ಭಾರತೀಯ ಚಿತ್ರರಂಗದ 'ಅಧಿಪತಿ', ಸ್ಟೈಲ್ ಎನ್ನುವ ಪದಕ್ಕೆ ಹೊಸ ವ್ಯಾಖ್ಯಾನ ಬರೆದ ಸೂಪರ್ ಸ್ಟಾರ್ ರಜನಿಕಾಂತ್ ಕಂಡ್ರೆ ಇಡೀ ವಿಶ್ವವೇ ಎದ್ದು ನಿಲ್ಲುತ್ತೆ. ಆದರೆ, ಈ ಬೆಳ್ಳಿಪರದೆಯ ದೈತ್ಯ ನಟನ ಒಳಗೆ ಒಬ್ಬ ಸಾಧಾರಣ ಬೆಂಗಳೂರಿನ ಹುಡುಗ ಸದಾ ಜೀವಂತವಾಗಿದ್ದಾನೆ ಎಂಬುದಕ್ಕೆ ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದೇ ಸಾಕ್ಷಿ.
ನಾನು ಈಗಲೂ ಆ ಹಳೇ ಬೆಂಗಳೂರು ಹುಡುಗನೇ..!

ಭಾರತೀಯ ಚಿತ್ರರಂಗದ 'ಅಧಿಪತಿ', ಸ್ಟೈಲ್ ಎನ್ನುವ ಪದಕ್ಕೆ ಹೊಸ ವ್ಯಾಖ್ಯಾನ ಬರೆದ ಸೂಪರ್ ಸ್ಟಾರ್ ರಜನಿಕಾಂತ್ ಕಂಡ್ರೆ ಇಡೀ ವಿಶ್ವವೇ ಎದ್ದು ನಿಲ್ಲುತ್ತೆ. ಆದರೆ, ಈ ಬೆಳ್ಳಿಪರದೆಯ ದೈತ್ಯ ನಟನ ಒಳಗೆ ಒಬ್ಬ ಸಾಧಾರಣ ಬೆಂಗಳೂರಿನ ಹುಡುಗ ಸದಾ ಜೀವಂತವಾಗಿದ್ದಾನೆ ಎಂಬುದಕ್ಕೆ ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದೇ ಸಾಕ್ಷಿ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ 'ಆರ್ಟ್ ಆಫ್ ಲಿವಿಂಗ್' ಆಶ್ರಮದಲ್ಲಿ ನಡೆದ ಸತ್ಸಂಗದಲ್ಲಿ ರಜನಿ ಅವರು ಆಡಿದ ಮಾತುಗಳು ಈಗ ಕನ್ನಡಿಗರ ಹೃದಯ ಗೆಲ್ಲುತ್ತಿವೆ.
ಗುರೂಜಿಯವರ 'ಆರ್ಡರ್' ಮತ್ತು ಆ 15 ಸಾವಿರ ಜನ!
ಆಧ್ಯಾತ್ಮಿಕತೆಯ ಮೇಲೆ ಅಪಾರ ನಂಬಿಕೆ ಹೊಂದಿರುವ ರಜನಿಕಾಂತ್ ಅವರು ಗುರೂಜಿ ಪಕ್ಕದಲ್ಲೇ ಕುಳಿತು ತಮ್ಮ ಭೇಟಿಯ ರಹಸ್ಯ ಬಿಚ್ಚಿಟ್ಟರು. "ನನಗೆ ಶೂಟಿಂಗ್ ಇಲ್ಲದಿದ್ದಾಗ, ಫ್ರೀ ಇದ್ರೆ 10 ನಿಮಿಷ ಬರುವುದಕ್ಕೆ ಆಗುತ್ತಾ ಎಂದು ಗುರೂಜಿಯವರು ಕೇಳಿದ್ದಾರೆ. ಅವರು ಕೇಳಿದ ಮೇಲೆ ಇಲ್ಲ ಎನ್ನಲು ಸಾಧ್ಯವೇ? ಅದು ಅವರ ಆರ್ಡರ್ ಅಂದುಕೊಂಡು ನಾನು ಬಂದೆ" ಎಂದು ರಜನಿ ಹಸನ್ಮುಖಿಯಾಗಿ ಹೇಳಿದರು. 'ಸಾಮಾನ್ಯವಾಗಿ ಸತ್ಸಂಗ ಅಂದ್ರೆ 50-60 ಜನ ಇರುತ್ತಾರೆ ಎಂದುಕೊಂಡಿದ್ದೆ. ಆದ್ರೆ ಇಲ್ಲಿ 10 ರಿಂದ 15 ಸಾವಿರ ಜನರಿದ್ದೀರಿ' ಎಂದು ಹೇಳಿದ್ದಾರೆ ನಟ ರಜನಿಕಾಂತ್.
ಹೌದು, ತಲೈವಾ ಅವರಿಗೆ ಅಂದು ಸತ್ಸಂಗಕ್ಕೆ ಅಲ್ಲಿ ಸೇರಿದ ಸುಮಾರು 15 ಸಾವಿರ ಜನರನ್ನು ಕಂಡು ಆಶ್ಚರ್ಯವಾಗಿದೆ! ಅಷ್ಟೊಂದು ಜನರ ಮುಂದೆ ಮಾತನಾಡಲು ಕೇಳಿದಾಗ ರಜನಿ ಅವರು ಅಂಜದೆ ತಮ್ಮ 'ಕನ್ನಡ ಪ್ರೇಮ'ವನ್ನು ಹೊರಹಾಕಿದ್ದಾರೆ, ತಮ್ಮ ಬಗ್ಗೆ ಮಾತನ್ನಾಡಿದ್ದಾರೆ.
ಬೆಂಗಳೂರು ಕಂಡಕ್ಟರ್ ಟು ಸೂಪರ್ ಸ್ಟಾರ್
ತಮ್ಮ ಮಾತಿನುದ್ದಕ್ಕೂ ಕರ್ನಾಟಕದೊಂದಿಗಿನ ನಂಟನ್ನು ನೆನೆದ ರಜನಿ, "ನಿಮಗೆಲ್ಲಾ ಗೊತ್ತಿರುವಂತೆ ನಾನು ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಿ. ಮರಾಠಿ ನನ್ನ ಮಾತೃಭಾಷೆ ಆದರೂ, ಮನೆಯಲ್ಲಿ ಮರಾಠಿ ಮತ್ತು ಕನ್ನಡ ಎರಡನ್ನೂ ಮಾತನಾಡುತ್ತಿದ್ದೆವು. 25 ವರ್ಷಗಳ ಕಾಲ ಬೆಂಗಳೂರಿನ ಬೀದಿಗಳಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದೇನೆ. ಆ 25 ವರ್ಷಗಳ ಜೀವನ ನನ್ನ ಅಡಿಪಾಯ" ಎಂದು ಹೆಮ್ಮೆಯಿಂದ ಹೇಳಿದರು. ತಮಿಳುನಾಡಿಗೆ ಹೋಗಿ ಅಲ್ಲಿನ ಜನರ ಪ್ರೀತಿ ಗಳಿಸಿ ಇಂದಿಗೆ 52 ವರ್ಷಗಳಾಗಿವೆ. ಚೆನ್ನೈನಲ್ಲಿ ನೆಲೆಸಿ ದಶಕಗಳೇ ಸಂದರೂ ತಮ್ಮ ಮೂಲವನ್ನು ಅವರು ಮರೆತಿಲ್ಲ.
ಕನ್ನಡ ಮರೆತಿಲ್ಲ, ಟಚ್ ಬಿಟ್ಟುಹೋಗಿದೆ ಅಷ್ಟೇ!
ಕನ್ನಡಿಗರಿಗೆ ಅತ್ಯಂತ ಖುಷಿ ಕೊಟ್ಟ ವಿಷಯವೆಂದರೆ ಕನ್ನಡ ಭಾಷೆಯ ಬಗ್ಗೆ ರಜನಿ ಹೇಳಿದ ಮಾತು. "ನಾನು ಚೆನ್ನೈನಲ್ಲಿ ನೆಲೆಸಿ 52 ವರ್ಷವಾಯಿತು. ಅಲ್ಲಿ ನನ್ನ ಜೊತೆ ಕನ್ನಡದಲ್ಲಿ ಸಂವಹನ ನಡೆಸುವವರು ಯಾರೂ ಇಲ್ಲ. ಹಾಗಾಗಿ ಕನ್ನಡದ 'ಟಚ್' ಸ್ವಲ್ಪ ಬಿಟ್ಟುಹೋಗಿದೆ. ಆದರೆ ನಾನು ಕನ್ನಡವನ್ನು ಎಂದಿಗೂ ಮರೆತಿಲ್ಲ, ಅದು ನನ್ನ ರಕ್ತದಲ್ಲಿದೆ" ಎಂದು ಭಾವುಕರಾಗಿ ನುಡಿದರು. ಸತ್ಸಂಗದಲ್ಲಿ ದೇಶದ ವಿವಿಧ ಮೂಲೆಗಳಿಂದ ಜನರು ಬಂದಿದ್ದ ಕಾರಣ, ಎಲ್ಲರಿಗೂ ಅರ್ಥವಾಗಲಿ ಎಂದು ಅವರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡಲು ಇಷ್ಟಪಡುತ್ತೇನೆ ಎಂದರು.
ಸರಳತೆಯೇ ಇವರ ಸೌಂದರ್ಯ:
ಸುಮಾರು 73 ವರ್ಷ ವಯಸ್ಸಾದರೂ, ವಿಶ್ವವಿಖ್ಯಾತ ನಟನಾಗಿದ್ದರೂ ರಜನಿಕಾಂತ್ ಅವರಲ್ಲಿರುವ ಆ ಹಳೇ 'ಶಿವಾಜಿ ರಾವ್ ಗಾಯಕ್ವಾಡ್' ಎನ್ನುವ ವ್ಯಕ್ತಿ ಮಾತ್ರ ಕಿಂಚಿತ್ತೂ ಬದಲಾಗಿಲ್ಲ. ಬೆಂಗಳೂರಿನ ನಂಟನ್ನು, ಇಲ್ಲಿನ ಬದುಕನ್ನು ಮತ್ತು ಕನ್ನಡ ಭಾಷೆಯನ್ನು ಸಾರ್ವಜನಿಕ ವೇದಿಕೆಯಲ್ಲಿ ಅಪ್ಪಿಕೊಳ್ಳುವ ಅವರ ಗುಣಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ಸದ್ದು ಮಾಡುತ್ತಿದ್ದು, "ತಲೈವಾ ಇಸ್ ಆಲ್ವೇಸ್ ಎ ಲೆಜೆಂಡ್" ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ, ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಬೇರುಗಳನ್ನು ಮರೆಯಬಾರದು ಎಂಬುದಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಈ ಮಾತುಗಳೇ ದೊಡ್ಡ ಉದಾಹರಣೆ.



