The Kerala Story: ಮಸೀದಿಯಲ್ಲಿ ಹಿಂದೂ ವಿವಾಹ ವಿಡಿಯೋ ಶೇರ್ ಮಾಡಿದ A.R. Rahman
ಬಹು ವಿವಾದಿತ ದಿ ಕೇರಳ ಸ್ಟೋರಿ ನಾಳೆ ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆಯೇ, ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಏನದು?
ಕೇರಳದಲ್ಲಿ ಸುಮಾರು 32 ಸಾವಿರ ಹುಡುಗಿಯರು ನಾಪತ್ತೆಯಾಗಿರುವ ನೈಜ ಘಟನೆಯನ್ನು ಆಧರಿಸಿ ತಯಾರಿಸಲಾಗಿರುವ 'ದಿ ಕೇರಳ ಸ್ಟೋರಿ ಕಥೆ'ಯ (The Kerala Story) ವಿರುದ್ಧ ಕೇರಳದ ಸಿಪಿಐ(ಎಂ), ಕಾಂಗ್ರೆಸ್ಸಿಗರು ಸೇರಿದಂತೆ ಒಂದಷ್ಟು ವರ್ಗ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ನಾಳೆ (ಮೇ 5) ಬಿಡುಗಡೆಯಾಗಲಿರುವ ಈ ಚಿತ್ರವನ್ನು ಬಿಡುಗಡೆ ಮಾಡದಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಮೇಲೂ ಇದರ ವಿರುದ್ಧ ಆಕ್ರೋಶ ಹೆಚ್ಚುತ್ತಲೇ ಇದೆ. ಈ ಸಿನಿಮಾದಲ್ಲಿ ಹುಡುಗಿಯರನ್ನು ವಿದೇಶದ ಆಮಿಷವೊಡ್ಡಿ, ಮತಾಂತರಿಸಿ, ಬಲವಂತವಾಗಿ ಐಸಿಸ್ (ISIS) ಉಗ್ರಗಾಮಿಗಳಾಗಿಸುವ ಕಥೆ ಇದೆ. 32 ಸಾವಿರಕ್ಕೂ ಅಧಿಕ ಹುಡುಗಿಯರು ಯಾವ ರೀತಿ ನರಕ ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ ಎನ್ನುವ ನೈಜ ಘಟನೆಯನ್ನು ಇದು ಒಳಗೊಂಡಿರುವುದಾಗಿ ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ (Vipul Amruthlal Shah) ಹೇಳಿದ್ದಾರೆ. ಈ ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ. ಇದರಲ್ಲಿ ಬಾಲಿವುಡ್‌ನ ಪ್ರತಿಭಾವಂತ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರಕ್ಕೆ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಪರೋಕ್ಷವಾಗಿ ಚಿತ್ರವನ್ನು ಪ್ರಶ್ನೆ ಮಾಡಿದ್ದಾರೆ. ಇದು ಕೇರಳದ ಮಸೀದಿಯೊಂದರಲ್ಲಿ ನಡೆದ ಹಿಂದೂ ವಿವಾಹದ ವಿಡಿಯೋ ಆಗಿದೆ. ಈ ಮದುವೆ (Marriage) ನಡೆದಿರುವುದು 2020 ರಲ್ಲಿ ಎನ್ನಲಾಗಿದೆ. ಕೇರಳದ ಮಸೀದಿಯೊಂದರಲ್ಲಿ ನಡೆದ ಹಿಂದೂ ಜೋಡಿಯ ವಿವಾಹ ಇದಾಗಿದೆ. ಅಂಜು ಮತ್ತು ಶರತ್ ಅವರ ವಿವಾಹ ಸಮಾರಂಭದಲ್ಲಿ ಹಿಂದೂ ಧಾರ್ಮಿಕ ವಿಧಿಗಳ ಪ್ರಕಾರ ನಡೆಸಲಾಗಿದೆ ಎಂದು ಪೋಸ್ಟ್ನಲ್ಲಿ ತಿಳಿಸಲಾಗಿದೆ. ಅದರಲ್ಲಿಯೂ ಮಸೀದಿಯೊಳಗೆ ಹಿಂದೂ ಅರ್ಚಕರು ಇದನ್ನು ನಡೆಸಿಕೊಟ್ಟಿರುವುದನ್ನು ವಿಡಿಯೋದಲ್ಲಿ ನೋಡಬಹುದು.
The Kerala Story: 32 ಸಾವಿರ ಹುಡುಗಿಯರ ನಾಪತ್ತೆ: ಬೆಚ್ಚಿ ಬೀಳಿಸಿದ ಟ್ರೇಲರ್!
ಮದುವೆಯ ವೀಡಿಯೊವನ್ನು ಹಂಚಿಕೊಳ್ಳುವಾಗ ಟ್ವಿಟರ್ ಬಳಕೆದಾರರು "ಇಲ್ಲಿ ಮತ್ತೊಂದು #ಕೇರಳ ಕಥೆ" ಎಂದು ಬರೆದಿದ್ದಾರೆ. ಮಾನವೀಯತೆಯ ಮೇಲಿನ ಪ್ರೀತಿ ಬೇಷರತ್ತಾಗಿ ಮತ್ತು ಗುಣಪಡಿಸುವಂತಿರಬೇಕು" ಎಂದು ರೆಹಮಾನ್ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಈ ಮದುವೆಯಾಗಲು ಕಾರಣವೇನು ಎಂಬುದನ್ನು ತಿಳಿಸಲಾಗಿದೆ. ಮದುವೆ ಮಾಡಲು ವಧುವಿನ ಮನೆಯಲ್ಲಿ ಹಣದ ಕೊರತೆಯಿತ್ತು. ಕುಟುಂಬದ ಮುಖ್ಯಸ್ಥರನ್ನು ಕಳೆದುಕೊಂಡ ಕುಟುಂಬಕ್ಕೆ ಸಂಪನ್ಮೂಲಗಳ ಕೊರತೆಯಿತ್ತು. ಆಗ ಆಕೆಯ ತಾಯಿ ಮಸೀದಿಯ (Maszid) ಸಮಿತಿಯನ್ನು ಸಂಪರ್ಕಿಸಿದ್ದರು. ಆಗ ಹಿಂದೂ ಪಾದ್ರಿಯೊಬ್ಬರು ಮಸೀದಿಯಲ್ಲಿ ವಿವಾಹ ನೆರವೇರಿಸಿದ್ದಾರೆ ಎನ್ನಲಾಗಿದೆ. ಆ ಸಮಯದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ವಿವಾಹವನ್ನು ಕೇರಳದ ಒಗ್ಗಟ್ಟಿನ ಉದಾಹರಣೆ ಎಂದು ಕರೆದಿದ್ದರು.
ಕೆಲ ದಿನಗಳ ಹಿಂದೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಇದು ಕೇರಳದ ಯುವತಿ ಶಾಲಿನಿ ಉನ್ನಿಕೃಷ್ಣ (ಅದಾ ಶರ್ಮಾ- Ada Sharma) ಅವರ ಪ್ರಶ್ನೆಯೊಂದಿಗೆ ಪ್ರಾರಂಭವಾಗುತ್ತದೆ. ಒಬ್ಬ ತನಿಖಾ ಅಧಿಕಾರಿ ಈಕೆಯನ್ನು ವಿಚಾರಿಸುವುದನ್ನು ನೋಡಬಹುದು. ಅವರು ಶಾಲಿನಿ (Shalini Unnikrishna) ಯಾವಾಗ ಭಯೋತ್ಪಾದಕ ಗುಂಪಿಗೆ ಸೇರಿದಳು ಎಂದು ಕೇಳುತ್ತಾರೆ. ಅದಕ್ಕೆ ಶಾಲಿನಿ ತಾನು ಯಾವಾಗ ISIS ಗೆ ಸೇರಿದೆ ಎಂದು ತಿಳಿಯುವ ಮೊದಲು, ತಾನು ಏಕೆ ಸೇರಿಕೊಂಡೆ, ಹೇಗೆ ಸೇರಿಕೊಂಡೆ ಎಂಬ ಕಥೆ ಹೇಳುತ್ತಾಳೆ. ಈ ಟ್ರೇಲರ್ ನೋಡಿದಾಗ ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರು ಹೇಗೆ ವ್ಯವಸ್ಥಿತವಾಗಿ ಮತಾಂತರಗೊಳ್ಳುತ್ತಾರೆ ಎಂಬು ಕಹಿ ಸತ್ಯದ ಅರಿವಾಗುತ್ತದೆ. ಹೀಗೆ ಅಪಹರಿಸಿ ಮತಾಂತರಗೊಳಿಸುವ ಹುಡುಗಿಯರನ್ನು ಮಕ್ಕಳನ್ನು ಹೆರುವ ಕಾರ್ಖಾನೆಗಳಾಗಿ ಪರಿವರ್ತಿಸಲಾಗಿದೆ. ಮತಾಂತರಗೊಂಡ ಹುಡುಗಿಯರನ್ನು ಐಸಿಸ್ ಭಯೋತ್ಪಾದಕರಾಗಲು ಸಿರಿಯಾ ಮತ್ತು ಇತರ ದೇಶಗಳಲ್ಲಿ ಎಸೆಯುವ ಭಯಾನಕ ಸತ್ಯ ಘಟನೆ ಇದರಲ್ಲಿ ಇದೆ.
The Kerala story ಚಿತ್ರದ ಅಸಲಿಯತ್ತು ಬಿಚ್ಚಿಟ್ಟ ನಟಿ ಅದಾ ಶರ್ಮಾ