ಬಾಲಿವುಡ್‌ ನಟರು- ನಟಿಯರು ತುಂಬ ವಿದ್ಯಾವಂತರು, ಅವರಲ್ಲಿ ಮೂಢನಂಬಿಕೆಗಳಿರೋಲ್ಲ ಎಂಬುದು ನಮ್ಮ ಮೂಢನಂಬಿಕೆ. ಅವರೂ ನಮ್ಮ ಹಾಗೇ ಮನುಷ್ಯರು, ಅವರಿಗೂ ದೇವರು- ದೆವ್ವ- ಮಂತ್ರ- ಮಾಟ - ಇಂಥದ್ದರಲ್ಲೆಲ್ಲ ಸಾಕಷ್ಟು ನಂಬಿಕೆಯಿದೆ. ಒಬ್ಬೊಬ್ಬ ನಟ- ನಟಿಯೂ ಒಂದೊಂದು ನಂಬಿಕೆ ಹೊಂದಿದ್ದಾರೆ. ಬಿಪಾಶಾ ಬಸುವಿಗೆ ಒಂದು ಹೆದರಿಕೆ ಇದೆ. ಅದೇನೆಂದರೆ ನಿರ್ಜನವಾದ, ಕತ್ತಲು ತುಂಬಿದ ಬಿಲ್ಡಿಂಗ್‌ನಲ್ಲಿ ದೆವ್ವ ಇರಬಹುದು ಎಂಬ ಹೆದರಿಕೆ. 
ಇಂಥದೊಂದು ಅನುಭವ ಬಿಪಾಶಾಗೆ ಈ ಹಿಂದೆ ಆಗಿತ್ತಂತೆ. ಮುಂಬಯಿಯ ಒಂದು ಖಾಲಿ ಮಿಲ್‌ನಲ್ಲಿ ಈಕೆಯ ಒಂದು ಹಾರರ್‌ ಫಿಲಂನ ಚಿತ್ರೀಕರಣ ನಡೆದಿತ್ತು.

ಆ ಶೂಟಿಂಗ್‌ ಸಂದರ್ಭದಲ್ಲಿ, ಯಾವುದೋ ಒಂದು ನಿರ್ದಿಷ್ಟ ಕೋಣೆಯಲ್ಲಿ ಈಕೆಯ ಚಿತ್ರೀಕರಣ ನಡೆಯುತ್ತಿದ್ದಾಗ, ಈಕೆಗೆ ಡೈಲಾಗ್‌ಗಳೆಲ್ಲಾ ಮರೆತುಹೋಗುತ್ತಿದ್ದವು. ಏನು ಮಾಡಿದರೂ ನೆನಪೇ ಬರುತ್ತಿರಲಿಲ್ಲ. ಅದೂ ದೆವ್ವಕ್ಕೆ ಸಂಬಂಧಿಸಿದ ಡಯಲಾಗೇ ಆಗಿತ್ತಂತೆ. ಆದರೆ, ಆ ಕೋಣೆಯಿಂದ ಆಚೆ ಹೋಗಿ ಬೇರೊಂದು ಕೋಣೆಯಲ್ಲಿ ಅದೇ ದೃಶ್ಯ ಶೂಟ್‌ ಮಾಡಲು ಹೋದರೆ ಡಯಲಾಗ್‌ ಸುಲಭವಾಗಿ ಬರುತ್ತಿತ್ತಂತೆ. ನೋಡೋಣ ಎಂದು ಮರುದಿನ ಆಕೆ ಡಯಲಾಗ್‌ ಬರೆದಿಟ್ಟುಕೊಂಡು ಹೋದರು. ಆ ಕೋಣೆಗೆ ಹೋಗಿ ಬರೆದಿಟ್ಟುಕೊಂಡ ಚೀಟಿ ಹುಡುಕಿದರೆ ಅದೂ ನಾಪತ್ತೆ! ಒಬ್ಬಳೇ ಆ ಕೋಣೆಯಲ್ಲಿ ಓಡಾಡಿದಾಗ, ಅಲ್ಯರೋ ಬೇರೆಯವರೂ ಇದ್ದಂತೆ ಭಾಸವಾಗುತ್ತಿತ್ತು. ಇಲ್ಲೇನೋ ಇದೆ ಎಂದು ಬಿಪಾಶಾಗೆ ಹೊಳೆಯಿತು. ಅದೇ ಫಿಲಂನ ಚಿತ್ರೀಕರಣದ ವೇಳೆ ಶೂಟಿಂಗ್‌ ಸೆಟ್‌ನಲ್ಲಿದ್ದ ಯಾವುದೇ ಸೈಡ್‌ ಆಕ್ಟ್ರೆಸ್‌ಗೆ ಇದ್ದಕ್ಕಿದ್ದಂತೆ ತುಂಬಾ ಜ್ವರ ಶುರುವಾಯಿತು. ಏನು ಮಾಡಿದರೂ ಕಡಿಮೆಯಾಗಲಿಲ್ಲ. ಮುಂದೆ ಆಕೆ ಆಸ್ಪತ್ರೆಯಲ್ಲಿ ತೀರಿಕೊಂಡಳು. ಅಂದಿನಿಂದ ಬಿಪಾಶಾ, ಆ ಮಿಲ್‌ನಲ್ಲಿ ಶೂಟಿಂಗ್‌ ಇದ್ದರೆ ಒಪ್ಪಿಕೊಳ್ಳುವುದೇ ಇಲ್ಲ. 

ವಾಸ್ತವವಾಗಿ, ಬಿಪಾಶಾ ಹಲವು ಹಾರರ್ ಫಿಲಂಗಳಲ್ಲಿ ನಟಿಸಿ ಚಿತ್ರರಸಿಕರ ಗುಂಡಿಗೆಗಳನ್ನು ಧಡಗುಟ್ಟಿಸಿದ್ದಾಳೆ. ಅಲೋನ್‌, ರಾಝ್, ಕ್ರೀಚರ್ ತ್ರಿಡಿ, ಆತ್ಮ, ರಕ್ತ್, ರುದ್ರಾಕ್ಷ್, ಡರ್‌ನಾ ಜರೂರಿ ಹೈ, ಆತ್ಮ- ಈಕೆಯ ಹಾರರ್ ಚಿತ್ರಗಳು. ಅಲೋನ್‌ನಲ್ಲಿ ಈಕೆಯೇ ದೆವ್ವವಾಗಿ ಕಾಣಿಸಿಕೊಂಡಿದ್ದಾಳೆ. ತಾನಿಷ್ಟ ಪಡದ ತನ್ನ ಮೇಕಪ್‌ ಅದು ಎಂದು ಬಿಪಾಶಾ ಹೇಳಿಕೊಳ್ಳುತ್ತಾಳೆ. ಖಾಲಿ ಖಾಲಿ ಕಣ್ಣುಗಳು, ನೆತ್ತರಿನ ಕಲೆ, ಕ್ರೂರ ನೋಟ- ನನ್ನನ್ನು ನಾನೇ ನೋಡಿಕೊಂಡಾಗ ಬೆಚ್ಚಿಬಿದ್ದೆ ಅನ್ನುತ್ತಾಳೆ. ದೆವ್ವ ಅಂದ್ರೆ ಭಯ. ಆದ್ರೂ ಇಷ್ಟೊಂದು ಹಾರರ್ ಚಿತ್ರಗಳಲ್ಲಿ ನಟಿಸಿದ್ಯಾಕೆ? ಯಾಕೆಂತ ಆಕೆಗೇ ಗೊತ್ತಿಲ್ಲ.

ಪ್ರೇಮಂ ನಟಿಗೆ ಸೀರೆ ಮೇಲೆ ಸಿಕ್ಕಾಪಟ್ಟೆ ಲವ್ 
ಬಿಪಾಶಾ ಹುಟ್ಟಿನಿಂದ ಒಂಟಿಯಾಗಿ ಇದ್ದದ್ದೇ ಇಲ್ಲವಂತೆ. ಈಕೆಯ ಜೊತೆಗೆ ಇನ್ನೂ ಇಬ್ಬರು ಸಹೋದರಿಯರು ಇರುತ್ತಿದ್ದರಂತೆ. ಹೀಗಾಗಿ ಒಂಟಿಯಾಗಿ ಇರುವುದು ಅಂದರೆ ಒಂಥರಾ ಭಯ. ಚಿಕ್ಕಂದಿನಲ್ಲಿ ಈಕೆ ತುಂಬಾ ತಂಟೆಮಾರಿಯೂ ಆಗಿದ್ದಳು. ಈಕೆಯನ್ನು ಕಂಟ್ರೋಲ್‌ ಮಾಡುವುದು ಹೇಗೆ ಅಂತ ಇವಳ ಅಪ್ಪ ಅಮ್ಮನಿಗೆ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ದೆವ್ವದ ಕತೆಗಳನ್ನು ಇವಳಿಗೆ ಹೇಳುತ್ತಿದ್ದರು. ಅಂದಿನಿಂಧ ಈಕೆಗೆ ಕತ್ತಲು, ನಿರ್ಜನ ಪ್ರದೇಶ, ಪಾಳುಬಿದ್ದ ಕಟ್ಟಡ, ಒಂಟಿಯಾಗಿರುವುದು- ಇವೆಲ್ಲ ಭಯ. ಒಂಟಿಯಾಗಿರುವಾಗ ಈಕೆ ಹಾರರ್ ಫಿಲಂಗಳನ್ನು ನೋಡುವುದೇ ಇಲ್ಲವಂತೆ. ಗ್ರೂಪ್‌ನಲ್ಲೇ ನೋಡುವುದು. ಇಲ್ಲವಾದರೆ ಹೆದರಿ ಸತ್ತೇಹೋಗಿಬಿಟ್ಟೇನು ಅಂತ ಭಯ ಈಕೆಗೆ. ಸ್ನೇಹಿತರು ಈಕೆಯನ್ನು ಹಾರರ್ ದೃಶ್ಯಗಳು ಬಂದಾಗ ತಿವಿದು ಇನ್ನಷ್ಟು ಬೆದರಿಸುವುದು, ಕೀಟಲೆ ಮಾಡುವದು ಇದ್ದದ್ದೇ. ಒಮ್ಮೆ ವಿಮಾನದಲ್ಲಿ ಬರುತ್ತಿರುವಾಗ ಒಂದು ಹಾರರ್‌ ಫಿಲಂ ನೋಡುತ್ತಾ ಇದ್ದಳಂತೆ. ಆಗ ಭಯದಿಂದ ಆಗಾಗ ಎದುರು ಸೀಟಿನ ವ್ಯಕ್ತಿಯನ್ನು ತುಳಿದುಬಿಟ್ಟಿದ್ದಳಂತೆ. 

ಪತ್ನಿ ಜೊತೆ ರಾಣಾ ದಗ್ಗುಬಾಟಿ ಸತ್ಯನಾರಾಯಣ ಪೂಜೆ..! 
ಅಂದ ಹಾಗೆ ಬಿಪಾಶಾ ತಮ್ಮ ಕಾರಿನ ಮುಂದೆ ಮೆಣಸು ಹಾಗೂ ನಿಂಬೆಹಣ್ಣು ಕಟ್ಟಿಕೊಳ್ಳಲು ಮರೆಯುವುದಿಲ್ಲ. ಇದು ಕೆಟ್ಟ ಶಕ್ತಿಗಳನ್ನು ದೂರವಿಡುತ್ತೆ ಎಂಬುದು ಈಕೆಯ ನಂಬಿಕೆ.

ವಿದ್ಯಾ ಬಾಲನ್ ಅಪಶಕುನ ಅಂತ ಬ್ರಾಂಡ್‌ ಆದಾಗ!