ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಅಯೋಧ್ಯೆ ನೆಲದಲ್ಲಿ ಅಂದಿನ ರಾಮ, ಲಕ್ಷ್ಮಣ, ಸೀತಾಮಾತೆ...
80ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರ ಆಗುತ್ತಿದ್ದ ರಾಮಾಯಣದಲ್ಲಿನ ರಾಮ,ಸೀತೆ ಮತ್ತು ಲಕ್ಷ್ಮಣ ಪಾತ್ರಧಾರಿಗಳು ಅಯೋಧ್ಯೆ ತಲುಪಿದ್ದು, ಅದರ ವಿಡಿಯೋ ವೈರಲ್ ಆಗುತ್ತಿದೆ.
ಅಯೋಧ್ಯೆಯಲ್ಲಿ, ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ಕೆ ಶ್ರೀರಾಮ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಜನವರಿ 22ರ ಐತಿಹಾಸಿಕ ದಿನಕ್ಕಾಗಿ ಕೋಟ್ಯಂತರ ಮಂದಿ ಕಾದು ಕುಳಿತಿದ್ದಾರೆ. ಅಂದು ರಾಮನಿಗೆ ನಡೆಯಲಿರುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಕಣ್ತುಂಬಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದಾಗಲೇ ಅಯೋಧ್ಯೆ ನಗರಿಯಲ್ಲಿ ಬಿರುಸಿನ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದು, ಎಲ್ಲೆಲ್ಲೂ ಶ್ರೀರಾಮನಾಮವೇ ಮೊಳಗುತ್ತಿದೆ. ಅಯೋಧ್ಯೆ ನವವಧುವಿನಂತೆ ಶೃಂಗಾರಗೊಂಡು ನಳನಳಿಸುತ್ತಿದೆ. ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ಕೆ ಇದಾಗಲೇ ಮನೆಮನೆಗೆ ತೆರಳಿ ಅಕ್ಷತೆ ನೀಡಿ ಆಮಂತ್ರಿಸುವ ಕಾರ್ಯವೂ ನಡೆಯುತ್ತಿದೆ. 500 ವರ್ಷಕ್ಕೂ ಅಧಿಕ ಕಾಲದ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ. ಶ್ರೀರಾಮನ ದರ್ಶನದ ದಿನಕ್ಕೆ ಇನ್ನೇನು ಬೆರಳೆಣಿಕೆಯಷ್ಟು ದಿನ ಇರುವ ಬೆನ್ನಲ್ಲೇ ಹಲವಾರು ಮಂದಿಗೆ ಇದರ ಆಮಂತ್ರಣ ಪತ್ರಿಕೆಯೂ ತಲುಪಿದೆ. ಅದೇ ರೀತಿ 1987- 88ರಲ್ಲಿ ದೂರದರ್ಶನ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ಪ್ರಸಿದ್ಧ ಧಾರಾವಾಹಿ ‘ರಾಮಾಯಣ’ದ (Ramayana) ರಾಮ, ಸೀತೆ ಮತ್ತು ಲಕ್ಷ್ಮಣ ಪಾತ್ರಧಾರಿಗಳಿಗೂ ಆಹ್ವಾನ ಹೋಗಿದೆ.
80ರ ದಶಕದ ಬಳಿಕ ಅದೆಷ್ಟೋ ರಾಮಾಯಣ ಸೀರಿಯಲ್ಗಳು, ಅದ್ಧೂರಿ ಬಜೆಟ್ನ ಸಿನಿಮಾಗಳು ಬಂದು ಹೋದರೂ ಆ ದಿನಗಳ ‘ರಾಮಾಯಣ’ (Ramayana) ಮಾತ್ರ ಇಂದಿಗೂ ಜನಮಾನಸದಲ್ಲಿ ಹಾಸುಹೊಕ್ಕಾಗಿ ಬಿಟ್ಟಿದೆ. ಈಗಿನಷ್ಟು ತಂತ್ರಜ್ಞಾನ ಇಲ್ಲದಿದ್ದರೂ ರಾಮಾಯಣ ಮತ್ತು ಮಹಾಭಾರತದಲ್ಲಿ ಅಳವಡಿಸಿಕೊಂಡ ತಂತ್ರಜ್ಞಾನಕ್ಕೆ ಪ್ರೇಕ್ಷಕ ವರ್ಗ ಫಿದಾ ಆಗಿತ್ತು. ಅಂದು ಎಷ್ಟೋ ಮನೆಗಳಲ್ಲಿ ಟಿ.ವಿಗಳೇ ಇರಲಿಲ್ಲ. ಕಲರ್ ಟಿ.ವಿ ಅಂತೂ ಎಷ್ಟೋ ಕುಟುಂಬಗಳಿಗೆ ಕನಸಿನ ಮಾತೇ ಆಗಿತ್ತು. ಹಾಗಿದ್ದರೂ ಬ್ಲ್ಯಾಕ್ ಆ್ಯಂಡ್ ವೈಟ್ ಟಿ.ವಿಯಲ್ಲಿ ಈ ಧಾರಾವಾಹಿಗಳನ್ನು ನೋಡಿ ಖುಷಿ ಪಟ್ಟವರು ಕೋಟ್ಯಂತರ ಮಂದಿ. ಆ ಸಮಯದಲ್ಲಿ ರಾಮಾಯಣ ಧಾರಾವಾಹಿಯನ್ನು ನೋಡುವುದಕ್ಕಾಗಿ ಪ್ರತಿ ಭಾನುವಾರ ಎಷ್ಟೋ ದೂರದ ಮನೆಗಳಿಗಳಿಗೆ ಹೋಗಿ ನೋಡಿದವರೂ ಇದ್ದಾರೆ. ಅಷ್ಟೊಂದು ರೀತಿಯಲ್ಲಿ ಈ ಧಾರಾವಾಹಿ (Serial) ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು.
ಬಹುತೇಕ ಮನೆಗಳಲ್ಲಿ, ಈ ಧಾರಾವಾಹಿ ಶುರುವಾಗುವ ಪೂರ್ವದಲ್ಲಿ ಟಿ.ವಿಗೆ ಹಾರ ಹಾಕಿ ಪೂಜೆ ಮಾಡಿದವರೂ ಇದ್ದಾರೆ. ಇಲ್ಲಿಯ ಪಾತ್ರಧಾರಿಗಳನ್ನು ನಿಜವಾಗಿ ದೇವತೆಗಳು ಎಂದು ನಂಬಿದ್ದರು . ರಾಮ, ಲಕ್ಷ್ಮಣ, (Lakshmana) ಸೀತೆ, ಹನುಮಂತನ ಪಾತ್ರಧಾರಿಗಳಿಗೆ ಆಗ ವಿಶೇಷ ಮಾನ್ಯತೆ ನೀಡಲಾಗುತ್ತಿತ್ತು. ರಾಮನ ಪಾತ್ರಧಾರಿಯಾಗಿದ್ದ ಅರುಣ್ ಗೋವಿಲ್, ಸೀತೆಯ ಪಾತ್ರಧಾರಿ ದೀಪಿಕಾ ಚಿಖಲಿಯಾ(Deepika Chikhalia) , ಲಕ್ಷ್ಮಣನಾಗಿದ್ದ ಸುನಿಲ್ ಲಹರಿ, ಹನುಮಂತನಾಗಿದ್ದ ಧಾರಾ ಸಿಂಗ್ (Dhara singh) ಅವರನ್ನು ಖುದ್ದು ದೇವರೆಂದು ಪೂಜಿಸಿದ್ದಾರೆ. ಅವರು ಹೋದ ಕಡೆಗಳಲ್ಲಿ ದೇವರೇ ಮನೆಗೆ ಬಂದವಂತೆ ಪೂಜೆ, ಪುನಸ್ಕಾರ ಮಾಡಿದ್ದಾರೆ. ಅದೇ ರೀತಿ ರಾವಣನ ಪಾತ್ರಧಾರಿಯಾಗಿದ್ದ ಅರವಿಂದ್ ತ್ರಿವೇದಿಯವರು ನಿಜ ಜೀವನದಲ್ಲಿಯೂ ಕೆಟ್ಟವರೆಂದು ಬಿಂಬಿಸಿದವರೂ ಇದ್ದಾರೆ. ಅಷ್ಟು ಈ ಪಾತ್ರಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದವು.
ಇದೀಗ ರಾಮ (ಅರುಣ್ ಗೋವಿಲ್), ಸೀತೆ (ದೀಪಿಕಾ ಚಿಖಲಿಯಾ) ಮತ್ತು ಲಕ್ಷ್ಮಣ (ಸುನಿಲ್ ಲಹರಿ) ಅವರು ಅಯೋಧ್ಯೆಯನ್ನು ತಲುಪಿದ್ದಾರೆ. ಅಲ್ಲಿ ಜನರು ಅವರನ್ನು ಕೈಮುಗಿದು ಸ್ವಾಗತಿಸಿದರು. ಇದರ ವಿಡಿಯೋ ಸಕತ್ ವೈರಲ್ ಆಗುತ್ತಿದೆ. ಈ ಧಾರಾವಾಹಿ ಬಂದು 37 ವರ್ಷಗಳೇ ಕಳೆದಿವೆ. ಇದೀಗ ಅರುಣ್ ಗೋವಿಲ್ ಅವರಿಗೆ 65 ವರ್ಷ ವಯಸ್ಸು, ದೀಪಿಕಾ ಅವರಿಗೆ 58 ವರ್ಷ ಹಾಗೂ ಸುನಿಲ್ ಅವರಿಗೆ 63 ವರ್ಷ ವಯಸ್ಸು. ಇವರೆಲ್ಲರೂ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದು, ಕೆಲವರು ಭಕ್ತಿ ಭಾವದಿಂದ ಇವರನ್ನು ಸ್ವಾಗತಿಸಿದರು.