Asianet Suvarna News Asianet Suvarna News

ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ದೇಗುಲದ ಆವರಣವನ್ನು ತಿಕ್ಕಿತಿಕ್ಕಿ ತೊಳೆದ ನಟ ಜಾಕಿ ಶ್ರಾಫ್​

ದೇಗುಲಗಳ ಆವರಣವನ್ನು ಶುಚಿಗೊಳಿಸುವಂತೆ ಪ್ರಧಾನಿ ನರೇಂದ್ರ  ಮೋದಿಯವರ ಮನವಿಯ ಮೇರೆಗೆ ನಟ ಜಾಕಿ ಶ್ರಾಫ್​ ಕೂಡ ಈ ಪುಣ್ಯಕಾರ್ಯದಲ್ಲಿ ಭಾಗಿಯಾಗಿದ್ದು, ವಿಡಿಯೋ ವೈರಲ್ ಆಗಿದೆ.
 

Jackie Shroff cleans Mumbais oldest RamMandir ahead of Pran Pratishtha in Ayodhya suc
Author
First Published Jan 19, 2024, 5:01 PM IST

ಅಯೋಧ್ಯೆಯಲ್ಲಿನ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಇದೇ 22ರಂದು ನಡೆಯಲಿರುವ ಈ ಮಹಾನ್​ ಕಾರ್ಯಕ್ಕೆ ಭರ್ಜರಿ ತಯಾರಿ ನಡೆದಿದೆ. ಭಾರತ ಮಾತ್ರವಲ್ಲದೇ ಪ್ರಪಂಚದ ಹತ್ತಾರು ದೇಶಗಳು ಈ ಐತಿಹಾಸಿಕ ದಿನಕ್ಕಾಗಿ ಕಾದು ಕುಳಿತಿವೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪ್ರಾಣಪ್ರತಿಷ್ಠೆಯ ನೇರ ಪ್ರಸಾರಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಮೆರಿಕ ಒಂದರಲ್ಲಿಯೇ ಕನಿಷ್ಠ 100 ಕಡೆಗಳಲ್ಲಿ ಈ ಸಿದ್ಧತೆ ನಡೆಯುತ್ತಿರುವುದಾಗಿ ವರದಿಯಾಗಿದೆ. ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಪ್ರಪಂಚದ ವಿವಿಧ ದೇಶಗಳ ಗಣ್ಯಾತಿಗಣ್ಯರು ಭಾರತಕ್ಕೆ ಆಗಮಿಸಿ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳಲಿದ್ದಾರೆ.   ಇದಾಗಲೇ ಅಯೋಧ್ಯೆ ನಗರಿಯಲ್ಲಿ ಬಿರುಸಿನ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದು, ಎಲ್ಲೆಲ್ಲೂ ಶ್ರೀರಾಮನಾಮವೇ ಮೊಳಗುತ್ತಿದೆ. ಅಯೋಧ್ಯೆ ನವವಧುವಿನಂತೆ ಶೃಂಗಾರಗೊಂಡು ನಳನಳಿಸುತ್ತಿದೆ. ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ಕೆ ಇದಾಗಲೇ ಮನೆಮನೆಗೆ ತೆರಳಿ ಅಕ್ಷತೆ ನೀಡಿ ಆಮಂತ್ರಿಸುವ ಕಾರ್ಯವೂ ನಡೆಯುತ್ತಿದೆ. 500 ವರ್ಷಕ್ಕೂ ಅಧಿಕ ಕಾಲದ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ.

 ರಾಮಲಲ್ಲಾ ಪ್ರಾಣಪ್ರತಿಷ್ಠಪನಾ ಕಾರ್ಯದ ಹಿನ್ನೆಲೆಯಲ್ಲಿ ಇದಾಗಲೇ ಪ್ರಧಾನಿ ನರೇಂದ್ರ ಮೋದಿಯವರು 11 ದಿನಗಳ ಉಪವಾಸವನ್ನೂ ಕೈಗೊಂಡಿದ್ದಾರೆ. ಅದೇ ಇನ್ನೊಂದೆಡೆ ತಮ್ಮ ತಮ್ಮ ಪ್ರದೇಶದ ವ್ಯಾಪ್ತಿಯಲ್ಲಿನ ದೇಗುಲಗಳ ಸ್ವಚ್ಛತೆಗೆ ಪ್ರಧಾನಿಯವರು ಇದಾಗಲೇ ಕರೆ ನೀಡಿದ್ದಾರೆ. ಖುದ್ದು ದೇಗುಲದ ಆವರಣವನ್ನು ಶುಚಿಗೊಳಿಸುವ ಮೂಲಕ ಪ್ರಧಾನಿಯವರು ಎಲ್ಲರೂ ಈ ಕಾರ್ಯಕ್ಕೆ ಕೈಜೋಡಿ ದೇಗುಲಗಳ ಆವರಣವನ್ನು ಶುಚಿಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿ ಇದಾಗಲೇ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಸೇರಿದಂತೆ, ಲಕ್ಷಾಂತರ ಮಂದಿ ದೇಗುಲಗಳ ಆವರಣ ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 

ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಅಯೋಧ್ಯೆ ನೆಲದಲ್ಲಿ ಅಂದಿನ ರಾಮ, ಲಕ್ಷ್ಮಣ, ಸೀತಾಮಾತೆ...

 ಇದೀಗ ಬಾಲಿವುಡ್​ ನಟ ಜಾಕಿ ಶ್ರಾಫ್​ ಅವರು  ಮುಂಬೈನ ಬಹು ಪುರಾತನ ಶ್ರೀರಾಮನ ದೇಗುಲದ ಶುಚಿ ಮಾಡಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ರಾಮ ಮಂದಿರದ ಮೆಟ್ಟಿಲುಗಳನ್ನು ಶ್ರದ್ಧೆಯಿಂದ ಉಜ್ಜಿ ಉಜ್ಜಿ ತೊಳೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇದರಲ್ಲಿ ನಟ ಅತ್ಯಂತ ಶ್ರದ್ಧೆಯಿಂದ ಪ್ರತಿ ಮೆಟ್ಟಿಲುಗಳನ್ನು ಬ್ರಷ್‌ನಿಂದ ಉಜ್ಜಿ ಉಜ್ಜಿ ತೊಳೆಯುವುದನ್ನು ನೋಡಬಹುದು.  ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಇಂಥ ಕಾರ್ಯದಲ್ಲಿ ತೊಡಗುವುದು ಇತರರಿಗೂ ಸ್ಫೂರ್ತಿ ಎನ್ನುತ್ತಿದ್ದಾರೆ. 

ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಅಯೋಧ್ಯೆಯ ಈ ಐತಿಹಾಸಿಕ ಕ್ಷಣಕ್ಕೆ ಖುದ್ದು ಹಾಜರಿದ್ದು ಸಾಕ್ಷಿಯಾಗಲಿದ್ದಾರೆ. ಇಂಥದ್ದೊಂದು ಐತಿಹಾಸಿಕ ಕ್ಷಣವನ್ನು ಮನೆಯಲ್ಲಿಯೇ ಕುಳಿತು ನೇರಪ್ರಸಾರವನ್ನು ವೀಕ್ಷಿಸುವ ಮೂಲಕ ಎಲ್ಲರೂ ಕಣ್​ತುಂಬಿಸಿಕೊಳ್ಳಬಹುದಾದರೂ, ಸ್ಥಳದಲ್ಲಿಯೇ ಇದ್ದು, ಈ ಪುಣ್ಯಕಾರ್ಯಕ್ಕೆ ಸಾಕ್ಷಿಯಾಗುವ ಅನುಭೂತಿಯೇ ಬೇರೆ. ಇದಾಗಲೇ ಹಲವಾರು ಕ್ಷೇತ್ರಗಳ ಗಣ್ಯರಿಗೆ ಅಂದು ಆಮಂತ್ರಣ ನೀಡಲಾಗಿದೆ. ಸ್ಥಳಾವಕಾಶದ ಕೊರತೆಯಿಂದಾಗಿ ಆಯ್ದ ಕೆಲವರಿಗೆ ಅಯೋಧ್ಯೆಗೆ ಬರಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ವತಿಯಿಂದ ಆಮಂತ್ರಣ ನೀಡಲಾಗಿದೆ. ಇದರಲ್ಲಿ ವಿದೇಶಗಳ ಹಲವು ಗಣ್ಯರೂ ಇದ್ದರೆ, ಭಾರತದಿಂದ ಸಿನಿಮಾ, ಕ್ರೀಡೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಇನ್ನು ಸಿನಿಮಾ ಮತ್ತು ಕ್ರೀಡಾ ಕ್ಷೇತ್ರದಿಂದ ಆಮಂತ್ರಿತರಾಗಿರುವವರ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ,  ಆಲಿಯಾಭಟ್, ರಣಬೀರ್ ಕಪೂರ್, ಅಮಿತಾಭ್​ ಬಚ್ಚನ್, ರಜನಿಕಾಂತ್, ಜಾಕಿಶ್ರಾಫ್, ಪ್ರಭಾಸ್, ಧನುಷ್, ರಣದೀಪ್ ಹೂಡಾ, ಕಂಗನಾ ರಣಾವತ್, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಅಕ್ಷಯ್​ ಕುಮಾರ್​,  1987-88ರಲ್ಲಿ ಪ್ರಸಾರ ಆಗುತ್ತಿದ್ದ ರಾಮಾಯಣದಲ್ಲಿ ರಾಮ-ಸೀತೆ ಪಾತ್ರಧಾರಿಯಾಗಿದ್ದ ಅರುಣ್​ ಗೋವಿಲ್​ ಹಾಗೂ  ದೀಪಿಕಾ ಚಿಖಲಿಯಾ ಅವರಿಗೆ ಆಮಂತ್ರಣ ಹೋಗಿದೆ. 
ರಾಮ ಭಕ್ತರ ಆಸೆ ಕೊನೆಗೂ ಈಡೇರಿಸಿದ ಡಾ.ಬ್ರೋ: ರಾಮಲಲ್ಲಾ ಮಂದಿರದ ಮುಖ್ಯದ್ವಾರದಲ್ಲಿ ಗಗನ್​ ವಿವರಣೆ...

Follow Us:
Download App:
  • android
  • ios