ಸುಶಾಂತ್ ಸಿಂಗ್‌ ರಜಪೂತ್ ಆತ್ಮಹತ್ಯೆ ಕೇಸ್‌ನಲ್ಲಿ ಆತನ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಹಿಂದೊಮ್ಮೆ ರಿಯಾ ಚಕ್ರವರ್ತಿ ಒಂದು ಟ್ವೀಟ್ ಮಾಡಿದ್ದಳು. ಅದರಲ್ಲಿ, ಸುಶಾಂತ್ ಕೂಡಾ ಪರ್ವೀನ್ ಬಾಬಿ ಥರಾ ಆಗ್ತಿದಾನೆ. ಹುಷಾರು, ಆತನ ಮಾನಸಿಕ ಸ್ಥಿತಿ ಕೈ ಮೀರ್ತಾ ಇದೆ. ಅವನಿಂದ ದೂರ ಇರು ಎಂದು ಮಹೇಶ್‌ ಭಟ್‌ ತನಗೆ ಹೇಳಿದ್ದರು ಅಂತ ರಿಯಾ ಬರೆದುಕೊಂಡಿದ್ದಳು. ಇದನ್ನೇ ಇಟ್ಟುಕೊಂಡು, ರಿಯಾ, ಸುಶಾಂತ್‌ಗೆ ಮೋಸ ಮಾಡಲು ಮಹೇಶ್‌ ಭಟ್‌ ಕುಮ್ಮಕ್ಕು ಇತ್ತು ಅನ್ನುವ ಥರ ಒಂದು ಪ್ರಚಾರ ಶುರುವಾಗಿತ್ತು. ಆದರೆ ಪರ್ವೀನ್ ಬಾಬಿ ಮತ್ತು ಮಹೇಶ್‌ ಭಟ್‌ ಸಂಬಂಧ ಹೇಗಿತ್ತು ಎನ್ನುವುದು ಕೆಲವರಿಗೆ ಮಾತ್ರ ಗೊತ್ತಿತ್ತು. ಒಂದು ಸಂದರ್ಭದಲ್ಲಿ ಪರ್ವೀನ್, ಬೆತ್ತಲೆಯಾಗಿ ಮಹೇಶ್‌ ಭಟ್‌ ಹಿಂದೆ ಓಡಿದ್ದೂ ಉಂಟು. ಅದು ಆಕೆಯ ಮಾನಸಿಕ ಅನಾರೋಗ್ಯದ ತುತ್ತ ತುದಿಯ ಕಾಲ,

1972ರಿಂದ ಪರ್ವೀನ್‌ ಹಿಂದಿ ಫಿಲಂಗಳಲ್ಲಿ ನಟಿಸಲು ಶುರು ಮಾಡಿದ್ದಳು. ಮಾಡೆಲ್‌ ಕೂಡ ಆಗಿದ್ದ ಆಕೆಯಲ್ಲಿ ಸೆಕ್ಸಿ ಬಾಂಬ್‌ಶೆಲ್‌ ಅನ್ನು ಕಂಡಿದ್ದ ಬಾಲಿವುಡ್‌, ಆಕೆಗೆ ಭರಪೂರ ಅವಕಾಶಗಳನ್ನು ಕೊಟ್ಟಿತ್ತು. ಅಮಿತಾಭ್‌ ಬಚ್ಚನ್‌ ಜೊತೆಗೆ ಹನ್ನೆರಡು ಫಿಲಂಗಳಲ್ಲಿ ಈಕೆ ನಟಿಸಿದಳು. ಅಂದಿನ ಕಾಲದ ದುಬಾರಿ ಹೀರೋಯಿನ್‌ ಎನಿಸಿಕೊಂಡಳು. ಆಗಿನ ಕಾಲದ ಬಾಲಿವುಡ್‌ನ ಮೂವರು ಪ್ರಭಾವಿಗಳ ಜೊತೆ ಅವಳ ಲವ್‌ ಅಫೇರ್‌ ನಡೆಯಿತು. ಕಬೀರ್‌ ಬೇಡಿ, ಡ್ಯಾನಿ ಡೆಂಗ್ಜೋಂಗ್ಪಾ ಹಾಗೂ ಮಹೇಶ್‌ ಭಟ್‌. ಮಹೇಶ್‌ ಭಟ್‌ ಆಗಿನ್ನೂ ಯುವ ನಿರ್ದೇಶಕ. ಮದುವೆಯಾಗಿತ್ತು. ಲೊರೇನ್‌ ಎಂಬ ವಿದೇಶಿ ಹುಡುಗಿ ಮಹೇಶ್‌ ಭಟ್‌ನನ್ನು ಮದುವೆಯಾಗಿ ಕಿರನ್‌ ಭಟ್‌ ಆಗಿದ್ದಳು. ಇಬ್ಬರು ಮಕ್ಕಳು ಹುಟ್ಟಿದ್ದರು- ಪೂಜಾ ಮತ್ತು ರಾಹುಲ್‌. 

ಹಾಲಿವುಡ್ ನಟ ವಿಲ್‌ಸ್ಮಿತ್ ಜೊತೆ ಸದ್ಗುರು: ಇಲ್ನೋಡಿ ಫೋಟೋಸ್

ಇಂಥ ಸೊಗಸಾದ ಸಂಸಾರವನ್ನು ಬಿಟ್ಟು ನಟಿ ಪರ್ವೀನ್‌ ಬಾಬಿಯ ಬೆನ್ನು ಬಿದ್ದಿದ್ದರು ಮಹೇಶ್‌ ಭಟ್‌. ಹೆಂಡತಿಯನ್ನು ತೊರೆದೇ ಬಿಟ್ಟರು. ಪರ್ವೀನ್‌ ಬಾಬಿಯ ಜೊತೆ ವಾಸಿಸತೊಡಗಿದರು. ಇದು 1970ರ ದಶಕದಲ್ಲಿ. ಅದೇ ವೇಳೆಗೆ ಯುಜಿ ಕೃಷ್ಣಮೂರ್ತಿ ಎಂಬ ಆಧ್ಯಾತ್ಮಿಕ ಗುರು ಮಾಡುತ್ತಿದ್ದ ಉಪದೇಶಗಳು ಮಹೇಶ್‌- ಪರ್ವೀನ್‌ಗೆ ಮೆಚ್ಚಿಗೆಯಾಗತೊಡಗಿದವು. ಇವರಿಬ್ಬರೂ ಯೂಜಿಯ ಬೆನ್ನು ಬಿದ್ದರು. ಅವರು ಹೋದಲ್ಲೆಲ್ಲ ಹೋಗತೊಡಗಿದರು. ಯೂಜಿ ವಿದೇಶಗಳಲ್ಲಿ ಸುತ್ತಾಡಿದರೆ ಅಲ್ಲಿಗೂ ಹೋದರು. ಮಹೇಶ್‌, ಯೂಜಿಯ ಉಪದೇಶಗಳನ್ನು ಸಂಕಲಿಸಿ ಪುಸ್ತಕಗಳನ್ನೂ ತಂದರು. 1983ರಲ್ಲಿ ಪರ್ವೀನ್‌, ಮಹೇಶ್‌ ಭಟ್ಟರನ್ನೂ ಬಿಟ್ಟು ಯೂಜಿಯ ಹಿಂದೆ ಅಲೆದಾಡತೊಡಗಿದಳು.

ಆ ರಾತ್ರಿ ಮಹೇಶ್ ಭಟ್ ಹಿಂದೆ ಪರ್ವೀನ್ ಓಡಿದ್ಯಾಕೆ?

1989ರಲ್ಲಿ ಪರ್ವೀನ್‌ ಬಾಬಿ ಭಾರತಕ್ಕೆ ವಾಪಸ್‌ ಬಂದಾಗ, ಆಕೆ ಗುರುತು ಹಿಡಿಯಲಾಗದಷ್ಟು ಬದಲಾಗಿದ್ದಳು. ಆಕೆಗೆ ಪ್ಯಾರಾನೋಯ್ಡ್‌ ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಕಾಯಿಲೆ ಗಟ್ಟಿಯಾಗಿ ಅಂಟಿಕೊಂಡಿತ್ತು. ಅದರಿಂದ ಹೊರಬರಲು ಆಕೆಗೆ ಆಗಲೇ ಇಲ್ಲ. ಒಂದೊಮ್ಮೆ ತನ್ನ ಜೊತೆಯಾಗಿ ನಟಿಸಿದ, ತನ್ನನ್ನು ಇಂಡಸ್ಟ್ರಿಯಲ್ಲಿ ಮೇಲೆತ್ತಿದ ಅಮಿತಾಭ್‌ ಬಚ್ಚನ್‌ನನ್ನೇ ಆಕೆ ಸಂಶಯಿಸಿದಳು. ಬಚ್ಚನ್‌ ತನ್ನನ್ನು ಕೊಲೆ ಮಾಡಲು ಸಂಚು ಹೂಡಿದ್ದಾರೆ ಎಂದು ಆರೋಪಿಸಿದಳು. ಅಮಿತಾಭ್‌ ಒಬ್ಬ ಇಂಟರ್‌ನ್ಯಾಷನಲ್‌ ಗೂಂಡಾ, ಆತನ ಗೂಂಡಾಗಳು ತನ್ನನ್ನು ಅಪಹರಿಸಿ ಒಂದು ದ್ವೀಪದಲ್ಲಿ ಇಟ್ಟಿದ್ದರು. ಅಲ್ಲಿ ನನ್ನ ಕಿವಿಯ ಕೆಳಗೆ ಅಪರೇಶನ್‌ ಮಾಡಿ ಒಂದು ಎಲೆಕ್ಟ್ರಾನಿಕ್‌ ಚಿಪ್‌ ಅನ್ನು ಅಳವಡಿಸಿದ್ದಾರೆ ಎಂದು ಕಿವಿಯ ಕೆಳಗಿನ ಒಂದು ಕಲೆಯನ್ನು ತೋರಿಸಿದಳು. ಬಿಲ್‌ ಕ್ಲಿಂಟನ್‌, ಅಲ್‌ ಗೋರ್‌, ಪ್ರಿನ್ಸ್‌ ಚಾರ್ಲ್ಸ್ ಎಲ್ಲರೂ ತನ್ನ ವಿರುದ್ಧ ಸಂಚು ಹೂಡಿದ್ದಾರೆ ಎನ್ನತೊಡಗಿದಳು. 

ಫಾರಿನ್ ಹುಡಗರ ಪ್ರೀತಿಗೆ ಬಿದ್ದ ಭಾರತದ ನಟಿಯರಿವರು..! 

ಮಹೇಶ್‌ ಭಟ್‌ ಸಾಧ್ಯವಾದಷ್ಟೂ ಆಕೆಯನ್ನು ರಕ್ಷಿಸಲು, ಆಕೆಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ, ಆದರೆ ಆಕೆ ಕಿಂಚಿತ್ತೂ ಸುಧಾರಿಸಲಿಲ್ಲ. ತನ್ನನ್ನು ಬಿಟ್ಟು ಮಹೇಶ್‌ ಫಿಲಂ ಶೂಟಿಂಗ್‌ಗೆ ಹೋಗಲು ಕೂಡ ಆಕೆ ಬಿಡುತ್ತಿರಲಿಲ್ಲ. ಒಂದು ದಿನ, ಮಹೇಶ್‌ ಭಟ್‌ ಶೂಟಿಂಗ್‌ಗೆಂದು ಹೊರಟಾಗ, ಬಾತ್‌ರೂಮಿನಲ್ಲಿದ್ದ ಪರ್ವೀನ್‌ ಬಾಬಿ ಹಾಗೇ ಬೆತ್ತಲೆಯಾಗಿ ಆತನನ್ನು ಹಿಡಿಯಲೆಂದು ಬೀದಿಗೇ ಬಂದು ಓಡತೊಡಗಿದ್ದಳು. ಆಕೆಯ ಸ್ಕಿಜೋಫ್ರೇನಿಯಾ ತುರೀಯಾವಸ್ಥೆ ಮುಟ್ಟಿತ್ತು. ಕೊನೆಗೆ ಮಹೇಶ್‌ ಭಟ್‌ ಆಕೆಯಿಂದ ದೂರವಾದರು.
 


ಹಾಗಂತ ಪರ್ವೀನ್ ಬಡವಳೇನಾಗಿರಲಿಲ್ಲ. ಸ್ವಂತ ಫ್ಲಾಟ್ ಇತ್ತು. ಸಾಕಷ್ಟು ಶ್ರೀಮಂತಿಕೆ ಇತ್ತು. ಆದರೆ ಆಕೆ ಒಂಟಿಯಾಗಿದ್ದಳು. ಬಿಪಿ ಇತ್ತು. ಡಯಾಬಿಟಿಸ್ ಇತ್ತು. ಕೊನೆಗೊಂದು ದಿನ, 2005ರ ಜನವರಿಯಲ್ಲಿ. ತನ್ನ ಫ್ಲಾಟ್‌ನಲ್ಲಿ ಒಬ್ಬಂಟಿಯಾಗಿದ್ದಾಗ ಸತ್ತುಹೋದಳು. ಹೇಗೆ ಸತ್ತಳೋ ಯಾರಿಗೂ ತಿಳಿಯದು, ಮೂರು ದಿನದಿಂದ ಏನೂ ಆಹಾರ ಸೇವಿಸದೆ, ಡಯಾಬಿಟಿಕ್ ಆಗಿದ್ದ್ದರಿಂದ ಶುಗರ್ ಲೆವೆಲ್‌ ಏರಿ ಸತ್ತುಹೋದಳು ಎನ್ನುತ್ತಾರೆ. ಸತ್ತು ಮೂರು ದಿನಗಳ ನಂತರ ಪೊಲೀಸರು ಪ್ಲಾಟಿನ ಬಾಗಿಲು ಒಡೆದು ಹೆಣ ತೆಗೆದರು. 

ಸುಶಾಂತ್ ಸಿಂಗ್ ಮಾಜಿ ಗರ್ಲ್‌ಫ್ರೆಂಡ್ ವಿರುದ್ಧ ರಿಯಾ ದೂರು..? 
ಮಹೇಶ್‌ ಭಟ್‌ ಈಗಲೂ ಆಕೆಯನ್ನು ನೆನಪಿಸಿಕೊಳ್ಳುತ್ತಾರೆ. ರಿಯಾಗೆ ಅವರು ಹೇಳಿದ್ದೂ ಅದನ್ನೇ. ಪರ್ವೀನ್ ಬಾಬಿ ಜೊತೆ ಒಡನಾಡಿದ ಅವರ ಅನುಭವದಿಂದಾಗಿಯೇ ಅವರು ಸುಶಾಂತ್ ಬದುಕಿದ್ದರೆ ಯಾವ ಅವಸ್ಥೆಗೆ ಹೋಗಬಹುದೋ ಎಂದು ಊಹಿಸಿ ಆ ಮಾತನ್ನು ಹೇಳಿದ್ದಿರಬಹುದು. ಸರಿಯಾದ ಚಿಕಿತ್ಸೆ ದೊರೆತಿದ್ದರೆ ಪರ್ವೀನ್ ಬಾಬಿಯೂ ಬದುಕುತ್ತಿದ್ದಳು, ಸುಶಾಂತ್ ಕೂಡ ಬದುಕುತ್ತಿದ್ದ ಎನ್ನೋಣವೆ?