ಕಿಚ್ಚನ ಏಟಿಗೆ ನಟ ಅಜಯ್ ದೇವಗನ್ ಥಂಡಾ
ಹಿಂದಿ ಭಾಷೆಯ ಬಗ್ಗೆ ಕಿಚ್ಚ ಸುದೀಪ್ ನೀಡಿದ ಹೇಳಿಕೆಯ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ನಟ ಅಜಯ್ ದೇವಗನ್, ಟ್ವಿಟರ್ ನಲ್ಲಿ ಸಂಪೂರ್ಣ ಹಿಂದಿ ಭಾಷೆಯಲ್ಲೇ ಬರೆದ ಟ್ವೀಟ್ ಮೂಲಕ ಸುದೀಪ್ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.
ಬೆಂಗಳೂರು (ಏ.27): ಕೆಜಿಎಫ್ 2 ಚಿತ್ರದ ದೊಡ್ಡ ಯಶಸ್ಸಿನ ಬಳಿಕ ಮಾತನಾಡಿದ್ದ ನಟ ಕಿಚ್ಚ ಸುದೀಪ್ (Kiccha Sudeep), ಸಮಾರಂಭವೊಂದರಲ್ಲಿ ಮಾತನಾಡುತ್ತಾ ಪ್ಯಾನ್ ಇಂಡಿಯನ್ (Pan Indian Movies) ಚಲನಚಿತ್ರಗಳ ಬಗ್ಗೆ ಮಾತನಾಡಿದ್ದರು. ಇದೇ ವೇಳೆ ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ ಎಂದು ಹೇಳಿಕೆ ನೀಡಿದ್ದರು.
ಈ ನಡುವೆ ಸುದೀಪ್ ಅವರ ಟ್ವೀಟ್ ಗೆ ಸಂಪೂರ್ಣ ಹಿಂದಿಯಲ್ಲೇ ಬರೆದ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಅಜಯ್ ದೇವಗನ್ (Ajay Devgn), ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ ಎಂದು ನೀವು ಹೇಳುತ್ತಿದ್ದೀರಿ ಆದರೆ, ನಿಮ್ಮ ಚಿತ್ರಗಳನ್ನೇಕೆ ಹಿಂದಿ ಭಾಷೆಗಳಿಗೇಕೆ ಡಬ್ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಕಿಚ್ಚ ಸುದೀಪ್ ಬ್ರದರ್, ನಿಮ್ಮ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದು ಹೇಳುತ್ತಿದ್ದೀರಿ. ಹಾಗಿದ್ದಲ್ಲಿ ನಿಮ್ಮ ಮಾತೃಭಾಷೆಯಲ್ಲಿ ನಿರ್ಮಾಣ ಮಾಡಿರುವ ಚಿತ್ರಗಳನ್ನೇಕೆ ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದೀರಿ? ಹಿಂದಿ ನಮ್ಮ ಮಾತೃಭಾಷೆ ಹಾಗೂ ಬಹುಶಃ ಮುಂದೆಯೂ ಕೂಡ ಇದು ನಮ್ಮ ರಾಷ್ಟ್ರಭಾಷೆಯಾಗಿಯೇ ಇರಲಿದೆ. ಜನ ಗಣ ಮನ ಎಂದು ಟ್ವೀಟ್ ಮಾಡಿದ್ದರು.
ಕೆಲವು ದಿನಗಳ ಹಿಂದೆ, ಸುದೀಪ್ ಆರ್: ದಿ ಡೆಡ್ಲಿಯಸ್ಟ್ ಗ್ಯಾಂಗ್ ಸ್ಟರ್ ಎವರ್ ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಈ ಕಾಮೆಂಟ್ ಗಳನ್ನು ಮಾಡಿದ್ದರು. ಕನ್ನಡ ಚಿತ್ರವೊಂದು ಪ್ಯಾನ್ ಇಂಡಿಯಾದಲ್ಲಿ ಹಿಟ್ ಆಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸುದೀಪ್, ಪ್ಯಾನ್ ಇಂಡಿಯಾ ಸಿನಿಮಾವನ್ನು ಕನ್ನಡದಲ್ಲಿ ಮಾಡಿದ್ದೇವೆ ಎಂದು ಹೇಳಿದ್ದೀರಿ. ನಾನು ಒಂದು ಸಣ್ಣ ತಿದ್ದುಪಡಿ ಮಾಡಲು ಬಯಸುತ್ತೇನೆ. ಹಿಂದಿ ಇನ್ನು ರಾಷ್ಟ್ರೀಯ ಭಾಷೆಯಾಗಿಲ್ಲ. ಅವರು (ಬಾಲಿವುಡ್) ಇಂದು ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನು ಮಾಡುತ್ತಿದ್ದಾರೆ. ಅವರು ತೆಲುಗು ಮತ್ತು ತಮಿಳಿನಲ್ಲಿ ಡಬ್ಬಿಂಗ್ ಮಾಡುವ ಮೂಲಕ ಯಶಸ್ಸು ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ, ಆದರೆ ಅದು ಆಗುತ್ತಿಲ್ಲ. ಇಂದು ನಾವು ಎಲ್ಲೆಲ್ಲಿಯೂ ಹೋಗುವ ಸಿನಿಮಾಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದರು.
ಹಿಂದಿ ರಾಷ್ಟ್ರಭಾಷೆಯಲ್ಲ, ಹಿಂದಿ ಸಿನಿಮಾಗಳನ್ನು ದಕ್ಷಿಣದಲ್ಲಿ ರಿಲೀಸ್ ಮಾಡಲು ಒದ್ದಾಡುತ್ತಿದ್ದಾರೆ- ಸುದೀಪ್
ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್, ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್ ನನಗೆ ಅರ್ಥವಾಯ್ತು. ನಾನು ಕನ್ನಡದಲ್ಲಿ ಟೈಪ್ ಮಾಡಿದ್ರೆ ಪರಿಸ್ಥಿತಿ ಏನಾಗಬಹುದು? ನಾವೆಲ್ಲರೂ ಗೌರವಿಸಿದ್ದೇವೆ, ಪ್ರೀತಿಸಿದ್ದೇವೆ, ಹಿಂದಿ ಕಲಿತಿದ್ದೇವೆ’ ನಾವೂ ಭಾರತಕ್ಕೆ ಸೇರಿದವರಲ್ಲವೇ ಸಾರ್ ? ಹಿಂದಿಯಲ್ಲಿ ಟ್ವೀಟ್ ಮಾಡಿದ್ದ ದೇವಗನ್ಗೆ ಸುದೀಪ್ ತಿರುಗೇಟು ನೀಡಿದ್ದಾರೆ.
ನಟ ಅಜಯ್ ದೇವಗನ್ ಟೀಕೆಗೆ ಕಿಚ್ಚ ಸುದೀಪ್ ಟ್ವೀಟ್ ನಲ್ಲಿಯೇ ತಿರುಗೇಟಿ ನೀಡಿದ್ದರು. ನನ್ನ ಹೇಳಿಕೆ ಕೆರಳಿಸುವ, ನೋಯಿಸುವಂಥದ್ದಲ್ಲ, ಈ ವಿಷಯದಲ್ಲಿ ಚರ್ಚೆ ಹುಟ್ಟುಹಾಕುವ ಉದ್ದೇಶವೂ ಇಲ್ಲ. ನಾನು ದೇಶದ ಎಲ್ಲ ಭಾಷೆಗಳನ್ನು ಗೌರವಿಸುತ್ತೇನೆ, ನನ್ನ ಹೇಳಿಕೆ ಬೇರೆಯದ್ದೇ ಅರ್ಥದಲ್ಲಿತ್ತು. ನನ್ನ ಹೇಳಿಕೆ ನಿಮಗೆ ಬೇರೆಯದ್ದೇ ರೀತಿಯೇ ತಲುಪಿದೆ. ಈ ವಿಚಾರವನ್ನು ಇಲ್ಲಿಗೆ ಮುಕ್ತಾಯಗೊಳಿಸೋಣ. ನಿಮ್ಮ ಮೇಲೆ ಪ್ರೀತಿ, ಗೌರವವಿದೆ, ಶೀಘ್ರ ಭೇಟಿಯಾಗೋಣ ಎಂದು ಟ್ವಿಟರ್ನಲ್ಲಿ ಅಜಯ್ ದೇವಗನ್ಗೆ ಸುದೀಪ್ ಟಾಂಗ್ ನೀಡಿದ್ದಾರೆ.
'ನನ್ನ ಮೂರ್ತಿ ಮಾಡುವುದು ಗೊತ್ತಿದ್ದರೆ ಬೇಡ ಅಂತಿದ್ದೆ':ರಾಯಚೂರಿನಲ್ಲಿ ಕಿಚ್ಚ ಸುದೀಪ್
ಕಿಚ್ಚನ ಏಟಿಗೆ ನಟ ಅಜಯ್ ದೇವಗನ್ ಥಂಡಾ: ಅಜಯ್ ದೇವಗನ್ ಮಾಡಿದ ಕೆಣಕುವಂಥ ಟ್ವೀಟ್ ಗೆ ಕಿಚ್ಚ ಸುದೀಪ್ ಕೂಡ ಸ್ಪಷ್ಟ ಟ್ವೀಟ್ ಗಳನ್ನು ಮಾಡಿದ ಬೆನ್ನಲ್ಲಿಯೇ ಅಜಯ್ ದೇವಗನ್ ಇದು ವಿವಾದವಾಗುವುದನ್ನು ಅರಿತು ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ನೀವು ನನ್ನ ಫ್ರೆಂಡ್ ಎಂದು ಟ್ವೀಟ್ ಮಾಡಿದ ಅಜಯ್ ದೇವಗನ್, ತಪ್ಪು ತಿಳಿವಳಿಕೆಗೆ ಸ್ಪಷ್ಟನೆ ನೀಡಿದ್ದಕ್ಕೆ ಥ್ಯಾಂಕ್ಸ್. ಇಡೀ ಚಿತ್ರೋದ್ಯಮ ಒಂದೇ ನಾನು ನಂಬಿದ್ದೇನೆ. ಎಲ್ಲ ಭಾಷೆಗಳನ್ನು ನಾವು ಗೌರವಿಸಬೇಕು ಎಲ್ಲರೂ ನಮ್ಮ ಭಾಷೆ ಗೌರವಿಸಬೇಕೆಂದು ನಿರೀಕ್ಷಿಸುತ್ತೇವೆ ಎಂದು ಟ್ವೀಟ್ ಮಾಡಿದ್ದು, ಇಡೀ ಟ್ವೀಟ್ ಅನ್ನು ಸಂಪೂರ್ಣವಾಗಿ ಇಂಗ್ಲೀಷ್ ನಲ್ಲಿ ಮಾಡಿದ್ದಾರೆ.