ಸುಕೇಶ್‌ ಚಂದ್ರಶೇಖರ್‌ ವಿರುದ್ಧ ಮತ್ತೊಂದು ಕೇಸ್ ದಾಖಲು ಮಾಡಿದ್ದಾರೆ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌. ಏನಿದು ವಿಷಯ?  

ಮನುಷ್ಯರಿಗೆ ಆಸೆ ಇರಬೇಕು, ದುರಾಸೆ ಇರಬಾರದು... ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು... ಎಂದೆಲ್ಲಾ ಹಿಂದಿವನವರು ಹೇಳ್ತಿದ್ದಿದ್ದು ಸುಮ್ಮನೇ ಅಲ್ಲ. ಐಷಾರಾಮಿ ಜೀವನ ನಡೆಸುತ್ತಿದ್ದರೂ, ಇನ್ನುಷ್ಟು, ಮತ್ತಷ್ಟು ಎಂದು ವಂಚಕನೊಬ್ಬನ ಮೋಹಪಾಶಕ್ಕೆ ಬಿದ್ದ ರಾ... ರಾ... ರಕ್ಕಮ್ಮ ಬೆಡಗಿ, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಬದುಕು ಈಗ ಯಾರಿಗೂ ಬೇಡವಾಗಿದೆ. ಒಂದು ಕಾಲದಲ್ಲಿ ಕೋಟಿ ಕೋಟಿ ಬೆಲೆಬಾಳುವ ಐಷಾರಾಮಿ ಉಡುಗೊರೆಯನ್ನು ಸುಕೇಶ್ ಚಂದ್ರಶೇಖರ್ ಎಂಬಾತನಿಂದ ಪಡೆದುಕೊಂಡು, ಸಿಕ್ಕಸಿಕ್ಕಂತೆ ಫೋಟೋಗೆಲ್ಲಾ ಪೋಸ್‌ ಕೊಟ್ಟು ಆತನ ಮೋಹಪಾಶಕ್ಕೆ ಸಿಲುಕಿರುವ ಜಾಕ್ವೆಲಿನ್‌ಗೆ ಈಗ ಆತನಿಂದ ತಪ್ಪಿಸಿಕೊಳ್ಳುವ ಮಾರ್ಗ ಸಿಗದೇ ಸುಸ್ತಾಗಿದ್ದಾರೆ. ನೂರಾರು ಕೋಟಿ ಆಸ್ತಿ ಇದ್ದರೂ, ಮತ್ತಷ್ಟು ವೈಭೋಗ ಜೀವನಕ್ಕಾಗಿ ಸುಕೇಶ್​ನ ಮೋಹದ ಬಲೆಗೆ ಬಿದ್ದು, ಈಗ ಕೋರ್ಟ್​ ಅಲೆಯುವಂತಾಗಿದೆ ಜಾಕ್ವೆಲಿನ್​. ಈಗ ಆತನಿಂದ ತಪ್ಪಿಸಿಕೊಂಡರೆ ಸಾಕು ಎಂದು ಒಂದಾದ ಮೇಲೊಂದರಂತೆ ಕೇಸ್‌ ದಾಖಲು ಮಾಡುತ್ತಿದ್ದಾರೆ.

ಅಂದಹಾಗೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Money Laundering case) ಜೈಲು ಸೇರಿದ್ದಾನೆ ಸುಕೇಶ್ ಚಂದ್ರಶೇಖರ್. ಈ ಘಟನೆಯಲ್ಲಿ ಜಾಕ್ವೆಲಿನ್‌ ಹೆಸರೂ ಥಳಕು ಹಾಕಿಕೊಂಡಿದ್ದು, ತನಿಖಾಧಿಕಾರಿಗಳು ವರ್ಷಗಳಿಂದ ತನಿಖೆ ಮಾಡುತ್ತಲೇ ಇದ್ದಾರೆ. ಇವರಿಬ್ಬರ ನಡುವೆ ಪತ್ರ ವ್ಯವಹಾರಗಳ ಕುರಿತು ಕೆಲ ದಿನಗಳ ಹಿಂದೆ ಬಿಗ್‌ ಅಪ್‌ಡೇಟ್‌ ಹೊರಬಂದಿತ್ತು. ಸುಕೇಶ್​ನ ಅಕ್ರಮದ ಕೃತ್ಯದಲ್ಲಿ ಜಾಕ್ವೆಲಿನ್​ ಕೂಡ ಶಾಮೀಲಾಗಿದ್ದಾರೆ ಎಂದು ಆರೋಪಿಸಿದಾಗ ನಟಿ ತನಗೂ, ಸುಕೇಶ್​ಗೂ ಸಂಬಂಧವೇ ಇಲ್ಲ ಎಂದಿದ್ದರು. ವಿನಾ ಕಾರಣ ಆತ ನನಗೆ ಜೈಲಿನಿಂದ ಲವ್​ ಲೆಟರ್​ ಬರೆದು ತೊಂದರೆ ಕೊಡುತ್ತಿದ್ದಾನೆ ಎಂದು ಆರೋಪಿಸಿದ್ದ ನಟಿ, ಈ ರೀತಿ ಪತ್ರ ವ್ಯವಹಾರಕ್ಕೆ ಅವಕಾಶ ನೀಡಬಾರದು ಎಂದು ಕೋರ್ಟ್​ ಮೊರೆ ಕೂಡ ಹೋಗಿದ್ದರು. ಆದರೆ ತನಿಖೆ ವೇಳೆ, ಸುಕೇಶ್​ ಜೈಲಿನಲ್ಲಿ ಇದ್ದರೂ, ಇವರ ನಡುವೆ ಇಂದಿಗೂ ಪತ್ರವ್ಯವಹಾರ ಮುಂದುವರೆಯುತ್ತಲೇ ಇರುವ ಕಾರಣ, ಅಕ್ರಮ ಕೇಸ್​ನಲ್ಲಿ ಜಾಕ್ವೆಲಿನ್​ (Jacqueline Fernandez) ಹೆಸರು ಮತ್ತಷ್ಟು ಬಲಗೊಳ್ಳುತ್ತಲೇ ಇದೆ. 

ತಾವೇ ಬೀಸಿದ ಗಾಳಕ್ಕೆ ಬಿದ್ದುಬಿಟ್ಟರಾ ನಟಿ ಜಾಕ್ವೆಲಿನ್​? ಸುಕೇಶ್​ ಜೊತೆಗಿನ ಚಾಟ್​ಗಳು ತನಿಖಾಧಿಕಾರಿಗಳ ಕೈಗೆ!

ಇದೀಗ ನಟಿ ಮತ್ತೊಂದು ಕೇಸ್‌ ದಾಖಲಿಸಿದ್ದಾರೆ. ಜೈಲಿನೊಳಗಿಂದ ಸುಕೇಶ್‌ ತಮಗೆ ಕಿರುಕುಳ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಕೇಶ್ ಚಂದ್ರಶೇಖರ್ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದಂತೆ, ಅವರು ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರಿಗೆ ಪ್ರಕರಣವನ್ನು ದಾಖಲಿಸಿದ್ದಾರೆ. ಜಾಕ್ವೆಲಿನ್ ಈ ಪತ್ರವನ್ನು ವಿಶೇಷ ಪೊಲೀಸ್ ಆಯುಕ್ತರಿಗೆ (ಅಪರಾಧ ವಿಭಾಗ) ಕಳುಹಿಸಿದ್ದಾರೆ. ದೂರಿನ ಕುರಿತು ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಲು ವಿಶೇಷ ಘಟಕವನ್ನು ಕೇಳಲಾಗಿದೆ.

ಅದೇ ಇನ್ನೊಂದೆಡೆ, ತನಿಖಾಧಿಕಾರಿಗಳು ಒಂದೊಂದೇ ತನಿಖೆ ಮಾಡುತ್ತಲೇ ನಟಿಯ ವಿರುದ್ಧ ಆರೋಪ ಮತ್ತಷ್ಟು ಸುತ್ತಿಕೊಳ್ಳುತ್ತಿದೆ. ತಮಗೂ, ಸುಕೇಶ್​ಗೂ ಸಂಬಂಧವೇ ಇಲ್ಲ. ನಾನು ಆತನಿಗೆ ಯಾವುದೇ ಚಾಟ್​ ಸಂದೇಶ ಕಳುಹಿಸಿಯೇ ಇಲ್ಲ ಎಂದು ಜಾಕ್ವೆಲಿನ್​ ಹೇಳಿದ್ದರು. ಆದರೆ ಇದೀಗ 2021ರ ಪತ್ರ ವ್ಯವಹಾರಗಳು ತನಿಖಾಧಿಕಾರಿಗಳ ಕೈಸೇರಿದೆ. ಇದನ್ನು ಖುದ್ದು ಸುಕೇಶ್​ ಪೊಲೀಸರಿಗೆ ನೀಡಿದ್ದಾನೆ. ಯಾವಾಗ ನಟಿ ತನ್ನ ವಿರುದ್ಧವೇ ತಿರುಗಿ ಬಿದ್ದಳೋ, ಆಕೆಯ ಬಣ್ಣ ಬಯಲು ಮಾಡುವುದಾಗಿ ಈ ಹಿಂದೆ ಸುಕೇಶ್​ ಹೇಳಿದ್ದ. ಈಗ ಅದರಂತೆಯೇ 2021ರಲ್ಲಿ ತಮ್ಮಿಬ್ಬರ ನಡುವೆ ನಡೆದಿರುವ ಚಾಟ್​ ಸಂದೇಶಗಳನ್ನು ತನಿಖಾಧಿಕಾರಿಗಳ ಕೈಗೆ ಇತ್ತಿದ್ದ. ಅಂದು ತಾನು ಜಾಕ್ವೆಲಿನ್‌ಗೆ ಪತ್ರ ಬರೆದು ಹೊಸ ವರ್ಷದ ಶುಭಾಶಯ ಕೋರಿದ್ದ ಸಂದರ್ಭದಲ್ಲಿ, ಮರಳಿ ಆಕೆ ಐ ಲವ್ ಯೂ ಮೆಸೇಜ್ ಕಳುಹಿಸಿದ್ದಳು ಎಂದಿದ್ದ ಸುರೇಶ್​. ಒಟ್ಟಿನಲ್ಲಿ ಕೆಲವು ವರ್ಷಗಳಿಂದ ನಡೆಯುತ್ತಿರುವ ಈ ಪ್ರಕರಣದ ತನಿಖೆ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಸದ್ಯ ತಿಳಿಯುತ್ತಿಲ್ಲ. 

ಮಾಲಿವುಡ್‌ ನಟನ ಜೊತೆ ಆ್ಯಂಕರ್ ಅನುಶ್ರೀ ಮದ್ವೆ? ಕೊನೆಗೂ ಮೌನ ಮುರಿದ ಉನ್ನಿ ಮುಕುಂದನ್ ಹೇಳಿದ್ದೇನು?