ತುಳು, ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿಯಲ್ಲಿ ಚಟಪಟ ಮಾತಾಡಿ ಎದುರಿದ್ದವರು ಹೊಟ್ಟೆ ಹಣ್ಣಾಗುವ ಹಾಗೆ ನಗುವಂತೆ ಮಾಡುತ್ತಿದ್ದ ಅಯ್ಯೋ ಶ್ರದ್ಧಾ ಏಕಾಏಕಿ ಬಾಲಿವುಡ್‌ಗೆ ಏಣಿ ಹಾಕಿದ್ದಾರೆ. ಅವರು ನಟಿಸ್ತಿರೋ ಸಿನಿಮಾದ ಹೆಸರು ಡಾಕ್ಟರ್ ಜಿ. ಅಲ್ಲೂ ಜನರನ್ನ ನಗಿಸ್ತಾರಾ ಈ ಕಾರ್ಕಳದ ಹುಡುಗಿ?
'ಅಯ್ಯೋ ಶ್ರದ್ಧಾ' ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವವರಿಗೆ ಮಾತ್ರವಲ್ಲ, ದಿನಕ್ಕೊಮ್ಮೆ ಎಫ್‌ಬಿ, ಇನ್‌ಸ್ಟಾ ನೋಡೋರಿಗೂ ಚಿರಪರಿಚಿತ ಹೆಸರು. ಶುರು ಶುರುವಲ್ಲಿ ಈಕೆ ಮಾಡ್ತಿದ್ದ ತುಳು ಹಾಸ್ಯ ಸನ್ನಿವೇಶಗಳು ವೈರಲ್ ಆಗುತ್ತಿದ್ದವು. ಆದರೆ ತುಳು ಬಲ್ಲವರನ್ನು ಬಿಟ್ಟರೆ ಬೇರೆಯವ್ರಿಗೆ ಅರ್ಥ ಆಗ್ತಿರಲಿಲ್ಲ. ಆದರೆ ಆಮೇಲೆ ತುಳುವಿನಿಂದ ಇಂಗ್ಲೀಷ್‌ಗೆ ಶಿಫ್ಟ್ ಆದರು ಶ್ರದ್ಧಾ. ಅಲ್ಲಲ್ಲಿ ಹಿಂದಿ, ಕನ್ನಡ ಒಗ್ಗರಣೆಯೊಂದಿಗೆ ಮೂಡಿಬರ್ತಿದ್ದ ಇವರ ಈ ಹಾಸ್ಯ ಪ್ರಸಂಗಗಳು ಜನರ ಮೋಸ್ಟ್ ಫೇವರಿಟ್ ಆದವು. ಇದೀಗ ಇವರಿಗೆ ವಿಶ್ವಾದ್ಯಂತ ಪ್ಯಾನ್ ಫಾಲೋವಿಂಗ್ ಇದೆ. ಹಾಸ್ಯ ತುಳುನಾಡಿನವರ ರಕ್ತದಲ್ಲೇ ಇದೆ ಅನ್ನೋ ಥರದಲ್ಲಿ ಮಾತಾಡುವ ಶ್ರದ್ಧಾ ಇದಕ್ಕೂ ಮೊದಲು ಮುಂಬೈಯಲ್ಲಿ ಆರ್‌ಜೆ ಆಗಿದ್ರು. ಬೆಂಗಳೂರಲ್ಲಿ ಕಲರ್ಸ್ ಕನ್ನಡದಲ್ಲಿ ಮುಖ್ಯ ಹುದ್ದೆಯಲ್ಲೂ ಕೆಲಸ ಮಾಡಿದ್ರು. ಆಮೇಲೆ ಕೆಲಸ ಬಿಟ್ಟು ಫ್ರೀಲ್ಯಾನ್ಸ್ ಆಗಿ ಕ್ರಿಯೇಟಿವ್ ವರ್ಕ್ ಮಾಡ್ತಿದ್ರು. ಜೊತೆಗೆ ಸ್ಟಾಂಡಪ್ ಕಾಮಿಡಿ ಮೂಲಕವೂ ಮಿಂಚಿದ್ರು. ಇದೀಗ ಈ ತುಳುನಾಡ ಹುಡುಗಿ ಬಾಲಿವುಡ್‌ಗೆ ರಂಗಪ್ರವೇಶ ಮಾಡ್ತಿದ್ದಾರೆ. ಡಾಕ್ಟರ್ ಜೀ ಅನ್ನೋ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳ್ಕೊಂಡಿದ್ದಾರೆ.
ಶ್ರದ್ಧಾ ನಟಿಸುತ್ತಿರುವ 'ಡಾಕ್ಟರ್ ಜೀ' ಸಿನಿಮಾಕ್ಕೆ (Movie) ಬಾಲಿವುಡ್ ಹೀರೋ ಆಯುಷ್ಮಾನ್ ಖುರಾನ ಹೀರೋ. ಈ ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ಆ ಪೋಸ್ಟರ್‌ನಲ್ಲಿ ಹೀರೋ ಹಿಂದೆ ಬಿಳಿ ಕೋಟು ಹಾಕ್ಕೊಂಡಿರೋ ಶ್ರದ್ಧಾನೂ ಇದ್ದಾರೆ. ಈ ಸಿನಿಮಾ ಮುಂದಿನ ತಿಂಗಳು ಅಂದರೆ ಅಕ್ಟೋಬರ್‌ಗೆ ತೆರೆಗೆ ಬರಲು ಸಿದ್ಧವಿದೆ. 'ಡಾಕ್ಟರ್ ಜಿ' ಸಿನಿಮಾವನ್ನು ಜಂಗ್ಲಿ ಪಿಕ್ಚರ್ಸ್ ಬ್ಯಾನರ್‌ನಡಿ ಅನುಭೂತಿ ಕಶ್ಯಪ್ ನಿರ್ದೇಶಿಸುತ್ತಿದ್ದಾರೆ. ಅಮಿತ್ ತ್ರಿವೇದಿ ಅವರ ಸಂಗೀತ ಇದೆ. ಆಯುಷ್ಮಾನ್ ಖುರಾನಾ ಅವರ ಜೊತೆಗೆ ಈ ಸಿನಿಮಾಗೆ ನಾಯಕಿ ಆಗಿರೋರು ರಾಕುಲ್ ಪ್ರೀತ್ ಸಿಂಗ್. ಜೊತೆಗೆ ಶೆಫಾಲಿ ಷಾ, ಶಿಭಾ, ಅಯ್ಯೋ ಶ್ರದ್ಧಾ ಮೊದಲಾದವರು ನಟಿಸಿದ್ದಾರೆ.
ಅದಕ್ಕಿಂತ ಕೆಟ್ಟ ಪರಿಸ್ಥಿತಿ ನಾವು ಅನುಭವಿಸಿಲ್ಲ; ಮಗನ ಡ್ರಗ್ಸ ಪ್ರಕರಣದ ಬಗ್ಗೆ ಮೌನ ಮುರಿದ ಶಾರುಖ್ ಪತ್ನಿ
ಹಾಗೆ ನೋಡಿದರೆ ತುಳುನಾಡಿನ ಸುಂದರಿಯರು ನಮ್ಮ ಕನ್ನಡ ಚಿತ್ರರಂಗಕ್ಕಿಂತಲೂ ಬಾಲಿವುಡ್ (Bollywood) ಜೊತೆಗೆ ಗುರುತಿಸಿಕೊಂಡಿರುವುದೇ ಹೆಚ್ಚು. ತುಳುನಾಡ ಚೆಲುವೆ ಐಶ್ವರ್ಯಾ ರೈ (Aish) ಇದಕ್ಕೆ ಮೇಲ್ಪಂಕ್ತಿ ಹಾಕಿದ್ದಾರೆ. ಆಮೇಲೆ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ, ಕೃತಿ ಶೆಟ್ಟಿ ಸೇರಿದಂತೆ ಹಲವು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರತಿಭಾವಂತ ಹೆಣ್ಮಕ್ಕಳು ಭಾರತೀಯ ಚಿತ್ರರಂಗ(Indian cinema)ದಲ್ಲಿ ಮಿಂಚುತ್ತಿದ್ದಾರೆ. ಇದಕ್ಕೆ ಕಾರಣ ತುಳುನಾಡಿನ ಹಲವರು ಬಹಳ ಹಿಂದೆಯೇ ಮುಂಬಯಿಯಲ್ಲಿ ಹೊಟೇಲ್ ಬ್ಯುಸಿನೆಸ್ ಮಾಡುತ್ತಾ ಅಲ್ಲೇ ಸೆಟಲ್ ಆಗಿರೋದು. ಅವರು ಮಕ್ಕಳು ಬಾಲಿವುಡ್‌ಗೆ ಹತ್ತಿರವಾಗ್ತಾ ಅಲ್ಲಿನ ಚಿತ್ರಗಳಿಗೆ ಹತ್ತಿರವಾಗ್ತಾ ಹೋಗ್ತಾರೆ. ಆದರೆ ಅಯ್ಯೋ ಶ್ರದ್ಧಾ ಸೌಂದರ್ಯಕ್ಕಿಂತ ಪ್ರತಿಭೆಯ ಮೂಲಕ ಗುರುತಿಸಿಕೊಂಡವರು. ತಮ್ಮ ಕಾಮಿಡಿ(Comedy) ಮಾತಿನಿಂದಲೇ ಜನರನ್ನು ರಂಜಿಸುತ್ತಿರುವರು. ಇವರ ನಟನಾ ಚಾತುರ್ಯವನ್ನು ಇದೀಗ ಬಾಲಿವುಡ್‌ನವರೂ ಮೆಚ್ಚಿಕೊಂಡಿದ್ದಾರೆ.
ಆದರೆ ಈ ಚಿತ್ರದಲ್ಲಿ ಶ್ರದ್ಧಾ ನಿರ್ವಹಿಸುತ್ತಿರೋ ಪಾತ್ರ ಯಾವ್ದು? ಅದರಲ್ಲೂ ಇವ್ರು ಕಾಮಿಡಿ ಮಾಡಿ ನಗಿಸ್ತಾರಾ ಅನ್ನೋದು ಇನ್ನಷ್ಟೇ ರಿವೀಲ್ ಆಗ್ಬೇಕಿದೆ. ಆದರೆ ಈ ಪೋಸ್ಟರ್ ಗಮನಿಸಿದರೆ ಅದರಲ್ಲಿ ಶ್ರದ್ಧಾ ಅವರು ಕೇಕೆ ಹಾಕಿ ನಗುತ್ತಿರುವ ಚಿತ್ರ ಇದೆ. ಈ ಸಿನಿಮಾದ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದ್ದು ಅದರಲ್ಲೂ ಒಂದು ಫ್ರೇಮ್‌ನಲ್ಲಿ ಶ್ರದ್ಧಾ ಕಾಣಿಸಿಕೊಂಡಿದ್ದಾರೆ. ಹುಡುಗನೊಬ್ಬ ಗೈನಕಾಲಜಿ (Gynaecology) ಡಾಕ್ಟರ್ ಆದಾಗ ಎದುರಾಗೋ ಸಮಸ್ಯೆ ಬಗ್ಗೆ ಈ ಸಿನಿಮಾ ಇದೆ. ಇನ್ನೇನು ಒಂದು ತಿಂಗಳೊಳಗೇ ಈ ಚಿತ್ರ ರಿಲೀಸೂ ಆಗಲಿದೆ. ಆಗ ಶ್ರದ್ಧಾ ಯಾವ ಪಾತ್ರದಲ್ಲಿದ್ದಾರೆ ಅನ್ನೋದನ್ನು ನೋಡಬಹುದು.
