ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ ಪುತ್ರ ಅರ್ಜುನ್ ಮೆಹ್ತಾ, ಅಮೆರಿಕದ ಪ್ರತಿಷ್ಠಿತ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಮಗನ ಘಟಿಕೋತ್ಸವದ ವಿಡಿಯೋ ಹಂಚಿಕೊಂಡು ಜೂಹಿ ತಮ್ಮ ಸಂತಸ ವ್ಯಕ್ತಪಡಿಸಿದ್ದು, ಕಳೆದ ವರ್ಷ ಇವರ ಪುತ್ರಿ ಜಾನ್ವಿ ಕೂಡ ಇದೇ ವಿವಿಯಿಂದ ಪದವಿ ಪಡೆದಿದ್ದರು.

ಮುಂಬೈ (ಮೇ.23): ಬಾಲಿವುಡ್‌ನ ಹಿರಿಯ ನಟಿ ಜೂಹಿ ಚಾವ್ಲಾ ಅವರ ಕುಟುಂಬಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ. ಜೂಹಿ ಚಾವ್ಲಾ ಮತ್ತು ಉದ್ಯಮಿ ಜಯ್ ಮೆಹ್ತಾ ದಂಪತಿಯ ಪುತ್ರ ಅರ್ಜುನ್ ಮೆಹ್ತಾ ಅವರು ಅಮೆರಿಕದ ಪ್ರತಿಷ್ಠಿತ 'ಕೊಲಂಬಿಯಾ ವಿಶ್ವವಿದ್ಯಾಲಯ'ದಿಂದ (Columbia University) ಯಶಸ್ವಿಯಾಗಿ ಪದವಿ ಪೂರ್ಣಗೊಳಿಸಿದ್ದಾರೆ. ಮಗನ ಸಾಧನೆಯಿಂದ ಅತ್ಯಂತ ಸಂತೋಷಗೊಂಡಿರುವ ಜೂಹಿ ಚಾವ್ಲಾ, ನ್ಯೂಯಾರ್ಕ್‌ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದ ವಿಶೇಷ ವಿಡಿಯೋ ಒಂದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಜೂಹಿ ಚಾವ್ಲಾ ಅವರ ಕುಟುಂಬದ ಸದಸ್ಯರೊಬ್ಬರು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆಯುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮುನ್ನ, ಅಂದರೆ 2023 ರಲ್ಲಿ ಇವರ ಪುತ್ರಿ ಜಾನ್ವಿ ಮೆಹ್ತಾ ಸಹ ಇದೇ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿದ್ದರು.

ಘಟಿಕೋತ್ಸವದ ಭಾವುಕ ಕ್ಷಣ ಹಂಚಿಕೊಂಡ ಜೂಹಿ ಚಾವ್ಲಾ

ನಟಿ ಜೂಹಿ ಚಾವ್ಲಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅರ್ಜುನ್ ಮೆಹ್ತಾ ಅವರ ಘಟಿಕೋತ್ಸವ ಸಮಾರಂಭದ (Graduation Ceremony) ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಜನರಿಂದ ತುಂಬಿ ತುಳುಕುತ್ತಿದ್ದ ಸಭಾಂಗಣದಲ್ಲಿ ಲೌಡ್‌ಸ್ಪೀಕರ್ ಮೂಲಕ ಅರ್ಜುನ್ ಮೆಹ್ತಾ ಅವರ ಹೆಸರನ್ನು ಘೋಷಿಸುತ್ತಿದ್ದಂತೆ, ಅಲ್ಲಿದ್ದ ಸ್ನೇಹಿತರು, ಕುಟುಂಬಸ್ಥರು ಮತ್ತು ನೆರೆದಿದ್ದ ಸಾರ್ವಜನಿಕರು ಜೋರಾಗಿ ಚಪ್ಪಾಳೆ, ಶಿಳ್ಳೆ ಮೂಲಕ ಇಡೀ ಹಾಲ್‌ಅನ್ನು ರಂಜನೀಯ ಮಾಡಿದ್ದರು.

ಕೊಲಂಬಿಯಾ ವಿಶ್ವವಿದ್ಯಾಲಯದ ಸಾಂಪ್ರದಾಯಿಕ ತಿಳಿ ನೀಲಿ ಬಣ್ಣದ ಗ್ರಾಜುಯೇಟ್ ಗೌನ್, ಹ್ಯಾಟ್ ಮತ್ತು ಡಾರ್ಕ್ ಟೈ ಧರಿಸಿದ್ದ ಅರ್ಜುನ್ ಮೆಹ್ತಾ, ಆತ್ಮವಿಶ್ವಾಸದಿಂದ ವೇದಿಕೆಯತ್ತ ಹೆಜ್ಜೆ ಹಾಕಿದರು. ಬಳಿಕ ಮೆರೂನ್ ಬಣ್ಣದ ಗೌನ್ ಧರಿಸಿದ್ದ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರಿಗೆ ಹಸ್ತಲಾಘವ ಮಾಡಿ ತಮ್ಮ ಪದವಿ ಪ್ರಮಾಣಪತ್ರವನ್ನು ಸ್ವೀಕರಿಸಿದರು. ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ಜೂಹಿ, 'ಕೊಲಂಬಿಯಾದ ಪ್ರೌಡ್ ಗ್ರಾಜುಯೇಷನ್' ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

ಭಾರತದಲ್ಲೇ ಟಾಪರ್ ಆಗಿದ್ದ ಮಗಳು ಜಾನ್ವಿ ಮೆಹ್ತಾ: ನಟನೆಗಿಂತ ಕ್ರಿಕೆಟ್‌ನಲ್ಲೇ ಒಲವು

ಕಳೆದ 2023 ರಲ್ಲಿ ಮಗಳು ಜಾನ್ವಿ ಮೆಹ್ತಾ ಪದವಿ ಪಡೆದಾಗಲೂ ಜೂಹಿ ಚಾವ್ಲಾ ಅವರು ಘಟಿಕೋತ್ಸವದ ಫೋಟೋಗಳನ್ನು ಹಂಚಿಕೊಂಡು, 'ತುಂಬಾ ಹೆಮ್ಮೆ ಮತ್ತು ಸಂತೋಷವಾಗುತ್ತಿದೆ' ಎಂದು ಬರೆದುಕೊಂಡಿದ್ದರು. ಈ ಹಿಂದೆ ನೀಡಿದ್ದ ಹಳೆಯ ಸಂದರ್ಶನವೊಂದರಲ್ಲಿ ಜೂಹಿ ಚಾವ್ಲಾ ತಮ್ಮ ಮಗಳ ಶೈಕ್ಷಣಿಕ ಪ್ರತಿಭೆ ಮತ್ತು ಕ್ರಿಕೆಟ್ ಮೇಲಿನ ಆಸಕ್ತಿಯನ್ನು ಬಹಿರಂಗಪಡಿಸಿದ್ದರು.

"ಯಾರೂ ತಮ್ಮ ಸ್ವಂತ ಮಕ್ಕಳನ್ನು ಅತಿಯಾಗಿ ಹೊಗಳಬಾರದು, ಆದರೆ ಜಾನ್ವಿ ನಿಜಕ್ಕೂ ಅತ್ಯಂತ ಪ್ರತಿಭಾವಂತ ಹುಡುಗಿ. ಆಕೆಯ ಅಕಾಡೆಮಿಕ್ ರೆಕಾರ್ಡ್ ಅದ್ಭುತವಾಗಿದೆ. ಆಕೆ ಇಂಟರ್ನ್ಯಾಷನಲ್ ಜನರಲ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಷನ್ (IGCSE) ಪರೀಕ್ಷೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಳು ಮತ್ತು ಇತಿಹಾಸ ವಿಷಯದಲ್ಲಿ ಇಡೀ ಭಾರತಕ್ಕೆ ಟಾಪರ್ ಆಗಿದ್ದಳು. ಇನ್ನು ಐಬಿ (IB) ಪರೀಕ್ಷೆಯಲ್ಲೂ ಆಕೆ ತನ್ನ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಳು. ಪ್ರಸ್ತುತ ಕೊಲಂಬಿಯಾ ವಿಶ್ವವಿದ್ಯಾಲಯದ ಅತ್ಯುತ್ತಮ ವಿದ್ಯಾರ್ಥಿಗಳಿರುವ 'ಡೀನ್ಸ್ ಲಿಸ್ಟ್'ನಲ್ಲೂ (Dean's List) ಆಕೆಯ ಹೆಸರಿದೆ" ಎಂದು ಜೂಹಿ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಇದರೊಂದಿಗೆ, ಜಾನ್ವಿಗೆ ಸಿನಿಮಾ ನಟನೆಯಲ್ಲಿ ಆಸಕ್ತಿಯಿಲ್ಲ, ಬದಲಿಗೆ ಕ್ರಿಕೆಟ್ ಹಾಗೂ ಆಡಳಿತದಲ್ಲಿ ಹೆಚ್ಚಿನ ಆಸಕ್ತಿಯಿದೆ ಎಂದೂ ಸ್ಪಷ್ಟಪಡಿಸಿದ್ದರು.

ಜೂಹಿ ಚಾವ್ಲಾ ದಾಂಪತ್ಯ ಜೀವನ ಮತ್ತು ಮಕ್ಕಳು

ಹೊರಗಿನ ಜಗತ್ತಿಗೆ ಯಶಸ್ವಿ ನಟಿಯಾಗಿ ಕಾಣುವ ಜೂಹಿ ಚಾವ್ಲಾ ವೈಯಕ್ತಿಕ ಜೀವನದಲ್ಲೂ ಅಷ್ಟೇ ಮಾದರಿಯಾಗಿದ್ದಾರೆ. ಜೂಹಿ ಚಾವ್ಲಾ ಅವರು 1995 ರಲ್ಲಿ ಪ್ರಸಿದ್ಧ ಉದ್ಯಮಿ ಜಯ್ ಮೆಹ್ತಾ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪುತ್ರಿ ಜಾನ್ವಿ ಮೆಹ್ತಾ 2001 ರಲ್ಲಿ ಜನಿಸಿದರೆ, ಪುತ್ರ ಅರ್ಜುನ್ ಮೆಹ್ತಾ 2003 ರಲ್ಲಿ ಜನಿಸಿದರು. ಸದ್ಯ ಇಬ್ಬರೂ ಮಕ್ಕಳು ಅಮೆರಿಕದ ಪ್ರಸಿದ್ಧ ಐವಿ ಲೀಗ್ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕೊಲಂಬಿಯಾದಿಂದ ಉನ್ನತ ಶಿಕ್ಷಣ ಪೂರ್ಣಗೊಳಿಸಿರುವುದು ಚಾವ್ಲಾ-ಮೆಹ್ತಾ ಕುಟುಂಬದ ಸಂತಸವನ್ನು ಇಮ್ಮಡಿಗೊಳಿಸಿದೆ.