Sandalwood Vs Politics : ಕಾಂಗ್ರೆಸ್ ಶಾಸಕ, ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಬ್ಸಿಡಿ ವಿಚಾರದಲ್ಲಿ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಕಲಾವಿದರು ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರ ಸಿನಿಮಾ ರಂಗದ ನಟ್ಟು ಬೋಲ್ಟ್ ಟೈಟ್ ಮಾಡೋ ಹೇಳಿಕೆಗೆ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ಶಾಸಕ ರವಿಕುಮಾರ್, ಸಿನಿಮಾದವರು ಬಾಯಿಮುಚ್ಚಿಕೊಂಡು ಇರಬೇಕು ಎಂದು ಹೇಳಿದರು. ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದಿಂದ ಬೆಳೆವದವರು. ರಶ್ಮಿಕಾ ಅವರನ್ನ ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಆಹ್ವಾನಿಸಲಾಗಿತ್ತು. ನಾನು ಹೈದಾರಾಬಾದ್‌ನಲ್ಲಿ ಇರೋದು. ನನಗೆ ಟೈಂ ಇಲ್ಲ ಅಂತಾರೆ. ಇವರಿಗೆ ಬುದ್ದಿ ಕಲಿಸಬೇಕಲ್ವಾ ಎಂದು ರಶ್ಮಿಕಾ ಮಂದಣ್ಣ ವಿರುದ್ಧ ಗಣಿಗ ರವಿಕುಮಾರ್ ಆಕ್ರೋಶ ಹೊರ ಹಾಕಿದರು.

ನಾನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಸಿನಿಮಾಗಳಿಗೆ ನೀಡುವ ಸಬ್ಸಿಡಿ ಬಗ್ಗೆ ಯೋಚಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಆಂಧ್ರ ಪ್ರದೇಶದ ನರಸಿಂಹಲು ಡಿಕೆ ಶಿವಕುಮಾರ್ ವಿರುದ್ಧ ಮಾತನಾಡ್ತಾನೆ. ಆಂಧ್ರ ಪ್ರದೇಶದಿಂದ ಬಂದೂ ದುಡ್ಡು ದೋಚಿಕೊಂಡು ಹೋಗಿ ನಮ್ಮ ಬಗ್ಗೆ ಮಾತಾನಾಡ್ತಾನೆ. ಮೊನ್ನೆ ಸಿಸಿಎಲ್ ಮ್ಯಾಚ್ ನಡೆಯಿತು ಅಲ್ವಾ. ಅವಾಗ ನಿಲ್ಲಿಸಬೇಕಿತ್ತು. ಇದು ಲಾಸ್ಟ್ ವಾರ್ನಿಂಗ್. ಚಲನಚಿತ್ರ ಮಂಡಳಿಯವರು ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಗಣಿಗ ರವಿಕುಮಾರ್ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದರು.

ಸಿನಿಮಾದವರಿಗಾಗಿಯೇ ವಿಧಾನಸೌಧದ ಮೆಟ್ಟಿಲಿನ ಮೇಲೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮಾಡಿದ್ರೆ ಇವರೇ ಬರಲ್ಲ. ಸಿನಿಮಾಗೆ ಸಬ್ಸಿಡಿ ನೀಡಿ, ಪಿವಿಆರ್ ಟಿಕೆಟ್ ಬೆಲೆ ಕಡಿಮೆ ಮಾಡಿಸಿ ಎಂದು ಬರುತ್ತಾರೆ. ಇಂತಹ ಕಾರ್ಯಕ್ರಮಗಳಿಗೆ ಯಾಕೆ ಬರಲ್ಲ. ಕನ್ನಡದಿಂದದಲೇ ಇವರು ಸಿನಿಮಾ ಜೀವನ ಆರಂಭಿಸಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆದವರು. ನಾವು ಪ್ರಶಸ್ತಿ ನೀಡಿದರೆ ಟ್ವೀಟ್ ಮಾಡಿ ಬೇಡ ಎಂದು ಹೇಳುತ್ತಾರೆ. ಅದೇ ಹಿಂದಿಯವರು ನೀಡಿದ್ರೆ ಓಡೋಡಿ ಹೋಗಿ ತೆಗೆದುಕೊಳ್ಳುತ್ತೀರಿ. ಕನ್ನಡಿಗರು ಅಂದ್ರೆ ನಿಮಗೆ ಅಷ್ಟೊಂದು ಕಾಲಕಸವೇ ಎಂದು ಪರೋಕ್ಷವಾಗಿ ಸುದೀಪ್ ವಿರುದ್ಧ ವಾಗ್ದಾಳಿ ನಡೆಸಿದರು.

ಡಿಸಿಎಂ ಡಿಕೆ ಶಿವಕುಮಾರ್ ಹೇಳಿರುವ ಮಾತಿನಲ್ಲಿ ಸತ್ಯವಿದೆ. ಈಗಿನ ಕಲಾವಿದರು ಡಾ.ರಾಜ್‌ಕುಮಾರ್ ಕುಟುಂಬವನ್ನು ನೋಡಿ ಕಲಿಯಬೇಕು. ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದರೂ ನಟ ಶಿವರಾಜ್‌ಕುಮಾರ್ ಆಹ್ವಾನಕ್ಕೆ ಗೌರವಿ ನೀಡಿ ವಿನಯತೆಯಿಂದ ಕಾರ್ಯಕ್ರಮಕ್ಕೆ ಬಂದಿದ್ದರು. ಇವರ ಸಿನಿಮಾಗೆ ಕರ್ನಾಟಕ ಮತ್ತು ಕನ್ನಡಿಗರು ಬೇಕು. ಡಾ.ರಾಜ್‌ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರು ಕನ್ನಡದ ಸಣ್ಣ ಕಾರ್ಯಕ್ರಮಕ್ಕೆ ಬರುತ್ತಿರೋದರಿಂದ ಅವರು ಮಹಾನ್ ನಾಯಕರಾದರು ಎಂದು ಗಣಿಗ ರವಿಕುಮಾರ್ ಹೇಳಿದರು. 

ಇದನ್ನೂ ಓದಿ: " ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಡಿಕೆ ಶಿವಕುಮಾರ್ ಹೇಳಿದ ಮೂರು ಬಹಳ ಮುಖ್ಯವಾದ ಮಾತುಗಳು" ಜೋಗಿ ಗಿರೀಶ್ ರಾವ್ ಹತ್ವಾರ್

ಡಿಸಿಎಂ ವಿರುದ್ದ ಆರ್.ಅಶೋಕ್ ವಾಗ್ದಾಳಿ
ಅನುದಾನ ಬೇಕಾದರೆ ಶಾಸಕರು ತಮ್ಮ ಬಳಿ ತಗ್ಗಿ-ಬಗ್ಗಿ ನಡೆಯಬೇಕು ಎಂದು ದರ್ಪ ಮೆರೆದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಸಾಹೇಬರು ಈಗ ಕನ್ನಡ ಸಿನಿಮಾ ಕಲಾವಿದರಿಗೆ ಬಹಿರಂಗ ವೇದಿಕೆಯಲ್ಲಿ ಧಮ್ಕಿ ಹಾಕಿದ್ದಾರೆ. ಸ್ವಾಮಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಕಾಂಗ್ರೆಸ್ ಪಕ್ಷದ ರಾಜಕೀಯ ಪಾದಯಾತ್ರೆಗೆ ಸಿನಿಮಾ ಕಲಾವಿದರು ಬರುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು. ಕಾಂಗ್ರೆಸ್ ಪಕ್ಷಕ್ಕೆ ನಡೆದುಕೊಳ್ಳುವ ಕಲಾವಿದರಿಗೆ ಮನ್ನಣೆ ಸಿಗುತ್ತದೆ, ಇಲ್ಲವಾದರೆ ಸಿಗುವುದಿಲ್ಲ ಎನ್ನುವ ನಿಮ್ಮ ಮಾತು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. 

ಸಮಾಜದಲ್ಲಿ ಎಲ್ಲರೂ ತಮಗೆ ಮತ್ತು ತಮ್ಮ ಪಕ್ಷಕ್ಕೆ ಸೆಲ್ಯೂಟ್ ಹೊಡೆದು, ತಮ್ಮ ಅಡಿಯಾಳುಗಳಂತೆ ನಡೆದುಕೊಳ್ಳಬೇಕು ಎನ್ನುವ ಕೆಟ್ಟ ಮನಸ್ಥಿತಿಯಿಂದ ಹೊರಗೆ ಬನ್ನಿ. ಕಲಾವಿದರು ಯಾರ ಸ್ವತ್ತೂ ಅಲ್ಲ. ಕಲಾವಿದರಿಗೆ ಅವರ ವಿವೇಚನೆಗೆ ತಕ್ಕಂತೆ ನಡೆದುಕೊಳ್ಳುವ, ಯಾರ ಜೊತೆ ಬೇಕಾದರೂ ಗುರುತಿಸಿಕೊಳ್ಳುವ ಅಥವಾ ಗುರುತಿಸಿಕೊಳ್ಳದಿರುವ ಸ್ವಾತಂತ್ರ್ಯವಿದೆ, ಹಕ್ಕಿದೆ. ಕಲಾವಿದರು ನಿಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲ. ನಿಮ್ಮ ಪಕ್ಷದ ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ ಕಲಾವಿದರನ್ನು ನಡೆಸಿಕೊಳ್ಳಬೇಡಿ. ಕಲಾವಿದರಿಗೆ ಗೌರವ ಕೊಡುವುದನ್ನು ಕಲಿಯಿರಿ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಡಿ.ಕೆ. ಶಿವಕುಮಾರ್‌ ‘ನಟ್ಟು ಬೋಲ್ಟು’ ಹೇಳಿಕೆ ಕೋಲಾಹಲ!