ಹಿಂದಿ ಯಾವತ್ತೂ ರಾಷ್ಟ್ರ ಭಾಷೆ ಆಗಿಲ್ಲ: ದೇವಗನ್ ಹಿಂದಿ ಏಟಿಗೆ ಸಿದ್ದರಾಮಯ್ಯ ತಿರುಗೇಟು
ಅಜಯ್ ದೇವಗನ್ ಹಿಂದಿ ಏಟಿಗೆ ಸುದೀಪ್ ತಿರುಗೇಟು, ಇಬ್ಬರು ನಟರ ನಡುವೆ ಭಾಷಾ ಯುದ್ಧ. ಬಾಲಿವುಡ್ ನಟನಿಂದ ತಪ್ಪು ತಿಳಿವಳಿಕೆಯ ಟ್ವೀಟ್. ಘನತೆಯಿಂದ ವಿವಾದ ಸುಖಾಂತ್ಯಗೊಳಿಸಿದ ಕಿಚ್ಚ. ಸುದೀಪ್‌ಗೆ ದಕ್ಷಿಣ ಭಾರತೀಯ ಕಲಾವಿದರು, ರಾಜಕಾರಣಿಗಳ ಬೆಂಬಲ
ಬೆಂಗಳೂರು (S.28): ಹಿಂದಿಯನ್ನು ರಾಷ್ಟ್ರಭಾಷೆ (National Language) ಎಂದಿರುವ ನಟ ಅಜಯ್ ದೇವಗನ್‌ಗೆ (Ajay Devgan) ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದು, ‘ಹಿಂದಿ ಎಂದೂ ನಮ್ಮ ರಾಷ್ಟ್ರ ಭಾಷೆಯಲ್ಲ, ಮುಂದೆಯೂ ಆಗಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದಿದ್ದ ನಟ ಕಿಚ್ಚ ಸುದೀಪ್ ಹೇಳಿಕೆಗೆ ಪ್ರತಿಯಾಗಿ ಟ್ವೀಟ್ (Tweet) ಮಾಡಿದ್ದ ಅಜಯ್ ದೇವಗನ್, ಹಿಂದಿ ಎಂದೆಂದೂ ರಾಷ್ಟ್ರ ಭಾಷೆ’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ, ಮುಂದೆಯೂ ಆಗಲ್ಲ. ರಾಜ್ಯದ ಭಾಷಾ ವೈವಿಧ್ಯತೆಯನ್ನು ಗೌರವಿಸಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಪ್ರತಿಯೊಂದು ಭಾಷೆಯೂ ಆ ಭಾಷೆಯ ಜನರು ಹೆಮ್ಮೆ ಪಡುವಂತಹ ತನ್ನದೇ ಆದ ಶ್ರೀಮಂತ ಇತಿಹಾಸವನ್ನು ಹೊಂದಿರುತ್ತದೆ. ನಾನು ಕನ್ನಡಿಗನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ’ ಎಂದು ತಿರುಗೇಟು ನೀಡಿದ್ದಾರೆ.
ನಡೆದಿದ್ದೇನು?
ಬಾಲಿವುಡ್ (Bollywood) ನಟ ಅಜಯ್ ದೇವಗನ್ ಅವರು ಕನ್ನಡದ ಖ್ಯಾತ ನಟ ಸುದೀಪ್ ಅವರನ್ನುದ್ದೇಶಿಸಿ ಮಾಡಿದ ಟ್ವೀಟ್ ಸುದೀರ್ಘ ಸಂವಾದಕ್ಕೆ ಕಾರಣವಾಗಿ ಕೊನೆಗೆ ಸುಖಾಂತ್ಯ ಕಂಡ ಘಟನೆ ಬುಧವಾರ ನಡೆದಿದೆ. ಅಜಯ್ ದೇವಗನ್ ಟ್ವೀಟ್‌ಗೆ ಸುದೀಪ್ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾದರೂ, ಸುದೀಪ್ ಇಡೀ ಪ್ರಸಂಗವನ್ನು ಘನತೆಯಿಂದ ನಿಭಾಯಿಸಿ, ಸಂಯಮ ಮೆರೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರ ವೇಳೆ ಸುದೀಪ್ ಅವರು ಹಿಂದಿ ರಾಷ್ಟ್ರಭಾಷೆ ಎಲ್ಲ ಎಂದು ಹೇಳಿದ್ದರು. ಈ ಹೇಳಿಕೆ ಉಲ್ಲೇಖಿಸಿ ಬುಧವಾರ ಟ್ವೀಟ್ ಮಾಡಿದ ಅಜಯ್ ದೇವಗನ್, ‘ಸಹೋದರ, ನಿಮ್ಮ ಹೇಳಿಕೆ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. ಹಾಗಿದ್ದರೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನೇಕೆ ಹಿಂದಿಗೆ ಡಬ್ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಹಾಗೂ ರಾಷ್ಟ್ರಭಾಷೆ ಆಗಿದೆ. ಇಂದೂ ಮತ್ತು ಎಂದೆಂದಿಗೂ. ಜನ ಗಣ ಮನ’ ಎಂದು ಸುದೀಪ್ (Sudeep) ಅವರನ್ನು ಕಿಚಾಯಿಸುವ ಯತ್ನ ಮಾಡಿದ್ದರು.
ಟ್ವೀಟ್ ವಿವಾದ: ಸುದೀಪ್ ಗೆ ದಕ್ಷಿಣ ಭಾರತೀಯ ನಟರ ಸಾಥ್
ಸುದೀಪ್ ತಿರುಗೇಟು:
ಬಾಲಿವುಡ್ ನಟನ ಈ ಟ್ವೀಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಾಕಷ್ಟುಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾದವು. ಆದರೂ ಸಂಯಮ ಕಳೆದುಕೊಳ್ಳದ ಸುದೀಪ್, ಅಜಯ್‌ಗೆ ಟ್ವೀಟರ್‌ನಲ್ಲೇ ಪ್ರತಿಕ್ರಿಯಿಸಿ ‘ನಾನು ದೇಶದ ಪ್ರತಿಯೊಂದು ಭಾಷೆಯನ್ನು ಗೌರವಿಸುತ್ತೇನೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದಿರುವ ನನ್ನ ಹೇಳಿಕೆಯಲ್ಲಿ ಯಾವ ತಪ್ಪೂ ಇಲ್ಲ. ಆದರೆ, ಆ ಸಾಲುಗಳನ್ನು ನಾನು ಯಾವ ಸನ್ನಿವೇಶದಲ್ಲಿ ಹೇಳಿದ್ದೇನೆ ಎನ್ನುವುದು ಮುಖ್ಯವಾಗುತ್ತದೆ. ನನ್ನ ಈ ಮಾತುಗಳನ್ನು ಯಾವ ಅರ್ಥದಲ್ಲಿ ಹೇಳಿದ್ದೇನೆಂಬುದನ್ನು ಖುದ್ದಾಗಿ ನಿಮ್ಮನ್ನು ಭೇಟಿ ಮಾಡಿದಾಗ ವಿವರಿಸುತ್ತೇವೆ. ನಾನು ಯಾರನ್ನೂ ನೋಯಿಸಲು, ಪ್ರಚೋದಿಸಲು ಮತ್ತು ಚರ್ಚೆ ಮಾಡಲು ಹೇಳಿದ್ದಲ್ಲ. ನೀವು ಹಿಂದಿಯಲ್ಲಿ ಕಳುಹಿಸಿದ ಸಂದೇಶ ನನಗೆ ಅರ್ಥವಾಯಿತು. ನಾನು ಹಿಂದಿ (Hindi) ಕಲಿತಿದ್ದೇನೆ. ಗೌರವಿಸುತ್ತೇನೆ. ಅದು ತಪ್ಪಲ್ಲ. ನಿಮ್ಮಂತೆಯೇ ನಾನೂ ಕೂಡ ನನ್ನ ಉತ್ತರವನ್ನು ಕನ್ನಡದಲ್ಲೇ ಕಳುಹಿಸಿದ್ದರೆ ಪರಿಸ್ಥಿತಿ ಏನಾಗಬಹುದು ಎಂದು ಅಚ್ಚರಿ ಪಡುತ್ತಿದ್ದೇನೆ. ನಾವೆಲ್ಲರೂ ಭಾರತಕ್ಕೆ ಸೇರಿದವರು ಅಲ್ಲವೇ’ ಎಂದು ಪ್ರತ್ಯುತ್ತರ ಕೊಟ್ಟರು.
ಧನ್ಯವಾದ ಸಲ್ಲಿಸಿದ ಅಜಯ್: ನಟ ಸುದೀಪ್ ಅವರ ಸರಣಿ ಟ್ವೀಟ್‌ಗಳಿಂದ ವಿಷಯ ಅರ್ಥ ಮಾಡಿಕೊಂಡ ನಟ ಅಜಯ್ ದೇವ್‌ಗನ್, ‘ನೀವು ನನ್ನ ಸ್ನೇಹಿತ. ತಪ್ಪು ತಿಳುವಳಿಕೆಯನ್ನು ತೆರವುಗೊಳಿಸಿದ್ದಕ್ಕೆ ಧನ್ಯವಾದಗಳು. ನಾನು ಚಿತ್ರರಂಗ (Movie Industry) ಎಂದರೆ ಒಂದೇ ಎಂದು ಭಾವಿಸುತ್ತೇನೆ. ನಾವು ಎಲ್ಲ ಭಾಷೆಗಳನ್ನು ಗೌರವಿಸುತ್ತೇವೆ. ಹಾಗೇ ಪ್ರತಿಯೊಬ್ಬರು ನಮ್ಮ ಭಾಷೆಯನ್ನು ಗೌರವಿಸಬೇಕು ಎಂದು ನಿರೀಕ್ಷೆ ಮಾಡುತ್ತೇವೆ. ನಿಮ್ಮ ಹೇಳಿಕೆಯನ್ನು ಅನುವಾದ ಮಾಡಿಸಿಕೊಂಡು ಅರ್ಥ ಮಾಡಿಕೊಳ್ಳುವುದರಲ್ಲಿ ತಪ್ಪಾಗಿದೆ’ ಎಂದು ಅಜಯ್ ದೇವ್‌ಗನ್ ಪ್ರತಿಕ್ರಿಯಿಸಿದರು.
ನಿಮ್ಮನ್ನು ದೂಷಿಸುತ್ತಿಲ್ಲ: ಅಜಯ್ ದೇವ್‌ಗನ್ ಟ್ವೀಟ್‌ಗೆ ಉತ್ತರವಾಗಿ ಸುದೀಪ್, ‘ಅನುವಾದ, ಅಭಿಪ್ರಾಯಗಳೆಲ್ಲ ಅವರವರ ದೃಷ್ಟಿಕೋನಕ್ಕೆ ಸಂಬಂಧಿಸಿದ್ದು. ಹೀಗಾಗಿಯೇ ನಾನು ಪೂರ್ತಿ ವಿಚಾರ ಗೊತ್ತಿಲ್ಲದೆ ಪ್ರತಿಕ್ರಿಯೆ ನೀಡುವುದಿಲ್ಲ. ಯಾವುದಾದರೂ ಸೃಜನಶೀಲ ಕಾರ್ಯದ ಕುರಿತು ನೀವು ಟ್ವೀಟ್ ಮಾಡಿದ್ದರೆ ಇದಕ್ಕಿಂತ ಹೆಚ್ಚು ಸಂತೋಷವಾಗುತ್ತಿತ್ತು’ ಎಂದು ಹೇಳುವ ಮೂಲಕ ಇಡೀ ವಿವಾದಕ್ಕೆ ತೆರೆ ಎಳೆದರು.
ಕಿಚ್ಚನ ಏಟಿಗೆ ದೇವಗನ್ ಥಂಡಾ
ಕಲೆಗೆ ಭಾಷೆಯ ಗಡಿಯಿಲ್ಲ: ರಮ್ಯಾ
ಅಜಯ್ ದೇವಗನ್ ಟ್ವೀಟ್‌ಗೆ ನಟಿ ರಮ್ಯಾ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ. ಈ ಬಗ್ಗೆ ನಿಮ್ಮ ಅಜ್ಞಾನ ಆಶ್ಚರ್ಯಕಾರಿಯಾಗಿದೆ. ಆರ್‌ಆರ್‌ಆರ್, (RRR) ಕೆಜಿಎಫ್ (KGF) ಮತ್ತು ಪುಷ್ಪಾ (Pushpa)ದಂಥ ಅತ್ಯುತ್ತಮ ಸಿನಿಮಾಗಳು ಹಿಂದಿ ಮಾತಾಡುವವರ ಪ್ರದೇಶದಲ್ಲಿ ಚೆನ್ನಾಗಿ ಓಡಿವೆ. ಕಲೆಗೆ ಭಾಷೆಯ ಗಡಿ ಇಲ್ಲ. ನಾವು ನಿಮ್ಮ ಸಿನಿಮಾಗಳನ್ನು ಮೆಚ್ಚುವಂತೆ, ನೀವೂ ನಮ್ಮ ಸಿನಿಮಾಗಳನ್ನು ಸಂತೋಷದಿಂದ ನೋಡಿ’ ಎಂದು ರಮ್ಯಾ ಹಿಂದಿ ಹೇರಿಕೆ ನಿಲ್ಲಿಸಿ ಹ್ಯಾಶ್‌ಟ್ಯಾಗ್ ಜತೆ ಟ್ವೀಟ್ ಮಾಡಿದ್ದಾರೆ.
"