ಕಂಫರ್ಟ್ ಬಯಸುವ ನಟಿಯಲ್ಲ, ತಲೆ ತಗ್ಗಿಸಿ ಕೆಲಸ ಮಾಡುವುದಷ್ಟೇ ಗೊತ್ತು; ಪ್ರಿಯಾಂಕಾ ಚೋಪ್ರಾ
ನಾನು ಕಂಫರ್ಟ್ ಆಗಿರಬೇಕು ಎಂದೇನೂ ಬಯಸುವುದಿಲ್ಲ. ನಾನು ಬೇರೆ ದೇಶದ ಸಿನಿಮಾಗಲ್ಲಿ ಕೆಲಸ ಮಾಡುವಾಗ ನನ್ನ ದೇಶದ ಸಕ್ಸಸ್ ಹೊರೆಯನ್ನು ನಾನು ಹೊತ್ತುಕೊಂಡು ಹೋಗಲು ಬಯಸುವುದಿಲ್ಲ.
ದಶಕದ ಹಿಂದೆ ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿದ್ದ ನಟಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್‌ಗೆ ಹಾರಿರುವುದು ಗೊತ್ತೇ ಇದೆ. ಸದ್ಯ ಯಾವುದೇ ಬಾಲಿವುಡ್ ಸಿನಿಮಾಗಳಲ್ಲಿ ನಟಿಸದ ಪ್ರಿಯಾಂಕಾ, ಈಗ ಹಾಲಿವುಡ್ ವೆಬ್ ಸಿರೀಸ್ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಮೆರಿಕದ ಮಾಧ್ಯಮಗಳಿಗೆ ಆಗಾಗ ಸಂದರ್ಶನಗಳನ್ನು ಕೊಡುತ್ತಿರುವ ನಟಿ ಪ್ರಿಯಾಂಕಾಗೆ ಅವರ ವೃತ್ತಿ ಜೀವನದ ಕುರಿತು ಹಲವು ಪ್ರಶ್ನೆಗಳು ಸಹಜವಾಗಿಯೇ ತೂರಿ ಬರುತ್ತಿವೆ. ಅದರಲ್ಲೊಂದು ಪ್ರಶ್ನೆಗೆ ಪ್ರಿಯಾಂಕಾ ಕೊಟ್ಟ ಉತ್ತರ, ಹಾಗೂ ಉತ್ತರ ಕೊಟ್ಟ ಶೈಲಿ ಎರಡೂ ಭಾರಿ ಗಮನ ಸೆಳೆಯುತ್ತಿವೆ.
'ನಿಮಗೆ ಕಂಫರ್ಟೆಬಲ್ ಅನ್ನಿಸ್ತಿದೆಯಾ ಇಲ್ಲಿನ ಸಿನಿಮಾ ಇಂಡಸ್ಟ್ರಿ? ಶಾರುಖ್ ಖಾನ್ ತಮಗೆ ಬಾಲಿವುಡ್ ಮಾತ್ರ ಕಂಫರ್ಟೇಬಲ್ ಎಂದಿದ್ದಾರೆ' ಎಂದು ಕೇಳಿದ ಪ್ರಶ್ನೆಗೆ ನಟಿ ಪ್ರಿಯಾಂಕಾ 'ನನಗೆ ಕೆಲಸದಲ್ಲಿ ಕಂಫರ್ಟೇಬಲ್ ಫೀಲ್ ಮುಖ್ಯವಲ್ಲ. ನಾನು ಕೆಲಸ ಮಾಡಲು ಬಯಸುತ್ತೇನೆ. ಅದು ಅಲ್ಲಿ, ಇಲ್ಲಿ ಎಲ್ಲಿ ಎಂಬುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ ನನಗೆ. ನಾನು ಈಗಲೂ ಅಗತ್ಯವಿದ್ದರೆ ಆಡಿಷನ್ ಕೊಡುತ್ತೇನೆ. ನಾನು ದೊಡ್ಡ ನಟಿ, ತುಂಬಾ ಸಾಧಿಸಿ ಬಂದವಳು ಎಂಬ ಭಾವನೆಯೇನೂ ಇಲ್ಲ ನನಗೆ. ನಾನು ಈಗಲೂ ಹೊಸಬಳಂತೆ ಫೀಲ್ ಮಾಡುತ್ತೇನೆ. ಯಾವುದೇ ದೇಶದ ಉದ್ಯಮವಾಗಿರಲಿ, ಅಲ್ಲಿ ನನಗೆ ಕೆಲಸ ಮಾಡುವ ಸಾಮರ್ಥ್ಯ ಇದೆ ಎಂದೇ ನಾನು ಭಾವಿಸುತ್ತೇನೆ.
ನಾನು ಕಂಫರ್ಟ್ ಆಗಿರಬೇಕು ಎಂದೇನೂ ಬಯಸುವುದಿಲ್ಲ. ನಾನು ಬೇರೆ ದೇಶದ ಸಿನಿಮಾಗಲ್ಲಿ ಕೆಲಸ ಮಾಡುವಾಗ ನನ್ನ ದೇಶದ ಸಕ್ಸಸ್ ಹೊರೆಯನ್ನು ನಾನು ಹೊತ್ತುಕೊಂಡು ಹೋಗಲು ಬಯಸುವುದಿಲ್ಲ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ನನ್ನ ಕೆಲಸದ ಮೇಲೆ ಕಣ್ಣಿಟ್ಟಿರಲು ಯಾರನ್ನೋ ನೇಮಿಸುವುದು ನನಗೆ ಇಷ್ಟವಾಗುವುದಿಲ್ಲ. ನನ್ನ ಅಪ್ಪ ಭಾರತದ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿರುವವರು. ಅವರು ನನಗೆ ಡಿಸಿಪ್ಲೇನ್ ಕಲಿಸಿದ್ದಾರೆ. ನನ್ನ ತಲೆಯ ಮೇಲೆ ಬುಲೆಟ್ ಗುರಿ ಇಟ್ಟರೂ ನಾನು ನನ್ನ ಕೆಲಸದ ಮೇಲೆ ಮಾತ್ರ ಫೋಕಸ್ ಮಾಡುತ್ತೇನೆ.
ನಾನು ಆರೋಘೆಂಟ್ ಅಲ್ಲ, ನನಗೆ ಅಲ್ಲಿಯೇ ಕೆಲಸ ಮಾಡಬೇಕು, ಇಲ್ಲಿಯೇ ಕೆಲಸ ಮಾಡಬೇಕು ಎಂಬ ನಿಯಮವೇನೂ ಇಲ್ಲ. ಎಲ್ಲಾದರೂ ಸರಿ, ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಅಲ್ಲಿನ ಜನರನ್ನು ಪ್ರೀತಿಸುತ್ತೇನೆ. ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಇರುತ್ತೇನೆ. ಬೇರೆಯವರು ಏನು ಮಾಡುತ್ತಾರೆ ಎಂಬುವುದರ ಮೇಲೆ ನನ್ನ ನಿರ್ಧಾರ ಬದಲಾಗುವುದಿಲ್ಲ' ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.