವರ ಭಾವನೆಗೆ ಧಕ್ಕೆಯಾಗಿದೆ. ನಿಮ್ಮ ಹೇಳಿಕೆಯಿಂದ ನಟ ಶಿವರಾಜ್ ಕುಮಾರ್ ಅವರಿಗೂ ಸಮಸ್ಯೆ ಉಂಟಾಗಿದೆ. ಕ್ಷಮೆ ಕೇಳುವುದರ ಬಗ್ಗೆ ಯೋಚಿಸಿ, ಮಧ್ಯಾಹ್ನ 2.30ಕ್ಕೆ ಹಾಜರಾಗಿರಿ. ನಾನು ಕೂಡ ಥಗ್ ಲೈಫ್ ಚಿತ್ರವನ್ನು ನೋಡಲು ಇಚ್ಛಿಸಿದ್ದೆ. ಆದರೆ ಈ ವಿವಾದದಿಂದ ನೋಡಲು ಸಾಧ್ಯವಿಲ್ಲ ಯಾರೊಬ್ಬರ ಭಾವನೆಯ ಮೇಲೆ ಸವಾರಿ ಮಾಡಬಾರದು ಎಂದು ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿದರು.