ರಾಜಮೌಳಿ RRRಗೆ ಜೇಮ್ಸ್ ಕ್ಯಾಮರೂನ್ ಫಿದಾ; ಸಿನಿಮಾ ನೋಡಿ 'ಅವತಾರ್' ನಿರ್ದೇಶಕ ಹೇಳಿದ್ದೇನು?
ಆರ್ ಆರ್ ಆರ್ ನಿರ್ದೇಶಕ ರಾಜಮೌಳಿ ಹಾಲಿವುಡ್‌ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿದ್ದಾರೆ. ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ 'ಗೋಲ್ಡನ್ ಗ್ಲೋಬ್ಸ್' ಪ್ರಶಸ್ತಿ ಬಂದಿದ್ದು ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಇತ್ತೀಚಿಗಷ್ಟೆ ಈ ಸಮಾರಂಭ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆದಿದ್ದು ಇಡೀ ಆರ್ ಆರ್ ಆರ್ ಸಿನಿಮಾತಂಡ ಅಮೆರಿಕಾಗೆ ತೆರಳಿತ್ತು. ಗೋಲ್ಡನ್ ಗ್ಲೋಬ್ಸ್‌ನಲ್ಲಿ ಆರ್ ಆರ್ ಆರ್ ತಂಡ ಅನೇಕ ಗಣ್ಯರನ್ನು ಭೇಟಿಯಾಗಿದ್ದು ಮಾತುಕತೆ ನಡೆಸಿದ್ದಾರೆ. ಹಾಲಿವುಡ್‌ನ ಖ್ಯಾತ ನಿರ್ದೇಶಕರ ಜೊತ ಚರ್ಚೆ ಮಾಡಿದ್ದಾರೆ, ಆರ್ ಆರ್ ಆರ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ನಿರ್ದೇಶಕ ರಾಜಮೌಳಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
ಇತ್ತೀಚಿಗಷ್ಟೆ ರಾಜಜಮೌಳಿ ಗಾಡ್ ಆಫ್ ಸಿನಿಮಾ ಎಂದು ಕರೆಯಲ್ಪಡುವ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಅವರನ್ನು ಭೇಟಿಯಾಗಿದ್ದರು. ಸ್ಟೀವನ್ ಸ್ಪೀಲ್‌ಬರ್ಗ್ಜೊತೆಗಿನ ಫೋಟೋ ಶೇರ್ ಮಾಡಿ ದೇವರನ್ನು ಭೇಟಿಯಾದೆ ಎಂದು ಹೇಳಿದ್ದರು. ರಾಜಮೌಳಿ ಅವರ ನೆಚ್ಚಿನ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಭೇಟಿಯ ಬಳಿಕ ಸಂತಸ ವ್ಯಕ್ತಪಡಿಸಿದ್ದರು. ಇದೀಗ ಮತ್ತೋರ್ವ ಖ್ಯಾತ ನಿರ್ದೇಶಕರನ್ನು ಭೇಟಿಯಾದ ಬಗ್ಗೆ ಬಹಿರಂಗ ಪಡಿಸಿದ್ದಾರೆ.
'ಅವತಾರ್' ಸಿನಿಮಾ ಖ್ಯಾತಿಯ ಜೇಮ್ಸ್ ಕ್ಯಾಮರೂನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಷ್ಟೆಯಲ್ಲ ಅವರ ಜೊತೆ ಕುಳಿತು ಆರ್ ಆರ್ ಆರ್ ಸಿನಿಮಾ ವೀಕ್ಷಿಸಿದ್ದಾರೆ. ಆರ್ ಆರ್ ಆರ್ ಸಿನಿಮಾ ನೋಡಿ ಜೇಮ್ಸ್ ಕ್ಯಾಮರೂನ್ ಮೆಚ್ಚಿಕೊಂಡಿದ್ದು ಪತ್ನಿ ಜೊತೆ ಮತ್ತೊಮ್ಮೆ ನೋಡುವುದಾಗಿ ಹೇಳಿದರು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕ್ಯಾಮರೂನ್ ಜೊತೆಗಿನ ಮಾತುಕತೆಯ ಫೋಟೋಗಳನ್ನು ಶೇರ್ ಮಾಡಿ, 'ದಿ ಗ್ರೇಟ್ ಜೋಮ್ಸ್ ಕ್ಯಾಮರೂನ್ ಆರ್ ಆರ್ ಆರ್ ಸಿನಿಮಾವನ್ನು ವೀಕ್ಷಿಸಿದರು. ಸಿನಿಮಾ ನೋಡಿ ತುಂಬಾ ಇಷ್ಟಪಟ್ಟರು. ತಮ್ಮ ಪತ್ನಿ ಸುಜಿಗೆ ಶಿಫಾರಸು ಮಾಡಿದರು ಹಾಗೂ ಮತ್ತೊಮ್ಮೆ ಪತ್ನಿ ಜೊತೆ ಆರ್ ಆರ್ ಆರ್ ವೀಕ್ಷಿಸುವುದಾಗಿ ಹೇಳಿದರು' ಎಂದು ಬರೆದುಕೊಂಡಿದ್ದಾರೆ.
'ಗೋಲ್ಡನ್ ಗ್ಲೋಬ್ಸ್'ನಲ್ಲಿ ದೇವರನ್ನು ಭೇಟಿಯಾದ ನಿರ್ದೇಶಕ ರಾಜಮೌಳಿ; ಫೋಟೋ ವೈರಲ್
'ಸರ್, ನೀವು ನಮ್ಮ ಸಿನಿಮಾವನ್ನು ವಿಶ್ಲೇಷಿಸಲು ನಮ್ಮೊಂದಿಗೆ 10 ನಿಮಿಷ ಕಳೆದಿದ್ದೀರಿ ಎಂದು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ನೀವು ಹೇಳಿದಂತೆ ನಾನೀಗ ಪ್ರಪಂಚದ ಉತ್ತುಂಗದಲ್ಲಿ ಇದ್ದೀನಿ. ಧನ್ಯವಾದಗಳು' ಎಂದು ಹೇಳಿದ್ದಾರೆ. ರಾಜಮೌಳಿ ಮತ್ತು ಜೇಮ್ಸ್ ಕ್ಯಾಮರೂನ್ ಇಬ್ಬರನ್ನೂ ಒಟ್ಟಿಗೆ ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. AvataRRR ಸಂಭ್ರಮ, ಅವತಾರ್ ಮೀಟ್ ಆರ್ ಆರ್ ಆರ್ ಎಂದು ಹೇಳುತ್ತಿದ್ದಾರೆ. ಇಬ್ಬರ ಫೋಟೋಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ.
RRR ಬಾಲಿವುಡ್ ಸಿನಿಮಾವಲ್ಲ, ದಕ್ಷಿಣ ಭಾರತದ ತೆಲುಗು ಚಿತ್ರ; ಅಮೆರಿಕಾದಲ್ಲಿ ರಾಜಮೌಳಿ ಹೇಳಿಕೆ ವೈರಲ್
ಆರ್ ಆರ್ ಆರ್ ಸಿನಿಮಾ ಮೂಲಕ ರಾಜಮೌಳಿ ಅಂತಾರಾಷ್ಟ್ರೀಯ ಬ್ರಾಂಡ್ ಆಗಿದ್ದಾರೆ. ರಾಜಮೌಳಿ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ನಿರೀಕ್ಷೆ ಜಾಸ್ತಿ ಆಗಿದೆ. ಸದ್ಯ ರಾಜಮೌಳಿ ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡದ ರಾಜಮೌಳಿ ಸದ್ಯದಲ್ಲೇ ಬಹುದೊಡ್ಡ ಅಪ್‌ಡೇಟ್ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಸದ್ಯ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ ಸಂಭ್ರಮವನ್ನು ಎಂಜಾಯ್ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಗಣ್ಯರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ.