ಕಾಸ್ಟಿಂಗ್ ಕೌಚ್ ಎಂಬುದು ಕೇವಲ ವೈಯಕ್ತಿಕ ನಡವಳಿಕೆಯಲ್ಲ, ಅದು ಉದ್ಯಮದಲ್ಲಿ ಬೇರೂರಿರುವ ಒಂದು ಪಿಡುಗು. 'ಕಮಿಟ್‌ಮೆಂಟ್' (Commitment) ಎಂಬ ಪದಕ್ಕೆ ಚಿತ್ರರಂಗದಲ್ಲಿ ಲೈಂಗಿಕ ಶೋಷಣೆಯ ಅರ್ಥವಿದೆ ಎಂದು ಚಿರಂಜೀವಿ ಹೇಳಿಕೆಗೆ ಗಾಯಕಿ ಚಿನ್ಮಯಿ ಶ್ರೀಪಾದ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಚಿರಂಜೀವಿ ವಿರುದ್ಧ ಗುಡುಗಿದ ಚಿನ್ಮಯಿ ಶ್ರೀಪಾದ
'ಮನ ಶಂಕರ ವರ ಪ್ರಸಾದ್ ಗಾರು' ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ (Mega Star Chiranjeevi) ಅವರ ಹೇಳಿಕೆ ಹಾಗೂ ಅದಕ್ಕೆ ಗಾಯಕಿ ಚಿನ್ಮಯಿ ಶ್ರೀಪಾದ್ (Chinmayi Sripada) ನೀಡಿರುವ ಖಡಕ್ ಪ್ರತಿಕ್ರಿಯೆ ಈಗ ಚಿತ್ರರಂಗದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಪದ್ಧತಿ ಇದೆ ಎಂಬ ವಿಚಾರ ನಿರಾಕರಿಸಿದ್ದ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಗಾಯಕಿ ಚಿನ್ಮಯಿ ತಿರುಗೇಟು ನೀಡಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಚಿರಂಜೀವಿ, 'ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವುದು ವ್ಯವಸ್ಥಿತವಾಗಿ ಇಲ್ಲ. ಅದು ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಉದ್ಯಮವು ಒಂದು ಕನ್ನಡಿಯಂತೆ, ನೀವು ಹೇಗಿದ್ದೀರೋ ಅದು ಹಾಗೆಯೇ ಪ್ರತಿಫಲಿಸುತ್ತದೆ,' ಎಂದು ಹೇಳಿದ್ದರು. ಅಂದರೆ, ಶೋಷಣೆ ನಡೆಯುವುದು ವ್ಯಕ್ತಿಯ ನಡವಳಿಕೆಯಿಂದ ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದರು. ಚಿರಂಜೀವಿಯ ಈ ಹೇಳಿಕೆಗೆ ಗಾಯಕಿ ಚಿನ್ಮಯಿ ಪ್ರತಿಕ್ರಿಯೆ ನೀಡಿದ್ದಾರೆ.
ಚಿರಂಜೀವಿ ಅವರ ಈ 'ವಿಕ್ಟಿಮ್ ಬ್ಲೇಮಿಂಗ್' (ಬಲಿಪಶುಗಳನ್ನೇ ಹೊಣೆ ಮಾಡುವುದು) ಧೋರಣೆಯನ್ನು ಚಿನ್ಮಯಿ ತೀವ್ರವಾಗಿ ಖಂಡಿಸಿದ್ದಾರೆ.
ಕಾಸ್ಟಿಂಗ್ ಕೌಚ್ ಎಂಬುದು ಕೇವಲ ವೈಯಕ್ತಿಕ ನಡವಳಿಕೆಯಲ್ಲ, ಅದು ಉದ್ಯಮದಲ್ಲಿ ಬೇರೂರಿರುವ ಒಂದು ಪಿಡುಗು. 'ಕಮಿಟ್‌ಮೆಂಟ್' (Commitment) ಎಂಬ ಪದಕ್ಕೆ ಚಿತ್ರರಂಗದಲ್ಲಿ ಲೈಂಗಿಕ ಶೋಷಣೆಯ ಅರ್ಥವಿದೆ ಎಂದು ಅವರು ನೆನಪಿಸಿದ್ದಾರೆ.
ಗೀತರಚನೆಕಾರ ವೈರಮುತ್ತು ಅವರಿಂದ ತಮಗಾದ ಕಿರುಕುಳವನ್ನು ನೆನಪಿಸಿಕೊಂಡ ಚಿನ್ಮಯಿ, 'ನನ್ನ ತಾಯಿ ಪಕ್ಕದಲ್ಲೇ ಇದ್ದರೂ ಕಿರುಕುಳ ನಡೆಯಿತು. ಕಿರುಕುಳ ನೀಡುವವನಿಗೆ ಎದುರಿಗಿರುವವರು ಎಷ್ಟೇ ಸುಶಿಕ್ಷಿತರಾಗಿದ್ದರೂ ಅಥವಾ ಅವರ ಪೋಷಕರು ಜೊತೆಗಿದ್ದರೂ ಭಯವಿರುವುದಿಲ್ಲ,' ಎಂದಿದ್ದಾರೆ.
ಉದ್ಯಮವು ಕನ್ನಡಿಯಲ್ಲ
'ಉದ್ಯಮವು ಕನ್ನಡಿಯಲ್ಲ. ಹೊರಗಿನಿಂದ ಬರುವ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆದು, ಪ್ರಪಂಚದ ಜ್ಞಾನ ಹೊಂದಿರುತ್ತಾರೆ. ಆದರೂ ಇಲ್ಲಿನ ಪುರುಷರು ಕೆಲಸ ನೀಡಲು ಲೈಂಗಿಕ ಅನುಕೂಲಗಳನ್ನು ನಿರೀಕ್ಷಿಸುತ್ತಾರೆ' ಎಂದು ಚಿರಂಜೀವಿ ಅವರ 'ಕನ್ನಡಿ' ಉದಾಹರಣೆಯನ್ನು ಕೂಡ ಚಿನ್ಮಯಿ ತಳ್ಳಿಹಾಕಿದ್ದಾರೆ.
ಅವರಿಗೆ ದೊಡ್ಡವರ ರಕ್ಷಣೆ ಇದೆ
'ಉದ್ಯಮದಲ್ಲಿ ಲೈಂಗಿಕ ದೌರ್ಜನ್ಯ ಎಸಗುವವರು ಇನ್ನೂ ಗೌರವಯುತ ಸ್ಥಾನದಲ್ಲಿದ್ದಾರೆ ಹಾಗೂ ಅವರಿಗೆ ದೊಡ್ಡವರ ರಕ್ಷಣೆ ಇದೆ' ಎಂದು ಚಿನ್ಮಯಿ ಗಂಭೀರ ಆರೋಪ ಮಾಡಿದ್ದಾರೆ. 'ಚಿರಂಜೀವಿ ಅಂತಹ ಹಿರಿಯ ನಟರು ಇಂತಹ ಸೂಕ್ಷ್ಮ ವಿಷಯದಲ್ಲಿ ಜವಾಬ್ದಾರಿಯುತವಾಗಿ ಮಾತನಾಡಬೇಕು' ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಶೋಷಣೆಗೆ ಒಳಗಾದವರನ್ನೇ ಪ್ರಶ್ನಿಸುವ ಬದಲು, ಶೋಷಣೆ ಮಾಡುವವರ ವಿರುದ್ಧ ಧ್ವನಿ ಎತ್ತಬೇಕು' ಎಂಬ ಆಗ್ರಹ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. ಇದು ಇನ್ನೆಷ್ಟು ಮುಂದುವರೆಯುತ್ತೆ ಎಂಬುದನ್ನು ಕಾದು ನೋಡಬೇಕು.


