ನಟ ನಾನಾ ಪಾಟೇಕರ್ ಕಾರ್ಗಿಲ್ ಯುದ್ಧದ ವೇಳೆ ಸಿನಿಮಾರಂಗ ತೊರೆದು ಸೇನೆಗೆ ಸೇರಲು ಯತ್ನಿಸಿದ್ದರು. ರಕ್ಷಣಾ ಸಚಿವರ ಅನುಮತಿ ಪಡೆದು ಎರಡು ವಾರಗಳ ಕಾಲ ಗಡಿಯಲ್ಲಿ ಸೇವೆ ಸಲ್ಲಿಸಿದರು. ತಮ್ಮ ಮಿಲಿಟರಿ ತರಬೇತಿಯೇ ಇದಕ್ಕೆ ಸಹಕಾರಿಯಾಯಿತು. ಈ ಅವಧಿಯಲ್ಲಿ ಅವರ ತೂಕ ಗಣನೀಯವಾಗಿ ಕಡಿಮೆಯಾಯಿತು.

ನಟಿ ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ “ಬಾಲಿವುಡ್‌ ನಟರಾಗಲೀ, ಕ್ರಿಕೆಟರ್‌ಗಳಾಗಲೀ ಹೀರೋಗಳಲ್ಲ, ದೇಶ ಕಾಯುವ ಸೈನಿಕರು ನಿಜವಾದ ಹೀರೋಗಳು” ಎಂದು ಹೇಳಿದ್ದರು. ಆದರೆ ಇಲ್ಲವೋರ್ವ ಬಾಲಿವುಡ್‌ ಹೀರೋ ನಟನೆಯಿಂದ ಬ್ರೇಕ್‌ ಪಡೆದು, ಕಾರ್ಗಿಲ್‌ ಯುದ್ಧದ ವೇಳೆ ಸೇವೆ ಮಾಡಿರುವ ವಿಚಾರ ಅನೇಕರಿಗೆ ಗೊತ್ತೇ ಇಲ್ಲ.

ಆಧುನಿಕ ಭಾರತದ ಇತಿಹಾಸದಲ್ಲಿ ಕಾರ್ಗಿಲ್ ಯುದ್ಧವು ಒಂದು ಮಹತ್ವದ ಘಟನೆಯಾಗಿದೆ. 1999ರಲ್ಲಿ ಭಾರತ, ಪಾಕಿಸ್ತಾನದ ನಡುವಿನ ಕೊನೆಯ ಪ್ರಮುಖ ಸಶಸ್ತ್ರ ಸಂಘರ್ಷವು ದೇಶವನ್ನು ಒಗ್ಗೂಡಿಸಿತು. ಯೋಧರು ದೇಶದ ಗಡಿಯಲ್ಲಿ ನಿಂತು ಹೋರಾಡುವಾಗ, ಉಳಿದ ಜನರು ಧನಸಂಗ್ರಹಣೆ ಮಾಡುವುದಲ್ಲದೆ ಏನಾಗತ್ತೋ ಆ ನಿಟ್ಟಿನಲ್ಲಿ ಕೊಡುಗೆಯನ್ನು ನೀಡಲು ಶುರು ಮಾಡಿದರು. ಸಿನಿಮಾ ನಟರನ್ನು ಹೀರೋಗಳು ಎಂದು ಸಹಜವಾಗಿ ಹೇಳಲಾಗುತ್ತದೆ. ಆದರೆ ರಿಯಲ್‌ ಹೀರೋ ಅಂದ್ರೆ ಸೈನಿಕರು. ಈ ಬಾಲಿವುಡ್‌ ನಟ ಸಿನಿಮಾದಲ್ಲಿ ನಟಿಸುವುದಲ್ಲದೆ, ಗಡಿಯಲ್ಲಿ ನಿಂತು ಹೋರಾಡಿದ್ದಾರೆ. ಈ ನಟ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಎನ್ನುವುದು ಹೆಮ್ಮೆಯ ವಿಷಯ. 

ಸೇನೆಯಲ್ಲಿ ಕೆಲಸ ಮಾಡಲು ಅನುಮತಿ ಕೊಡಲಿಲ್ಲ!
ನಾನಾ ಪಾಟೇಕರ್‌ ಅವರು ಕಾರ್ಗಿಲ್ ಯುದ್ಧದ ಟೈಮ್‌ನಲ್ಲಿ ಭಾರತೀಯ ಸೇನೆಗೆ ಸಹಾಯ ಮಾಡಲು ತಮ್ಮ ಕರಿಯರ್‌ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ʼಕೌನ್ ಬನೇಗಾ ಕರೋಡ್‌ಪತಿ 16ʼ ವೇಳೆ ಅಮಿತಾಭ್ ಬಚ್ಚನ್‌ ಅವರ ಬಳಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ತಾವು ಸೇವೆ ಸಲ್ಲಿಸಿದ ಕಥೆಯನ್ನು ಹಂಚಿಕೊಂಡಿದ್ದಾರೆ. 1990ರ ಆರಂಭದಲ್ಲಿ ತಮ್ಮ 'ಪ್ರಹಾರ್' ಸಿನಿಮಾಕ್ಕಾಗಿ ಮರಾಠಾ ಲೈಟ್ ಇನ್‌ಫೆಂಟ್ರಿಯೊಂದಿಗೆ ಮೂರು ವರ್ಷಗಳ ಕಾಲ ತರಬೇತಿ ಪಡೆದಿದ್ದರು. ಕಾರ್ಗಿಲ್ ಯುದ್ಧ ಆರಂಭವಾದಾಗ, ಅವರು ಆ ರೆಜಿಮೆಂಟ್‌ನ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಯೋಧರ ಜೊತೆ ತಾವು ಕೂಡ ಸೇವೆ ಮಾಡುವುದಾಗಿ ಕೇಳಿಕೊಂಡಿದ್ದರು. ಆದರೆ ಪಾಟೇಕರ್ ಅವರಿಗೆ ಅನುಮತಿ ಕೊಡಲಿಲ್ಲ. ರಕ್ಷಣಾ ಸಚಿವರು ಮಾತ್ರ ಇದಕ್ಕೆ ಅನುಮತಿ ನೀಡಬಹುದು ಎಂದು ಹೇಳಲಾಗಿತ್ತು.

ಆ ತರಬೇತಿಯಿಂದ ಅವಕಾಶ ಸಿಗ್ತು! 
"ನನಗೆ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಜೀ ಗೊತ್ತಿತ್ತು, ಹಾಗಾಗಿ ಅವರಿಗೆ ಕಾಲ್‌ ಮಾಡಿದೆ. ಅವರು ಕೂಡ ಕೊಡಲಿಲ್ಲ" ಎಂದು ನಾನಾ ಹೇಳಿದ್ದಾರೆ. ನಾನು ಅವರಿಗೆ, ಆರು ತಿಂಗಳ ತರಬೇತಿ ಪಡೆದಿದ್ದರೂ ಕೂಡ, ನಾನು ಮೂರು ವರ್ಷಗಳ ಕಾಲ ತರಬೇತಿ ಪಡೆದಿದ್ದೇನೆ ಎಂದು ಹೇಳಿದ್ದೆ. ನನ್ನ ಮರಾಠಾ ಲೈಟ್ ಇನ್‌ಫೆಂಟ್ರಿಯ ಅನುಭವದ ಬಗ್ಗೆ ಹೇಳಿದೆ. ಆಗ ಅವರು ಸ್ವಲ್ಪ ಕನ್ವಿನ್ಸ್‌ ಆಗಿ 'ನೀವು ಯಾವಾಗ ಹೋಗಲು ಇಷ್ಟಪಡ್ತೀರಿ?' ಎಂದು ಕೇಳಿದ್ದಾರೆ. 

ತೂಕ ಇಳಿಯಿತು!
“ನಾನಾ 1999ರ ಆಗಸ್ಟ್‌ನಲ್ಲಿ LOC ಸಮೀಪದಲ್ಲಿ ಎರಡು ವಾರಗಳಿಗಿಂತ ಹೆಚ್ಚು ಕಾಲ ಕಳೆದೆ. ಅಲ್ಲಿ ನಾನು ಯೋಧರಿಗೆ ಸಹಾಯ ಮಾಡಿದೆ, ಕೆಲವು ದಿನಗಳ ಕಾಲ ಬೇಸ್‌ನ ಆಸ್ಪತ್ರೆಯಲ್ಲಿ ಕೆಲಸ ಮಾಡಿದೆ. ತಮ್ಮ ಕಾರ್ಗಿಲ್ ಅವಧಿಯಲ್ಲಿ ಕ್ವಿಕ್ ರೆಸ್ಪಾನ್ಸ್ ಟೀಮ್ (ಕ್ಯೂಆರ್‌ಟಿ) ದ ಸದಸ್ಯರಾಗಿದ್ದೆ. ನಾನು ಶ್ರೀನಗರಕ್ಕೆ ತಲುಪಿದಾಗ 76 ಕೆಜಿ ತೂಕವಿತ್ತು. ಹಿಂದಿರುಗಿದಾಗ 56 ಕೆಜಿಗೆ ಇಳಿದಿದ್ದೆ” ಎಂದು ಕಷ್ಟದ ದಿನಗಳನ್ನು ನಾನಾ ಪಾಟೇಕರ್‌ ನೆನಪಿಸಿಕೊಂಡಿದ್ದಾರೆ. 

ದೇಶಭಕ್ತಿ ಸಿನಿಮಾಗಳಲ್ಲಿ ನಟನೆ!
ಕಾರ್ಗಿಲ್‌ನಿಂದ ಹಿಂದಿರುಗಿದ ನಂತರ ನಾನಾ ಪಟೇಕರ್ ಸಿನಿಮಾಗಳಲ್ಲಿ ಬ್ಯುಸಿಯಾದರು. ಆಮೇಲೆ ಅವರು ಭಾರತದ ಕೆಲವು ಅತ್ಯಂತ ಯಶಸ್ವಿ ಮತ್ತು ಪ್ರಶಂಸಿತ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ ಅವರು ಅನಿಲ್ ಶರ್ಮಾರ 'ವನವಾಸ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 2024 ರಲ್ಲಿ ಈ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್‌ ಆಯ್ತು.