ಸಿನಿಮಾ ಬಳಿಕ ಮತ್ತೆ ಕಿರುತೆರೆಗೆ ಹಿಂದಿರುಗಿದ ಮೋಕ್ಷಿತಾ ಪೈ… ನಾಯಕ ಇವರೇ ನೋಡಿ
Mokshitha Pai: ಪಾರು ಸೀರಿಯಲ್ ಮೂಲಕ ಮನೆಮಾತಾಗಿದ್ದ ನಟಿ ಮೋಕ್ಷಿತಾ ಪೈ, ಬಿಗ್ ಬಾಸ್ ಬಳಿಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಇದೀಗ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ. ಇವರ ನಾಯಕನಾಗಿ, ವೀಕ್ಷಕರ ಫೇವರಿಟ್ ನಟ ಕೂಡ ಕಂ ಬ್ಯಾಕ್ ಮಾಡುತ್ತಿದ್ದಾರೆ.

ಮೋಕ್ಷಿತಾ ಪೈ
ಕನ್ನಡ ಕಿರುತೆರೆಯಲ್ಲಿ ಪಾರು ಧಾರಾವಾಹಿ ಮೂಲಕ ಮನೆ ಮಾತಾದ ನಟಿ ಮೋಕ್ಷಿತಾ ಪೈ. ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಪಾರು ಆಗಿ, ಕರುನಾಡಿನ ವೀಕ್ಷಕರ ಮನ ಗೆದ್ದಿದ್ದರು, ಮೋಕ್ಷಿತಾ ಅನ್ನೋದಕ್ಕಿಂತ ಪಾರು ಆಗಿ, ಅಖಿಲಾಂಡೇಶ್ವರಿ ಸೊಸೆಯಾಗಿ ಗುರುತಿಸಿಕೊಂಡಿದ್ದರು ನಟಿ.
ಬಿಗ್ ಬಾಸ್ ಮೂಲಕ ಮನರಂಜನೆ
ಸೀರಿಯಲ್ ಮುಗಿಯುತ್ತಿದ್ದಂತೆ ಮೋಕ್ಷಿತಾ ಪೈ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರಲ್ಲಿ ಭಾಗವಹಿಸಿದ್ದರು. ಬಿಗ್ ಬಾಸ್ ನಲ್ಲಿ ಟಾಪ್ 5 ಸ್ಪರ್ಧಿಯಾಗಿ, ತಮ್ಮ ವ್ಯಕ್ತಿತ್ವ, ಟಾಸ್ಕ್ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದರು ಮೋಕ್ಷಿತಾ.
ಸಿನಿಮಾದಲ್ಲಿ ನಟನೆ
ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಧನುಷ್ ಗೌಡ ನಿರ್ದೇಶನ ಮಾಡಿರುವ ಮಿಡಲ್ ಕ್ಲಾಸ್ ರಾಮಾಯಣ ಸಿನಿಮಾದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೇ ವಿನಯ್ ಗೌಡ ಜೊತೆ ಒಂದು ಮಿನಿ ವೆಬ್ ಸೀರೀಸ್ ನಲ್ಲೂ ಕಾಣಿಸಿಕೊಂಡಿದ್ದರು.
ಕಿರುತೆರೆಗೆ ರೀ ಎಂಟ್ರಿ
ಇದೀಗ ಮೋಕ್ಷಿತಾ ಪೈ ಮತ್ತೆ ಕಿರುತೆರೆಗೆ ಎಂಟ್ರಿ ಕೊಡೋದಕ್ಕೆ ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಪ್ರಸಾರವಾಗಲಿರುವ ಹೊಸ ಧಾರಾವಾಹಿಯೊಂದರಲ್ಲಿ ಮೋಕ್ಷಿತಾ ಪೈ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಿದೆ. ಆದರೆ ಯಾವ ಸೀರಿಯಲ್ ಹಾಗೂ ಯಾವ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
ನಾಯಕ ಯಾರು ಗೊತ್ತಾ?
ಹೊಸ ಧಾರಾವಾಹಿಯಲ್ಲಿ ನಾಯಕನಾಗಿ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನಮ್ಮನೆ ಯುವರಾಣಿ’ ನಾಯಕ ಹಾಗೂ ವೀಕ್ಷಕರ ಮೆಚ್ಚಿನ ಅನಿಕೇತ್ ಖ್ಯಾತಿಯ ದೀಪಕ್ ಗೌಡ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯ ವೈರಲ್ ಆಗುತ್ತಿದ್ದಂತೆ ವೀಕ್ಷಕರು ಸಖತ್ ಖುಷಿಯಾಗಿದ್ದಾರೆ.
ದೀಪಕ್ ಗೌಡ
ದೀಪಕ್ ಗೌಡ ಅವರು ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಅನಿಕೇತ್ ಆಗಿ ಜನಮನ ಗೆದ್ದಿದ್ದರು. ಅವರ ಸ್ಟೈಲ್, ಸ್ಮೈಲ್, ನಟನೆ, ಅನಿಕೇತ್-ಮೀರಾ ಜೋಡಿಯನ್ನು ಜನ ಇಷ್ಟಪಟ್ಟಿದ್ದರು. ಅದಾದ ಬಳಿಕ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ತುಳಸಿ ಮಗನಾಗಿ ನಟಿಸಿದ್ದರು. ಆದರೆ ಆ ಧಾರಾವಾಹಿಯಿಂದ ಅರ್ಧದಲ್ಲೇ ನಟ ಹೊರಗೆ ಬಂದಿದ್ದರು. ಇದೀಗ ಮತ್ತೆ ಕಿರುತೆರೆಗೆ ಹಲವು ವರ್ಷಗಳ ಬಳಿಕ ಕಂ ಬ್ಯಾಕ್ ಮಾಡುತ್ತಿದ್ದಾರೆ.
ಜಗಧಾತ್ರಿ ಸೀರಿಯಲ್ ರಿಮೇಕ್?
ವೈರಲ್ ಆಗುತ್ತಿರುವ ಮಾಹಿತಿಯ ಪ್ರಕಾರ ದೀಪಕ್ ಗೌಡ ಮತ್ತು ಮೋಕ್ಷಿತಾ ಪೈ ತೆಲುಗಿನ ಜನಪ್ರಿಯ ಧಾರಾವಾಹಿ ಜಗಧಾತ್ರಿಯ ರಿಮೇಕ್ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ಮೂಲ ಮರಾಠಿ ಧಾರಾವಾಹಿ. ಇದು ಹೌಸ್ ವೈಫ್ ಆಗಿ ಗುರುತಿಸಿಕೊಂಡಿರುವ ಸ್ಪೈ ಏಜೆಂಟ್ ಕಥೆಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

