ಜ್ಯೋತಿಷಿ ಮಾತು ಕೇಳಿ ಸರ್ವನಾಶವಾದ ಸರವಣ ಭವನದ ಮಾಲೀಕನ ಕತೆಯನ್ನು ಹೋಲುವಂತೆಯೇ ಇದೆ ದರ್ಶನ್‌ ಪ್ರಕರಣ ಕೂಡ. ಪವಿತ್ರ ಗೌಡ ಮಾತು ಕೇಳಿ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ ಪರಿಣಾಮ ದರ್ಶನ್‌ ಜೈಲು ಸೇರಿದ್ದರೆ, ಜ್ಯೋತಿಷಿ ಮಾತು ಕೇಳಿ ದೋಸೆ ಕಿಂಗ್‌ ಸರ್ವನಾಶವಾಗಿದ್ದಾರೆ.

ಪವಿತ್ರ ಗೌಡ ಮಾತು ಕೇಳಿ ರೇಣುಕಾಸ್ವಾಮಿಗೆ ಬರ್ಬರವಾಗಿ ಹಲ್ಲೆ ಮಾಡಿ ಆತ ಸತ್ತುಹೋದ ಪರಿಣಾಮ ದರ್ಶನ್‌ ಜೈಲುಪಾಲಾಗಿದ್ದಾನೆ. ರೇಣುಕಾಸ್ವಾಮಿಗೆ ಹಲ್ಲೆ ಮಾಡುವಾಗ ʼಕಿಲ್‌ ಹಿಮ್‌, ಕಿಲ್‌ ಹಿಮ್‌ʼ ಎಂದು ಪವಿತ್ರ ಗೌಡ ಪ್ರಚೋದನೆ ಕೊಟ್ಟದ್ದರಿಂದ ದರ್ಶನ್‌ ರೊಚ್ಚಿಗೆದ್ದದ್ದು ಬಯಲಾಗಿದೆ. ಈಕೆಯಿಂದಾಗಿ ನಾಡಿನ ಜನಪ್ರಿಯ ನಟ ದರ್ಶನ್‌ ಜೈಲಿನಲ್ಲಿ ಕೊಳೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಪ್ರಕರಣ ನೋಡ್ತಾ ಇದ್ರೆ, ದೇಶದಲ್ಲೇ ಜನಪ್ರಿಯ ಹೋಟೆಲ್‌ ಚೈನ್‌ ಆಗಿದ್ದ ಸರವಣ ಬವನದ ಮಾಲೀಕನಿಗೆ ಆದ ಪರಿಸ್ಥಿತಿ ನೆನಪಾಗ್ತಿದೆ. 

ಅದು ನೆನಪಾಗಲೂ ಕಾರಣವಿದೆ. ಇದೀಗ ʼಸಪ್ತಸಾಗರದಾಚೆಯೆಲ್ಲೋʼ ಖ್ಯಾತಿಯ ಹೇಮಂತ ರಾವ್‌ ಹೊಸ ಫಿಲಂ ಮಾಡಲು ಮುಂದಾಗಿದ್ದಾರೆ. ಹೆಸರು ʼದೋಸಾ ಕಿಂಗ್‌.ʼ ಇದು ಜ್ಯೋತಿಷಿ ಮಾತು ಕೇಳಿ ಸರ್ವನಾಶವಾದ ಸರವಣ ಭವನದ ಮಾಲಿಕನ ಕತೆಯನ್ನು ಆದರಿಸಿದೆಯಂತೆ. 

ತಮಿಳುನಾಡು ಮೂಲದ ಸರವಣ ಭವನದ ಹೆಸರು ಕೇಳದವರಿಲ್ಲ. ಇದರ ಶಾಖೆಗಳು ಲಂಡನ್‌, ಸಿಂಗಾಪುರ, ಸಿಡ್ನಿ, ಸ್ಟಾಕ್‌ಹೋಮ್‌ ಸೇರಿದಂತೆ ವಿದೇಶಗಳಲ್ಲೂ ಇವೆ. ರುಚಿಕರವಾದ ಇಡ್ಲಿ, ದೋಸೆ, ವಡೆಯಂತಹ ತಿನಿಸುಗಳಿಂದಾಗಿ ಇದು ವಿಶ್ವವಿಖ್ಯಾತ. ಈ ಜನಪ್ರಿಯ ಹೋಟೆಲ್‌ ಸಂಸ್ಥಾಪಕ, ‘ದೋಸಾ ಕಿಂಗ್‌’ ಎಂದೇ ಖ್ಯಾತಿ ಪಡೆದ ಪಿ.ರಾಜಗೋಪಾಲ್‌ ಜ್ಯೋತಿಷಿ ಮಾತು ಕೇಳಿ, ಅದನ್ನು ನಿಜವಾಗಿಸಲು ಕೊಲೆ ಮಾಡಿ, ಜೈಲು ಕಂಡು, ಕಡೆಗೆ ನರಳಿ ಸತ್ತುಹೋದ. ಈರುಳ್ಳಿ ಮಾರಿಕೊಂಡಿದ್ದ ಬಡ ವ್ಯಕ್ತಿಯೊಬ್ಬ ಹೋಟೆಲ್‌ ಸಾಮ್ರಾಜ್ಯವನ್ನೇ ಕಟ್ಟಿ ಮೆರೆದ ಹಾಗೂ ಕೊನೆಗಾಲದಲ್ಲಿ ದಾರುಣವಾಗಿ ಅವಸಾನ ಕಂಡ ಕತೆ ಈತನದು.

ರಾಜಗೋಪಾಲ್ ತಮಿಳುನಾಡಿನ ಈರುಳ್ಳಿ ವ್ಯಾಪಾರಿಯ ಮಗ. ಬಿಳಿ ಪಂಚೆ ಮತ್ತು ಶರ್ಟ್‌, ಹಣೆಯ ಮೇಲೊಂದು ಗಂಧದ ತಿಲಕ ಅವರ ಟಿಪಿಕಲ್‌ ಸ್ಟೈಲ್‌. 1981ರಲ್ಲಿ ರಾಜಗೋಪಾಲ್‌ಗೆ ಜ್ಯೋತಿಷಿಯೊಬ್ಬ ನೀನು ಹೋಟೆಲ್‌ ಆರಂಭಿಸಿದರೆ ಮೇಲೆ ಬರುತ್ತೀಯಾ ಎಂದು ಭವಿಷ್ಯ ಹೇಳಿದ್ದ. ಅದೇ ಸಮಯಕ್ಕೆ ಕಾಮಾಕ್ಷಿ ಭವನ ಎಂಬ ಚಿಕ್ಕ ಹೋಟೆಲ್ಲನ್ನು ಅದರ ಯಜಮಾನ ನಷ್ಟದಿಂದ ಮುಚ್ಚಲು ಹೊರಟಿದ್ದ. ರಾಜಗೋಪಾಲ್‌ ತನ್ನ ಸ್ನೇಹಿತನ ಜೊತೆ ಸೇರಿ ಅದನ್ನು ಕೊಂಡುಕೊಂಡು, ‘ಸರವಣ ಭವನ’ ಎಂದು ಹೆಸರಿಟ್ಟರು. ರಾಜಗೋಪಾಲ್‌ ಶುದ್ಧ ತೆಂಗಿನ ಎಣ್ಣೆ, ಗುಣಮಟ್ಟದ ತರಕಾರಿ ಬಳಸಿ, ಸಿಬ್ಬಂದಿಗೆ ಉತ್ತಮ ಸಂಬಳ ನೀಡಿ, ರುಚಿಕರವಾದ ತಿಂಡಿ ನೀಡಿ ಚೆನ್ನೈನಲ್ಲಿ ಇವರ ಹೋಟೆಲ್‌ ಮನೆಮಾತಾಯಿತು. 

ಕೈಗೆಟಕುವ ಬೆಲೆಯ ದೋಸೆ, ವಡೆ ಮತ್ತು ಇಡ್ಲಿ ರಾಜಗೋಪಾಲ್‌ ಕೈಹಿಡಿದವು. ಅಲ್ಲಿಂದ ರಾಜಗೋಪಾಲ ಹಿಂತಿರುಗಿ ನೋಡಲೇ ಇಲ್ಲ. ‘ದೋಸೆ ಕಿಂಗ್‌’ ಎಂಬ ಖ್ಯಾತಿ ರಾಜಗೋಪಾಲ್‌ಗೆ ಬಂತು. ಸರವಣ ಭವನ ಮಧ್ಯಮ ವರ್ಗದವರ ಮನೆಮಾತಾಯಿತು. ತಮಿಳುನಾಡು ಮಾತ್ರವಲ್ಲದೆ ದೇಶದ ವಿವಿಧ ನಗರಗಳಲ್ಲಿ ಸರವಣ ಭವನಗಳು ತಲೆಯೆತ್ತಿದವು. ನಂತರ ವಿದೇಶದಲ್ಲೂ ಶಾಖೆಗಳು ತೆರೆದವು. ಅಮೆರಿಕ, ಗಲ್ಫ್‌ ರಾಷ್ಟ್ರಗಳು, ಯುರೋಪ್‌ ಮತ್ತು ಆಸ್ಪ್ರೇಲಿಯಾಗಳಲ್ಲಿ 70ಕ್ಕೂ ಹೆಚ್ಚು ಸರವಣ ಭವನಗಳಿವೆ. 

ಇಂಥ ದೋಸೆ ಕಿಂಗ್‌, ಜ್ಯೋತಿಷಿ ಮಾತು ಕೇಳಿ ಕೆಟ್ಟರು. ರಾಜಗೋಪಾಲ್‌ ಏಳಿಗೆಗೆ ಕಾರಣರಾಗಿದ್ದ ಅದೇ ಜ್ಯೋತಿಷಿ ಮುಂದೆ ರಾಜಗೋಪಾಲ್‌ರ ದುರಂತ ಅವಸಾನಕ್ಕೂ ಕಾರಣರಾದರು. 2000ನೇ ಇಸ್ವಿಯಲ್ಲಿ, "ಇನ್ನೂ ಇಪ್ಪತ್ತು ದಾಟದ, ಎಡಗೆನ್ನೆಯ ಮೇಲೆ ಮಚ್ಚೆಯಿರುವ ಹುಡುಗಿಯೊಬ್ಬಳಿದ್ದಾಳೆ. ಆಕೆಯ ಮದುವೆಯಾಗಿ ನೋಡು, ಕೋಟಿಗಳಲ್ಲಿ ಹೊರಳಾಡುತ್ತೀಯ" ಎಂದು ಈ ಜ್ಯೋತಿಷಿ ಭವಿಷ್ಯ ನುಡಿದಿದ್ದರು. ರಾಜಗೋಪಾಲ್‌ ಈ ಲಕ್ಷಣದ ಹುಡುಗಿಯ ಹುಡುಕಾಟದಲ್ಲಿರುವಾಗ ಸರವಣ ಭವನದ ಚೆನ್ನೈ ಬ್ರಾಂಚ್‌ನ ಅಸಿಸ್ಟೆಂಟ್‌ ಮ್ಯಾನೇಜರ್‌ನ ಮಗಳು ಜೀವಜ್ಯೋತಿಗೆ ಕೆನ್ನೆಯ ಮೇಲೆ ಬೇಳೆ ಕಾಳಿನ ಗಾತ್ರದ ಮಚ್ಚೆಯಿದೆ ಎಂಬ ವಿಷಯ ತಿಳಿಯಿತು. ಆಕೆ ನೋಡುವುದಕ್ಕೂ ಚೆನ್ನಾಗಿದ್ದಳು. ಅಲ್ಲಿಂದ ಜೀವಜ್ಯೋತಿ ಮೇಲೆ ರಾಜಗೋಪಾಲ್‌ ಕಣ್ಣು ಬಿತ್ತು.

ರಾಜಗೋಪಾಲ್‌ಗೆ ಮೊದಲೇ ಇಬ್ಬರು ಹೆಂಡಿರಿದ್ದರು. ಜೀವಜ್ಯೋತಿ ಇವರ ಪ್ರಸ್ತಾಪ ತಿರಸ್ಕರಿಸಿ, ಬೇರೆ ಮದುವೆಯಾದರು. ಇದರಿಂದ ಸಿಟ್ಟಾದ ರಾಜಗೋಪಾಲ್‌ ಆಕೆಯ ಕುಟುಂಬವನ್ನು ಹೊಡೆದು, ಬಡಿದು ‘ದಾರಿಗೆ ತರುವ’ ಪ್ರಯತ್ನ ಮಾಡಿದರು. ಆಗ ದಂಪತಿಗಳಿಬ್ಬರೂ ರಾಜಗೋಪಾಲ್‌ ವಿರುದ್ಧ ಪೊಲೀಸರಿಗೆ ದೂರು ನೀಡಿದರು. ಅದಾದ ಕೆಲವೇ ದಿನಗಳಲ್ಲಿ ಶಾಂತಕುಮಾರ್‌ ಅಪಹರಣವಾದರು. ಈ ಬಗ್ಗೆ ಜೀವಜ್ಯೋತಿ ರಾಜಗೋಪಾಲ್‌ ವಿರುದ್ಧ ದೂರು ನೀಡಿದರು. 2001ರ ಅಕ್ಟೋಬರ್‌ 3ರಂದು ಕೊಡೈಕೆನಾಲ್‌ನ ಟೈಗರ್‌ ಚೋಲಾ ಕಾಡಿನಲ್ಲಿ ಶಾಂತಕುಮಾರ್‌ ಮೃತದೇಹ ಸಿಕ್ಕಿತು. ಉಸಿರುಗಟ್ಟಿಸಿ ಕೊಲೆಗೈಯಲಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳಿತು.

ಅದೇ ವರ್ಷ ನವೆಂಬರ್‌ 23ರಂದು ರಾಜಗೋಪಾಲ್‌ ಪೊಲೀಸರಿಗೆ ಶರಣಾದರು. 2003ರ ಜುಲೈ15ರಂದು ಜಾಮೀನು ಪಡೆದು ಹೊರಬಂದರು. ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೇ ಮತ್ತೊಂದು ವಿವಾದ ರಾಜಗೋಪಾಲ್‌ ಅವರನ್ನು ಸುತ್ತಿಕೊಂಡಿತು. 6 ಲಕ್ಷ ರು. ನೀಡಿ ಜೀವಜ್ಯೋತಿಯೊಂದಿಗೆ ರಾಜಿ ಮಾಡಿಕೊಳ್ಳಲು ಯತ್ನಿಸಿದರು. ಅದಕ್ಕೆ ಆಕೆಯ ಕುಟುಂಬ ಮತ್ತು ಸಹೋದರ ಒಪ್ಪದಿದ್ದಾಗ ಅವರ ಮೇಲೂ ಹಲ್ಲೆ ಮಾಡಿಸಿದರು. ಅವರಿಗೆ ಹೊಡೆಸಲು ಖುದ್ದು ರಾಜಗೋಪಾಲ್‌ ಹೋಗಿದ್ದರು. 2004ರಲ್ಲಿ ಕೊಲೆ ಆಪಾದನೆ ಮೇಲೆ ಸ್ಥಳೀಯ ನ್ಯಾಯಾಲಯ ರಾಜಗೋಪಾಲ್‌ಗೆ 10 ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತು. ಶಿಕ್ಷೆ ಕಡಿಮೆಯಾಯಿತು ಎಂದು ಜೀವಜ್ಯೋತಿ ಮದ್ರಾಸ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. 2009ರಲ್ಲಿ ಮದ್ರಾಸ್‌ ಹೈಕೋರ್ಟ್‌ ರಾಜಗೋಪಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತು. ಮದ್ರಾಸ್‌ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿಯಿತು. 

ಗ್ಲಾಸ್‌ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವಡಿವೇಲು, ಕಾಮಿಡಿ ಕಿಂಗ್‌ ಆಗಿದ್ದು ಹೇಗೆ?

ಅವರ ಮುಂದಿರುವ ಕಾನೂನು ಆಯ್ಕೆಗಳೆಲ್ಲ ಬರಖಾಸ್ತಾಗಿ, ದೋಸೆ ಕಿಂಗ್‌ಗೆ ಜೈಲುವಾಸ ಬಿಟ್ಟರೆ ಬೇರೆ ಆಯ್ಕೆ ಇಲ್ಲವಾಗಿತ್ತು. ಅದೇ ಸಮಯದಲ್ಲಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟು ಪ್ರಾಣ ತ್ಯಜಿಸಿದರು. ಈ ಮೂಲಕ ಬಡತನದಿಂದ ಮೇಲೆ ಬಂದು ಒಂದು ಕಾಲದಲ್ಲಿ ಮೆರೆದ ಪಿ.ರಾಜಗೋಪಾಲ್‌ ಬದುಕು ದುರಂತ ಕಂಡಿತು. ಇವರ ಕತೆಯನ್ನು ಹೇಮಂತ್‌ ಈಗ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದು ಎಷ್ಟು ಯಶಸ್ವಿಯಾಗುತ್ತದೆಯೋ ಗೊತ್ತಿಲ್ಲ.

ಇನ್ನು ದರ್ಶನ್‌ ಕತೆಯೂ ಇದೇ ರೀತಿ ಆಗುವ ಹಾದಿಯಲ್ಲಿದೆ. ದರ್ಶನ್‌ ಸ್ವತಃ ದರ್ಪದ ಮನುಷ್ಯ. ಆದರೆ ಸುತ್ತಮುತ್ತ ಇದ್ದವರ ಚಿತಾವಣೆ, ಪವಿತ್ರ ಗೌಡಳಂಥ ಕ್ಯಾರೆಕ್ಟರ್‌ಗಳ ಸಹವಾಸ ಈತನ ಪರಿಸ್ಥಿತಿಯನ್ನು ಹದಗೆಡಿಸಿವೆ. ಉತ್ತಮ ನಟನೊಬ್ಬ ಯಾರ್ಯಾರದೋ ಹಕೀಕತ್ತುಗಳಿಂದಾಗಿ ಈ ಸ್ಥಿತಿಗೆ ಬಂದರೆ ಬೇಸರವಾಗುತ್ತದೆ. ಆದರೆ ರಾಜಗೋಪಾಲ್‌ಗೆ ಆದ ಸ್ಥಿತಿ ದರ್ಶನ್‌ಗೆ ಬರುವುದು ಬೇಡ ಎಂದು ಹಾರೈಸೋಣ.

ಯಾವ ಅರಮನೆಗೂ ಕಮ್ಮಿ ಇಲ್ಲ ಬಾಲಿವುಡ್ ಕಿಂಗ್ ಶಾರುಖ್ ಖಾನ್ 200 ಕೋಟಿ ಮೌಲ್ಯದ ಬಂಗಲೆ ‘ಮನ್ನತ್’