ತಮಿಳಿನ ಖ್ಯಾತ ನಟ ದಳಪತಿ ವಿಜಯ್ 10 ವರ್ಷಗಳ ಬಳಿಕ ಸಂದರ್ಶನ ನೀಡಿದ್ದಾರೆ. ಬೀಸ್ಟ್ ಬಿಡುಗಡೆಯ ಬ್ಯುಸಿಯಲ್ಲಿರುವ ವಿಜಯ್ ಅವರನ್ನು ನಿರ್ದೇಶಕ ದಿಲೀಪ್ ಕುಮಾರ್ ಸಂದರ್ಶನ ಮಾಡಿದ್ದಾರೆ. ಈ ವೇಳೆ ರಾಜಕೀಯ ಎಂಟ್ರಿ ಬಗ್ಗೆ ವಿಜಯ್ ಸುಳಿವು ನೀಡಿದ್ದಾರೆ.
ತಮಿಳು ಸ್ಟಾರ್ ನಟ ಇಳಯದಳಪತಿ ವಿಜಯ್(Thalapathy Vijay) ಸದ್ಯ ಬೀಸ್ಟ್(Beast) ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಪ್ರಾರಂಭವಾಗಿದೆ. ಬಹುನಿರೀಕ್ಷೆಯ ಬೀಸ್ಟ್ ಸಿನಿಮಾ ಏಪ್ರಿಲ್ 13ರಂದು ತೆರೆಗೆ ಬರುತ್ತಿದೆ. ಈಗಾಗಲೇ ದೇಶದಾದ್ಯಂತ ಭಾರಿ ಸದ್ದು ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2(KGF2) ಸಿನಿಮಾ ಬಿಡುಗಡೆಗೂ ಒಂದು ದಿನ ಮೊದಲು ಬೀಸ್ಟ್ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ಬೀಸ್ಟ್ ತಮಿಳುನಾಡು ಮಾತ್ರವಲ್ಲದೆ ದಕ್ಷಿಣ ಭಾರತೀಯ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ನಟ ವಿಜಯ್ ಬರೋಬ್ಬರಿ 10 ವರ್ಷಗಳ ಬಳಿಕ ಮೊದಲ ಬಾರಿಗೆ ಸಂದರ್ಶನ ನೀಡಿದ್ದಾರೆ.
ಕಳೆದ 10 ವರ್ಷಗಳಲ್ಲಿ ವಿಜಯ್ ಯಾವುದೇ ಸಿನಿಮಾ ಬಿಡುಗಡೆ ಸಮಯದಲ್ಲೂ ಸಂದರ್ಶನ ನೀಡಿರಲಿಲ್ಲ. ಆದರೀಗ ಬೀಸ್ಟ್ ಸಿನಿಮಾ ಬಿಡುಗಡೆ ಸಮಯದಲ್ಲಿ ಸಂದರ್ಶನ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಿರ್ದೇಶಕ ದಿಲೀಪ್ ಕುಮಾರ್ ಕುಮಾರ್ ಜೊತೆ ಮಾತುಕತೆ ನಡೆಸಿರುವ ವಿಜಯ್ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದರು. ಅಂದಹಾಗೆ ಸನ್ ಟಿವಿಯಲ್ಲಿ ವಿಜಯ್ ಸಂದರ್ಶನ ಪ್ರಸಾರವಾಗಿದೆ. ಈ ಮಾತುಕತೆಯಲ್ಲಿ 10 ವರ್ಷಗಳಿಂದ ಸಂದರ್ಶನಗಳಿಂದ ದೂರ ಇದ್ದ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆೆ. ಜೊತೆಗೆ ರಾಜಕೀಯ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ.
10ವರ್ಷದ ಬಳಿಕ ವಿಜಯ್ ಮೊದಲ ಸಂದರ್ಶನ; ಇಷ್ಟುವರ್ಷದ ಮೌನ, ಚರ್ಚ್, ದೇವಸ್ಥಾನದ ಬಗ್ಗೆ ದಳಪತಿ ಮಾತು
ರಾಜಕೀಯ ಎಂಟ್ರಿ ಬಗ್ಗೆ ವಿಜಯ್ ಸುಳಿವು
ಇಳಯದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಮಾತು ಆಗಾಗ ಕೇಳಿಬರುತ್ತಲೇ ಇರುತ್ತೆ. ವಿಜಯ್ ತಂದೆ ರಾಜಕೀಯದಲ್ಲಿದ್ದಾರೆ. ಆ ಸಮಯದಲ್ಲಿ ವಿಜಯ್ ಕೂಡ ಎಂಟ್ರಿ ಕೊಡುತ್ತಾರೆ ಎನ್ನುವ ಮಾತು ಬಲವಾಗಿ ಕೇಳಿಬಂದಿತ್ತು. ಆ ಸಮಯದಲ್ಲಿ ವಿಜಯ್ ತನ್ನ ತಂದೆಯ ಪಕ್ಷಕ್ಕೂ ತನಗೂ ಸಂಬಂಧವಿಲ್ಲ ಎನ್ನುವ ಮೂಲಕ ದೂರ ಸರಿದಿದ್ದರು. ಬಳಿಕ ಕಳೆದ ವರ್ಷ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವಿಜಯ್, ಸೈಕಲ್‌ನಲ್ಲಿ ಬಂದು ಮತ ಚಲಾಯಿಸಿದ್ದರು. ಇದು ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿತ್ತು. ಪೆಟ್ರೋಲ್ ದರ ಏರಿಕೆ ವಿರುದ್ಧ ವಿಜಯ್ ಮಾಡಿದ ಪ್ರತಿಭಟನೆ ಎಂದು ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ವಿಜಯ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
Puneeth Rajkumar: ಸರತಿ ಸಾಲಿನಲ್ಲಿ ಬಂದು ಪುನೀತ್‌ಗೆ ನಮನ ಸಲ್ಲಿಸಿದ ವಿಜಯ್
ಇದೀಗ 10 ವರ್ಷಗಳ ಬಳಿಕ ನೀಡಿರುವ ಸಂದರ್ಶನದಲ್ಲಿ ವಿಜಯ್ ಅಭಿಮಾನಿಗಳು ಏನಾಗಬೇಕೆಂದು ಬಯಸುತ್ತಾರೊ ಹಾಗೆ ಆಗಲಿ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಿರ್ದೇಶಕ ದಿಲೀಪ್ ಕುಮಾರ್ ಇಳಯದಳಪತಿ ಆಗಿ ಪಯಣ ಪ್ರಾರಂಭಿಸಿ ದಳಪತಿಯಾದ ನಟ ತಲೈವನ್(ನಾಯಕ) ಆಗಲು ಬಯಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯ್, 'ನಟನಾಗಬೇಕೆಂದು ಅಭಿಮಾನಿಗಳು ಬಯಸಿದ್ದರು. ಅದೇ ರೀತಿ ತಲೈವನ್ ಆಗಲು ಬಯಸಿದ್ದಾರೆ ಎಂದರೆ ಹಾಗೆ ಆಗಲಿ' ಎಂದು ಹೇಳಿದ್ದಾರೆ. ಈ ಹೇಳಿಕೆ ಈಗ ರಾಜಕೀಯ ಎಂಟ್ರಿ ಬಗ್ಗೆ ಸುಳಿವು ನೀಡಿದ್ದಾರಾ ಎನ್ನುವ ಅನುಮಾನ ಮೂಡಿಸಿದೆ. ಒಂದು ವೇಳೆ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟರೆ ತಮಿಳು ರಾಜಕೀಯ ರಂಗದಲ್ಲಿ ದೊಡ್ಡ ಬದಲಾವಣೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಭಿಮಾನಿಗಳು ಸಹ ರಾಜಕೀಯಕ್ಕೆ ಎಂಟ್ರಿ ಕೊಡಲಿ ಎಂದು ಬಯಸುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳ ಆಸೆಯಂತೆ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟರು ಅಚ್ಚರಿ ಪಡಬೇಕಾಗಿಲ್ಲ.
