ವಿಚ್ಛೇದನದ ಬಳಿಕವೂ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ತಮ್ಮ ಇಬ್ಬರು ಮಕ್ಕಳಿಗಾಗಿ ಸ್ನೇಹಪೂರ್ವಕ ಸಂಬಂಧ ಮುಂದುವರಿಸುತ್ತಿದ್ದಾರೆ. ಕುಟುಂಬದ ಕಾರ್ಯಕ್ರಮಗಳಲ್ಲಿ, ಮಕ್ಕಳ ಜೊತೆಗಿನ ಪ್ರವಾಸಗಳಲ್ಲಿ ಹಾಗೂ ಕೆಲವು ವಿಶೇಷ ಸಂದರ್ಭಗಳಲ್ಲಿ ಈ ಇಬ್ಬರೂ ಕೂಡ, ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಹೃತಿಕ್-ಸುಸೇನ್ ಡಿವೋರ್ಸ್ ಕೇಸ್‌ನಲ್ಲಿ ನಿಜವಾಗಿ ನಡೆದಿದ್ದೇನು?
ಬಾಲಿವುಡ್ ನಟ ಹೃತಿಕ್ ರೋಶನ್ (Hrithik Roshan) ಹಾಗೂ ಮಾಜಿ ಪತ್ನಿ ಸುಸೈನ್ ಖಾನ್ (Sussanne Khan) ನಡುವಿನ ಡಿವೋರ್ಸ್ ಕೇಸ್‌ನಲ್ಲಿ ಈಗ ಹೊಸದೊಂದು ಟ್ವಿಸ್ಟ್ ಹೊರಬಂದಿದೆ. ಅವರಿಬ್ಬರ ವಿಚ್ಛೇದನದ ಸಮಯದಲ್ಲಿ, ಸುಸೇನ್ ಖಾನ್‌ಗೆ 400 ಕೋಟಿ ರೂಪಾಯಿ ಜೀವನಾಂಶ ನೀಡಲಾಗಿದೆ ಎಂಬ ಸುದ್ದಿ ದೇಶಾದ್ಯಂತ ವ್ಯಾಪಕವಾಗಿ ಹರಡಿತ್ತು. ಆದರೆ, ಆಮೇಲೆ ಅದೇ ಸುದ್ದಿ ತಣ್ಣಗಾಗಿತ್ತು.
ಯೆಸ್, ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಸುಸೇನ್ ಖಾನ್ ಜೋಡಿಯ ವಿಚ್ಛೇದನವು (Divorce) ಬಾಲಿವುಡ್‌ನಲ್ಲಿ ಅತೀ ಹೆಚ್ಚು ಚರ್ಚೆಗೆ ಗ್ರಾಸವಾದ ವಿಷಯಗಳಲ್ಲಿ ಒಂದು ಎನ್ನಬಹುದು. ಸುಮಾರು 14 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ಈ ಜೋಡಿ 2014ರಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ವೈವಾಹಿಕ ಸಂಬಂಧ ಕೊನೆಗೊಳಿಸಿಕೊಂಡಿದ್ದಾರೆ. ಆದರೆ ವಿಚ್ಛೇದನಕ್ಕಿಂತಲೂ ಹೆಚ್ಚು ಸುದ್ದಿಯಾಗಿದ್ದು, ಸುಸೇನ್ ಖಾನ್ ಅವರು ಹೃತಿಕ್ ರೋಷನ್ ಅವರಿಂದ 400 ಕೋಟಿ ರೂಪಾಯಿ ಜೀವನಾಂಶ ಪಡೆದಿದ್ದಾರೆ ಎಂಬ ವದಂತಿ.
ವಿಚ್ಛೇದನದ ಸಮಯದಲ್ಲಿ, ಸುಸೇನ್ ಖಾನ್ 400 ಕೋಟಿ ರೂಪಾಯಿ ಜೀವನಾಂಶ ಪಡೆದಿದ್ದಾರೆ ಎಂಬ ಸುದ್ದಿ ದೇಶಾದ್ಯಂತ ವ್ಯಾಪಕವಾಗಿ ಹರಡಿತ್ತು. ಈ ಮಾಹಿತಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿತ್ತು. ಹೀಗಾಗಿ ಅನೇಕರು ಈ ಸುದ್ದಿಯನ್ನು ನಿಜವೆಂದು ನಂಬಿದ್ದರು. ಆದರೆ ಇದೀಗ ಫರಾ ಖಾನ್ ಅಲಿ ಈ ಸುದ್ದಿ ಬಗ್ಗೆ ಮಾತನ್ನಾಡಿ, ಹಲವು ಸಂಗತಿಗಳನ್ನು ಸ್ಪಷ್ಟಪಡಿಸಿದ್ದಾರೆ.
ಫರಾ ಖಾನ್ ಅಲಿ ಹೇಳಿದ್ದೇನು?
ಇತ್ತೀಚೆಗೆ ವಿಕ್ಕಿ ಲಾಲ್ವಾನಿ ಅವರಿಗೆ ನೀಡಿದ ಇಂಟರ್‌ವ್ಯೂದಲ್ಲಿ ಮಾತನಾಡಿದ ಫರಾ ಖಾನ್ ಅಲಿ, 'ವಿಚ್ಛೇದನದ ವೇಳೆ 400 ಕೋಟಿ ರೂಪಾಯಿ ಜೀವನಾಂಶ ಪಡೆದಿದ್ದಾರೆ ಎಂಬ ಸುದ್ದಿಗೆ ಯಾವುದೇ ಆಧಾರವಿಲ್ಲ' ಎಂದು ತಿಳಿಸಿದ್ದಾರೆ. ಹಬ್ಬಿರುವ ಈ ರೀತಿಯ ವದಂತಿಗಳು ತಮ್ಮ ಕುಟುಂಬಕ್ಕೆ ಸಾಕಷ್ಟು ನೋವು ತಂದಿವೆ' ಎಂದು ಹೇಳಿದ್ದು ಇದೀಗ ವೈರಲ್ ಆಗುತ್ತಿದೆ.
ಆ 400 ಕೋಟಿ ರೂ. ಜೀವನಾಂಶದ ಅಸಲಿ ಸತ್ಯ!
ಅಷ್ಟೇ ಅಲ್ಲ, ಫರಾ ಖಾನ್ ಅಲಿ 'ಹೃತಿಕ್ ಮತ್ತು ಸುಸೇನ್ ಇಬ್ಬರೂ ತಮ್ಮ ವೈಯಕ್ತಿಕ ಜೀವನದ ಅತ್ಯಂತ ಸೂಕ್ಷ್ಮ ಹಂತವನ್ನು ಸಾಕಷ್ಟು ಪ್ರಬುದ್ಧತೆ ಮತ್ತು ಪರಸ್ಪರ ಗೌರವದೊಂದಿಗೆ ನಿರ್ವಹಿಸಿದ್ದಾರೆ. ಅವರ ವಿಚ್ಛೇದನದಲ್ಲಿ ಯಾವುದೇ ವೈಮನಸ್ಯ ಇರಲಿಲ್ಲ. ಅದು ಸಂಪೂರ್ಣ ಸೌಹಾರ್ದಯುತವಾಗಿ ಮುಗಿದ ಪ್ರಕ್ರಿಯೆ' ಎಂದು ಸ್ಪಷ್ಟವಾಗಿ ವಿವರಿಸಿದ್ದಾರೆ.
ಫರಾ ಖಾನ್ ಅಲಿ ನೀಡಿರುವ ಹೇಳಿಕೆಯಲ್ಲಿ ಎಲ್ಲಕ್ಕಿಂತ ಪ್ರಮುಖ ಅಂಶವೆಂದರೆ, ಅದು 'ಸುಸೇನ್ ಖಾನ್ ಅವರು ಹೃತಿಕ್ ರೋಷನ್ ಅವರಿಂದ ಒಂದು ರೂಪಾಯಿಯ ಜೀವನಾಂಶವಾಗಿ ಪಡೆದಿಲ್ಲ' ಎಂಬುದು. 'ತಮ್ಮ ಕುಟುಂಬವು ಯಾವಾಗಲೂ ಹಣಕ್ಕಿಂತ ಸಂಬಂಧಗಳಿಗೆ ಹೆಚ್ಚಿನ ಮೌಲ್ಯ ನೀಡುವುದನ್ನು ಕಲಿಸಿದೆ' ಎಂದು ಸಹ ಫರಾ ಖಾನ್ ಅಲಿ ಹೇಳಿದ್ದಾರೆ.
ಫರಾ ಖಾನ್ ಅಲಿ ಅವರು ಇನ್ನೂ ಸ್ಪಷ್ಟವಾಗಿ ಈ ಬಗ್ಗೆ ಮಾತನ್ನಾಡಿದ್ದು, 'ಹಣಕ್ಕಿಂತ ಸಂಬಂಧ ಮುಖ್ಯ ಎಂಬ ಒಂದೇ ಒಂದು ಕಾರಣಕ್ಕೆ ಸುಸೇನ್ ಯಾವುದೇ ಆರ್ಥಿಕ ಲಾಭವನ್ನು ನಿರೀಕ್ಷಿಸಿರಲಿಲ್ಲ. ವಿಚ್ಛೇದನದ ಬಳಿಕವೂ ಅವರು ಹೃತಿಕ್ ರೋಷನ್ ಹಾಗೂ ಅವರ ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ರಾಕೇಶ್ ರೋಷನ್ ಮತ್ತು ಪಿಂಕಿ ರೋಷನ್ ಸೇರಿದಂತೆ ಕುಟುಂಬದ ಸದಸ್ಯರು ಇಂದಿಗೂ ಸುಸೇನ್ ಅವರನ್ನು ಆತ್ಮೀಯವಾಗಿ ಕಾಣುತ್ತಾರೆ' ಎಂಬ ರಹಸ್ಯವನ್ನೂ ಸಹ ಫರಾ ಖಾನ್ ಅಲಿ ಹೇಳಿದ್ದಾರೆ.
ಇಂದಿಗೂ ಕೂಡ, ಅಂದರೆ ವಿಚ್ಛೇದನದ ಬಳಿಕವೂ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ತಮ್ಮ ಇಬ್ಬರು ಮಕ್ಕಳಿಗಾಗಿ ಸ್ನೇಹಪೂರ್ವಕ ಸಂಬಂಧ ಮುಂದುವರಿಸುತ್ತಿದ್ದಾರೆ. ಕುಟುಂಬದ ಕಾರ್ಯಕ್ರಮಗಳಲ್ಲಿ, ಮಕ್ಕಳ ಜೊತೆಗಿನ ಪ್ರವಾಸಗಳಲ್ಲಿ ಹಾಗೂ ಕೆಲವು ವಿಶೇಷ ಸಂದರ್ಭಗಳಲ್ಲಿ ಈ ಇಬ್ಬರೂ ಕೂಡ, ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅವರಿಬ್ಬರಿಗೂ ದಾಂಪತ್ಯ ಸರಿಹೋಗದಿರಬಹುದು, ಆದರೆ ಅದರಾಚೆಗಿನ ಸಂಬಂಧವನ್ನು ಚೆನ್ನಾಗಿ ನಿರ್ವಹಿಸುವುದು ಗೊತ್ತು' ಎಂಬ ಮಾತು ಹೇಳುವ ಮೂಲಕ 'ಹಬ್ಬಿರುವ ಸುದ್ದಿಯೇ ಬೇರೆ, ಅಸಲೀ ವಿಷಯವೇ ಬೇರೆ ಎಂಬುದನ್ನು ಫರಾ ಖಾನ್ ಅಲಿ ಹೇಳಿದ್ದಾರೆ.


