ಯಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ ಕೆಲವು ಹಸಿಬಿಸಿ ದೃಶ್ಯಗಳಿದ್ದ ಕಾರಣ ಸಿನಿಪ್ರೇಮಿಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆದಿದ್ದವು. ಆದರೆ ಈಗಿನ ಟ್ರೈಲರ್ ನೋಡಿದ ಮೇಲೆ ಚಿತ್ರದ ಮೇಲಿನ ನಿರೀಕ್ಷೆ ಹತ್ತು ಪಟ್ಟು ಹೆಚ್ಚಾಗಿದೆ. ಆದರೆ, ಜ್ಯೋತಿಷಿ ಹೇಳಿಕೆ ಈಗ ಸಂಚಲನ ಮೂಡಿಸಿದೆ. 

ಯಶ್ 'ಟಾಕ್ಸಿಕ್' ಅಬ್ಬರ: ಡಬಲ್ ರೋಲ್‌ನಲ್ಲಿ ರಾಕಿ ಭಾಯ್ ಕಮಾಲ್; ಆದರೆ ಸಿನಿಮಾ ಭವಿಷ್ಯದ ಬಗ್ಗೆ ಜ್ಯೋತಿಷಿ ಹೇಳಿದ್ದೇನು?

Add Asianetnews Kannada as a Preferred SourcegooglePreferred

ಕನ್ನಡ ಚಿತ್ರರಂಗದ 'ರಾಕಿಂಗ್ ಸ್ಟಾರ್' ಯಶ್ (Yash) ಅವರ ಕ್ರೇಜ್ ಈಗ ಗಡಿ ದಾಟಿದೆ. 'ಕೆಜಿಎಫ್' ಸರಣಿಯ ನಂತರ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಯಶ್ ಅವರ ಮುಂದಿನ ನಡೆ ಏನು ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದ ಟ್ರೈಲರ್ ಇಂದು (ಫೆಬ್ರವರಿ 20) ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಇಡೀ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.

ಸುಮಾರು 1 ನಿಮಿಷ 55 ಸೆಕೆಂಡ್‌ಗಳ ಈ ಟಾಕ್ಸಿಕ್ (Toxic) ಟ್ರೈಲರ್‌ನಲ್ಲಿ ಯಶ್ ಹಿಂದೆಂದೂ ಕಾಣದ ಅತ್ಯಂತ ವಿಭಿನ್ನ ಮತ್ತು ಮಾಸ್ ಲುಕ್‌ನಲ್ಲಿ ಮಿಂಚಿದ್ದಾರೆ. ಟ್ರೈಲರ್‌ನ ಅತ್ಯಂತ ದೊಡ್ಡ ಹೈಲೈಟ್ ಎಂದರೆ ಯಶ್ ಅವರ ಡಬಲ್ ರೋಲ್! ಹೌದು, ಈ ಸಿನಿಮಾದಲ್ಲಿ ಯಶ್ ಎರಡು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. "ಎಲ್ಲೂನೂ ಎದುರು ಹಾಕಿಕೊಂಡು ಬದುಕೋಕೆ ಆಗಲ್ಲ. ಈ ಸಲ ಯುದ್ಧವೇ ಬೇರೆ," ಎಂಬ ಪವರ್‌ಫುಲ್ ಮಾಸ್ ಡೈಲಾಗ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್

ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು ಮೊದಲಿನಿಂದಲೂ ಸುದ್ದಿಯಲ್ಲಿದೆ. ಯಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ ಕೆಲವು ಹಸಿಬಿಸಿ ದೃಶ್ಯಗಳಿದ್ದ ಕಾರಣ ಸಿನಿಪ್ರೇಮಿಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆದಿದ್ದವು. ಆದರೆ ಈಗಿನ ಟ್ರೈಲರ್ ನೋಡಿದ ಮೇಲೆ ಚಿತ್ರದ ಮೇಲಿನ ನಿರೀಕ್ಷೆ ಹತ್ತು ಪಟ್ಟು ಹೆಚ್ಚಾಗಿದೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ಜ್ಯೋತಿಷಿ ಪ್ರಶಾಂತ್ ಕಿಣಿ ನುಡಿದಿರುವ ಭವಿಷ್ಯ

ಆದರೆ, ಈ ಸಂಭ್ರಮದ ನಡುವೆಯೇ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ನುಡಿದಿರುವ ಭವಿಷ್ಯವೊಂದು ಯಶ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಟ್ವಿಟ್ಟರ್) ಭವಿಷ್ಯ ನುಡಿದಿರುವ ಅವರು, "ಟಾಕ್ಸಿಕ್ ಸಿನಿಮಾ ಮತ್ತೊಂದು ಕೆಜಿಎಫ್ ಆಗಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಬಿಗ್ ಬಜೆಟ್, ಯಶ್ ಅವರ ಕ್ರೆಡಿಬಲಿಟಿ, ಭವ್ಯತೆ ಅಥವಾ ಅಡಲ್ಟ್ ಕಂಟೆಂಟ್ ಮಾತ್ರ ಚಿತ್ರದ ಯಶಸ್ಸನ್ನು ಗ್ಯಾರಂಟಿ ಮಾಡುವುದಿಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.

ಈ ಭವಿಷ್ಯದ ಬಗ್ಗೆ ಈಗ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಯೇ ಶುರುವಾಗಿದೆ. ಕೆಲವರು ಜ್ಯೋತಿಷಿಯ ಮಾತನ್ನು ಲಘುವಾಗಿ ಪರಿಗಣಿಸಿದ್ದರೆ, ಇನ್ನೂ ಕೆಲವರು ಸಿನಿಮಾ ಬಿಡುಗಡೆಯ ನಂತರ ಏನಾಗಬಹುದು ಎಂದು ಕಾದು ನೋಡುತ್ತಿದ್ದಾರೆ. ಒಟ್ಟಿನಲ್ಲಿ 'ಟಾಕ್ಸಿಕ್' ಸಿನಿಮಾ ಕೆಜಿಎಫ್ ದಾಖಲೆಗಳನ್ನು ಮುರಿಯುತ್ತದೆಯೇ ಅಥವಾ ಹೊಸ ಇತಿಹಾಸ ಬರೆಯುತ್ತದೆಯೇ ಎಂಬುದು ಮಾರ್ಚ್ 19ಕ್ಕೆ ತಿಳಿಯಲಿದೆ. ಯಶ್ ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಟನ ಅಬ್ಬರ ನೋಡಲು ಕೌಂಟ್‌ಡೌನ್ ಶುರು ಮಾಡಿದ್ದಾರೆ.