Asianet Suvarna News Asianet Suvarna News

ಕಾಶ್ಮೀರ್ ಫೈಲ್ಸ್ 'ವಲ್ಗರ್'- 'Propaganda' ಮೂವಿಯಾ? ಕಾಶ್ಮೀರಿ ಪಂಡಿತರು ಏನಂತಾರೆ?

ಕಾಶ್ಮೀರ ಫೈಲ್ಸ್ ಚಿತ್ರ ಅಲ್ಲಿ ನಡೆದ ಘಟನೆಗಳ ಪ್ರಾಮಾಣಿಕ ಅಭಿವ್ಯಕ್ತಿಯೇ, ಅಥವಾ ಹಳೆಯ ಗಾಯವನ್ನು ಮತ್ತೆ ಕೆರಳಿಸುವ ಪ್ರಯತ್ನವೇ? ಕಾಶ್ಮೀರಿ ಪಂಡಿತರು ಇದಕ್ಕೆ ಏನಂತಾರೆ? 1990ರ ದಶಕದಲ್ಲಿ ಅಲ್ಲಿನ ಹಿಂಸೆಯಲ್ಲಿ ಬೆಂದ ಕಾಶ್ಮೀರಿ ಪಂಡಿತರ ನಂತರದ ತಲೆಮಾರಿನವರು ಇದಕ್ಕೆ ಏನಂತಾರೆ?

is it kashmir files movie vulgur and propaganad, what kashmiri pundits say
Author
First Published Dec 25, 2022, 4:33 PM IST

ಕಾಶ್ಮೀರ್ ಫೈಲ್ಸ್ ಫಿಲಂ (Kashmir files) ಬಂದು ಹತ್ತಿರಹತ್ತಿರ ಒಂದು ವರ್ಷವಾಗುತ್ತಿದೆ. ಆದರೆ ಅದು ಮತ್ತೆ ಮತ್ತೆ ಸದ್ದು ಉಂಟುಮಾಡುತ್ತಲೇ ಇದೆ. ಇತ್ತೀಚೆಗೆ ಭಾರತದಲ್ಲಿ ನಡೆದ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ (International Film Festival) ಇಸ್ರೇಲಿ ಫಿಲಂ ಮೇಕರ್ ನಡಾವ್ ಲ್ಯಾಪಿಡ್ ಅವರು 'ಇದೊಂದು ವಲ್ಗರ್, ಪ್ರೊಪಗಾಂಡ ಸಿನಿಮಾ' ಎಂದಿದ್ದರು. 'ಇಷ್ಟೊಂದು ಘನತೆಯುಳ್ಳ ಫಿಲಂ ಫೆಸ್ಟಿವಲ್‌ನಲ್ಲಿ ಕಲೆ ಹಾಗೂ ಬದುಕಿನ ಬಗ್ಗೆ ವಿಮರ್ಶಾತ್ಮಕ ಚರ್ಚೆ ನಡೆಯಬೇಕು. ಆದರೆ ಸ್ಪರ್ಧಾತ್ಮಕ ಹಿನ್ನೆಲೆಯಿರುವ ಈ ಫೆಸ್ಟಿವಲ್‌ನಲ್ಲಿ ಇಂಥ ಚಿತ್ರಗಳು ಪ್ರದರ್ಶನವಾಗುವದು ಶೋಭೆಯಲ್ಲ' ಎಂದಿದ್ದರು. ಒಂಬತ್ತು ದಿನಗಳ ಫಿಲಂ ಪೆಸ್ಟಿವಲ್‌ನ ಕೊನೆಯ ದಿನ ಅವರು ಆಡಿದ ಈ ಮಾತು ದೊಡ್ಡ ಕೋಲಾಹಲ ಎಬ್ಬಿಸಿತ್ತು. ನಂತರ ಇದು ಇಸ್ರೇಲ್ ಹಾಗೂ ಭಾರತದ ನಡುವೆ ರಾಜತಾಂತ್ರಿಕ ಕಿರಿಕಿರಿಗೂ ಕಾರಣವಾಗಿ, ಇಸ್ರೇಲಿ ರಾಯಭಾರಿ ಭಾರತೀಯರ ಕ್ಷಮೆಯಾಚಿಸಿದ್ದರು. 

ಹಾಗಾದರೆ ಕಾಶ್ಮೀರ ಫೈಲ್ಸ್ ಚಿತ್ರ ಅಲ್ಲಿ ನಡೆದ ಘಟನೆಗಳ ಪ್ರಾಮಾಣಿಕ ಅಭಿವ್ಯಕ್ತಿಯೇ, ಅಥವಾ ಹಳೆಯ ಗಾಯವನ್ನು ಮತ್ತೆ ಕೆರಳಿಸುವ ಪ್ರಯತ್ನವೇ? ಕಾಶ್ಮೀರಿ ಪಂಡಿತರು ಇದಕ್ಕೆ ಏನಂತಾರೆ? 1990ರ ದಶಕದಲ್ಲಿ ಅಲ್ಲಿನ ಹಿಂಸೆಯಲ್ಲಿ ಬೆಂದ ಕಾಶ್ಮೀರಿ ಪಂಡಿತರ ನಂತರದ ತಲೆಮಾರಿನವರನ್ನು ಮಾತನಾಡಿಸಿದಾಗ ಬಂದ ಉತ್ತರಗಳು ಇಲ್ಲಿವೆ. 

'ಕಾಶ್ಮೀರಿ ಫೈಲ್ಸ್‌ನಲ್ಲಿ ಅಷ್ಟೂ ಸತ್ಯವನ್ನೇ ತೋರಿಸಲಾಗಿದೆ. ನಮ್ಮ ಹಿರಿಯರು ಅವರು ಕಂಡಿದ್ದನ್ನು ನಮಗೆಲ್ಲಾ ಹೇಳಿದ ಪ್ರಕಾರ, ಏನು ನಡೆಯಿತೋ ಅದೆಲ್ಲಾ ಆ ಫಿಲಂನಲ್ಲಿದೆ. ಆದರೆ ಮಿಸ್ಸಿಂಗ್ ಆಗಿರುವ ಅಂಶ ಎಂದರೆ, ಕಾಶ್ಮೀರದ ಮುಸ್ಲಿಮರು ಸರಕಾರ ಹಾಗೂ ಮಿಲಿಟರಿಯ ಕಡೆಯಿಂದ ಅನುಭವಿಸಿರುವ ಹಿಂಸೆ. ನಾನು ಸ್ವತಃ ನೋಡಿದಂತೆ, ಚಿತ್ರದಲ್ಲಿ ನಡೆದ ಹಿಂಸಾತ್ಮಕ ಸಂಗತಿಗಳಷ್ಟೂ ನಿಜ. ಅದಕ್ಕಿಂತಲೂ ಹೆಚ್ಚಿನ ಕ್ರೌರ್ಯವೂ ನಡೆದಿದೆ. ದಕ್ಷಿಣ ಕಾಶ್ಮೀರದ ನದಿಮಾರ್ಗ್ ಎಂಬಲ್ಲಿ ಇಡೀ ಕಾಶ್ಮೀರಿ ಪಂಡಿತರ ಗ್ರಾಮವನ್ನೇ ಮುಸ್ಲಿಂ ಉಗ್ರರು ನಾಶ ಮಾಡಿದ್ದರು. ಎರಡು ಡಜನ್ ಮಂದಿಯನ್ನು ಕೊಲ್ಲಲಾಗಿತ್ತು. ನಾವು ಅಲ್ಲಿ ಹೋದಾಗ ನೋಡಿದ ದೃಶ್ಯವನ್ನು ಎಂದೂ ಮರೆಯಲಾರೆ,' ಎನ್ನುತ್ತಾರೆ ಸಂದೀಪ್ ಕೌಲ್ ಎಂಬ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್. ಅವರು ಶ್ರೀನಗರದಲ್ಲಿ ನೆಲೆಸಿದ್ದಾರೆ. 

'ಕಾಶ್ಮೀರ್ ಫೈಲ್ಸ್ ಗಾರ್ಬೇಜ್' ಎಂದ ನಿರ್ದೇಶಕನಿಗೆ ವಿವೇಕ್ ಅಗ್ನಿಹೋತ್ರಿ ಖಡಕ್ ತಿರುಗೇಟು

'ಸಿನಿಮಾಗೆ ಹೋಗೋಣ ಎಂದು ಹೇಳಿದಾಗ ನನ್ನ ತಾಯಿ ಮೊದಲಿಗೆ ಒಪ್ಪಲಿಲ್ಲ. ನನ್ನ ತಂದೆ- ತಾಯಿ ಇಬ್ಬರಿಗೂ ಅದರ ಬಗ್ಗೆ ಮಿಶ್ರ ಭಾವನೆ ಇದೆ. ನಂತರ ಜಮ್ಮುವಿನಲ್ಲಿ ಥಿಯೇಟರ್‌ನಲ್ಲಿ ಇಬ್ಬರೂ ಆ ಸಿನಿಮಾ ನೋಡಿದರು. ಅವರಿಬ್ಬರೂ 1990ರಲ್ಲಿ ಕಾಶ್ಮೀರ ಬಿಟ್ಟು ಜಮ್ಮುವಿಗೆ ಬಂದಿದ್ದರು. ಆದರೆ ತಾಯಿಯ ಸಹೋದರನನ್ನು ನಡುದಾರಿಯಲ್ಲಿ ಉಗ್ರರು ಬರ್ಬರವಾಗಿ ಹತ್ಯೆ ಮಾಡಿದರು. ಅದೇ ಅವರು ಕಾಶ್ಮೀರ ಬಿಡಲು ಕಾರಣವಾಯಿತು. ಹೀಗಾಗಿ ತಾಯಿಗೆ ಈ ಚಿತ್ರದ ಬಗ್ಗೆ ಭಾವನಾತ್ಮಕ ಕನೆಕ್ಷನ್ (Emotionally Connected) ಉಂಟಾಯಿತು. ಇಂಥ ಹತ್ಯೆಗಳ ನೋವು ಕಾಶ್ಮೀರಿ ಪಂಡಿತರ ಮನಸ್ಸಿನಲ್ಲಿ ಇಂದಿಗೂ ಉಳಿದೇ ಇದೆ. ಹೀಗಾಗಿ ಪಂಡಿತರು ಈ ಚಿತ್ರ ನೋಡಿದಾಗ ಕನೆಕ್ಟ್ ಆಗುತ್ತಿದ್ದಾರೆ. ತಾಯಿ ಈ ಚಿತ್ರವನ್ನು ಪೂರ್ತಿ ಬೆಂಬಲಿಸುತ್ತಾರೆ. ಆದರೆ ತಂದೆಗೆ ಕಾಶ್ಮೀರ ಕಣಿವೆಯಲ್ಲಿ ತುಂಬಾ ಮುಸ್ಲಿಂ ಮಿತ್ರರಿದ್ದಾರೆ. ಸಿನಿಮಾದಲ್ಲಿ ಸುಮಾರು ಅರ್ಧ ಸತ್ಯಗಳನ್ನು ತೋರಿಸಲಾಗಿದೆ ಎಂಬುದು ಅವರ ಅಭಿಪ್ರಾಯ'' ಎಂದು ವಿಭಾ ಪಂಡಿತ ಎಂಬ ಕಾಶ್ಮೀರಿ ಪಂಡಿತ ಕುಟುಂಬದ ಪತ್ರಿಕೋದ್ಯಮಿ ನುಡಿಯುತ್ತಾರೆ.

'ನನ್ನ ಕುಟುಂಬ 1990ರಲ್ಲಿ ಹತ್ಯಾಕಾಂಡ ಆರಂಭವಾಗುವ ಮುನ್ನವೇ ಕಾಶ್ಮೀರ ಕಣಿವೆ ಬಿಟ್ಟು ಹೊರಬಂತು. ಹೀಗಾಗಿ ಅವರು ನೇರವಾಗಿ ಕಗ್ಗೊಲೆಯ ಫಲಾನುಭವಿಗಳಾಗಿರಲಿಲ್ಲ. ಆದರೆ ಅವರ ಸಂಬಂಧಿಗಳ ಹತ್ಯೆಯಾಗಿತ್ತು.  ನಾನು ಒಟಿಟಿಯಲ್ಲಿ ಈ ಫಿಲಂ ನೋಡಿದೆ. ಇದರಲ್ಲಿ ಕೆಲವು ಘಟನೆಗಳು ನಡೆದಿರುವುದು ನಿಜ. ಆದರೆ ಇಡಿಯಾಗಿ ಕಾಶ್ಮೀರದ ಮುಸ್ಲಿಂ ಸಮುದಾಯವನ್ನು ಖಳರೆಂದು ಬಿಂಬಿಸಲಾಗಿದೆ. ಆದರೆ ಅವರು ಕೂಡ, ಆಗಲೂ ಮತ್ತು ಈಗಲೂ, ಹಿಂಸೆಯನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಮರೆಯುವಂತಿಲ್ಲ. ಇದನ್ನೆಲ್ಲ ಆ ಫಿಲಂನಲ್ಲಿ ಚಿತ್ರಿಸಿಲ್ಲ. ನನ್ನ ಅಜ್ಜನಂಥ ಕೆಲವರು ಇಂದಿಗೂ ಕಾಶ್ಮೀರಿ ಮುಸ್ಲಿಮರ ಜತೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಇಂಥ ಆತ್ಮೀಯತೆಯನ್ನು ಈ ಫಿಲಂ ಕೆಡಿಸುವಂತಿದೆ ಹೊರತು, ಉಭಯ ಕಡೆಗಳಿಗೂ ಸೇತುವೆ ನಿರ್ಮಿಸಲು ನೆರವಾಗುವಂತಿಲ್ಲ'' ಎಂದು ಅಯೂಷಾ ಕೌಲ್ ಎಂಬ ಪಿಎಚ್‌ಡಿ ವಿದ್ಯಾರ್ಥಿಯೊಬ್ಬರು ಹೇಳುತ್ತಾರೆ.  

ವೈ ಭದ್ರತೆಯಲ್ಲಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಾಕಿಂಗ್; ಹಿಗ್ಗಾಮುಗ್ಗಾ ಟ್ರೋಲ್

Follow Us:
Download App:
  • android
  • ios