ಕೇವಲ ನಾಲ್ಕು ವರ್ಷಕ್ಕೆ ಬಣ್ಣದ ಜಗತ್ತಿಗೆ ಬಾಲನಟಿಯಾಗಿ ಎಂಟ್ರಿ ಕೊಟ್ಟ ನಟಿಗೆ ಅವಕಾಶಗಳಿಗೆ ಕೊರತೆ ಇರಲಿಲ್ಲ. ಆದರೆ, 13 ವರ್ಷಕ್ಕೆ ಬರುತ್ತಿದ್ದಂತೆ ಮಾದಕ ವ್ಯಸನಿಯಾಗಿದ್ದ ನಟಿ ಡೈರೆಕ್ಟರ್ ಕೊಟ್ಟ ಚಾನ್ಸ್‌ಗಳನ್ನೆಲ್ಲಾ ಬಾಚಿಕೊಂಡು, ಇದೀಗ 35 ವರ್ಷಕ್ಕೆ ಏಡ್ಸ್‌ಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.

ಹಾಲಿವುಡ್‌ನ ಖ್ಯಾತ ಹಾರರ್ ಸಿನಿಮಾ 'ದಿ ರಿಂಗ್'ನಲ್ಲಿ ಸಮರಾ ಮಾರ್ಗನ್ ಎಂಬ ಭಯಾನಕ ಪಾತ್ರದ ಮೂಲಕ ಜಗತ್ತನ್ನೇ ನಡುಗಿಸಿದ್ದ ನಟಿ ಡೇವಿ ಎಲಿಜಬೆತ್ ಚೇಸ್ (35) ಇಹಲೋಕ ತ್ಯಜಿಸಿದ್ದಾರೆ. ಬಾಲನಟಿಯಾಗಿ ಮಿಂಚಿದ್ದ ಈ ಅದ್ಭುತ ಪ್ರತಿಭೆಯ ಅಕಾಲಿಕ ಸಾವು ಸಿನಿಮಾ ಪ್ರಿಯರಲ್ಲಿ ತೀವ್ರ ಆಘಾತ ಮತ್ತು ಚರ್ಚೆಯನ್ನು ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಲ್ಯದಲ್ಲೇ ಅರಳಿದ್ದ ಪ್ರತಿಭೆ:

ಕೇವಲ 4ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ಡೇವಿ, 2002ರಲ್ಲಿ ಬಿಡುಗಡೆಯಾದ 'ದಿ ರಿಂಗ್' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡರು. ಕೇವಲ ಹದಿಹರೆಯದಲ್ಲೇ ಎಂಟಿವಿ ಮೂವಿ ಅವಾರ್ಡ್ ಪಡೆಯುವ ಮೂಲಕ ಹಾಲಿವುಡ್‌ನ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದರು. ಆದರೆ, ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಅಂದರೆ 2016ರಲ್ಲಿ ಅವರು ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದರು.

ಸಂಕಷ್ಟದ ಹಾದಿ ಮತ್ತು ಆರೋಗ್ಯ ವೈಫಲ್ಯ:

ನಟನೆಯಿಂದ ದೂರಾದ ನಂತರ ಡೇವಿ ಅವರ ಜೀವನ ಹಾದಿ ಬದಲಾಯಿತು. ವರದಿಗಳ ಪ್ರಕಾರ, 13ನೇ ವಯಸ್ಸಿನಿಂದಲೇ ಅವರು ಮಾದಕ ವ್ಯಸನಕ್ಕೆ ತುತ್ತಾಗಿದ್ದರು. ಈ ದೀರ್ಘಕಾಲದ ಚಟವು ಅವರ ಆರೋಗ್ಯ, ಆರ್ಥಿಕ ಸ್ಥಿತಿ ಮತ್ತು ವೈಯಕ್ತಿಕ ಜೀವನವನ್ನು ಹದಗೆಡಿಸಿತ್ತು. ಜೀವನದ ಕೊನೆಯ ದಿನಗಳಲ್ಲಿ ಅವರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬ ಕಹಿ ಸತ್ಯವೂ ಈಗ ಬಯಲಾಗಿದೆ.

ಸಾವಿನ ರಹಸ್ಯ ಬಯಲು:

ಆರಂಭದಲ್ಲಿ ಡೇವಿ ಅವರು ಮೆನಿಂಜೈಟಿಸ್ ಅಥವಾ ಸೆಪ್ಸಿಸ್‌ನಿಂದ ಮೃತಪಟ್ಟಿದ್ದಾರೆ ಎಂದು ಅವರ ಮ್ಯಾನೇಜರ್ ತಿಳಿಸಿದ್ದರು. ಆದರೆ, ಇತ್ತೀಚೆಗೆ ಬಿಡುಗಡೆಯಾದ ವೈದ್ಯಕೀಯ ಪರೀಕ್ಷೆಯ ಅಧಿಕೃತ ವರದಿಯ ಪ್ರಕಾರ, ಅವರ ಸಾವಿಗೆ ಏಡ್ಸ್‌ಗೆ (AIDS) ಸಂಬಂಧಿಸಿದ ಗಂಭೀರ ಆರೋಗ್ಯ ಸಮಸ್ಯೆಗಳೇ ಕಾರಣ ಎಂದು ತಿಳಿದುಬಂದಿದೆ. ಕೇವಲ 35ನೇ ವಯಸ್ಸಿಗೆ ಪ್ರತಿಭಾವಂತ ಕಲಾವಿದೆಯೊಬ್ಬರು ಈ ರೀತಿ ಕಮರಿ ಹೋದದ್ದು ಹಾಲಿವುಡ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.