MM Keeravani; ಧನ್ಯವಾದ ಶ್ರೀವಲ್ಲಿ..ವಲ್ಲಿ...; ಗೋಲ್ಡನ್ ಗ್ಲೋಬ್ಸ್ ವೇದಿಕೆಯಲ್ಲಿ ಎಂಎಂ ಕೀರವಾಣಿ ಭಾವುಕ ಮಾತು
ಗೋಲ್ಡನ್ ಗ್ಲೋಬ್ಸ್ ವೇದಿಕೆಯಲ್ಲಿ ಎಂ ಎಂ ಕೀರವಾಣಿ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎಸ್ ಎಸ್ ರಾಜಮೌಳಿ ತಂಡ ಇತಿಹಾಸ ಸೃಷ್ಟಿಸಿದೆ. ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚಿಕೊಂಡಿದ್ದ ಆರ್ ಆರ್ ಆರ್ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುತ್ತಿದೆ. ಆರ್ ಆರ್ ಆರ್ ತಂಡದ ಸಾಧನೆಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯ ಗರಿ ಸಿಕ್ಕಿದೆ. ಆರ್ ಆರ್ ಆರ್ ಸಿನಿಮಾದ ಪ್ರಸಿದ್ಧ ನಾಟು ನಾಟು....ಅತ್ಯುತ್ತಮ ಒರಿಜಿನಲ್ ಸಾಂಗ್(ಮೂಲ ಗೀತೆ) ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಭಾರತೀಯರಿಗೆ ಹೆಮ್ಮೆ ತಂದಿದೆ. RRR ಚಿತ್ರಕ್ಕೆ ಸಂಗೀತ ನೀಡಿದ ಎಂಎಂ ಕೀರವಾಣಿ ಪ್ರಶಸ್ತಿ ಹಿಡಿದು ಸಂತಸ ವ್ಯಕ್ತಪಡಿಸಿದರು. ಎಸ್ ಎಸ್ ರಾಜಮೌಳಿ ನಿರ್ದೇಶನದ ಎಲ್ಲಾ ಸಿನಿಮಾಗಳಿಗೂ ಸಂಗೀತ ನೀಡಿದ್ದು ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ. ರಾಜಮೌಳಿ ಅವರ ಸಿನಿಮಾಗಳಿಗೆ ಸಂಗೀತ ಶಕ್ತಿಯೇ ಎಂಎಂ ಕೀರವಾಣಿ.
ಎಂ ಎಂ ಕೀರವಾಣಿ ಸಾಧನೆಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯ ಗರಿ ಸಿಕ್ಕಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ. ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ ಮೊದಲ ಏಷ್ಯನ್ ಹಾಡು ಎನ್ನುವ ಹೆಗ್ಗಳಿಕೆ ಕೂಡ ಗಳಿಸಿದೆ. ಪ್ರಶಸ್ತಿ ಗೆದ್ದ ಬಳಿಕ ಕೀರವಾಣಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಟುಂಬಕ್ಕೆ ಮತ್ತು ಆರ್ ಆರ್ ಆರ್ ತಂಡದ ಬಗ್ಗೆ ಕೀರವಾಣಿ ಮಾತನಾಡಿದ್ದಾರೆ. ವಿಶೇಷವಾಗಿ ಪತ್ನಿ ಶ್ರೀವಲ್ಲಿ ಬಗ್ಗೆ ಹೇಳಿದ್ದಾರೆ.
'ಈ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್‌ಗಾಗಿ HFPA (ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್)ಗೆ ತುಂಬಾ ಧನ್ಯವಾದಗಳು. ಈ ಅದ್ಭುತ ಕ್ಷಣಕ್ಕೆ ನಾನು ತುಂಬಾ ಉತ್ಸುಕನಾಗಿದ್ದೇನೆ ಮತ್ತು ಅಲ್ಲಿಯೇ ಕುಳಿತಿರುವ ನನ್ನ ಹೆಂಡತಿಯೊಂದಿಗೆ ಈ ಸಂಭ್ರಮವನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ' ಎಂದು ಹೇಳಿದ್ದಾರೆ. 'ಈ ಪ್ರಶಸ್ತಿ ಬೇರೆಯವರದ್ದು ಎಂದು ಹಿಂದಿನಿಂದಲೂ ಹೇಳಿಕೊಂಡು ಬಂದಿರುವ ಪದ್ಧತಿಯಾಗಿದೆ. ಹಾಗಾಗಿ ಈ ರೀತಿಯ ಪ್ರಶಸ್ತಿ ಬಂದಾಗ ಆ ಮಾತುಗಳನ್ನು ಹೇಳಬಾರದೆಂದು ಯೋಚಿಸುತ್ತಿದ್ದೆ. ಈ ಪ್ರಶಸ್ತಿ ನನ್ನ ಸಹೋದರ, ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ದೂರದೃಷ್ಠಿಯಾಗಿದೆ. ನನ್ನ ಕೆಲಸದ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ್ದಕ್ಕೆ ನಾನು ಧನ್ಯವಾದ ಹೇಳುತ್ತೇನೆ' ಎಂದು ರಾಜಮೌಳಿಗೆ ವಿಶೇಷ ಧನ್ಯವಾದ ತಿಳಿಸಿದರು. ಬಳಿಕ ಆರ್ ಆರ್ ಆರ್ ತಂಡದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.
RRR ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ..
ವಿಶೇಷವಾದ ತಮ್ಮ ಮಾತಿನ ಕೊನೆಯಲ್ಲಿ ಮತ್ತೆ ಪತ್ನಿಯನ್ನು ನೆನಪಿಸಿಕೊಂಡರು. ಶ್ರೀವಲ್ಲಿ...ವಲ್ಲಿ ಎಂದು ಧನ್ಯವಾದ ತಿಳಿಸಿದರು. ಕೀರವಾಣಿ ಮಾತುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತಿಯ ಭಾವುಕ ಮಾತುಗಳಿಗೆ ಶ್ರೀವಲ್ಲಿ ಕೂಡ ಚಪ್ಪಾಳೆ ತಟ್ಟಿದ್ದಾರೆ. ಸಂತಸ ವ್ಯಕ್ತಪಡಿಸಿದ್ದಾರೆ.
ಆರ್ ಆರ್ ಆರ್ ಮತ್ತು ಎಂ ಎಂ ಕೀರವಾಣಿ ಅವರಿಗೆ ಇಡೀ ದೇಶವೇ ಅಭಿನಂದನೆ ಸಲ್ಲಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ಭಾಷೆಯ ಸಿನಿಮಾ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಹೆಮ್ಮೆಯ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ.
Naatu Naatu; ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ RRR ತಂಡಕ್ಕೆ ಪಿಎಂ ನರೇಂದ್ರ ಮೋದಿ ಅಭಿನಂದನೆ
ಪ್ರಧಾನಿ ನರೇಂದ್ರ ಮೋದಿ ಕೂಡ ಅಭಿನಂದಿಸಿದ್ದಾರೆ. 'ಬಹಳ ವಿಶೇಷವಾದ ಸಾಧನೆ. ಎಂ ಎಂ ಕೀರವಾಣಿ, ರಾಹುಲ್ ಸಿಪ್ಲಿಗುಂಜ್, ರಾಜಮೌಳಿ, ಜೂ.ಎನ್ ಟಿ ಆರ್, ರಾಮ್ ಚರಣ್ ಇಡೀ ಆರ್ ಆರ್ ಆರ್ ತಂಡಕ್ಕೆ ಅಭಿನಂದನೆಗಳು. ಪ್ರತಿಷ್ಠಿತ ಗೌರವ ಪ್ರತಿಯೊಬ್ಬ ಭಾರತೀಯನು ತುಂಬಾ ಹೆಮ್ಮೆಪಡುವಂತೆ ಮಾಡಿದೆ' ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಟ್ಟೀಟ್‌ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.