ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಮಲಯಾಳಂನ ಸೂಪರ್ ಹಿಟ್ ಹೃದಯಂ ಸಿನಿಮಾದ ರಿಮೇಕ್ ಹಕ್ಕು ಖರೀದಿಸಿದ್ದಾರೆ. ಮೂರು ಭಾಷೆಯಲ್ಲಿ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.  

ದಕ್ಷಿಣ ಭಾರತದ ಅನೇಕ ಸಿನಿಮಾಗಳು ಬಾಲಿವುಡ್ ಗೆ ರಿಮೇಕ್ ಆಗುತ್ತಿವೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣದ ಅನೇಕ ಸಿನಿಮಾಗಳು ಹಿಂದಿ ಮಂದಿಯನ್ನು ಸೆಳೆಯುತ್ತಿವೆ. ತಮಿಳ, ತೆಲುಗು, ಮಲಯಾಳಂನಲ್ಲಿ ಸೂಪರ್ ಹಿಟ್ ಆಗುತ್ತಿದ್ದಂತೆ ಬಾಲಿವುಡ್ ನಲ್ಲಿ ರಿಮೇಕ್ ಮಾಡಲು ತಯಾರಿ ನಡೆಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಮಂದಿಯ ಕಣ್ಣು ದಕ್ಷಿಣ ಭಾರತೀಯ ಸಿನಿಮಾರಂಗದವರ ಮೇಲಿದೆ ಎಂದರು ತಪ್ಪಾಗಲ್ಲ. ಇದೀಗ ದಕ್ಷಿಣದ ಮತ್ತೊಂದು ಹಿಟ್ ಸಿನಿಮಾವನ್ನು ರಿಮೇಕ್ ಮಾಡಲು ಬಾಲಿವುಡ್ ಸಜ್ಜಾಗಿದೆ. ಮಲಯಾಳಂನ ಸೂಪರ್ ಹಿಟ್ ರೊಮ್ಯಾಂಟಿಕ್ ಸಿನಿಮಾ ಹೃದಯಂ(Hridayam) ಮೂರು ಭಾಷೆಗೆ ರಿಮೇಕ್ ಆಗುತ್ತಿದೆ.

ಇತ್ತೀಚಿಗಷ್ಟೆ ಮಲಯಾಳಂನಲ್ಲಿ(Malayalam) ಬಿಡುಗಡೆಯಾಗಿ ಭರ್ಜರಿ ಸಕ್ಸಸ್ ಕಂಡ ಹೃದಯಂ ಸಿನಿಮಾ ಬಾಲಿವುಡ್ ಮಂದಿಯನ್ನು ಸೆಳೆದಿದೆ. ಈ ಸಿನಿಮಾವನ್ನು ರಿಮೇಕ್ ಮಾಡಲು ಹಿಂದಿಯ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್(Karan Johar) ಮುಂದಾಗಿದ್ದಾರೆ. ಈಗಾಗಲೇ ರಿಮೇಕ್ ಹಕ್ಕನ್ನು ಸಹ ಖರೀದಿ ಮಾಡಿದ್ದು, ಮೂರು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದಾರೆ. ಈ ಬಗ್ಗೆ ಕರಣ್ ಜೋಹರ್ ಬಹಿರಂಗ ಪಡಿಸಿದ್ದಾರೆ.

ಸಿನಿಮಾದ ರಿಮೇಕ್ ಹಕ್ಕು ಖರೀದಿಸಿರುವ ನಿರ್ದೇಶಕ ಕರಣ್ ಜೋಹರ್ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 'ಈ ಸುದ್ದಿ ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷವಾಗುತ್ತದೆ. ಧರ್ಮ ಪ್ರೊಡಕ್ಷನ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಹಿಂದಿ, ತಮಿಳು ಮತ್ತು ತೆಲುಗು(Hindi, Tamil, Telugu) ಭಾಷೆಗಳಲ್ಲಿ ಹೃದಯಂ ಎಂಬ ಸುಂದರ ಪ್ರೇಮಕಥೆಯ ಚಿತ್ರದ ಹಕ್ಕನ್ನು ಪಡೆದುಕೊಂಡಿದೆ' ಎಂದು ಹೇಳಿದ್ದಾರೆ.

KGF 2 ಟ್ರೇಲರ್‌ ಬಿಡುಗಡೆಗೆ ನಟ ಡಾ ಶಿವರಾಜ್‌ಕುಮಾರ್ ವಿಶೇಷ ಅತಿಥಿ

ಅಂದಹಾಗೆ ಕರಣ್ ಜೋಹರ್ ಸದ್ಯ ನಿರ್ದೇಶನದಲ್ಲಿ ನಿರತರಾಗಿದ್ದಾರೆ. 5 ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿರುವ ಕರಣ್ ಜೋಹರ್ ರಾಕ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅಲಿಯಾ ಭಟ್(Alia BHatt), ರಣ್ವೀರ್ ಸಿಂಗ್(Ranver Singh), ಧರ್ಮೇಂದ್ರ, ಜಯಾ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ 2023ರಲ್ಲಿ ಬಿಡುಗೆಡಯಾಗಲಿದೆ. ಅನೇಕ ವರ್ಷಗಳ ಬಳಿಕ ನಿರ್ದೇಶನಕ್ಕ ಮರಳಿರುವುದರಿಂದ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಪಾರ್ಟಿಯಲ್ಲಿ ಕಾಜೋಲ್ ಅನ್ನು ಗಟ್ಟಿಯಾಗಿ ಹಿಡಿದು ಮುತ್ತಿಟ್ಟ ಕರಣ್ ಜೋಹರ್!


ಇನ್ನು ಹೃದಯಂ ಸಿನಿಮಾದ ಬಗ್ಗೆ ಹೇಳುವುದಾದರೆ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟಿಟಿ ಪ್ರೇಕ್ಷಕರು ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಮಲಯಾಳಂನ ಅದ್ಭುತ ಸಿನಿಮಾಗಳ ಪಟ್ಟಿಯಲ್ಲಿ ಹೃದಯಂ ಕೂಡ ಸೇರಿಕೊಂಡಿದೆ. ವಿನೀತ್ ಶ್ರೀನಿವಾಸನ್ ನಿರ್ದೇಶದಲ್ಲಿ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಪುತ್ರ ಪ್ರಣವ್ ಮೋಹನ್ ಲಾಲ್ ನಾಯಕನಾಗಿ ಮಿಂಚಿದ್ದಾರೆ. ನಾಯಕಿಯರಾಗಿ ಕಲ್ಯಾಣಿ ಪ್ರಿಯದರ್ಶನ್ ಮತ್ತು ದರ್ಶನ ರಾಜೇಂದ್ರ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದು, ಗಾನಪ್ರಿಯರ ಹೃದಯ ಗೆದ್ದಿವೆ. ಇದೀಗ ಹೃದಯಂ ಸಿನಿಮಾ ತಮಿಳು, ತೆಲುಗು ಮತ್ತು ಹಿಂದಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ನಾಯಕನಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ, ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಸದ್ಯದಲ್ಲೇ ಈ ಎಲ್ಲಾ ಕುತೂಹಲಕ್ಕೆ ತೆರೆ ಬೀಳಲಿದೆ.