ಸಾಮಾನ್ಯ ಬ್ಯಾಂಕ್ ಉದ್ಯೋಗಿ ಜಸ್ವಂತ್ ಸಿಂಗ್ ಖಾಲ್ರಾ, ಪಂಜಾಬ್‌ನಲ್ಲಿ ಪೊಲೀಸರಿಂದ ನಡೆದ 25,000 ಅಮಾಯಕರ ಹತ್ಯಾಕಾಂಡವನ್ನು ಬಯಲಿಗೆಳೆದರು. ಸತ್ಯಕ್ಕಾಗಿ ಹೋರಾಡಿ ತಾವೇ ಬಲಿಯಾದ ಅವರ ಈ ನೈಜ ಕಥೆಯನ್ನಾಧರಿಸಿದ 'ಸಟ್ಲುಜ್' ಸಿನಿಮಾವು ಬಿಡುಗಡೆಯಾದ 48 ಗಂಟೆಗಳಲ್ಲೇ ಓಟಿಟಿಯಿಂದ ಡಿಲೀಟ್ ಆಗಿದ್ದೇಕೆ?

- ನಚಿಕೇತನ್‌. ಎನ್‌

ಸಟ್ಲುಜ್‌ ಪಂಜಾಬ್‌ನಲ್ಲಿ ಹರಿಯುವ ಪಂಚನದಿಗಳಲ್ಲೊಂದು. ಇದೇ ಹೆಸರಿನ ಸಿನಿಮಾವೊಂದು ಇತ್ತೀಚೆಗೆ ಓಟಿಟಿಯಲ್ಲಿ ರಿಲೀಸ್‌ ಆಗಿ 24 ಗಂಟೆಗಳ ಮೊದಲೇ ಡಿಲೀಟ್‌ ಆಯ್ತು. ಆ ಸಿನಿಮಾದಲ್ಲಿದ್ದ ನೈಜ ಕಥನದ ಹಿನ್ನೆಲೆ ಬೆಚ್ಚಿಬೀಳಿಸುವಂಥಾದ್ದು. ಜಸ್ವಂತ್ ಸಿಂಗ್ ಖಾಲ್ರಾ ಎಂಬ ಸಾಮಾನ್ಯ ಬ್ಯಾಂಕ್ ಉದ್ಯೋಗಿಯೊಬ್ಬ 25000 ಅಮಾಯಕರ ಹತ್ಯಾಕಾಂಡವನ್ನು ಬಯಲಿಗೆಳೆದು ಕೊನೆಗೆ ತಾನೇ ಬಲಿಯಾದ ಕಥೆಯದು.

ಯಾರು ಜಸ್ವಂತ್ ಸಿಂಗ್ ಖಾಲ್ರಾ?

1984 ಜೂನ್‌ನಲ್ಲಿ ನಡೆದ ಆಪರೇಷನ್‌ ಬ್ಲೂ ಸ್ಟಾರ್‌(Operation Blue Star) ಕಾರ್ಯಾಚರಣೆ ಹಾಗೂ ಇಂದಿರಾ ಗಾಂಧಿ ಹತ್ಯೆ(Assassination of Indira Gandhi)ಯ ನಂತರ ಪಂಜಾಬ್‌ನಲ್ಲಿ ಉಗ್ರವಾದ ಮತ್ತು ಉಗ್ರ ವಿರೋಧಿ ಕಾರ್ಯಾಚರಣೆಗಳು ಹೆಚ್ಚಾದವು. 1988ರಲ್ಲಿ ಡಿಜಿಪಿಯಾಗಿದ್ದ ಕೆಪಿಎಸ್‌ ಒಬ್ಬ ಉಗ್ರನನ್ನು ಕೊಂದರೆ ಪೊಲೀಸರಿಗೆ 50 ಸಾವಿರ ರು. ಬಹುಮಾನ ಎಂದು ಘೋಷಣೆ ಮಾಡಿದರು. ಇದರ ಆಸೆಗೆ ಪೊಲೀಸರು ಬೇಟೆಗಾರರಾಗಿ ಅಮಾಯಕ ಯುವಕರಿಗೆ ಉಗ್ರರ ಹಣೆಪಟ್ಟೆ ಕಟ್ಟಿ ಎನ್‌ಕೌಂಟರ್‌ ಮಾಡತೊಡಗಿದರು ಎನ್ನಲಾಗಿದೆ. ಈ ಮಾಹಿತಿ ತಿಳಿದು ಅದರ ಬೆನ್ನತ್ತಿ ತನಿಖೆ ನಡೆಸಲು ಹೊರಟವನೇ ಜಸ್ವಂತ್ ಸಿಂಗ್ ಖಾಲ್ರಾ.

ಮಿತ್ರನನ್ನು ಹುಡುಕಹೋದವನಿಗೆ ಸಿಕ್ಕಿದ್ದು 25000 ಶವಗಳು

1952ರಲ್ಲಿ ಪಂಜಾಬ್‌ನ ಖಾಲ್ರಾ ಜಿಲ್ಲೆಯಲ್ಲಿ ಜನಿಸಿದ ಜಸ್ವಂತ್ ಸಿಂಗ್ ಖಾಲ್ರಾ, ಬ್ಯಾಂಕ್‌ ಉದ್ಯೋಗಿ. ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದ. ಪಂಜಾಬ್‌ನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅವನಿಗೆ ಅರಿವೇ ಇರಲಿಲ್ಲ. ಈ ಮಧ್ಯೆ ಒಂದು ದಿನ ಇದ್ದಕ್ಕಿದ್ದಂತೆ ಅವನ ಗೆಳೆಯ ಹಾಗೂ ಗೆಳೆಯನ ತಾಯಿ ಕಾಣೆಯಾದರು. ಗೊಂದಲಕ್ಕೆ ಬಿದ್ದ ಖಾಲ್ರಾ ಗೆಳೆಯನ ತಾಯಿಯ ಫೋಟೋ ಹಿಡಿದು ಪೊಲೀಸ್‌ ಠಾಣೆಗೆ ಅಲೆಯುತ್ತಾನೆ. ಪೊಲೀಸರು ಇವರು ಭಯೋತ್ಪಾದಕನ ತಾಯಿ, ಇವರ ಬಗ್ಗೆ ನಮಗೆ ಗೊತ್ತಿಲ್ಲ ಎಂದು ದೂರು ತೆಗೆದುಕೊಳ್ಳದೇ ವಾಪಸ್‌ ಕಳಿಸುತ್ತಾರೆ. ಬಳಿಕ ಖಾಲ್ರಾ ಅಮೃತಸರ ಜಿಲ್ಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಗೂ ತೆರಳಿ ಫೋಟೋ ತೋರಿಸಿ ವಿಚಾರಿಸುತ್ತಾನೆ. ಅಲ್ಲೂ ಸ್ನೇಹಿತನ ತಾಯಿಯ ಸುಳಿವು ಸಿಗುವುದಿಲ್ಲ. ಬದಲಿಗೆ ಹೆಣಗಳ ರಾಶಿ ಕಾಣಸಿಗುತ್ತದೆ. ಮೂರು ಸ್ಮಶಾನಗಳಲ್ಲಿ 2500ಕ್ಕೂ ಹೆಚ್ಚು ಅಕ್ರಮ ಶವಗಳ ವಿವರಗಳೂ ಲಭ್ಯವಾಗುತ್ತವೆ. ಮೂರು ಸ್ಮಶಾನಗಳಲ್ಲೇ ಇಷ್ಟೊಂದು ಅಕ್ರಮ ಶವಗಳಿದ್ದರೆ, ಪಂಜಾಬ್‌ ಪೂರ್ತಿ ಹುಡುಕಿದರೆ ಅದೆಷ್ಟು ಅಮಾಯಕರ ಮೃತದೇಹಗಳು ಸಿಗಬಹುದು ಎಂದೆನಿಸಿ ಇಡೀ ಪಂಜಾಬ್‌ನ ಮೂಲೆ ಮೂಲೆ ಅಲೆದು ಮಾಹಿತಿ ಸಂಗ್ರಹಿಸಲು ಶುರು ಮಾಡುತ್ತಾನೆ. ಪುರಸಭೆ ಹಾಗೂ ಸ್ಮಶಾನಗಳಲ್ಲಿ ಶವಸಂಸ್ಕಾರದ ದಾಖಲೆಗಳು, ಶವಗಳನ್ನು ದಹನ ಮಾಡಲು ಕಟ್ಟಿಗೆ ಖರೀದಿಸಿದ ಬಗ್ಗೆ ಹಾಗೂ ಅನೇಕ ಸರ್ಕಾರಿ ದಾಖಲೆಗಳನ್ನು ಸಂಗ್ರಹಿಸುತ್ತಾನೆ. ಇವರ ಹುಡುಕಾಟದಿಂದ ಸರಿಸುಮಾರು 25,000 ಗುರುತು ಸಿಗದ ಶವಗಳನ್ನು ಯಾವುದೇ ಕಾನೂನು ಪ್ರಕ್ರಿಯೆ ಇಲ್ಲದೆ ಅಂತ್ಯಸಂಸ್ಕಾರ ಮಾಡಲಾಗಿದೆ ಎಂಬುದು ದಾಖಲೆ ಸಮೇತ ಬಹಿರಂಗವಾಗುತ್ತದೆ.

ಕಾಣೆಯಾದವರನ್ನು ಹುಡುಕಿ ಹೊರಟವನೇ ಕಾಣೆಯಾದ

ಖಾಲ್ರಾ ಮಾನವ ಹಕ್ಕುಗಳ ಪ್ರಮುಖ ಹೋರಾಟಗಾರನಾಗಿ, ಕಾಣೆಯಾಗಿದ್ದ ಯುವಕರ ಕುಟುಂಬಗಳ ಬಳಿ ತೆರಳಿ ಅವರ ಬಳಿ ತಾನು ಸಂಗ್ರಹಿಸಿದ್ದ ಮಹತ್ವದ ದಾಖಲೆಗಳನ್ನು ತೋರಿಸಿ ಸತ್ಯಾಂಶ ತಿಳಿಸಿ ಇದರ ವಿರುದ್ಧ ಹೋರಾಟ ನಡೆಸಲು ಪ್ರೇರೇಪಿಸಿದ. ಸತ್ಯದ ಅರಿವಾಗಿ ಅಲ್ಲಿನ ನಾಗರಿಕರು ಖಾಲ್ರಾ ಹೋರಾಟಕ್ಕೆ ಬೆಂಬಲ ನೀಡಿದರು. ಈ ವಿಚಾರ ದೇಶ ಮತ್ತು ವಿದೇಶಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು. ಈ ನಡುವೆಯೇ ಖಾಲ್ರಾಗೆ ಕೆನಡಾಕ್ಕೆ ತೆರಳುವ ಅವಕಾಶವೂ ಒದಗಿ ಬಂದಿತು. ಕೆನಡಾದ ಸಂಸತ್‌ನಲ್ಲಿ ಪಂಜಾಬ್‌ನ ದುರಂತದ ಬಗ್ಗೆ ಅಲ್ಲಿದ್ದ ಸಿಖ್‌ ಹಾಗೂ ಇತರರಿಗೆ ಖಾಲ್ರಾ ತಿಳಿಸಿದ. ನಂತರ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಈ ಘಟನೆಯ ಬಗ್ಗೆ ಹೋರಾಟಗಳು ಶುರುವಾದವು. ಪತ್ರಿಕೆಗಳಲ್ಲಿ ದೊಡ್ಡ ದೊಡ್ಡದಾಗಿ ಸುದ್ದಿಗಳು ಪ್ರಕಟಗೊಂಡವು. ಹತ್ಯೆಯ ಬಗ್ಗೆ ಹೊಸ ಸಂಚಲನವೇ ಸೃಷ್ಟಿಯಾಯಿತು. ಇದೆಲ್ಲ ನಡೆಯುತ್ತಿರುವಾಗಲೇ ಖಾಲ್ರಾಗೆ ಸಹಾಯ ಮಾಡಿದ್ದ ಕೆಲವರನ್ನು ಹುಡುಕಿ ಪೊಲೀಸರು ಎನ್‌ಕೌಂಟರ್‌ ಮಾಡಿದ್ದರು. ಇನ್ನೇನು ಈ ಎಲ್ಲಾ ದಾಖಲೆಯನ್ನು ನ್ಯಾಯಾಲಯದ ಮುಂದೆ ಸಲ್ಲಿಸಿ ಅಮಾಯಕರ ಪ್ರಾಣವನ್ನು ಬಲಿಪಡೆದ ಪೊಲೀಸರಿಗೆ ಶಿಕ್ಷೆ ಕೊಡಿಸಬೇಕು ಎನ್ನುವಷ್ಟರಲ್ಲಿ ಖಾಲ್ರಾನೇ ನಾಪತ್ತೆಯಾದ!

ಸಿಬಿಐ ಬರುವವರೆಗೂ ಖಾಲ್ರಾ ಸುಳಿವೇ ಇಲ್ಲ!

1995ರ ಸೆ.6ರಂದು ಮನೆಯ ಬಳಿ ಕಾರು ತೊಳೆಯುತ್ತಿದ್ದ ಖಾಲ್ರಾನನ್ನು ಐದಾರು ಮಂದಿ ಕಾರಲ್ಲಿ ಬಂದು ಅಪಹರಿಸಿದರು. ಈ ವಿಷಯ ತಿಳಿಯುತ್ತಿದ್ದಂತೆ ಆತನ ಗೆಳೆಯ ಹಾಗೂ ಖಾಲ್ರಾ ಪತ್ನಿ ಪರಮಜಿತ್ ಕೌರ್‌ ಅವರು ಪತಿ ಕಾಣೆಯಾದುದರ ಬಗ್ಗೆ ದೂರು ನೀಡಲು ಹೋದರು. ಪೊಲೀಸರು ನಿರ್ಲಕ್ಷಿಸಿದರು. ಪರಮಜಿತ್‌ ಕೌರ್‌ ಪತಿಗಾಗಿ ಬೀದಿಗಿಳಿದು ಹೋರಾಡಲಾರಂಭಿಸಿದರು. ದಿನ ಕಳೆದಂತೆ ಹೋರಾಟ ದೊಡ್ಡ ಮಟ್ಟದಲ್ಲಿ ನಡೆಯತೊಡಗಿತು.

2.5 ತಿಂಗಳು ಕಳೆದರೂ ಖಾಲ್ರಾ ಸುಳಿವು ಸಿಗಲೇ ಇಲ್ಲ. ನಂತರ ಪಂಜಾಬ್‌ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐ ಹೆಗಲಿಗೆ ನೀಡಿತು. ಸಿಬಿಐ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ಖಾಲ್ರಾ ಬಗ್ಗೆ ತನಿಖೆ ಆರಂಭಿಸಿದರು. ಪ್ರತ್ಯಕ್ಷ ಸಾಕ್ಷಿಗಳ ಮಾಹಿತಿಯು ಅವರಿಗೆ ದೊರಕಿತು. ಕೊನೆಗೆ ಖಾಲ್ರಾ ನಾಪತ್ತೆ ಹಿಂದೆ ಎಸ್‌ಎಸ್‌ಪಿ ಸುರ್ಜಿತ್ ಸಿಂಗ್ ಸುಗ್ಗಾ ಹಾಗೂ ಪೊಲೀಸ್‌ ಇಲಾಖೆಯ ಕೆಲವು ಅಧಿಕಾರಿಗಳ ಕೈವಾಡವಿದೆ ಎಂದು ತಿಳಿಯಿತು. ಈ ಎಲ್ಲಾ ಮಾಹಿತಿಯನ್ನು ಕಲೆಹಾಕಿ ಸಿಬಿಐ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. ವಿಚಾರಣೆ ಆರಂಭಿಸಿದ ನ್ಯಾಯಾಲಯ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಐವರು ಅಧಿಕಾರಿಗಳನ್ನು ಮುಂದಿನ ವಿಚಾರಣೆ ಬರುವವರೆಗೂ ಅಮಾನತು ಮಾಡಿ ಆದೇಶಿಸಿತು. ಈ ಮಧ್ಯೆ ಸಿಬಿಐಗೆ ದೊರೆತಿದ್ದ ಪ್ರತ್ಯಕ್ಷ ಸಾಕ್ಷಿಗಳ ಪೈಕಿ ಪೊಲೀಸರು ಒಬ್ಬರನ್ನು ಅದಾಗಲೇ ಉಗ್ರ ಎಂದು ಪಟ್ಟ ಕಟ್ಟಿ ಎನ್‌ಕೌಂಟರ್‌ ಮಾಡಿದ್ದರು. ಎಲ್ಲವನ್ನು ತನಿಖೆ ನಡೆಸಿದ್ದ ಸಿಬಿಐಗೆ ಖಾಲ್ರಾ ನಾಪತ್ತೆಯಾದ ಬಳಿಕ ಏನಾದ ಎಂಬ ಸಣ್ಣ ಕುರುಹು ಸಹ ದೊರೆತಿರಲಿಲ್ಲ. ಅದು ನಿಗೂಢವಾಗಿಯೇ ಉಳಿದಿತ್ತು.

ರಕ್ಷಿಸಬೇಕಾದ ಪೊಲೀಸರೇ ಭಕ್ಷಕರಾದರು!

ದಿನಕಳೆದಂತೆ ಸಿಬಿಐ ತನಿಖೆ ಇನ್ನು ಚುರುಕಾಯಿತು. ಸುರ್ಜಿತ್ ಸಿಂಗ್ ಸುಗ್ಗಾ ಅವರ ಕೈಕೆಳಗೆ ಕೆಲಸದಲ್ಲಿದ್ದ ಒಬ್ಬ ಸಾಮಾನ್ಯ ಅಧಿಕಾರಿ ಮೇಲೆ ಸಂಶಯ ಮೂಡಿ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಖಾಲ್ರಾ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ದೊರೆಯಲು ಶುರುವಾಯಿತು. ಖಾಲ್ರಾನನ್ನು ಯಾರು ಹೇಗೆ ಅಪಹರಿಸಿದರು, ಬಳಿಕ ಅವನನ್ನು ಎಲ್ಲಿಗೆ ಕರೆದುಕೊಂಡು ಹೋಗಲಾಯಿತು, ನಂತರ ನಡೆದಿದ್ದೇನು ಎಂಬ ಮಾಹಿತಿಯನ್ನು ಸಿಬಿಐ ಆತನಿಂದ ಕಲೆಹಾಕಿತು. ಆದರೆ ಆ ಸಾಕ್ಷಿದಾರನನ್ನು ಸುಪ್ರೀಂ ಕೋರ್ಟ್‌ನ ಕಟಕಟೆಯಲ್ಲಿ ನಿಲ್ಲಿಸಿ ನ್ಯಾಯಾಧೀಶರ ಮುಂದೆ ಸತ್ಯ ಹೇಳಿಸುವಲ್ಲಿ ಸಿಬಿಐ ವಿಫಲವಾಯಿತು. ಸಾಕ್ಷಿದಾರ ಪೊಲೀಸರ ಬೆದರಿಕೆಗೆ ಹೆದರಿ ಸುಳ್ಳು ಸಾಕ್ಷಿ ನುಡಿಯಬೇಕಾಯಿತು. ಮತ್ತೆ ಸಿಬಿಐ ಅದೇ ಸಾಕ್ಷಿದಾರನಿಂದ ಸತ್ಯ ಹೇಳಿಸಲು ನ್ಯಾಯಾಧೀಶರ ಮುಂದೆ ಹಾಜರುಪಡಿಸಿತು. ಅಲ್ಲಿ ಖಾಲ್ರಾ ಬಗ್ಗೆ ಆ ಸಾಕ್ಷಿದಾರ ನುಡಿದ ಸತ್ಯದ ಬಗ್ಗೆ ಕೇಳಿ ಕೋರ್ಟ್‌ನಲ್ಲಿ ನೆರೆದಿದ್ದವರೆಲ್ಲ ಬೆಚ್ಚಿಬಿದ್ದರು.

ಕೋರ್ಟ್‌ನಲ್ಲಿ ಜಡ್ಜ್‌ ಮುಂದೆ ಸಾಕ್ಷಿದಾರ ಹೇಳಿದ್ದೇನು?

ಖಾಲ್ರಾನನ್ನು ಎಸ್‌ಎಸ್‌ಪಿ ಸುರ್ಜಿತ್ ಸಿಂಗ್ ಸುಗ್ಗಾ ಹಾಗೂ ಇತರ ಪೊಲೀಸ್‌ ಅಧಿಕಾರಿಗಳು ಅಪಹರಿಸಿ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ತೀವ್ರವಾಗಿ ಚಿತ್ರಹಿಂಸೆ ನೀಡಿದರು. ಬಳಿಕ ಭೀಕರವಾಗಿ ಹಲ್ಲೆ ನಡೆಸಿ ಎನ್‌ಕೌಂಟರ್‌ ಮಾಡಿ ಸಾಯಿಸಿದರು. ಅವನ ಮೃತದೇಹವನ್ನು ಸಟ್ಲುಜ್‌ ಹಾಗೂ ಬಿಯಾಸ್ ನದಿ ಸಂಗಮವಾಗುವ ಹರಿಕೆ ಎಂಬಲ್ಲಿ ಬಿಸಾಕಿದ್ದರು. ಪಂಜಾಬ್ ಪೊಲೀಸ್ ಇಲಾಖೆಯ ಸಬ್‌ ಇನ್ಸ್‌ಪೆಕ್ಟರ್‌ಗಳಾದ ಸತ್ನಮ್‌ ಸಿಂಗ್‌, ಸುರೇಂದರ್‌ ಪಾಲ್‌ ಸಿಂಗ್, ಜಸ್‌ಬೀರ್‌ ಸಿಂಗ್‌ ಹಾಗೂ ಹೆಡ್‌ ಕಾನ್ಸ್‌ಸ್ಟೇಬಲ್‌ಗಳಾದ ಪ್ರೀತಿಪಾಲ್‌ ಸಿಂಗ್‌ ಹಾಗೂ ಮೆಹ್ತಾಬ್‌ ಸಿಂಗ್‌ ಅವರು ಜಸ್ವಂತ್‌ ಸಿಂಗ್‌ ಖಾಲ್ರಾ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ದೋಷಿಗಳೆಂದು ಮನಗಂಡ ನ್ಯಾಯಾಲಯ 2005-07ರ ವೇಳೆಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಮಾಹಿತಿ ಪ್ರಕಾರ ಈವರೆಗೂ ಜಸ್ವಂತ್‌ ಸಿಂಗ್‌ ಖಾಲ್ರಾ ಮೃತದೇಹ ಪತ್ತೆಯಾಗಿಲ್ಲ. ಪಂಜಾಬ್‌ನಲ್ಲಿ ಬಲಿಯಾದ ಅಮಾಯಕರ ಸಾವಿನ ಬಗ್ಗೆ ಇಂದಿಗೂ ಹೋರಾಟಗಳು ನಡೆಯುತ್ತಲೇ ಇವೆ.

ಈ ಸತ್ಯವನ್ನು ಜಗತ್ತಿಗೆ ತಿಳಿಸಲು ಸೆಟ್ಟೇರಿದ ಚಿತ್ರವೇ ಸಟ್ಲುಜ್‌. ಅಂದು ಪಂಜಾಬ್‌ನಲ್ಲಿ ನಡೆದಿದ್ದ ಅಮಾಯಕರ ಹತ್ಯೆ ಬಗ್ಗೆ ಸತ್ಯ ಹೇಳಲು ಹೊರಟ ಖಾಲ್ರಾ ನಾಪತ್ತೆಯಾದ. ಇಂದು ಖಾಲ್ರಾ ಬಗ್ಗೆ ಜನರಿಗೆ ತಿಳಿಸಲು ಬಂದ ಸಟ್ಲುಜ್‌ ಕೂಡ ನಾಪತ್ತೆಯಾಯಿತು!

ಜು.3ರಂದು ರಿಲೀಸ್‌, ಆದ್ರೆ 48 ಗಂಟೆಯಲ್ಲೇ ಬ್ಯಾನ್‌!

ಸಟ್ಲುಜ್‌ ಸಿನಿಮಾ ಬಿಡುಗಡೆಯಲ್ಲೇ ಹಲವಾರು ವಿಘ್ನಗಳನ್ನು ಎದುರಿಸಬೇಕಾಯಿತು. ಪ್ರಾರಂಭದಲ್ಲಿ ‘ಘಲ್ಲುಘೋರ’ ಎಂದು ಹೆಸರಿದ್ದ ಸಿನಿಮಾ ಕಾಲಕ್ರಮೇಣ ‘ಪಂಜಾಬ್‌ 95’ ಎಂದು ಬದಲಾಯಿತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ 2023ರಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್‌ ಮಂಡಳಿ 125ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಮಾಡಲು ಚಿತ್ರತಂಡಕ್ಕೆ ಸೂಚಿಸಿತ್ತು. ಆದರೆ ಚಿತ್ರತಂಡ ಆ ತಿದ್ದುಪಡಿಗಳನ್ನು ಒಪ್ಪದ ಕಾರಣ ಹಲವು ವರ್ಷಗಳ ಕಾಲ ಸಿನಿಮಾ ಬಿಡುಗಡೆಯಾಗಲಿಲ್ಲ. ಕೊನೆಗೂ ಸಟ್ಲುಜ್‌ ಹೆಸರಿನಲ್ಲಿ 2026ರ ಜು.3ರಂದು ಜೀ5ನಲ್ಲಿ ಬಿಡುಗಡೆಯಾಯಿತು. ಆದರೆ ರಿಲೀಸ್‌ ಆದ 48 ಗಂಟೆಗಳಲ್ಲೇ ಅದು ಒಟಿಟಿಯಿಂದ ಮಾಯವಾಯಿತು! ಈ ಚಿತ್ರವನ್ನು ಒಟಿಟಿಯಿಂದ ತೆಗೆದುಹಾಕಲ್ಪಟ್ಟ ಕಾರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಯಿತು. ಈ ವಿವಾದದಿಂದ ಚಿತ್ರ ಮತ್ತು ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನದ ಕುರಿತು ಸಾರ್ವಜನಿಕರಲ್ಲಿ ಮತ್ತಷ್ಟು ಆಸಕ್ತಿ ಮೂಡಿತು.

ಒಟಿಟಿಯಿಂದ ತೆಗೆಯಲು ಕಾರಣವೇನು?

ಸರ್ಕಾರದ ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ಕೆಲವು ಅಂಶಗಳನ್ನು ಭಾರತ ವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ತೆಗೆದುಹಾಕಲಾಯಿತು ಎಂದು ಹೇಳಲಾಗುತ್ತದೆ. ಮತ್ತೊಂದೆಡೆ ಸಿಬಿಎಫ್‌ಸಿ ಹೇಳಿದ ತಿದ್ದುಪಡಿಗಳನ್ನು ಚಿತ್ರತಂಡ ಅಳವಡಿಕೆ ಮಾಡಿಕೊಳ್ಳಲಿಲ್ಲ. ಹಾಗಾಗಿ ಚಿತ್ರ ಬಿಡುಗಡೆಯಾದ ಬಳಿಕ ಅದನ್ನು ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.

ಖ್ಯಾತ ಗಾಯಕ ದಿಲ್ಜಿತ್‌ ದೋಸಾಂಜ್‌, ಜಸ್ವಂತ್‌ ಸಿಂಗ್‌ ಖಾಲ್ರಾ ಪಾತ್ರದಲ್ಲಿ ಅಭಿನಯಿಸಿದ್ದು, ಅರ್ಜುನ್‌ ರಾಂಪಲ್‌ ಸೇರಿ ಹಲವು ಕಲಾವಿದರು ಪ್ರಮುಖ ಪಾತ್ರದಲ್ಲಿದ್ದಾರೆ. ಹನಿ ಟ್ರೆಹಾನ್ ನಿರ್ದೇಶಕರು. ಚಿತ್ರದಲ್ಲಿ ಮಾನವ ಹಕ್ಕುಗಳು, ನ್ಯಾಯ, ಧೈರ್ಯ ಮತ್ತು ಸತ್ಯದ ಮಹತ್ವವನ್ನು ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.

ಸಟ್ಲುಜ್‌ ಕೇವಲ ಒಂದು ಸಿನಿಮಾ ಅಲ್ಲ, ಸತ್ಯಕ್ಕಾಗಿ ಹೋರಾಡಿದ ವ್ಯಕ್ತಿಯ ಧೈರ್ಯ ಮತ್ತು ನ್ಯಾಯದ ಮಹತ್ವವನ್ನು ನೆನಪಿಸುವ ನೈಜ ಕಥನ. ಸಮಾಜದಲ್ಲಿ ಸತ್ಯವನ್ನು ಹೇಳುವ ಧೈರ್ಯ ಎಷ್ಟು ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂಬುದನ್ನು ಈ ಚಿತ್ರ ಮನಮುಟ್ಟುವ ರೀತಿಯಲ್ಲಿ ತೋರಿಸುತ್ತದೆ.