ಮೊದಲು ದರ್ಶನ್‌ ನಟನೆಯ ‘ಡೆವಿಲ್‌’ ಚಿತ್ರಕ್ಕೆ ರೇಟಿಂಗ್‌ ಕೊಡುವುದನ್ನು ನಿರ್ಬಂಧಿಸಲಾಯಿತು. ಅದರ ಬೆನ್ನಲ್ಲೇ ಸುದೀಪ್‌ ನಟನೆಯ ‘ಮಾರ್ಕ್‌’, ಶಿವಣ್ಣ, ಉಪೇಂದ್ರ ಹಾಗೂ ರಾಜ್‌ ಬಿ.ಶೆಟ್ಟಿ ನಟನೆಯ ‘45’ ಚಿತ್ರ ವಿಮರ್ಶೆ ಮಾಡದಂತೆ ನಿರ್ಬಂಧ ಹೇರಲಾಯಿತು

ಮೊದಲು ದರ್ಶನ್‌ ನಟನೆಯ ‘ಡೆವಿಲ್‌’ ಚಿತ್ರಕ್ಕೆ ರೇಟಿಂಗ್‌ ಕೊಡುವುದನ್ನು ನಿರ್ಬಂಧಿಸಲಾಯಿತು. ಅದರ ಬೆನ್ನಲ್ಲೇ ಸುದೀಪ್‌ ನಟನೆಯ ‘ಮಾರ್ಕ್‌’, ಶಿವಣ್ಣ, ಉಪೇಂದ್ರ ಹಾಗೂ ರಾಜ್‌ ಬಿ.ಶೆಟ್ಟಿ ನಟನೆಯ ‘45’ ಚಿತ್ರ ವಿಮರ್ಶೆ ಮಾಡದಂತೆ ನಿರ್ಬಂಧ ಹೇರಲಾಯಿತು. ಇದೀಗ ತೆಲುಗಿನ ಚಿರಂಜೀವಿ ಚಿತ್ರವೂ ಇದೇ ಹೆಜ್ಜೆ ಇಟ್ಟಿದೆ. ಹಾಗಾದರೆ ದುಡ್ಡು ಕೊಟ್ಟು ಸಿನಿಮಾ ನೋಡುವ ಪ್ರೇಕ್ಷಕನಿಗೆ ಸಿನಿಮಾ ಕುರಿತು ಮಾತನಾಡುವ ಹಕ್ಕಿಲ್ಲವೇ! ಯಾಕೆ ಹೀಗಾಗುತ್ತಿದೆ, ಮುಂದೇನ್‌ ಕತೆ ಎಂಬುದರ ಕುರಿತು ಈ ಬರಹ.

- ಆರ್. ಕೇಶವಮೂರ್ತಿ

ಕನ್ನಡ ಚಿತ್ರರಂಗದಲ್ಲಿ ಕಾಲಕಾಲಕ್ಕೆ ಹೊಸ ಟ್ರೆಂಡ್ ಬರುತ್ತಿರುತ್ತದೆ. ಇದೀಗ ರೇಟಿಂಗ್ ನಿರ್ಬಂಧ ಟ್ರೆಂಡ್ ಬಂದಿದೆ.

ತಮ್ಮ ಚಿತ್ರಗಳಿಗೆ ನೆಗೆಟಿವ್‌ ರಿವ್ಯೂ ಬರೆಯಬಾರದು, ಕಾಮೆಂಟ್‌ ಹಾಕಬಾರದು, ರೇಟಿಂಗ್‌ ಕೊಡಬಾರದೆಂದು ಸಿನಿಮಾ ತಂಡಗಳು ಹೇಳಲಾರಂಭಿಸಿವೆ. ದರ್ಶನ್‌ ನಟನೆಯ ‘ದಿ ಡೆವಿಲ್‌’ ಚಿತ್ರದಿಂದ ಶುರುವಾದ ಈ ನಿರ್ಬಂಧದ ನಡೆ ‘45’, ‘ಮಾರ್ಕ್’ ದಾಟಿ ಈಗ ಚಿರಂಜೀವಿಯವರ ‘ಮನ ಶಂಕರ್‌ ವರಪ್ರಸಾದ್‌ ಗಾರು’ ಮೂಲಕ ತೆಲುಗಿಗೂ ಕಾಲಿಟ್ಟಿದೆ.

ಇಲ್ಲಿ ಎರಡು ವಾದಗಳಿವೆ. ಒಂದು ಪ್ರೇಕ್ಷಕರ ಹಕ್ಕನ್ನು ಕಿತ್ತುಕೊಳ್ಳಲಾಗಿದೆ, ದುಡ್ಡು ಕೊಟ್ಟು ಸಿನಿಮಾ ನೋಡುವ ಪ್ರೇಕ್ಷಕನಿಗೆ ರೇಟಿಂಗ್ ಕೊಡುವ ಹಕ್ಕಿಲ್ಲವೇ ಅನ್ನುವುದು. ಇನ್ನೊಂದು ಸಿನಿಮಾಗಳಿಗೆ ಉದ್ದೇಶಪೂರ್ವಕವಾಗಿ ನೆಗೆಟಿವ್ ರೇಟಿಂಗ್ ಕೊಡುತ್ತಾರೆ ಅನ್ನುವುದು. ಮತ್ತೊಂದು ಮಹತ್ವದ ವಾದ ಏನೆಂದರೆ, ಸಿನಿಮಾ ಚೆನ್ನಾಗಿ ಮಾಡಿದರೆ ಇವೆಲ್ಲಾ ಯಾವುದೂ ಪರಿಗಣನೆಗೆ ಬರುವುದಿಲ್ಲ ಎನ್ನುವುದು.

ಈ ರೇಟಿಂಗ್‌ ಅಥವಾ ರಿವ್ಯೂ ವಾರ್‌ ಇತ್ತೀಚಿನದ್ದಲ್ಲ. ವಿಮರ್ಶೆ ಮಾಡಬಾರದು ಅನ್ನುವುದು ಹಿಂದಿನಿಂದಲೇ ಇದೆ. ಇದೀಗ ಅದು ನಿರ್ಬಂಧ ಹೇರುವ ಹಂತಕ್ಕೆ ಬಂದಿದೆ. ಹಾಗಾದರೆ ಪ್ರೇಕ್ಷಕನಿಗೆ ಸಿನಿಮಾಗೆ ರೇಟಿಂಗ್ ಕೊಡುವ ಹಕ್ಕಿಲ್ಲವೇ?

ಚಿತ್ರರಂಗದ ಗಣ್ಯರ ಅಭಿಪ್ರಾಯಗಳು ಇಲ್ಲಿವೆ.

ಯಾರು ಸತ್ಯ, ಯಾರು ಸುಳ್ಳು

- ಗಿರೀಶ್‌ ಕಾಸರವಳ್ಳಿ

ನಮ್ಮ ಚಿತ್ರವನ್ನು ನಾವು ಕಾಪಾಡಿಕೊಳ್ಳಬೇಕು ಎನ್ನುವ ಕಾರಣಕ್ಕೆ ಬುಕ್ ಮೈ ಶೋ ... ಇತ್ಯಾದಿಗಳಲ್ಲಿ ರೇಟಿಂಗ್ ಕೊಡದಿರುವಂತೆ ನಿರ್ಬಂಧ ಹೇರಿರುವ ನಿರ್ಮಾಪಕ, ದುಡ್ಡು ಕೊಟ್ಟು ಸಿನಿಮಾ ನೋಡುವವರಿಗೆ ಅಭಿಪ್ರಾಯ ಹೇಳುವ ಸ್ವಾತಂತ್ರ್ಯ ಇಲ್ಲವೇ ಎನ್ನುತ್ತಿರುವ ಪ್ರೇಕ್ಷಕ... ಈ ಎರಡರಲ್ಲೂ ಒಂಚೂರು ಸತ್ಯ ಇದೆ. ನಿರ್ಮಾಪಕ ಆದವನು ತನ್ನ ಸಿನಿಮಾ ವ್ಯಾಪಾರಕ್ಕಾಗಿ ರೇಟಿಂಗ್‌, ಪ್ರಚಾರ ನಂಬಿಕೊಂಡಿದ್ದಾನೆ. ನಿರ್ಮಾಪಕ ಅಥವಾ ಸಿನಿಮಾ ಎದುರಾಳಿಗಳು ಉದ್ದೇಶ ಪೂರ್ವಕವಾಗಿಯೇ ಅಪಪ್ರಚಾರ ಮಾಡುತ್ತಾರೆ.

ಈ ಅಪಪ್ರಚಾರದ ಸಂಸ್ಕೃತಿ ಸಿನಿಮಾಗೆ ಮಾತ್ರ ಸೀಮಿತವಲ್ಲ. ರಾಜಕೀಯ, ಇತಿಹಾಸ, ವ್ಯಕ್ತಿ... ಹೀಗೆ ಎಲ್ಲದರಲ್ಲೂ ಇದೆ. ಈಗ ಹೊಸ ಮಾಧ್ಯಮ ಜಗತ್ತಿನಲ್ಲಿದ್ದೇವೆ. ಆ ಹೊಸ ಮಾಧ್ಯಮವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದೇವೆ ಎಂಬುದು ಸತ್ಯ. ‘ಫ್ಯಾಕ್ಟ್‌ ಚೆಕ್‌’ ಎಂಬುದು ಎಷ್ಟು ಜನಕ್ಕೆ ಗೊತ್ತು? ನನ್ನ ಪ್ರಕಾರ ಸಿನಿಮಾಗಳ ಈ ರಿವ್ಯೂ, ರೇಟಿಂಗ್‌ಗೆ ವಿರೋಧ ವ್ಯಕ್ತವಾಗುತ್ತಿರುವುದು ಈಗಿನದ್ದೇನು ಅಲ್ಲ. ‘ಸಿನಿಮಾ ಬಿಡುಗಡೆ ಆದ ಎರಡ್ಮೂರು ವಾರಗಳ ನಂತರ ರಿವ್ಯೂ ಬರೆಯಲಿ’ ಎನ್ನುವ ಕೂಗು ತುಂಬಾ ಹಿಂದೆಯೇ ಕೇಳಿ ಬಂದು ಅದು ದೊಡ್ಡ ಚರ್ಚೆಗೂ ಕಾರಣವಾಯಿತು.

ರಿವ್ಯೂ ಮಾಡಬೇಡಿ, ರೇಟಿಂಗ್‌ ಕೊಡಬೇಡಿ ಎಂದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಅಂತಾರೆ. ನನ್ನ ಪ್ರಕಾರ ಈ ಸಮಸ್ಯೆಗೆ ಇರೋದು ಒಂದೇ ದಾರಿ, ಅಪಪ್ರಚಾರಗಳಿಗೆ ಕೌಂಟರ್‌ ಪ್ರಚಾರ ಮಾಡಬೇಕು. ಯಾಕೆಂದರೆ ಅಪಪ್ರಚಾರ ನಡೆಯುತ್ತಿರುವುದು ನಿಜ. ಇದರಿಂದ ಸಿನಿಮಾಗಳಿಗೆ ಅನ್ಯಾಯ ಆಗುತ್ತಿರುವುದು ನಿಜ.

ತಪ್ಪು ತೋರಿಸಿ, ಕಲ್ಲೆಸೆಯಬೇಡಿ

- ದುನಿಯಾ ವಿಜಯ್‌

ಬುಕ್‌ ಮೈ ಶೋನಂತಹ ವೇದಿಕೆಗಳಲ್ಲಿ ರೇಟಿಂಗ್‌, ರಿವ್ಯೂ ಕೊಡುವುದನ್ನು ತಡೆಯಬಹುದು. ಆದರೆ, ಬೇರೆ ವೇದಿಕೆಯಲ್ಲಿ ತಡೆಯಲು ಸಾಧ್ಯವೇ? ಎಲ್ಲರ ಕೈಯಲ್ಲೂ ಮೊಬೈಲ್‌ ಇದೆ. ಹತ್ತಾರು ವೇದಿಕೆಗಳು ಇವೆ. ಅಲ್ಲಿ ಬರೆಯುವುದನ್ನು ತಡೆಯಲಾದೀತೇ? ಎಲ್ಲದಕ್ಕೂ ಕಾನೂನೇ ಅಂದರೆ ಆಗಲ್ಲ. ಚೆನ್ನಾಗಿರುವ ಚಿತ್ರದ ಬಗ್ಗೆ ಅಪಪ್ರಚಾರ ಮಾಡಿದರೆ ತಪ್ಪು. ಯಾಕೆಂದರೆ ಪ್ರಾಮಾಣಿಕವಾಗಿ ನಮ್ಮ ತಪ್ಪುಗಳನ್ನು ತೋರಿಸಿದರೆ ತಿದ್ದಿಕೊಳ್ಳುತ್ತೇವೆ. ಆದರೆ, ಬೇಕು ಅಂತ ಕಲ್ಲೆಸೆಯಬೇಡಿ. ಈ ಎಲ್ಲಾ ಬೆಳವಣಿಗೆಗಳಲ್ಲಿ ನಾನು ನಂಬಿರುವುದು ಒಂದೇ, ಒಳ್ಳೆಯ ಚಿತ್ರದ ಬಗ್ಗೆ ಯಾರು ಎಷ್ಟೇ ಪ್ರಚಾರ ಮಾಡಿದರೂ ಆ ಚಿತ್ರವನ್ನು ಜನರಿಂದ ದೂರ ಮಾಡೋದು ಕಷ್ಟ. ಇದು ಕಲಾ ಜಗತ್ತು. ಎಲ್ಲವನ್ನೂ ಕಾನೂನಿನ ಮೂಲಕ ಸರಿ ಮಾಡುತ್ತೇವೆ ಎನ್ನುವುದಕ್ಕಿಂತ ನಾವು ಬದಲಾಗಬೇಕು. ಒಳ್ಳೆಯದನ್ನು ಸ್ವೀಕರಿಸಿ, ಕೆಟ್ಟದನ್ನು ಸೂಕ್ತ ರೀತಿಯಲ್ಲಿ ಹೇಳಿದರೆ ಒಳಿತು.

ಇದು ಪ್ರೇಕ್ಷಕರ ವಿರುದ್ಧ ಅಲ್ಲ, ರೇಟಿಂಗ್‌ ಬಿಸಿನೆಸ್‌ಗೆ ನಿರ್ಬಂಧ

- ರೂಪಾ ಅಯ್ಯರ್‌

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಒಪ್ಪುತ್ತೇನೆ. ಆದರೆ, ಇಲ್ಲಿ ರಿವ್ಯೂ ಹೆಸರಿನಲ್ಲಿ ನಡೆಯುವ ಅಪಪ್ರಚಾರ, ರೇಟಿಂಗ್‌ಗೆ ನಿರ್ಬಂಧ ಮಾಡಿರುವುದನ್ನು ‘ದುಡ್ಡು ಕೊಟ್ಟು ಸಿನಿಮಾ ನೋಡೋ ಪ್ರೇಕ್ಷಕರ ವಿಮರ್ಶೆಯ ಹಕ್ಕನ್ನು ಕಿತುತ್ತುಕೊಳ್ಳುತ್ತಿದ್ದಾರೆ’ ಅಂದುಕೊಳ್ಳಬೇಡಿ. ಇದು ಬುಕ್‌ ಮೈ ಶೋನಂತಹ ರೇಟಿಂಗ್‌ ಬಿಸಿನೆಸ್‌ ವಿರುದ್ಧ ನಡೆಯುತ್ತಿರುವ ಕಾನೂನು ಹೋರಾಟ. ಬುಕ್‌ ಮೈ ಶೋ ಮೂಲಕ ಹೆಚ್ಚು ಟಿಕೆಟ್‌ ಬುಕ್‌ ಮಾಡಿದರೆ, ಕಮರ್ಷಿಯಲ್‌ ಕೊಟ್ಟರೆ ಅಂಥ ಚಿತ್ರಗಳಿಗೆ ಒಳ್ಳೆಯ ರೇಟಿಂಗ್‌ ಸಿಗುತ್ತದೆ. ಉಳಿದ ಚಿತ್ರಗಳಿಗೆ ಒಳ್ಳೆಯ ರೇಟಿಂಗ್‌ ಸಿಗಲ್ಲ. ಇದಕ್ಕೆ ಕಡಿವಾಣ ಹಾಕಬೇಕು.

ಇನ್ನೂ ಪ್ರೇಕ್ಷಕರು, ದುಡ್ಡು, ಅಭಿವ್ಯಕ್ತಿ ಸ್ವಾತಂತ್ರ್ಯ ಅಂತ ಬಂದರೆ ಎಲ್ಲವನ್ನೂ ದುಡ್ಡಿನಲ್ಲಿ ಅಳೆಯಕ್ಕೆ ಆಗಲ್ಲ. ಒಬ್ಬೊಬ್ಬರ ರುಚಿಯೂ ಒಂದೊಂದು ರೀತಿ ಇರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಿನಿಮಾ ಇಷ್ಟವಾಗುತ್ತದೆ. ಎಲ್ಲರೂ ಒಂದು ರೀತಿ ಇಲ್ಲ. ಸಿನಿಮಾಗಳೂ ಅಷ್ಟೆ. ಇದು ಟ್ರೇಡಿಂಗ್‌. ನೂರಾರು ಜನ ಕೆಲಸ ಮಾಡುತ್ತಿರುವ ಕ್ಷೇತ್ರ. ಇಂಥ ಕ್ಷೇತ್ರದ ಸಿನಿಮಾಗಳ ಮೇಲೆ ಅಪಪ್ರಚಾರ ಆದರೆ ಸಿನಿಮಾ ನಿರ್ಮಾಣದ ಸಂಖ್ಯೆ ಕಡಿಮೆ ಆಗುತ್ತದೆ. ಉದ್ಯೋಗಳು ಸಿಗಲ್ಲ. ನಾನು ಪ್ರೇಕ್ಷಕರಿಗೆ ಹೇಳೋದು ಸಿನಿಮಾ ನೋಡಿ, ಚೆನ್ನಾಗಿರೋದನ್ನೂ ಹೇಳಿ. ರೇಟಿಂಗ್‌ ನಂಬಬೇಡಿ.

ಇಲ್ಲಿ ಇಬ್ಬರೂ ಬೇಜವಾಬ್ದಾರರೇ

- ಟಿ.ಎಸ್‌.ನಾಗಾಭರಣ

‘ನಾನು ದುಡ್ಡು ಕೊಟ್ಟು ಸಿನಿಮಾ ನೋಡಿದ್ದೇನೆ. ಅದರ ಬಗ್ಗೆ ಅಭಿಪ್ರಾಯ ಹೇಳೋದು ನನ್ನ ಹಕ್ಕು’ ಎನ್ನುವ ಪ್ರೇಕ್ಷಕ, ‘ನಾನು ದುಡ್ಡು ಹಾಕಿ ಸಿನಿಮಾ ಮಾಡಿದ್ದೇನೆ. ನನ್ನ ಚಿತ್ರಕ್ಕೆ ಕೆಟ್ಟ ರೇಟಿಂಗ್‌, ರಿವ್ಯೂ ಕೊಡಬೇಡಿ’ ಎನ್ನುವ ಸಿನಿಮಾ ತಂಡ- ಈ ಇಬ್ಬರೂ ಬೇಜವಾಬ್ದಾರರೇ. ಪ್ರೇಕ್ಷಕನ ಅಭಿಪ್ರಾಯ- ಅಭಿರುಚಿ, ನಿರ್ಮಾಪಕರ ಸಿನಿಮಾ ಪ್ರೀತಿ ಎರಡೂ ಒಟ್ಟಿಗೆ ಸಾಗಬೇಕಾದ ಜಾಗ ಅಥವಾ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಸಿನಿಮಾದ ಮೊದಲನೇ ರೀಲು ನೋಡಿ ರೇಟಿಂಗ್ ಕೊಡುವುದು, ನಾನು ದುಡ್ಡು ಕೊಟ್ಟಿದ್ದೇನೆ ಏನು ಬೇಕಾದರೂ ಹೇಳುತ್ತೇನೆ ಎನ್ನುವುದು ಎಷ್ಟು ಸರಿ? ಇಲ್ಲಿ ಆಸ್ವಾದಿಸುವ ಕ್ರಿಯೆ ಮುಖ್ಯ ಆಗುತ್ತದೆ.

ಮನರಂಜನೆಯ ‍ವ್ಯಾಖ್ಯಾನವೇ ಬದಲಾಗಿರುವ ಸಂದರ್ಭದಲ್ಲಿ ಸಿನಿಮಾನ ದೂರ ದೃಷ್ಟಿಯಿಂದ ಯೋಚನೆ ಮಾಡಿ ರೂಪಿಸಬೇಕು. ಆದರೆ, ಇಲ್ಲಿ ಹಾಗೆ ಆಗುತ್ತಿಲ್ಲ. ನಾನು ಮಾಡಿದ್ದೇ ಸರಿ ಎನ್ನುವ ಧೋರಣೆ ಸರಿಯಲ್ಲ. ಸಿನಿಮಾ ಮಾಡುತ್ತಿರುವುದೇ ಜನಕ್ಕೆ. ಅವರನ್ನೇ ದೂರ ಇಡಬಾರದು. ಒಬ್ಬರಿಗೊಬ್ಬರು ಪೂರಕವಾಗಿ ಸಾಗಬೇಕಾದ ಸಾಂಸ್ಕೃತಿಯ ಹಾದಿಯೊಂದನ್ನು ಲೈಕು- ಡಿಸ್ಕ್‌ ಲೈಕಿನ ಗಲಾಟೆಯಲ್ಲಿ ಹಾಳು ಮಾಡುತ್ತಿದ್ದೇವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ.